ಶೀರ್ಷಿಕೆ : NEWS DATE: 22-6-2018
ಲಿಂಕ್ : NEWS DATE: 22-6-2018
NEWS DATE: 22-6-2018
ಜೂನ್ 23ರಂದು ವಿಶ್ವ ರಕ್ತದಾನಿಗಳ ದಿನಾಚರಣೆ
*******************************************
ಕಲಬುರಗಿ,ಜೂ.22.(ಕ.ವಾ.)-ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ ಜಾಥಾವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿರಸಗಿ ಅವರು ಇದೇ ಜೂನ್ 23ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಉದ್ಘಾಟಿಸುವರು. ಈ ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ಜಗತ್ ಸರ್ಕಲ್ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಾಲಯ ಆವರಣದಲ್ಲಿ ಕೊನೆಗೊಳ್ಳಲಿದೆ.
ಅಂದು ಬೆಳಿಗ್ಗೆ 10.45 ಗಂಟೆಗೆ ಜಿಲ್ಲಾ ಆರೋಗ್ಯ ನಿರೀಕ್ಷಕರ ಸಭಾಭವನದಲ್ಲಿ ಆಯೋಜಿಸಿದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ ಅವರು ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನಿಸುವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ.ಕೆ.ಪಾಟೀಲ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ|| ಬಾಲಚಂದ್ರ ಜೋಶಿ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ|| ರಾಜೇಂದ್ರ ಭಾಲ್ಕೆ ಮುಖ್ಯ ಅತಿಥಿಯಾಗಿ ಹಾಗೂ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಳ್ಳುವರು.
ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ರೆಡ್‍ಕ್ರಾಸ್ ಸಂಸ್ಥೆ, ಕಲಬುರಗಿ ಜಿಲ್ಲಾ ರಕ್ತನಿಧಿ ಕೇಂದ್ರಗಳು, ರೆಡ್‍ರಿಬ್ಬನ್ ಕ್ಲಬ್‍ಗಳು, ಸ್ವಯಂ ಸೇವಾ ಸಂಸ್ಥೆಗಳು, ಎನ್.ಸಿ.ಸಿ ಮತ್ತು ಎನ್.ಎಸ್.ಎಸ್. ಘಟಕ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದೆ. “ಬೇರೊಬ್ಬರಿಗೋಸ್ಕರ ಇರಿ ಜೀವನ ಹಂಚಿಕೊಳ್ಳಿ: ರಕ್ತ ಕೋಡಿ” ಈ ದಿನಾಚರಣೆಯ ಘೋಷ ವಾಕ್ಯವಾಗಿದೆ.
ಜೂನ್ 25 ರಿಂದ ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ ಸಮೀಕ್ಷೆ
*******************************************************
ಕಲಬುರಗಿ,ಜೂ.22.(ಕ.ವಾ.)-ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕಲಬುರಗಿಯ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳ ಸಮೀಕ್ಷಾ (ಮ್ಯಾನ್ಯುವೆಲ್ ಸ್ಕ್ಯಾವೆಂಜರ್‍ಗಳ ಸಮೀಕ್ಷೆ) ಕಾರ್ಯಕ್ಕಾಗಿ ಕೆಳಕಂಡಂತೆ ತಾಲೂಕುವಾರು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾರ್ಟಿ ತಿಳಿಸಿದ್ದಾರೆ.
ಒಣ ಮಲದ ಗುಂಡಿಗಳ ಸ್ವಚ್ಛತೆ, ತೆರೆದ ಮತ್ತು ಸ್ವಚ್ಚತೆ ಇಲ್ಲದ ಮಲದ ಗುಂಡಿಗಳ ತ್ಯಾಜ್ಯವನ್ನು ಮನುಷ್ಯರು ಸ್ವಚ್ಛಗೊಳಿಸುವುದು, ಶೌಚಾಲಯಕ್ಕೆ ಹೊಂದಿಕೊಂಡಿರುವ ಒಂಟಿ ಗುಂಡಿಗಳನ್ನು ಸ್ವಚ್ಛಗೊಳಿಸುವ ವೃತ್ತಿಗಳಲ್ಲಿ 2013ಕ್ಕಿಂತ ಮೊದಲು ಹಾಗೂ ತದನಂತರ ಈ ವೃತ್ತಿಯಲ್ಲಿ ತೊಡಗಿರುವವರು ಸಮೀಕ್ಷೆಯಲ್ಲಿ ಭಾಗವಹಿಸಿ ಸಂಬಂಧಪಟ್ಟವರಿಗೆ ದಾಖಲಾತಿಗಳನ್ನು ಒದಗಿಸಬೇಕು.
