ಶೀರ್ಷಿಕೆ : ಪಕ್ಷಿ ಪ್ರಪಂಚ: ನವಿಲು.
ಲಿಂಕ್ : ಪಕ್ಷಿ ಪ್ರಪಂಚ: ನವಿಲು.
ಪಕ್ಷಿ ಪ್ರಪಂಚ: ನವಿಲು.
ಚಿತ್ರ ೧: ಗಂಡು ನವಿಲು |
ಡಾ. ಅಶೋಕ್. ಕೆ. ಆರ್.
ಭಾರತದ ರಾಷ್ಟ್ರಪಕ್ಷಿಯಾದ ನವಿಲೆಂದರೆ ಯಾರಿಗೆ ಇಷ್ಟವಿಲ್ಲ! ಅದರಲ್ಲೂ ರೆಕ್ಕೆ ಬಿಚ್ಚಿ ಕುಣಿಯುವ ಗಂಡು ನವಿಲೆಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಆಂಗ್ಲ ಹೆಸರು: Indian Peacock (ಇಂಡಿಯನ್ ಪಿಕಾಕ್), Peahen (ಪಿಹೆನ್)
ವೈಜ್ಞಾನಿಕ ಹೆಸರು: Pavo Cristatus (ಪಾವೋ ಕ್ರಿಸ್ಟೇಟಸ್)
ನವಿಲನ್ನು ಗುರುತುಹಿಡಿಯದವರು ಇಲ್ಲವೇ ಇಲ್ಲ ಅಲ್ಲವೇ! ಉದ್ದ ಪುಕ್ಕಗಳ ಬಾಲವನ್ನೊಂದಿರುವ ಗಂಡು ನವಿಲು ಆಕರ್ಷಣೀಯ. ಒರಟೊರಟಾದ ಧೃಡವಾದ ಕಾಲುಗಳು, ನೀಳವಾದ ಉದ್ದನೆಯ ನೀಲಿ ಬಣ್ಣದ ಕತ್ತು, ಕುಸುರಿ ಮಾಡಿದಂತಿರುವ ನೀಲಿ ಕಿರೀಟದ ಗುಚ್ಛ, ಕಣ್ಣಿನ ಮೇಲೆ ಕೆಳಗೆ ಬಿಳಿ ಪಟ್ಟಿಯಿದ್ದರೆ, ಕಣ್ಣಿನ ಸುತ್ತಲೂ ನೀಲಿ ಪಟ್ಟಿ. ಎದೆಯ ಭಾಗದಲ್ಲಿ ನೀಲಿ - ಹಸಿರು - ಕಂದು ಬಣ್ಣಗಳನ್ನು ಕಾಣಬಹುದು. ರೆಕ್ಕೆಯಲ್ಲಿ ಕಪ್ಪು ಬಿಳಿ ಬಣ್ಣಗಳ ಪಟ್ಟಿಗಳಿವೆ. ದೇಹಕ್ಕೆ ಬಾಲವಂಟಿರುವ ಜಾಗದಲ್ಲಿ ಹೊಳೆಯುವ ಹಸಿರು ಹೊಂಬಣ್ಣವಿದೆ. ಹೆಣ್ಣನ್ನಾಕರ್ಷಿಸುವ ಸಲುವಾಗಿ ಪುಕ್ಕ ಬಿಚ್ಚಿ ನರ್ತಿಸುತ್ತವೆ ಗಂಡು ನವಿಲುಗಳು. ಆಳೆತ್ತರದ ಈ ಪುಕ್ಕಗಳಲ್ಲಿ ಕಣ್ಣುಗಳಂತೆ ಕಾಣಿಸುವ ವರ್ಣ ಸಂಯೋಜನೆಯಿದೆ. ಗಾಢ ನೀಲಿ, ಆಕಾಶ ನೀಲಿ, ಬೂದು - ಕಂದು, ಹಸಿರು ಬಣ್ಣಗಳು ನಿರ್ದಿಷ್ಟ ಪ್ರಮಾಣದಲ್ಲಿದ್ದು ಕಣ್ಣಿನ ರೂಪ ನೀಡುತ್ತವೆ. ಈ ಕಣ್ಣುಗಳು ಕಣ್ಣೀರು ಹಾಕುವುದಿಲ್ಲ!
