ಶೀರ್ಷಿಕೆ : news and photo Date:" 24-8-2018
ಲಿಂಕ್ : news and photo Date:" 24-8-2018
news and photo Date:" 24-8-2018
ವಿಮಾನ ನಿಲ್ದಾಣಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಸೂಚನೆ
****************************************************
ಕಲಬುರಗಿ,ಆ.24.(ಕ.ವಾ.)-ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಾಣಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 26ರಂದು ಟ್ರೈಯಲ್ ಲ್ಯಾಂಡಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಮಾನ ನಿಲ್ದಾಣಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಶುಕ್ರವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿಮಾನ ನಿಲ್ದಾಣದ ರನ್‍ವೇ ಮೇಲೆ ವಿಮಾನ ಇಳಿಯುವಾಗ ಅಥವಾ ಹಾರುವಾಗ ಯಾವುದೇ ತರಹದ ಅಡಚಣೆಯಾಗದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಬೇಕು ಎಂದರು.
ಹೈದ್ರಾಬಾದ್‍ನಿಂದ ಡೈಮಂಡ್ ಡಿಎ 40 ಹಾಗೂ ಡೈಮಂಟ್ ಡಿಎ 42 ಎಂಬ ಎರಡು ವಿಮಾನಗಳು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿವೆ. ಈ ವಿಮಾನಗಳು ನಾಲ್ಕು ಪ್ರಯಾಣಿಕರನ್ನು ಹೊತ್ತೋಯ್ಯುವ ಲಘು ವಿಮಾನಗಳಾಗಿದ್ದು, ಆಗಸ್ಟ 26ರಂದು ಬೆಳಗಿನ 10.30 ರಿಂದ 11 ಗಂಟೆಯೊಳಗಾಗಿ ಆಗಮಿಸಲಿವೆ. ವಿಮಾನ ನಿಲ್ದಾಣದಲ್ಲಿ ಅಂಬ್ಯುಲೆನ್ಸ್ ಹಾಗೂ ಆಗ್ನಿಶಾಮಕ ದಳದವರು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೈದ್ರಾಬಾದಿನ ಏಶಿಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ತಂಡದವರು ವಿಮಾನದ ಟ್ರೈಯಲ್ ಲ್ಯಾಂಡಿಂಗ್ಗಿಗೂ ಮುಂಚೆ ರನ್‍ವೇ ಮೇಲೆ ಫಾರೇನ್ ಆಬ್ಜೇಕ್ಟ್ ಡ್ಯಾಮೇಜ್ ಕುರಿತು ಪರಿಶೀಲನೆ ಕೈಗೊಳ್ಳಬೇಕು ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ತಯಾರಿ ನಡೆಸಬೇಕು ಎಂದು ತಿಳಿಸಿದರು.
ಕಲಬುರಗಿ ಸಂಸದರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಗಣ್ಯರ ವಾಹನಗಳು ನಿಲ್ಲಲು ಅನುಕೂಲವಾಗುವ ಹಾಗೆ ವಾಹನ ನಿಲುಗಡೆ ಸ್ಥಳಾವಕಾಶ ಕಲ್ಪಿಸಬೇಕು ಹಾಗೂ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಗಸ್ಟ್ 26ರಂದು ಬೆಳಗಿನ 10.30 ಗಂಟೆಗೆ ವಿಮಾನದ ಟ್ರೈಯಲ್ ರನ್ ಕಾರ್ಯಕ್ರಮ ಜರುಗಲಿದೆ. ನಗರದ ಎಲ್ಲ ಸಾರ್ವಜನಿಕರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಸಾರ್ವಜನಿಕರು ಬೆಳಗಿನ 10.30 ಗಂಟೆಯೊಳಗಾಗಿ ಶ್ರೀನಿವಾಸ ಸರಡಗಿ ರಸ್ತೆಯ ಮೂಲಕ ವಿಮಾನ ನಿಲ್ದಾಣದ ಮುಖ್ಯ ಪ್ರವೇಶ ದ್ವಾರವನ್ನು ಪ್ರವೇಶಿಸಬೇಕು. ಭದ್ರತಾ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ತರಹದ ವಸ್ತುಗಳನ್ನು ಕೊಂಡೊಯ್ಯಬಾರದು ಹಾಗೂ ಸಾರ್ವಜನಿಕರಿಗಾಗಿ ನಿಗದಿಪಡಿಸಿದ ಸ್ಥಳದಲ್ಲಿಯೇ ನಿಂತು ವಿಮಾನ ಹಾರಾಟ ವೀಕ್ಷಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಸಂಸದ ಖರ್ಗೆ ಅವರ ಆಪ್ತ ಕಾರ್ಯದರ್ಶಿ ಶಿವಣ್ಣ, ಐಎಎಸ್ ಪ್ರೊಬೇಷನರಿ ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ, ಏಶಿಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ಅಮೀತಸಿಂಗ್, ಮೊಹ್ಮದ ಫೈಸಲ್, ಕ್ಯಾಪ್ಟನ್ ಶಾಮ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮುಖ್ತಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ.ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಡುವಿನ ಸೋಮವಾರದ ನಿಮಿತ್ತ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ
******************************************************
ಕಲಬುರಗಿ,ಆ.24.(ಕ.ವಾ.)-ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ ವಿಭಾಗ-1 ರಿಂದ ಇದೇ ಆಗಸ್ಟ್ 27ರಂದು ಇರುವ ನಡುವಿನ ಸೋಮವಾರದ ಹಿನ್ನೆಲೆಯಲ್ಲಿ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನ, ದಂಡಗುಂಡ ಬಸವೇಶ್ವರ, ಯಾನಾಗುಂದಿ ದೇವಸ್ಥಾನ ಹಾಗೂ ಕಲಬುರಗಿ ಶರಣ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಮೇಲ್ಕಂಡ ದಿನದಂದು ಹೆಚ್ಚುವರಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಸೇಡಂ, ಚಿಂಚೋಳಿ, ಚಿತ್ತಾಪುರ ಮತ್ತು ಕಾಳಗಿ ಹಾಗೂ ಕಲಬುರಗಿಯಿಂದ ಮೇಲ್ಕಂಡ ದೇವಸ್ಥಾನಗಳಿಗೆ ಹೋಗಲು ಹೆಚ್ಚುವರಿ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು, ಭಕ್ತಾಧಿಗಳು ಹೆಚ್ಚುವರಿ ವಿಶೇಷ ಬಸ್‍ಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಬೆಳೆ ಹಾನಿ ಜಂಟಿ ಸಮೀಕ್ಷೆಗೆ ಸಚಿವರ ಸೂಚನೆ
*****************************************
ಕಲಬುರಗಿ,ಆ.24(ಕ.ವಾ.)-ಕಲಬುರಗಿ ವಿಭಾಗ ಸೇರಿದಂತೆ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ವಾಡಿಕೆಯಂತೆ ಈ ವರ್ಷ ಮಳೆಯ ಕೊರತೆಯಿದ್ದು, ಬೆಳೆ ಹಾನಿಯ ಕುರಿತಂತೆ ಎಲ್ಲ ಜಿಲ್ಲೆಗಳಲ್ಲಿ ಶೀಘ್ರವೇ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ಅವರು ಗುರುವಾರ ಕಲಬುರಗಿ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಮೇ ಮತ್ತು ಜೂನ್‍ನಲ್ಲಿ ಉತ್ತಮ ಮಳೆಯಾಗಿತ್ತು. ಮುಂದೆಯೂ ಮಳೆ ಬರುವ ನಿರೀಕ್ಷೆಯಿಂದ ರೈತರು ಉದ್ದು, ಹೆಸರು, ಎಳ್ಳು, ತೊಗರಿ ಬಿತ್ತನೆ ಮಾಡಿದ್ದರು. ಜಿಲ್ಲೆಯಲ್ಲಿ ಒಟ್ಟಾರೆ ಶೇ. 