ಶೀರ್ಷಿಕೆ : News and photo Date: 13--10--2017
ಲಿಂಕ್ : News and photo Date: 13--10--2017
News and photo Date: 13--10--2017
ನವೆಂಬರ್ ಒಂದರಿಂದ ಅನೀಲ ಭಾಗ್ಯ ಜಾರಿ
ಕಲಬುರಗಿ,ಅ.13(ಕ.ವಾ.)- ರಾಜ್ಯದಲ್ಲಿ ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುವ ಅನೀಲ ಭಾಗ್ಯ ಯೋಜನೆಯನ್ನು ನವೆಂಬರ್ ಒಂದರಿಂದ ರಾಜ್ಯದಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಶುಕ್ರವಾರ ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರದ ನಿಡಗುಂದಾ ಗ್ರಾಮದಲ್ಲಿ 1.20 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ರಾಜ್ಯದ 28 ಲಕ್ಷ ಕಡುಬಡವರು ಅನೀಲ ಭಾಗ್ಯ ಯೋಜನೆಯ ಲಾಭ ಪಡೆಯಲಿದ್ದು, ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದ ಬಿಟ್ಟುಹೋಗಿರುವ ಕುಟುಂಬಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಎಂದರು.
ಸರ್ಕಾರವು ರಾಜ್ಯದ ಎಲ್ಲ ಜಾತಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿ ಭಾಗ್ಯ, ಮೈತ್ರಿ, ಮನಸ್ವಿನಿ, ಆರೋಗ್ಯ ಭಾಗ್ಯ, ಪಶು ಭಾಗ್ಯ, ಶಾದಿ ಭಾಗ್ಯ, ವಿದ್ಯಾಸಿರಿ, ಋಣಮುಕ್ತ, ಕ್ಷೀರಧಾರೆ, ವಸತಿ ಭಾಗ್ಯಗಳಂತಹ ಹಲವು ಭಾಗ್ಯಗಳನ್ನು ರೂಪಿಸಿ ಜಾರಿಗೊಳಿಸಿದೆ. ರಾಜ್ಯದ ಜನಸಂಖ್ಯೆಯ ಬಹುಪಾಲು ನಾಗರಿಕರು ಸರ್ಕಾರದ ಒಂದಲ್ಲ ಒಂದು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕೇಂದ್ರದ ಈ ಹಿಂದಿನ ಯು.ಪಿ.ಎ. ಸರ್ಕಾರ ಬಡವರ ಪರವಾದ ಯೋಜನೆಗಳನ್ನು ರೂಪಿಸಿದೆ. ಆಹಾರ ಭದ್ರತೆ ಕಾನೂನು ಜಾರಿಗೊಳಿಸಿದ್ದರಿಂದ ಬಡವರಿಗೆ ಕಡಿಮೆ ದರದಲ್ಲಿ ಪಡಿತರದಲ್ಲಿ ಅಕ್ಕಿ ದೊರೆಯುವಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯಿಂದ ಜನರಿಗೆ ತಮ್ಮ ಗ್ರಾಮದಲ್ಲಿ ಕೂಲಿ ದೊರೆತು ಗುಳೆ ಹೋಗುವುದನ್ನು ತಪ್ಪಿಸಿದೆ ಎಂದರು.
ರಾಜ್ಯದಲ್ಲಿ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾಗ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶಿಸಿ ರೈತರ ನೆರವಿಗೆ ನಿಂತಿದೆ. ಕಲಬುರಗಿ ಜಿಲ್ಲೆ ಒಂದರಲ್ಲೇ ಬೆಂಬಲ ಬೆಲೆಯಲ್ಲಿ ಸುಮಾರು 30 ಲಕ್ಷ ಕ್ಷಿಂಟಲ್ ತೊಗರಿ ಖರೀದಿಸಲಾಗಿದೆ. ಸಧ್ಯ ಹೆಸರುಕಾಳು ಮತ್ತು ಉದ್ದನ್ನು ಸಹ ಖರೀದಿಸಲು ಪ್ರಾರಂಭಿಸಲಾಗಿದೆ. ರೈತರ 50 ಸಾವಿರ ರೂ.ಗಳ ವರೆಗಿನ ಸಾಲವನ್ನು ಮನ್ನಾ ಮಾಡುವ ಮೂಲಕ ರೈತ ಪರ ತನ್ನ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಿದೆ. ಬಡವರ ಕಣ್ಣೀರು ಒರೆಸುವ ಕಾರ್ಯ ಸರ್ಕಾರ ಮಾಡುತ್ತಿದ್ದು, ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕೆಂದರು.
ಈ ಸಂದರ್ಭದಲ್ಲಿ ನಿಡಗುಂದಾ ನಂದೀಶ್ವರ ಮಠದ ಕರುಣೇಶ್ವರ ಸ್ವಾಮಿಗಳು, ಕಲಬುರಗಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ನಿಡಗುಂದಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ಸೋಮಶೇಖರ ಹಿರೇಮಠ, ಜಿಲ್ಲಾ ಪಂಚಾಯತಿ ಸದಸ್ಯ ಶಿವಶರಣಪ್ಪ ಶಂಕರ, ತಾಲೂಕು ಪಂಚಾಯತಿ ಸದಸ್ಯೆ ಲೀಲಾವತಿ ಸೋಮಶೇಖರ ಕೆರಳ್ಳಿ, ಚಿಂಚೋಳಿ ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರಯ್ಯ ಕಂಬಾರ, ತಾಲೂಕು ಪಂಚಾಯತಿ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಸುಭಾಷಚಂದ್ರ ನಿಷ್ಟಿ, ಕರೆಪ್ಪ ಪಿಲ್ಲಿ ಮತ್ತಿತರ ಮುಖಂಡರು ಹಾಜರಿದ್ದರು.
ಜನರ ಅಪೇಕ್ಷೆಯಂತೆ ಸೇಡಂ ಮತಕ್ಷೇತ್ರ ಅಭಿವೃದ್ಧಿ
ಕಲಬುರಗಿ,ಅ.13(ಕ.ವಾ.)- ಸೇಡಂ ಮತಕ್ಷೇತ್ರಕ್ಕೆ ಆಗಮಿಸುವ ಸೇಡಂ ತಾಲೂಕು ಹಾಗೂ ಚಿಂಚೋಳಿ ತಾಲೂಕಿನ 30 ಗ್ರಾಮಗಳನ್ನು ಜನರ ಅಪೇಕ್ಷೆಯಂತೆ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ||ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಶುಕ್ರವಾರ ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರದ ನಿಡಗುಂದಾ ಗ್ರಾಮದಲ್ಲಿ 1.20 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಚಿಂಚೋಳಿ ತಾಲೂಕಿನ ಸುಲೇಪೇಟ್-ಚಿಂಚೋಳಿ, ಜಟ್ಟೂರ್, ಕರ್ಚಖೇಡ್, ಭಕ್ತಂಪಳ್ಳಿ, ಕೊಚ್ಚಾವರಂ, ಗರಗಪಳ್ಳಿ, ರಾಮತೀರ್ಥ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸೇಡಂ ಮತಕ್ಷೇತ್ರದಲ್ಲಿ ಎಲ್ಲ ಹೋಬಳಿ ಮತ್ತು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ನೂತನ ರಸ್ತೆ, ರÀಸ್ತೆಗಳಿಗೆ ಬ್ರಿಜ್ ಮತ್ತು ಬ್ಯಾರೇಜ್‍ಗಳನ್ನು ನಿರ್ಮಿಸಲಾಗಿದೆ ಎಂದರು.
ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದಿದ ಮುಲ್ಲಾಮಾರಿ ಯೋಜನೆಯನ್ನು 120 ಕೋಟಿ ರೂ.ಗಳ ವೆಚ್ಚದಲ್ಲಿ 80 ಕಿ.ಮೀ. ಉದ್ದದ ಕಾಲುವೆಯನ್ನು ನಿರ್ಮಿಸಲು ಈಗಾಗಲೇ ಸಚಿವ ಸಂಪುಟ ಒಪ್ಪಿಗೆ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಜಿಲ್ಲೆಯ ಗಂಡೋರಿ ನಾಲಾ, ಬೆಣ್ಣೆತೋರಾ ನೀರಾವರಿ ಯೋಜನೆಗಳನ್ನು ಸಹ ನವೀಕರಿಸುವ ಕಾರ್ಯ ನಡೆದಿದೆ ಎಂದರು.
ಈ ಹಿಂದಿನ ಯುಪಿಎ ಸರ್ಕಾರ ಈ ಭಾಗದ ಅಭಿವೃದ್ಧಿಗಾಗಿ 371(ಜೆ) ಕಲಂ ರೂಪಿಸಿ ಈ ಭಾಗದ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಟ್ಟಿದೆ. 371(ಜೆ) ಅಡಿಯಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಗೆ ಮೀಸಲಾತಿ ಜಾರಿಗೊಳಿಸಿ ಈ ಭಾಗದ ಬಡ ಮಕ್ಕಳು ಸಹಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ದೊರೆತ ಕಾರಣ ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಕ್ಕಿದಂತಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಸ್ಥಾಪಿಸಿ ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ 1000 ಕೋಟಿ ರೂ. ಹಾಗೂ ಪ್ರಸಕ್ತ ವರ್ಷ 1500 ಕೋಟಿ ರೂ.ಗಳನ್ನು ಈ ಭಾಗದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದೆ. ಜಿಲ್ಲೆಯ ಪ್ರತಿ ಹಳ್ಳಿ ಮತ್ತು ತಾಂಡಾಗಳಿಗೆ ರಸ್ತೆ ನಿರ್ಮಿಸಲು ಇದರಿಂದ ಸಾಧ್ಯವಾಗಿದೆ. ಸೂರ್ಯಚಂದ್ರ ಇರುವವರೆಗೂ ಈ ಭಾಗಕ್ಕೆ 371(ಜೆ)ಕಲಂ ಸಹಾಯವಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ಸಮಾಜದ ಜನಾಂಗಕ್ಕೆ ಗೌರವ ನೀಡಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯ ಆಧಾರದ ಮೇಲೆ ಅನುದಾನ ಮೀಸಲಿಟ್ಟಿರುವ ಪ್ರಥಮ ಸರ್ಕಾರ ನಮ್ಮದಾಗಿದೆ ಎಂದು ತಿಳಿಸಿದರು.
ಮುಖಂಡ ಸುಭಾಷಚಂದ್ರ ನಿಷ್ಟಿ, ಮಾತನಾಡಿ, ಸೇಡಂ ಮತಕ್ಷೇತ್ರದ ಅಭಿವೃದ್ಧಿಗಾಗಿ ಸೇಡಂ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಶರಣಪ್ರಕಾಶ ಪಾಟೀಲ ಅವರು ಜನಪರ ಕಾಳಜಿವಹಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸೇಡಂ ಮತಕ್ಷೇತ್ರವನ್ನು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸಿ ಮಾದರಿ ಕ್ಷೇತ್ರ ಮಾಡಲು ಪಣತೊಟ್ಟಿದ್ದಾರೆ. ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ನಿಡಗುಂದಾ ನಂದೀಶ್ವರ ಮಠದ ಕರುಣೇಶ್ವರ ಸ್ವಾಮಿಗಳು, ಕಲಬುರಗಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ನಿಡಗುಂದಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ಸೋಮಶೇಖರ ಹಿರೇಮಠ, ಜಿಲ್ಲಾ ಪಂಚಾಯತಿ ಸದಸ್ಯ ಶಿವಶರಣಪ್ಪ ಶಂಕರ, ತಾಲೂಕು ಪಂಚಾಯತಿ ಸದಸ್ಯೆ ಲೀಲಾವತಿ ಸೋಮಶೇಖರ ಕೆರಳ್ಳಿ, ಚಿಂಚೋಳಿ ಎ.ಪಿ.ಎಂ.ಸಿ.ಅಧ್ಯಕ್ಷ ಚಂದ್ರಶೇಖರಯ್ಯ ಕಂಬಾರ, ತಾಲೂಕು ಪಂಚಾಯತಿ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಕರೆಪ್ಪ ಪಿಲ್ಲಿ ಮತ್ತಿತರ ಮುಖಂಡರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸಚಿವರು ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ವಿತರಿಸಿದರು. ಇದಕ್ಕೂ ಮುನ್ನ ಸಚಿವರು ನಿಡಗುಂದಾದಲ್ಲಿ 1.15 ಕೋಟಿ ರೂ.ಗಳಲ್ಲಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟಿಸಿದರು.
ಗರ್ಭಕೋಶ ಶಸ್ತ್ರಚಿಕಿತ್ಸೆ: ಮಹಿಳೆಯರ ಪತ್ತೆಗೆ ಸಮಿತಿ ರಚನೆ
****************************************
ಕಲಬುರಗಿ.ಅ.13.(ಕ.ವಾ.)- ಕಲಬುರಗಿ ಜಿಲ್ಲೆಯಲ್ಲಿ ಅನಾವಶ್ಯಕ ಗರ್ಭಕೋಶ ಚಿಕಿತ್ಸೆ ಮಾಡಿಸಿದ ಸುಮಾರು 2200 ಪ್ರಕರಣಗಳು ಬೆಳಕಿಗೆ ಬಂದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದÀ ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ದ್ವಿಸದಸ್ಯ ಸಮಿತಿ ರಚಿಸಲಾಗುವುದೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರತಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಗರ್ಭಕೋಶ ಶಸ್ತ್ರಚಿಕಿತ್ಸೆಗೆ ತುತ್ತಾದ ಮಹಿಳೆಯರು ನರ ದೌರ್ಬಲ್ಯ, ಅಪೌಷ್ಠಿಕತೆ, ಕಣ್ಣಿನ ಸಮಸ್ಯೆ ಸೇರಿದಂತೆ ಇನ್ನೀತರ ಸಮಸ್ಯೆಗಳಿಂದ ಬಳಲುತ್ತಿದ್ದು, ಇಂತಹವರ ಪತ್ತೆ ಮಾಡಿ ಒಂದು ತಿಂಗಳ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಗೆ ತಿಳಿಸಲಾಗುವುದು. ವರದಿ ಬಂದ ನಂತರ ನೊಂದ ಮಹಿಳೆಯರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ಕಲಬುರಗಿಯಲ್ಲಿ ಸುಮಾರು ನಾಲ್ಕು ಆಸ್ಪತ್ರೆಗಳು ಈ ರೀತಿಯ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂಬ ಮಾಹಿತಿಯಿದ್ದು, ಇಂತಹ ಆಸ್ಪತ್ರೆಗಳು ಮತ್ತು ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಭಾರತೀಯ ವೈದ್ಯಕೀಯ ಪರಿಷತ್ತಿಗೆ ಪತ್ರ ಬರೆಯಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮಾರಾಟ ಮತ್ತು ಮಹಿಳೆಯರ ದೌರ್ಜನ್ಯ, ಗುಜ್ಜರ ಮದುವೆ ಪ್ರಕರಣಗಳು ಹೆಚ್ಚಾಗಿವೆ. ದೇವದಾಸಿ ಪದ್ದತಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲದೇ ಗಂಡು ಮಕ್ಕಳು ಒಳಗಾಗುತ್ತಿದ್ದಾರೆ. ಗುಜ್ಜರ ಮದುವೆ ಪ್ರಕರಣಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇವರನ್ನು ಮಟ್ಟ ಹಾಕುವ ಅಗತ್ಯವಿದೆ. ಈ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಪ್ರತಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗಳ್ಳಿ ಸೇರಿದಂತೆ ಮತ್ತಿತರರು ಇದ್ದರು.