ಸಫಾಯಿ ಕರ್ಮಚಾರಿಗಳು ಒಂದು ಪಾಸ್‍ಪೋರ್ಟ ಸೈಜ್ ಭಾವಚಿತ್ರ, ಬ್ಯಾಂಕ್ ಪಾಸ್‍ಬುಕ್ ಪುಸ್ತಕದ ಜಿರಾಕ್ಸ್ (ಮೂಲ ಪ್ರತಿ), ಆಧಾರ ಕಾರ್ಡ ಜಿರಾಕ್ಸ್ (ಮೂಲ ಪ್ರತಿ), ಚುನಾವಣಾ ಗುರುತಿನ ಚೀಟಿ ಅಥವಾ ಬಿಪಿಎಲ್ ರೇಶನ್ ಕಾರ್ಡ ಮೂಲ ಪ್ರತಿ, ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳೆಂದು ಗುರುತಿಸಲು ಯಾವುದಾದರೊಂದು ದಾಖಲೆ ಹಾಗೂ ಪ್ರಮಾಣಪತ್ರ ಇದ್ದಲ್ಲಿ ತರಬೇಕು.
ಅಫಜಲಪುರ : ಜೂನ್ 25ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅಫಜಲಪುರ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ. ಆಳಂದ : ಜೂನ್ 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಳಂದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ. ಚಿಂಚೋಳಿ : ಜೂನ್ 27 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಚಿಂಚೋಳಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ. ಚಿತ್ತಾಪುರ : ಜೂನ್ 28 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಚಿತ್ತಾಪುರ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ. ಜೇವರ್ಗಿ : ಜೂನ್ 29 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ. ಸೇಡಂ : ಜೂನ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ. ಕಲಬುರಗಿ : ಜುಲೈ 2 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಹೆಚ್.ಎಸ್. ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ.
ದಾಖಲಾತಿಗಳನ್ನು ಸಲ್ಲಿಸಿದ ಸಫಾಯಿ ಕರ್ಮಚಾರಿಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅವರನ್ನು ಈ ವೃತ್ತಿಯಿಂದ ಮುಕ್ತಗೊಳಿಸಿ ಸ್ವಾವಲಂಬಿಗಳಾಗಿ ಬದುಕನ್ನು ಸಾಗಿಸಲು ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ವೃತ್ತಿಯಲ್ಲಿ ತೊಡಗಿರುವವ ಸಾರ್ವಜನಿಕರು ತಮ್ಮ ಹೆಸರನ್ನು ತಪ್ಪದೇ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಪಿ.ಪಿ.ಪಿ. ಯೋಜನೆಯಡಿ ಐ.ಟಿ.ಐ. ಪ್ರವೇಶ