ಮತ್ತಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಹೆಣ್ಣಿಗೂ ಗಂಡಿಗೂ ಬಹುಮುಖ್ಯ ವ್ಯತ್ಯಾಸ ಕಣ್ಣುಗಳುಳ್ಳ ಬಣ್ಣದ ಪುಕ್ಕಗಳ ಬಾಲ. ಗಂಡಿಗೆ ಹೋಲಿಸಿದಾಗ ಹೆಣ್ಣು ನವಿಲು ಸಪ್ಪೆ! ಗಂಡಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುವ ಹೆಣ್ಣು ನವಿಲುಗಳ ಕತ್ತಿನ ಬಣ್ಣ ಹಸಿರು. ಕಣ್ಣಿನ ಸುತ್ತ ಕಂದು - ಬಿಳಿ - ಹಸಿರು ಬಣ್ಣದ ಪಟ್ಟಿಗಳಿವೆ. ಗಂಡಿನಂತೆಯೇ ಹೆಣ್ಣಿಗೂ ಕಿರೀಟವಿದೆ, ಕಿರೀಟದ ತುದಿಯ ಗುಚ್ಛದ ಬಣ್ಣ ಗಂಡಿನಲ್ಲಿ ನೀಲಿ, ಹೆಣ್ಣಿನಲ್ಲಿ ಹಸಿರು. ಪುಕ್ಕಗಳಿಲ್ಲದ ಪುಟ್ಟ ಬಾಲವನ್ನು ಹೆಣ್ಣು ಕೂಡ ಆಗೊಮ್ಮೆ ಈಗೊಮ್ಮೆ ಮೇಲೆತ್ತಿಕೊಳ್ಳುತ್ತವೆ.
ಪೊದೆಗಳಲ್ಲಿ ನೆಲ ಮಟ್ಟದಲ್ಲೇ ಗೂಡು ನಿರ್ಮಿಸಿ ಮೊಟ್ಟೆ ಇಡುತ್ತವೆ ನವಿಲುಗಳು. ಹುಟ್ಟಿದ ಒಂದೇ ದಿನಕ್ಕೆ ನವಿಲಿನ ಮರಿಗಳು ಆಹಾರವನ್ನರಸಿಕೊಂಡು ಹೆತ್ತವರ ಜೊತೆ ಸಾಗುತ್ತವೆ.
ಸಾಮಾನ್ಯವಾಗಿ ಗುಂಪಿನಲ್ಲಿದ್ದುಕೊಂಡೇ ಆಹಾರವನ್ನರಸುತ್ತವೆ. ಗುಂಪಿನಲ್ಲಿ ಒಂದು ಅಥವಾ ಎರಡು ಗಂಡು ಪಕ್ಷಿಯಿದ್ದರೆ ನಾಲ್ಕೈದು ಹೆಣ್ಣು ಪಕ್ಷಿಗಳಿರುತ್ತವೆ. ಗದ್ದೆಯಂಚಿನಲ್ಲಿ, ಗದ್ದೆ - ತೋಟಗಳೊಳಗೆ, ಅರಣ್ಯದಲ್ಲೆಲ್ಲಾ ಅಡ್ಡಾಡುವ ನವಿಲುಗಳು ಕೆಲವೆಡೆ ಮನುಷ್ಯರಿಗೆ ತೀರಾನೇ ಹೊಂದಿಕೊಂಡಿವೆ. ಕಾಳು, ಹುಳ - ಹುಪ್ಪಟೆ, ಹಾವುಗಳನ್ನು ತಿನ್ನುವ ಮಿಶ್ರಾಹಾರಿ ಪ್ರಾಣಿ ನವಿಲು. ಹುಳ - ಹುಪ್ಪಟೆಗಳನ್ನು ತಿಂದು ರೈತ ಸ್ನೇಹಿಯಾಗಿರುವ ನವಿಲುಗಳು ಕಾಳುಗಳನ್ನು ತಿಂದು ನಾಟಿಯಾದ ಗದ್ದೆಯನ್ನು ಹಾಳು ಮಾಡುವ ಮೂಲಕ ತೊಂದರೆಯನ್ನೂ ಉಂಟುಮಾಡುತ್ತವೆ. ಎಳನೀರನ್ನೂ ಕುಕ್ಕಿ ಕುಡಿಯುತ್ತವೆ ಎನ್ನುತ್ತಾರೆ.
ರಾಸಾಯನಿಕಗಳ ಬಳಕೆ, ನವಿಲನ್ನು ಬೇಟೆಯಾಡಿ ಆಹಾರವಾಗಿ ಉಪಯೋಗಿಸುತ್ತಿದ್ದ ಕಾರಣಕ್ಕೆ ಹೆಚ್ಚು ಕಾಣಸಿಗದಿದ್ದ ನವಿಲುಗಳು ಈಗಂತೂ ಎಲ್ಲೆಡೆ ದಂಡಿಯಾಗಿ ಕಾಣಿಸುತ್ತಿವೆ. ನವಿಲನ್ನು ಬೇಟೆಯಾಡುವವರು, ತಿನ್ನುವವರು ಈಗ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿರುವುದು, ರಾಸಾಯನಿಕಗಳಿಗೆ ನವಿಲಿನ ದೇಹ ಬಹುಶಃ ಒಗ್ಗಿಹೋಗಿರುವುದು ಇದಕ್ಕೆ ಕಾರಣವಿರಬಹುದು. ಅಂದಹಾಗೆ ನವಿಲನ್ನು ಬೇಟೆಯಾಡುವುದಾಗಲೀ, ತಿನ್ನುವುದಾಗಲೀ ಶಿಕ್ಷಾರ್ಹ ಅಪರಾಧವೂ ಹೌದು.