ದೇವದಾಸಿಯರ ಸಮೀಕ್ಷೆಗೆ ಸಮಿತಿ ರಚನೆ
***************************
ಕಲಬುರಗಿ,ಅ.13.(ಕ.ವಾ.)-ದೇವದಾತಿ ಪದ್ಧತಿ ನಿರ್ಮೂಲನೆಗೆ ಮತ್ತು ಪುನರ್ವಸತಿ ಕಲ್ಪಿಸಲು ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲು ರಾಜ್ಯ ಮಹಿಳಾ ಆಯೋಗದಿಂದ ಸಮಿತಿ ರಚಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಾದಾಸಿ ಪದ್ದತಿ ನಿರ್ಮೂಲನೆಗೆ ಕಾರ್ಯನಿರ್ವಹಿಸುತ್ತಿರುವ ತಜ್ಞರ ನೇತೃತ್ವದಲ್ಲಿಯೆ ಸಮಿತಿ ರಚಿಸಲಾಗುವುದು. ಇದರಲ್ಲಿ 14 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಸಮಿತಿಯ ಸದಸ್ಯರಾಗಿರುತ್ತಾರೆ ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮಹಿಳೆಯರ ಮೇಲಿ ಲೈಂಗಿಕ ದೌರ್ಜನ್ಯ, ಅಪಹರಣ, ಜಾತಿ ದೌರ್ಜನ್ಯ, ಕಿರುಕಳ ಪ್ರಕರಣಕ್ಕೆ ಹೆಚ್ಚಳಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿದ ಅಧ್ಯಕ್ಷರು ಇದನ್ನ ತಡೆಗಟ್ಟಲ್ಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇತರೆ ಇಲಾಖೆಗಿಂತ ಹೆಚ್ಚಿನ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದ್ದು ಇದನ್ನು ಅರಿತು ಕೆಲಸ ಮಾಡಬೇಕಿದೆ. ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನೀತರ ಪ್ರಕರಣದಲ್ಲಿ ನೊಂದ ಮಹಿಳೆಯರು ಠಾಣೆಗೆ ದೂರು ನೀಡಲು ಬಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಯಮದಿಂದ ಸಮಸ್ಯೆಗಳನ್ನು ಆಲಿಸಬೇಕು. ಜಿಲ್ಲೆಯಲ್ಲಿನ ಮಹಿಳಾ ಪೊಲೀಸ್ ಸಿಬ್ಬಂದಿಯ ಕೊರತೆಯಿದ್ದು, ಈ ಕುರಿತು ನೇಮಕಾತಿಗೆ ಗೃಹ ಸಚಿವರೊಂದಿಗೆ ಸಮಾಲೋಚಿಸಲಾಗುವುದು ಎಂದರು.
ಮಹಿಳೆಯರ ಮತ್ತು ಮಕ್ಕಳ ಮೇಲಿನ ಸಮಸ್ಯೆಗಳು ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನವಾಗಿವೆ. ಬೆಳಗಾವಿಯಲ್ಲಿ ಗುಜ್ಜರ ಮದುವೆ, ಬಾಗಲಕೋಟೆಯಲ್ಲಿ ಬಾಲ್ಯ ವಿವಾಹ, ಹಾವೇರಿ ಗರ್ಭಕೋಶಕ್ಕೆ ಕತ್ತರಿ, ಮಂಗಳೂರಲ್ಲಿ ವೇಶ್ಯಾವಾಟಿಕೆ, ಮೈಸೂರಿನಲ್ಲಿ ಪ್ರೇಮ ವಿವಾಹ, ರಾಮನಗರದಲ್ಲಿ ಬಹುಪತ್ನಿತ್ವ, ಕೋಲಾರ-ಪಾವಗಡದಲ್ಲಿ ಫ್ಲೋರೈಡ್ ಅಂಶ ಮಿಶ್ರಿತ ನೀರು ಸೇವನೆಯಿಂದ ಗರ್ಭಕೋಶ ಕ್ಯಾನ್ಸರ್ ನಂತಹ ಪ್ರಕರಣಗಳು ಕಣ್ಣುಮುಂದಿವೆ. ಆಯೋಗವು ರಾಜ್ಯದಾದ್ಯಂತ ಪ್ರಯಾಣಿಸಿ ಈ ಬಗ್ಗೆ ಪ್ರಗತಿ ಪರಿಶೀಲನೆ ಮಾಡಿ ಅಗತ್ಯ ಸಲಹೆ ಸೂಚನೆ ನೀಡುವುದಲ್ಲದೆ ಸಾಮಾಜಿಕ ಸಮಸ್ಯೆಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಅನಾವಶ್ಯಕ ಸುಮಾರು 2200 ಗರ್ಭಕೋಶದ ಶಸ್ತ್ರಚಿಕಿತ್ಸೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಗುಜ್ಜರ ಮದುವೆ ಹಾಗೂ ಮಕ್ಕಳ ಮಾರಾಟ ಪ್ರಕರಣಗಳು ಹೆಚ್ಚಿದ್ದು, ಗುಜ್ಜರ ಮದುವೆ ಪ್ರಕರಣದಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳನ್ನೆ ಗುರಿಯಾಗಿಸಿ ಗುಜರಾತ್, ರಾಜಸ್ಥಾನ ಮೂಲದವರು ಇಲ್ಲಿಗೆ ಬಂದು ತರಾತುರಿಯಲ್ಲಿ ಮದುವೆ ಮಾಡಿಕೊಂಡು ಹೋಗುವ ಕೆಟ್ಟ ಪ್ರವೃತ್ತಿಯಿದೆ. ಇದನ್ನು ನಿಯಂತ್ರಿಸುವ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಅಧ್ಯಕ್ಷರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಅವರು ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅತ್ಯಾಚಾರ, ದೌರ್ಜನ್ಯ, ಪೋಸ್ಕೋ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ ಮಾತನಾಡಿದ ಅವರು ಜಿಲ್ಲೆಯ 720 ಶಾಲಾ-ಕಾಲೇಜುಗಳ 1.4 ಲಕ್ಷ ವಿದ್ಯಾರ್ಥಿಗಳಿಗೆ ಲೈಂಗಿಕ ಅತ್ಯಚಾರದ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಠಾಣೆಗೆ ದೂರು ನೀಡಲು ಬರುವ ಮಹಿಳೆಗೆ ಸಹಾಯಕ್ಕಾಗಿ ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಹಾಯ ವೇದಿಕೆ ರಚಿಸಲಾಗಿದೆ. ಅಪರೇಷನ್ ಮುಸ್ಕಾನ್ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ರಸ್ತೆ ಬದಿ ಮತ್ತು ದೇವಸ್ಥಾನಗಳಲ್ಲಿ ಭೀಕ್ಷಾಟನೆಯಲ್ಲಿ ತೊಡಗಿದ, ಕೂಲಿ ಕೆಲಸದಲ್ಲಿ ನಿರತರಾದ ಸುಮಾರು 200 ಮಕ್ಕಳನ್ನು ರಕ್ಷಿಸಲಾಗಿದೆ ಎಂದರು.
ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮಹಿಳಾ ಎನ್.ಜಿ.ಓ.ಗಳ ಒಕ್ಕೂಟವು ಡಾ.ಶಾರದಾ ಯಾಕಾಪುರ ನೇತೃತ್ವದಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಸಿ.ಡಿ.ಪಿ.ಓ.ಗಳು, ಮಹಿಳಾ ಸಂಘ-ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಸಭೆಯ ನಂತರ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಬಾಣಂತೀಯರ ವಾರ್ಡ್, ಮಹಿಳಾ ಚಿಕಿತ್ಸಾ ಘಟಕ, ಮಕ್ಕಳ ವಾರ್ಡ್‍ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿ, ರೋಗಿಗಳು ಗುಣಮುಖರಾಗಲು ಸ್ವಚ್ಛ ಪರಿಸರ ಅವಶ್ಯಕತೆ ಹೆಚ್ಚಿರುವುದರಿಂದ ವಾರ್ಡ್‍ಗಳು ಮತ್ತು ಶೌಚಾಲಯಗಳು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಿಗೆ ಸೂಚಿಸಿದರು. ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಬಿ.ಎನ್.ಜೋಷಿ ಹಾಗೂ ಡಾ.ಶಿವಾನಂದ ಆಸ್ಪತ್ರೆಯಲ್ಲಿ ನೀಡುತ್ತಿರುವ ಸೇವೆಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಸಿ.ಡಿ.ಪಿ.ಓ. ಅಶೋಕ ರಾಜನ್ ಸೇರಿದಂತೆ ಇನ್ನೀತರು ಹಾಜರಿದ್ದರು.
ಹೆಚ್ಚು ಅಂಕ ಪಡೆದವರಲ್ಲಿಯೇ ಪ್ರತಿಭೆ ಇದೆ ಎಂಬುದು ತಪ್ಪು ತಿಳುವಳಿಕೆ-ಪ್ರೊ.ಎಂ. ಕೃಷ್ಣೇಗೌಡ
***************************************************************
ಕಲಬುರಗಿ.ಅ.13.(ಕ.ವಾ.)- ಪ್ರಪಂಚದಲ್ಲಿಯೇ ಅತಿ ಹೆಚ್ಚು ಯುವ ಶಕ್ತಿ ಹೊಂದಿದ ಭಾಗ್ಯಶಾಲಿ ದೇಶವೇ ಭಾರತ. ಇಂದು ಮುಂದೂವರೆದ ರಾಷ್ಟ್ರಗಳು ಯುವಕರನ್ನು ಆಮದು ಮಾಡಿಕೊಳ್ಳುತ್ತಿವೆ. ಆದರೆ ಒಂದೆಡೆ ಕೇವಲ ಅಂಕಗಳನ್ನು ಗಿಟ್ಟಿಸಿಕೊಳ್ಳಲು ಮಾತ್ರ ಯುವಕರು ಓದಿನಡೆಗೆ ಆಸಕ್ತಿ ತೋರುತ್ತಿದ್ದಾರೆ. ಹೆಚ್ಚು ಅಂಕ ಪಡೆದವರಲ್ಲಿಯೇ ಮಾತ್ರ ಪ್ರತಿಭೆ ಅಡಗಿದೆ ಎಂಬುದು ಜನರಲ್ಲಿನ ದೊಡ್ಡ ತಪ್ಪು ತಿಳುವಳಿಕೆಯಾಗಿದೆ ಎಂದು ಹಾಸ್ಯ ಸಾಹಿತಿ ಪ್ರೊ.ಎಂ. ಕೃಷ್ಣೇಗೌಡ ಅಭಿಪ್ರಾಯ ಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ್ ಮಹಾವಿದ್ಯಾಲಯ ಯುವಜನೋತ್ಸವಕ್ಕೆ ಡೊಳ್ಳು ಭಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೇವಲ ಅಂಕಗಳೇ ಜೀವನವಲ್ಲ. ಅದರ ಹೊರತು ವ್ಯಕ್ತಿಯಲ್ಲಿನ ಕಲೆಯು ಒಂದು ಜೀವನ. ಅಂತರ್ನಿಹಿತದಲ್ಲಿ ಬಸಿದು ಹೋಗುವ ಶಕ್ತಿಯನ್ನು ಹೊರಹೊಮ್ಮಿಸಲು ವಿದ್ಯಾರ್ಥಿಗಳಿಗೆ ಪ್ರಚೋದಿಸಬೇಕಾದ ಅಗತ್ಯವಿದೆ. ಆದರೆ ಇಂದು ಕಾಲೇಜು ಯುವಕರು ಎಲ್ಲವನ್ನು ತಿಳಿದು ಸಾಂದ್ರಿಕರಿಸಿ ನಿರ್ಣಾಯಕ ನಾಯಕ್ವ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿಷಾಧಿಸಿದರು.
ಪ್ರಸ್ತುತದಲ್ಲಿ ಜ್ಞಾನ ಅಂಗೈಯಲ್ಲಿಯೇ ಹರಿದು ಬರುತ್ತಿದೆ. ಪ್ರಾಚಾರ್ಯರಿಲ್ಲದೆ ಅಧ್ಯಯನ ಮಾಡಬಹುದು ಎಂಬುದಷ್ಟರ ಮಟ್ಟಿಗೆ ತಾಂತ್ರಿಕ ಜಗತ್ತು ನಿರ್ಮಾಣವಾಗಿದೆ. ಒಬ್ಬ ವಿದ್ಯಾರ್ಥಿ ಎಷ್ಟು ಮೇಧಾವಿ ಎಂದು ಅಳೆಯಲು ಸಾಧ್ಯವಿಲ್ಲ. ಜಗತ್ತು ಕಂಡು ಪ್ರಶ್ನೆ ಹುಟ್ಟದಿದ್ದರೆ ಅದು ವಿದ್ಯೆ ಅಲ್ಲ. ಪ್ರಶ್ನೆ ಮತ್ತು ಆಶ್ಚರ್ಯದ ಮಧ್ಯೆ ವಿದ್ಯೆ ಹುಟ್ಟಿದಾಗ ಮಾತ್ರ ಸಂಶೋಧನೆ ಮಾಡಬಹುದು. ಅಂತಃಸ್ವತ ಹೊರತೆಗೆಯುವುದು ಕಲೆ, ಅಂತಃಸ್ವತ ಕೊಲೆಮಾಡುವುದು ಪರೀಕ್ಷೆ. ಯುವಕರ ಅಂತರ್ಯದಲ್ಲಿನ ಕಲೆಯ ಶಕ್ತಿಯನ್ನು ಅನಾವರಣಗೊಳುವುದೇ ಯುವಜನೋತ್ಸವ. ಹೀಗಾಗಿ ಕಲಾವಿದರಿಗೆ ಗೌರವಿಸಿ, ಪ್ರೋತ್ಸಾಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್.ನಿರಂಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿಯ ಜತೆಗೆ ಯುವಕರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಯುವಜನೋತ್ಸವದ ಉದ್ದೇಶ. ಸಮಾಜದ ಏಳಿಗಾಗಿ ಕೈಗೊಳ್ಳುವ ಎಲ್ಲ ಕಾರ್ಯಕ್ಕೂ ವಿಶ್ವವಿದ್ಯಾಲಯ ಸ್ಪಂದಿಸುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇತ್ತೀಚೆಗೆ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನವೆಂಬರ್ 21ರಿಂದ 23ರವರೆಗೆ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಆಸ್ತಿ ಲೆಕ್ಕ ಹಾಕಲು ವಿದ್ಯೆ ಕಲಿಯಬಾರದು. ಸಂಶೋಧನೆಗಾಗಿ ವಿದ್ಯೆ ಕಲಿಯಬೇಕು. ವ್ಯಕ್ತಿಯಲ್ಲಿ ದೊಡ್ಡ ಆಸೆ ಇರಬಾರದು. ಒದಗಿಬಂದ ಪರಿಸ್ಥಿತಿ ಸ್ವೀಕರಿಸಿ ಯಾವುದರಲ್ಲಿ ಸಾಧನೆ ಮಾಡಲು ಸಾಧ್ಯವೋ ಅದನ್ನೇ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಗಂಟು ಮುಖ ಹಾಕಿಕೊಂಡು ಮಾಡುವ ಸಾಧನೆ ಸ್ವಾರ್ಥ ಸಾಧನೆ, ನಗುತ್ತ ಮಾಡುವ ಸಾಧನೆ ಸಮಾಜದ ಏಳಿಗಾಗಿ ಮಾಡುವ ಸಾಧನೆ. ಕಲೆ, ಸಾಹಿತ್ಯ ಆರೋಗ್ಯಕರ ಜೀವನಕ್ಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಕಾರ್ಯಸೌಧದಲ್ಲಿ ಡೊಳ್ಳು ಕುಣಿತ ಹಾಗೂ ಭಜನೆ ಮೂಲಕ ಬೊಂಬೆ ಮೆರವಣಿಗೆಗೆ ಹಾಸ್ಯ ಸಾಹಿತಿ ಹಾಗೂ ಫಿಲೋಮಿನಾ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್.ಆರ್. ನಿರಂಜನ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.
ಅತಿಥಿಗಳಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ನಾರಾಯಣರಾವ ಕಾಳೆ, ವಿದ್ಯಾವಿಷಯಕ ಪರಿಷತ್ ಸದಸ್ಯ ನಾಗೇಶ್ ಕೊಳ್ಳಿ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಎಸ್.ಪಾಟೀಲ್, ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಭಾಗವಹಿಸಿದರು. ಪ್ರೊ. ಅಗಸರ್ ದಯಾನಂದ, ಪ್ರೊ.ಕೆ.ಸಿದ್ದಪ್ಪ, ದೃಶ್ಯಕಲಾ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಪ್ರೊ.ಪರಿಮಳಾ ಅಂಬೇಕರ್ ಸೇರಿದಂತೆ ಮತ್ತಿತರ ಅಧ್ಯಾಪಕರು ಉಪಸ್ಥಿತರಿದ್ದರು.
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಜಾಥಾ-ಉಚಿತ ಚಿಕಿತ್ಸಾ ಶಿಬಿರ
*****************************************************
ಕಲಬುರಗಿ,ಅ.13.(ಕ.ವಾ)-ಅಕ್ಟೋಬರ್ 17ರಂದು ಇರುವ ಧನ್ವಂತರಿ ಜಯಂತಿಯನ್ನು ರಾಷ್ಟ್ರೀಯ ಆಯುರ್ವೇದ ದಿನ ಎಂದು ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಜಿಲ್ಲಾ ಆಯುಷ್ ಇಲಾಖೆ ಹಾಗೂ ಹಿಂಗುಲಾಂಬಿಕಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳ ಇವರ ಸಂಯುಕ್ತಾಶ್ರಯದಲ್ಲಿ ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಈ ಜನಜಾಗೃತಿ ಜಾಥಾವು ಅಂದು ಬೆಳಿಗ್ಗೆ 9 ಗಂಟೆಗೆ ಜಗತ್ ವೃತ್ತದಿಂದ ಪ್ರಾರಂಭವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣಕ್ಕೆ ಬಂದು ಕೊನೆಗೊಳ್ಳಲಿದೆ. ಈ ಜಾಥಾದಲ್ಲಿ ಜಿಲ್ಲೆಯ ಎಲ್ಲ ಆಯುಷ್ ವೈದ್ಯಾಧಿಕಾರಿಗಳು, ಜಿಲ್ಲೆಯ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಗೂ ಜಿಲ್ಲಾ ಆಯುಷ್ ಪದ್ಧತಿಯ ಸಂಘಟನೆಗಳ ವೈದ್ಯರು ಈ ಜಾಥಾದಲ್ಲಿ ಪಾಲ್ಗೊಳ್ಳುವರು.
ಪ್ರಸಕ್ತ ವರ್ಷ “ನೋವು ನಿರ್ವಹಣೆಗಾಗಿ ಆಯುರ್ವೇದ ಚಿಕಿತ್ಸೆ” ಎಂಬ ಘೋಷ ವಾಕ್ಯದನ್ವಯ ವಿಶೇಷ ಉಪನ್ಯಾಸ ಹಾಗೂ ಸಂಧಿವಾತ ರೋಗದ ಪ್ರಯುಕ್ತ ವಿಶೇಷ ಉಚಿತ ಚಿಕಿತ್ಸಾ ಶಿಬಿರವನ್ನು ಅಕ್ಟೋಬರ್ 17ರಂದು ಬೆಳಿಗ್ಗೆ 10 ಗಂಟೆಗೆ ಜಗತ್ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಸಂಘ (ಡಾ|| ಮಲ್ಲಾರಾವ ಮಲ್ಲೆ ಆಸ್ಪತ್ರೆ) ಆವರಣದಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ|| ನಾಗರತ್ನ ಎಸ್. ಚಿಮ್ಮಲಗಿ ತಿಳಿಸಿದ್ದಾರೆ.