**************************************
ಕಲಬುರಗಿ,ಜೂ.22.(ಕ.ವಾ.)-ಕಲಬುರಗಿಯ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿ.ಪಿ.ಪಿ. ಯೋಜನೆಯಡಿ ಕೆಳಕಂಡ ವೃತ್ತಿಗಳಲ್ಲಿ ಪ್ರವೇಶ ಪ್ರಾರಂಭವಾಗಿದ್ದು, ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಡೊನೇಶನ್ ಮೂಲಕ ಪ್ರವೇಶ ಪಡೆಯಬಹುದಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ವರ್ಷದ ಎಲೆಕ್ಟ್ರಿಶಿಯನ್-21, ಫಿಟ್ಟರ್-21, ಎಲೆಕ್ಟ್ರಾನಿಕ್ ಮೆಕ್ಯಾನಿಕ್-12 ಸ್ಥಾನಗಳು ಹಾಗೂ ಒಂದು ವರ್ಷದ ಕಂಪ್ಯೂಟರ್ ಹಾರ್ಡ್‍ವೇರ್ ಆಂಡ್ ನೆಟವರ್ಕ್ ಮೆಂಟೆನನ್ಸ್-52, ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್-12 ಸ್ಥಾನಗಳು ಲಭ್ಯವಿದ್ದು, ಪ್ರವೇಶ ಬಯಸುವ ವಿದ್ಯಾರ್ಥಿಗಳು ಸಂಬಂಧಿಸಿದ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ (ಮಹಿಳಾ) ಸರ್ಕಾರಿ ತರಬೇತಿ ಸಂಸ್ಥೆ ಪ್ರಾಚಾರ್ಯರನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-236753, ಕಿರಿಯ ತರಬೇತಿ ಅಧಿಕಾರಿ ಶರಣಬಸಪ್ಪ ಕುಂಬಾರ ಅವರ ಮೊಬೈಲ್ ಸಂಖ್ಯೆ 9972910066ನ್ನು ಸಂಪರ್ಕಿಸಲು ಕೋರಲಾಗಿದೆ.
ಸಂಘಗಳ ವಿಸರ್ಜನೆ: ಆಕ್ಷೇಪಣೆ ಆಹ್ವಾನ
**************************************
ಕಲಬುರಗಿ,ಜೂ.22.(ಕ.ವಾ.)-ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ 17ನೇ ಕರ್ನಾಟಕ ಅಧಿನಿಯಮದ ಅಡಿ ನೋಂದಣಿಯಾದ ಈ ಕೆಳಕಂಡ ಸಂಘ- ಸಂಸ್ಥೆಗಳು ಸುಮಾರು ವರ್ಷಗಳಿಂದ ನವೀಕರಣವಾಗದೇ ಇರುವುದರಿಂದ ಹಾಗೂ ಈ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಸಂಘವನ್ನು ಕಾರ್ಯನಿರ್ವಹಿಸಿಕೊಂಡು ಹೋಗಲು ಆಸಕ್ತಿ ಇಲ್ಲದ ಪ್ರಯುಕ್ತ ಈ ಸಂಘಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 13ರನ್ವಯ ವಿಸರ್ಜನೆಗೊಳಿಸಲಾಗುತ್ತಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಈ ಪತ್ರಿಕಾ ಪ್ರಕಟಣೆ ಪ್ರಕಟಗೊಂಡ 15 ದಿನದೊಳಗಾಗಿ ಲಿಖಿತವಾಗಿ ಕಚೇರಿಯಲ್ಲಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆರನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಸತ್ಯಸಾಯಿ ಸೊಸೈಟಿ ಸಾ: ಶ್ರೀ ಸತ್ಯಸಾಯಿ ವಿದ್ಯಾನಿಕೇತನಂ ನವನಿಹಾಳ ಪೋ: ಒಕಳಿ ತಾಲೂಕು:ಜಿಲ್ಲಾ ಕಲಬುರಗಿ ನೋಂದಣಿ ಸಂಖ್ಯೆ 129/2012-13. ಶ್ರೀ ಸಂಪ್ರದಾಯ ಸೇವಾ ಸಮಿತಿ ಸಾ: ಐಯ್ಯರವಾಡಿ ಅಂಬಾಭವಾನಿ ಗುಡಿ ಹತ್ತಿರ ಹುಮನಾಬಾದ ಬೇಸ್ ಕಲಬುರಗಿ (ನೊಂದಣಿ ಸಂಖ್ಯೆ 502/2017-18) ಹಾಗೂ ಗುಲಬರ್ಗಾ ಸರ್ಕಾರಿ ಮುದ್ರಣಾಲಯ ಸರ್ಕಾರಿ ನೌಕರರ ನಿವೃತ್ತಿ ಮತ್ತು ಮೃತ್ಯು ಪರಿಹಾರ ನಿಧಿ ಸರ್ಕಾರಿ ಶಾಖಾ ಮುದ್ರಣಾಲಯದ ಎಂ.ಎಸ್.ಕೆ. ಮಿಲ್ ರಸ್ತೆ ಕಲಬುರಗಿ (ನೋಂದಣಿ ಸಂಖ್ಯೆ 224/1990).