ಚಿತ್ರ ೩: ಗಂಡು ನವಿಲಿನ ನರ್ತನ |
ಚಿತ್ರನೆನಪು:
ಚಿತ್ರ ೧: ಮಂಡ್ಯದ ಹೊರವಲಯದಲ್ಲಿ ತೆಗೆದ ಪಟವಿದು. ತೆವರಿಯಿಂದ ಇಳಿದು ಗದ್ದೆಯೊಳಗೆ ಸಾಗಿಬರುತ್ತಿತ್ತು ಗಂಡು ನವಿಲು. ತೆವರಿಯ ಮಣ್ಣಿನ ಕೆಂಪು, ಗದ್ದೆಯ ಹಸಿರು, ನೀಲಿ ಬಣ್ಣದ ಗಂಡು ನವಿಲನ್ನು ಅಂದವಾಗಿಸಿತ್ತು.
ಚಿತ್ರ ೨: ಕಣ್ವ ಜಲಾಶಯದ ಬಳಿ ತೆಗೆದ ಚಿತ್ರವಿದು. ಬಾಲವನ್ನು ಎತ್ತಿ ನಿಂತಿರುವ ಹೆಣ್ಣು ನವಿಲನ್ನು ಚಿತ್ರದಲ್ಲಿ ಕಾಣಬಹುದು. ಉದ್ದನೆಯ ಬಾಲವನ್ನು ಗಂಡು ನವಿಲು ಹೊಂದಿಲ್ಲದ ಸಂದರ್ಭದಲ್ಲೂ ಹೆಣ್ಣು ಗಂಡಿನ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುವುದು ಕತ್ತಿನ ಬಣ್ಣ. ಗಂಡಿನ ಕತ್ತು ನೀಲಿ ಬಣ್ಣದ್ದಾದರೆ ಹೆಣ್ಣಿನ ಕತ್ತಿನ ಬಣ್ಣ ಹಸಿರು.
ಚಿತ್ರ ೩: ನವಿಲು ನರ್ತಿಸುವ ಚಿತ್ರವನ್ನಾಕದಿದ್ದರೆ ನವಿಲಿನ ಕುರಿತ ಲೇಖನ ಪೂರ್ಣವಾಗುವುದು ಸಾಧ್ಯವೇ! ಮಂಡ್ಯದ ಹೊರವಲಯದಲ್ಲಿ ತೆಗೆದ ಪಟವಿದು. ಸೂಳೆಕೆರೆ ಬಳಿ ಫೋಟೋ ತೆಗೆದುಕೊಂಡು ವಾಪಸ್ಸಾಗುವಾಗ ಒಣಗಿನಿಂತಿದ್ದ ಗದ್ದೆಯ ಅಂಚಿನಲ್ಲಿ ನವಿಲು ನರ್ತಿಸುತ್ತಿತ್ತು. ಹತ್ತಿರದಲ್ಯಾವ ಹೆಣ್ಣೂ ಕಾಣಿಸಲಿಲ್ಲ. ಹೆಣ್ಣನ್ನು ಆಕರ್ಷಿಸಲೇ ನರ್ತಿಸುತ್ತಿತ್ತೋ ಸುಮ್ಮನೆ ಖುಷಿಗೆ ನರ್ತಿಸುತ್ತಿತ್ತೋ ಬಲ್ಲವರಾರು?!!
ಹೀಗಾಗಿ ಲೇಖನಗಳು ಪಕ್ಷಿ ಪ್ರಪಂಚ: ನವಿಲು.
ಎಲ್ಲಾ ಲೇಖನಗಳು ಆಗಿದೆ ಪಕ್ಷಿ ಪ್ರಪಂಚ: ನವಿಲು. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಕ್ಷಿ ಪ್ರಪಂಚ: ನವಿಲು. ಲಿಂಕ್ ವಿಳಾಸ https://dekalungi.blogspot.com/2018/07/blog-post_21.html
0 Response to "ಪಕ್ಷಿ ಪ್ರಪಂಚ: ನವಿಲು."
ಕಾಮೆಂಟ್ ಪೋಸ್ಟ್ ಮಾಡಿ