ರಾಜ್ಯಮಟ್ಟದ ಚೆಸ್ ಸ್ಪರ್ಧೆಗೆ ವಿದ್ಯಾರ್ಥಿನಿ ಸಾಕ್ಷಿ ಜಯಪ್ರಕಾಶ ಆಯ್ಕೆ
*********************************************
ಕಲಬುರಗಿ,ಅ.13.(ಕ.ವಾ)-ಕಲಬುರಗಿ ತಾಲೂಕಿನ ಭೀಮಳ್ಳಿ ಆದರ್ಶ ವಿದ್ಯಾಲಯದ ಏಳನೇ ತರಗತಿಯ ವಿದ್ಯಾರ್ಥಿನಿ ಸಾಕ್ಷಿ ಜಯಪ್ರಕಾಶ ಅವರು ಮಂಗಳೂರಿನಲ್ಲಿ ಜರುಗಲಿರುವ ರಾಜ್ಯಮಟ್ಟದ ಚೆಸ್ ಸ್ಪರ್ಧೆಯ ಪ್ರಾಥಮಿಕ ವಿಭಾಗದಿಂದ ಆಯ್ಕೆಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ವಸತಿ ಶಾಲೆಯ ವಿದ್ಯಾರ್ಥಿನಿಯ ಸಾಧನೆಗಾಗಿ ಶಾಲೆಯ ಮುಖ್ಯೋಪಾಧ್ಯಾಯ ದೇವೇಂದ್ರ ಸಜ್ಜನ್ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಬರಗಾಲ ತಂತ್ರಜ್ಞರ ಹುದ್ದೆಗೆ ಅರ್ಜಿ ಆಹ್ವಾನ
*****************************
ಕಲಬುರಗಿ,ಅ.13.(ಕ.ವಾ)-ಪಂಜಾಬ ರಾಜ್ಯದ ಮೊಹಾಲಿ ಮೇ|| ಟಿಡಿಎಸ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಪ್ರೈವೇಟ್ ಸಂಸ್ಥೆಯ ಮೂಲಕ ಕಲಬುರಗಿ ಜಿಲ್ಲಾ ಪಂಚಾಯಿತಿಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಶ್ಯವಿರುವ 15 ಜನ ಬರಗಾಲ ತಂತ್ರಜ್ಞರ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಕ್ರಿಯವಾಗಿ ಎರಡು ವರ್ಷಗಳ ಕಾಲ ಹೌಸ್ ಹೋಲ್ಡ್/ ಮೇಟ್/ ಸುಪ್ರೈಸರ್ ಆಗಿ ಕೆಲಸ ನಿರ್ವಹಿಸಿರಬೇಕು. ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಲಾಗುವುದು. ವಯೋಮಿತಿ 45ವರ್ಷದೊಳಗಿರಬೇಕು.
ಕಲಬುರಗಿ ಜಿಲ್ಲಾ ಪಂಚಾಯಿತಿಯ ನರೇಗಾ ಶಾಖೆಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸ್ವಯಂ ಲಿಖಿತ ದಾಖಲಾತಿಗಳೊಂದಿಗೆ ಅಕ್ಟೋಬರ್ 23ರೊಳಗಾಗಿ ಸಲ್ಲಿಸಬೇಕು. ಪ್ರಸಕ್ತ ಅರ್ಥಿಕ ವರ್ಷದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡಿರುವ ಮಾನವ ದಿನಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಾಗುವುದು. ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪರೀಕ್ಷೆ ದಿನಾಂಕ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480866011, 9482046044ಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
*************************
ಕಲಬುರಗಿ,ಅ.13.(ಕ.ವಾ)-ಜೇವರ್ಗಿ ಪುರಸಭೆಯ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹತ್ತಿರದ ಬಿ.ಬಿ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಪುರಸಭೆ ಆಸ್ತಿ ನಂ.9-26, ನಿ.ಸಂ. 24/ಬಿ, ವಿಸ್ತೀರ್ಣ 100ಘಿ150 ಜಾಗದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲು ಈ ಜಾಗವನ್ನು ನೀಡಬಹುದಾಗಿದೆ ಎಂದು ಜೇವರ್ಗಿ ಪುರಸಭೆ ಸಾಮಾನ್ಯ ಸಭಾ ನಡವಳಿ ದಿನಾಂಕ: 4-10-2017ರನ್ವಯ ಠರಾವು ಪಾಸು ಮಾಡಲಾಗಿದೆ.
ಈ ಕುರಿತು ಜೇವರ್ಗಿ ಪಟ್ಟಣದ ಸಾರ್ವಜನಿಕರಿಂದ ಆಕ್ಷೇಪಣೆ/ತಕರಾಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅಕ್ಟೋಬರ್ 19ರೊಳಗಾಗಿ ಜೇವರ್ಗಿ ಪುರಸಭೆಯ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಅವಧಿ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಶಿಬಿರಾರ್ಥಿಗಳಿಗೆ ತರಬೇತಿ ನೀಡಲು ಹಿರಿಯ ಕಲಾವಿದರಿಂದ ಅರ್ಜಿ ಆಹ್ವಾನ
ಕಲಬುರಗಿ,ಅ.13(ಕ.ವಾ.)-ಕರ್ನಾಟಕ ಯಕ್ಷಗಾನ ಅಕಾಡೆಮಿಯು 2017-18ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಯಕ್ಷಗಾನ ತರಬೇತಿ ನಡೆಸಲು ಉದ್ದೇಶಿಸಿದೆ. ಇದಕ್ಕಾಗಿ ಯಕ್ಷಗಾನ ಕಲಾಪ್ರಕಾರಗಳಾದ ತೆಂಕುತಿಟ್ಟು/ಬುಡಗುತಿಟ್ಟು, ಬಡಾಬಡಗುತಿಟ್ಟು, ಯಕ್ಷಗಾನ, ಮೂಡಲಪಾಯ ಯಕ್ಷಗಾನ, ತಾಳಮದ್ದಲೆ, ಯಕ್ಷಗಾನ ಗೊಂಬೆಯಾಟ ಮತ್ತಿತರ ಕಲಾ ಪ್ರಕಾರಗಳಲ್ಲಿ 40 ಶಿಬಿರಾರ್ಥಿಗಳಿಗೆ ತರಬೇತಿ ನೀಡಲು ಹಿರಿಯ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ತರಬೇತಿ ನೀಡುವ ಗುರುಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. 40 ಶಿಬಿರಾರ್ಥಿಗಳು ಸಹ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಗುರುಗಳ ಮತ್ತು ಶಿಬಿರಾರ್ಥಿಗಳ ಜಾತಿ ಪ್ರಮಾಣಪತ್ರದೊಂದಿಗೆ ಅಕ್ಟೋಬರ್ 31ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-2 ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಕಚೇರಿ ದೂರವಾಣಿ ಸಂಖ್ಯೆ 080-22113146ನ್ನು ಸಂಪರ್ಕಿಸಲು ಕೋರಲಾಗಿದೆ.