ಚಿತ್ತಾಪುರ: ಮೆಟ್ರಿಕ್ ನಂತರ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*****************************************************************
ಕಲಬುರಗಿ,ಜೂ.22.(ಕ.ವಾ.)-ಪ್ರಸಕ್ತ 2018-19ನೇ ಸಾಲಿಗೆ ಚಿತ್ತಾಪುರ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಸತಿ ನಿಲಯಗಳಾದ ಕಾಳಗಿ, ಚಿತ್ತಾಪುರ, ವಾಡಿ(ಜಂ) ಮತ್ತು ಶಹಾಬಾದಗಳಲ್ಲಿನ ಖಾಲಿಯಿರುವ ಸ್ಥಾನಗಳನ್ನು ಭರ್ತಿ ಮಾಡಲು ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿತ್ತಾಪುರ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಸ್ಥಾನಗಳನ್ನು ಮೀಸರಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಪಿಯುಸಿ, ಡಿಗ್ರಿಯಲ್ಲಿ ಓದುತ್ತಿರಬೇಕು. ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಚಿತ್ತಾಪುರ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಅಥವಾ ವಸತಿ ನಿಲಯಗಳ ಮೇಲ್ವಿಚಾರಕರನ್ನು ಮೊಬೈಲ್ ಸಂಖ್ಯೆ 9880887118, 9019491939ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ನಾಲವಾರ-ಕೊಂಚೂರು: ವಸತಿ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
**************************************************************
ಕಲಬುರಗಿ,ಜೂ.22.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಕಾರ್ಯನಿರ್ವಹಿಸುತ್ತಿರುವ ಚಿತ್ತಾಪುರ ತಾಲೂಕಿನ ನಾಲವಾರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ಕೊಂಚೂರದ ಏಕಲವ್ಯ ವಸತಿ ಮಾದರಿ ಶಾಲೆಗಳಲ್ಲಿ 2018-19ನೇ ಸಾಲಿಗೆ ಖಾಲಿಯಿರುವ 7ನೇ ತರಗತಿಯ ಸ್ಥಾನಗಳಿಗೆ ಪ್ರವೇಶಕ್ಕಾಗಿ ಕಲಬುರಗಿ ಜಿಲ್ಲೆಯಲ್ಲಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ವಸತಿ ಶಾಲೆಯಲ್ಲಿ ಉಚಿತ ವಸತಿ, ಊಟ, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ವಸತಿ ಶಾಲೆಗಳ ಪ್ರವೇಶಕ್ಕಾಗಿ ವಸತಿ ನಿಲಯದ ಪ್ರಾಂಶುಪಾಲರಿಂದ ಪ್ರವೇಶ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಜೂನ್ 26 ರೊಳಗಾಗಿ ಕೊಂಚೂರ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ವಸತಿ ನಿಲಯಗಳ ಪ್ರಾಂಶುಪಾಲರನ್ನು ಹಾಗೂ ಮೊಬೈಲ್ ಸಂಖ್ಯೆ 9620528262, 9880807006ಗಳನ್ನು ಸಂಪರ್ಕಿಸಬೇಕೆಂದು ನಾಲವಾರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು NEWS DATE: 22-6-2018
ಎಲ್ಲಾ ಲೇಖನಗಳು ಆಗಿದೆ NEWS DATE: 22-6-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS DATE: 22-6-2018 ಲಿಂಕ್ ವಿಳಾಸ https://dekalungi.blogspot.com/2018/06/news-date-22-6-2018.html
0 Response to "NEWS DATE: 22-6-2018"
ಕಾಮೆಂಟ್ ಪೋಸ್ಟ್ ಮಾಡಿ