ಅಕ್ಟೋಬರ್ 15ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಅ.13.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1ರಿಂದ ಕಲಬುರಗಿ ಶಹಾಬಾದ ರಸ್ತೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಅಕ್ಟೋಬರ್ 15ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವ ಗ್ರಾಮಗಳ ವಿವರ ಇಂತಿದೆ. 110/11 ಕೆ.ವಿ. ಯುನಿವರ್ಸಿಟಿ ವಿದ್ಯುತ್ ವಿತರಣಾ ಕೇಂದ್ರದ: ಎಫ್-10 ನಂದೂರ, ಎಫ್-12 ಕೆಸರಟಗಿ, ಕೆಐಡಿಬಿ ನಂದೂರ ಫೀಡರಿನ ನಂದೂರ, ಕೆಸರಟಗಿ, ಇಂಡಸ್ಟ್ರೀಯಲ್ ಏರಿಯಾ, ನಂದೂರ, ನಂದೂರ(ಕೆ), ಧರ್ಮಪೂರ ಗ್ರಾಮಗಳು.
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಅ.13.(ಕ.ವಾ)-ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನ ವಿದ್ಯಾಸಿರಿ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 30ಕೊನೆಯ ದಿನವಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಕಲಬುರಗಿಯ ಐವಾನ್-ಎ-ಶಾಹಿ ಇಂಡಿಯನ್ ಬೈತುಲ್ ಮಾಲ್ ಕಟ್ಟಡದಲ್ಲಿರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಅಥವಾ ದೂರವಾಣಿ ಸಂಖ್ಯೆ 08472-244006, 247260ಗಳನ್ನು ಅಥವಾ ಇಲಾಖೆಯ ವೆಬ್‍ಸೈಟ್‍ನ್ನು ತಿತಿತಿ.goಞಜom.ಞಚಿಡಿ.ಟಿiಛಿ. ನ್ನು ಸಂಪರ್ಕಿಸಲು ಕೋರಲಾಗಿದೆ.
ಕರ್ತವ್ಯಕ್ಕೆ ಹಾಜರಾಗಲು ಸೂಚನೆ
ಕಲಬುರಗಿ,ಅ.13.(ಕ.ವಾ)-ಕಲಬುರಗಿ ತಾಲೂಕಿನ (ಉತ್ತರ ವಲಯ) ಹರಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ ಕುಲಕರ್ಣಿ ಅವರು 2013ರ ಜುಲೈ 19 ರಿಂದ ಈವರೆಗೆ ಶಾಲೆಯ ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಸದರಿ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಈ ಶಾಲೆಯ ಮುಖ್ಯಗುರುಗಳು ಮೂರು ಬಾರಿ ನೋಟೀಸು ನೀಡಿದ್ದರೂ ಸಹ ಸದರಿ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಅನಧೀಕೃತವಾಗಿ ಗೈರು ಹಾಜರಾಗಿ ಬೇಜವಾಬ್ದಾರಿತನ ಮತ್ತು ಕರ್ತವ್ಯ ನಿರ್ಲಕ್ಷ್ಯತನ ತೋರಿಸಿರುತ್ತಾರೆ ಎಂದು ಹರಸೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಸದರಿ ನೌಕರರು ಈ ಪ್ರಕಟಣೆ ಪ್ರಕಟಗೊಂಡ 15 ದಿನದೊಳಗಾಗಿ ಹರಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಸದರಿ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ತಮ್ಮ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) 1957ರ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 14 ಹಾಗೂ 15ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಜೂ.28.(ಕ.ವಾ.)-ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಲಬುರಗಿಯ ಟಿ.ಎಲ್. ಮತ್ತು ಎಸ್.ಎಸ್. ವಿಭಾಗದಿಂದ 110/33/11 ಕೆ.ವಿ. ನಾರ್ಥ್ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಅಕ್ಟೋಬರ್ 14 ಹಾಗೂ 15ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರಿನ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ಅಕ್ಟೋಬರ್ 14ರಂದು ವಿದ್ಯುತ್ ವ್ಯತ್ಯಯವಾಗುವ ಫೀಡರ್ ಮತ್ತು ಬಡಾವಣೆಗಳ ವಿವರ ಇಂತಿದೆ.
11ಕೆ.ವಿ. ಬ್ರಹ್ಮಪುರ ಫೀಡರ್: ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಹಬಜಾರ, ಶೆಟ್ಟಿ ಕಾಂಪ್ಲೆಕ್ಸ್, ಗದ್ಲೆಗಾಂವ, ಶಹಬಜಾರ ನಾಕಾ, ಶಹಬಜಾರ ಜಿ.ಡಿ.ಎ., ಕೈಲಾಶ ನಗರ, ಮಾಣೀಕೇಶ್ವರಿ ಕಾಲೋನಿ, ಲಾಲಗೇರಿ, ಗಂಗಾನಗರ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೆ ಲೇಔಟ್, ಮಹಾಲಕ್ಷ್ಮೀ ಲೇಔಟ್, ಚೌಡೇಶ್ವರಿ ಕಾಲೋನಿ, ಎನ್.ಆರ್. ಕಾಲೋನಿ, ಬಾಳೆ ಲೇಔಟ್, ಅಗ್ರೀಕಲ್ಚರ ಲೇಔಟ್, ಜಿ.ಡಿ.ಎ. ವಕ್ಕಲಗೇರಾ, ಜಿ.ಡಿ.ಎ. ಶಹಬಜಾರ, ಹರಿಜನವಾಡಾ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11ಕೆ.ವಿ. ಸಿನಿಮಾ ಫೀಡರ್: ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೂಪರ ಮಾರ್ಕೆಟ್, ಶಹಾ ಬeóÁರ್ ಜಿ.ಡಿ.ಎ., ಕಟಗರಪುರ, ಪ್ರಕಾಶ ಟಾಕೀಸ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬeóÁರ್, ಮಹಾಲಕ್ಷ್ಮೀ ಲೇಔಟ್, ಕಿರಾಣ ಬeóÁರ್, ಮಾರವಾಡಿ ಗಲ್ಲಿ, ಚೌಕ್ ಪೊಲೀಸ್ ಸ್ಟೇಷನ್, ರ್ಫೋಟ್ ರಸ್ತೆ, ಬಾಂಡೆ ಬeóÁರ್, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ಹೌಸಿಂಗ್ ಬೋರ್ಡ್ ಫೀಡರ್: ಅಂದು ಮಧ್ಯಾಹ್ನ 2 ರಿಂದ ಸಂಜೆ 5.30 ಗಂಟೆಯವರೆಗೆ ಗಂಜ್ ಬ್ಯಾಂಕ್ ಕಾಲೋನಿ, ಗಂಜ್ ಬಸ್‍ಸ್ಟ್ಯಾಂಡ ಎದುರುಗಡೆ, ಭವಾನಿ ಗುಡಿ, ಈಶ್ವರಗುಡಿ, ರಾಮ ಮಂದಿರ. ಬಿಯಾನಿ, ಜಿ.ಓ.ಎಸ್. ಪ್ರದೇಶ, ಲಾಹೋಟಿ ಕಲ್ಯಾಣ ಮಂಟಪ ಹಿಂಭಾಗ ಪ್ರದೇಶ, ಆದರ್ಶ ಸ್ಕೂಲ್ ಪ್ರದೇಶ ಕೆ.ಎಚ್.ಬಿ. ಕಾಲೋನಿ, ಕಲಂತ್ರಿ ಬಿಲ್ಡಂಗ್ ಪ್ರದೇಶ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಅಕ್ಟೋಬರ್ 15ರಂದು ವಿದ್ಯುತ್ ವ್ಯತ್ಯಯವಾಗುವ ಫೀಡರ್ ಮತ್ತು ಬಡಾವಣೆಗಳ ವಿವರ ಇಂತಿದೆ. 11ಕೆ.ವಿ. ಆದರ್ಶ ನಗರ ಫೀಡರ್: ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಶಿವಾಜಿ ನಗರ, ಅಬುಬಕರ್ ಕಾಲೋನಿ, ಕೆ.ಹೆಚ್.ಬಿ. ಕಾಲೋನಿ, ಒಕ್ಕಲಗೇರಾ, ಬಿಲಾಲಾಬಾದ, ಕೆ.ಬಿ.ಎನ್. ಇಂಜಿನಿಯರಿಂಗ್ ಕಾಲೇಜ್, ಇಸ್ಲಾಮಾಬಾದ್, ಕೆ.ಸಿ.ಟಿ. ಪಾಲಿಟೆಕ್ನಿಕ್, ಖಮರ್ ಕಾಲೋನಿ ಮತ್ತು ಎಸ್.ಬಿ.ಹೆಚ್. ಕಾಲೋನಿ. ಖಾಜಾ ಕಾಲೋನಿ, ಇ.ಬಿ. ರಾಜ್, ಮದೀನಾ ಕಾಲೋನಿ, ಶಾಲಿಮಾರ ಫಂಕ್ಷನ್ ಹಾಲ್ ಪ್ರದೇಶ, ಧನಗರ ಗಲ್ಲಿ ನೂರಬಾಗ್, ಸೈಯದ್ ಗಲ್ಲಿ, ಖಾಜಾ ಬಂದೆ ನವಾಜ್ ದರ್ಗಾ ಹಾಗೂ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ದರ್ಗಾ ಫೀಡರ್: ಅಂದು ಮಧ್ಯಾಹ್ನ 1 ರಿಂದ ಸಂಜೆ 5.30 ಗಂಟೆಯವರೆಗೆ ಬಹುಮನಿ ಚೌಕ್, ಹೋಲಿ ಕಟ್ಟಾ, ಸರಾಫ್ ಬಜಾóರ್, ಗಣೇಶ ಮಂದಿರ, ಚಪ್ಪಲ್ ಬಜಾóರ್, ಕ್ಲಾತ್ ಬಜಾóರ್, ಸಜ್ಜನ್ ಕಾಂಪ್ಲೆಕ್ಸ್, ಫೂಲ್ ಮಾರ್ಕೆಟ್, ಮಕ್ತಾಮ್‍ಪುರ, ಜವಾಹರ್ ಹಿಂದ್ ಶಾಲೆ, ಬಕರಿಕಾ ಮೇಳಾ, ಮೋತಿ ವೈನ್ ಶಾಪ್, ನಯಾ ಮೊಹಲ್ಲಾ, ಸಂತ್ರಸವಾಡಿ ಲೊವರ್ ಲೇನ್, ಜಾಜಿ ಬ್ಲಾಕ್, ನ್ಯಾóಷನಲ್ ಚೌಕ್, ಓಲ್ಡ್ ಡಂಕಾ, ನೂರ್ ಬಾಗ್, ಡೆಕ್ಕನ್ ಪೇಪರ್, ಹಫ್ತ್ ಗುಂಬeóï, ಜಲೀಮ್ ಕಾಂಪೌಂಡ್, ಮಕ್‍ಬರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಬ್ಯಾಂಕ್ ಕಾಲೋನಿ ಫೀಡರ್: ಅಂದು ಮಧ್ಯಾಹ್ನ 1 ರಿಂದ ಸಂಜೆ 5.30 ಗಂಟೆಯವರೆಗೆ ಗಂಜ್ ಮೊನಪ್ಪಾದಾಲ ಮಿಲ್, ಕಸಾಯಿ ಮಜೀದ. ನಬಿ ಹೋಟೆಲ್, ಕಿರಾಣ ಬಜಾರ, ಪುಟಾಣಿಗಲ್ಲಿ, ರಂಗಿನ ಮಜಿದ, ಸದರ ಮೊಹಲ್ಲಾ, ಸಿಟಿ ಮಾರ್ಕೆಟ್, ಗಂಜ ಮೇನ್‍ರೋಡ್ ಎಪಿಎಂಸಿ ಯಾರ್ಡ್, ಸಂಜೀವ ನಗರ, ಫಿಲ್ಟರ್ ಬೆಡ್ ವಾಟರ್ ಸಪ್ಲೈ ನಗರೇಶ್ವರ ಮಂದಿರ, ಗಡಂಗ ವಿಆರ್‍ಎಲ್. ಟಿ.ಸಿ. ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಗಂಡೋರಿನಾಲಾ ಜಲಾಶಯದಿಂದ ನೀರು ಬಿಡುಗಡೆ: ಮುನ್ನೆಚ್ಚರಿಕೆÉ ವಹಿಸಲು ಸೂಚನೆ
ಕಲಬುರಗಿ,ಅ.13.(ಕ.ವಾ)-ಕಲಬುರಗಿ ತಾಲೂಕಿನ ಮಹಾಗಾಂವ ಗ್ರಾಮದ ಹತ್ತಿರದಲ್ಲಿ ನಿರ್ಮಾಣಗೊಂಡ ಗಂಡೋರಿನಾಲಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನಿರಂತರವಾಗಿ ಒಳ ಹರಿವು ಹೆಚ್ಚಾಗುತ್ತಿದೆ. ಜಲಾಶಯವು ಭರ್ತಿಯಾಗು ತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 1471 ಕ್ಯೂಸೆಕ್ಸ್ ನೀರನ್ನು ಆಣೆಕಟ್ಟಿನ ಗೇಟುಗಳ ಮುಖಾಂತರ ನದಿಗೆ ಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ನಿಯಮಿತದ ಕಲಬುರಗಿ ಐ.ಪಿ.ಸಿ. ವಿಭಾಗ ನಂ.1ರ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು News and photo Date: 13--10--2017
ಎಲ್ಲಾ ಲೇಖನಗಳು ಆಗಿದೆ News and photo Date: 13--10--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 13--10--2017 ಲಿಂಕ್ ವಿಳಾಸ https://dekalungi.blogspot.com/2017/10/news-and-photo-date-13-10-2017.html
0 Response to "News and photo Date: 13--10--2017"
ಕಾಮೆಂಟ್ ಪೋಸ್ಟ್ ಮಾಡಿ