98ರಷ್ಟು ಬಿತ್ತನೆಯಾಗಿದ್ದು, ಇದರಲ್ಲಿ ಬಿತ್ತನೆ ಮಾಡಲಾದ ಹೆಸರು, ಎಳ್ಳು, ಉದ್ದು ಬೆಳೆಗಳು ಮಳೆಯ ಅಭಾವದಿಂದ ಹಾಳಾಗಿದೆ. ಇದಕ್ಕೆ ಪರ್ಯಾಯವಾಗಿ ಬೆಳೆ ಬೆಳೆಯಲು ಮುಂದೆ ಬರುವ ರೈತರಿಗೆ ಸಮರ್ಪಕವಾಗಿ ಬೀಜ ಮತ್ತು ಗೊಬ್ಬರವನ್ನು ಪೂರೈಸಲು ಕೂಡಲೇ ಅಗತ್ಯ ಪ್ರಮಾಣದ ದಾಸ್ತಾನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ಜಿಲ್ಲೆಗೆ ಮಂಜೂರಾದ 345 ಕುಡಿಯುವ ನೀರಿನ ಶುದ್ಧ ಘಟಕಗಳ ಪೈಕಿ 242 ಈಗಾಗಲೇ ಕಾರ್ಯಾಚರಣೆಯಲ್ಲಿವೆ. ಇನ್ನುಳಿದ 100ಕ್ಕಿಂತ ಹೆಚ್ಚು ಘಟಕಗಳನ್ನು ಕೂಡಲೇ ಆರಂಭಿಸಬೇಕು ಎಂದು ಸೂಚನೆ ನೀಡಿದ ಸಚಿವರು ಅಗತ್ಯವಿದ್ದಡೆ ನೀರಿನ ಘಟಕ ದುರಸ್ತಿ ಹಾಗೂ ಬೊರವೇಲ್ ದುರಸ್ತಿ ಕಾಮಗಾರಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಬರುವ ದಿನಗಳಲ್ಲಿಯೂ ಸಮರ್ಪಕವಾಗಿ ಮಳೆಯಾಗದೇ ಹೋದಲ್ಲಿ ಎಷ್ಟು ಗ್ರಾಮಗಳು ಕುಡಿಯುವ ನೀರಿನ ಅಭಾವ ಎದುರಿಸುತ್ತವೆ ಎಂಬುವುದನ್ನು ಲೆಕ್ಕ ಹಾಕಿಕೊಂಡು ಅಂತಹ ಗ್ರಾಮಗಳಲ್ಲಿ ಬೋರವೇಲ್‍ಗಳನ್ನು ಆಳವಾಗಿ ಕೊರೆಯಿಸುವುದು, ಫ್ಲಶಿಂಗ್ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಧನಕರುಗಳಿಗೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯ ಅಭಾವ ಹಾಗೂ ಕೃಷಿ ಚಟುವಟಿಕೆ ಇಲ್ಲದ ಕಾರಣ ರೈತಾಪಿ ವರ್ಗ ಜಿಲ್ಲೆಯಿಂದ ಉದ್ಯೋಗ ಆರಿಸಿ ಗುಳೆ ಹೋಗುವ ಸಂಭವವಿದ್ದು, ಇದನ್ನು ತಡೆಗಟ್ಟಲು ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಮತ್ತಷ್ಟು ಚುರುಕುಗೊಳಿಸಿ ಸ್ಥಳೀಯವಾಗಿ ರೈತ ಸಮುದಾಯಕ್ಕೆ ಉದ್ಯೋಗ ನೀಡಬೇಕು. ಅಗತ್ಯವಿದ್ದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಉಪ ಕ್ರಿಯಾ ಯೋಜನೆ ಪ್ರಾಯೋಜನೆ ಮಾಡಿಕೊಳ್ಳುವಂತೆ ಸೂಚಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ವಿವಿಧ ಬೆಳೆಗಳನ್ನು ರೈತರಿಂದ ಖರೀದಿಸಲು ಬೆಂಬಲ ಬೆಲೆಯನ್ನು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿಯೂ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಖರೀದಿಸಲು ಶೀಘ್ರವೇ ರಾಜ್ಯ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗುವುದು. ಸದರಿ ಸಮಿತಿಯು ಬೆಳೆ ಖರೀದಿಗೆ ಸಂಬಂಧಪಟ್ಟಂತೆ ನಿರ್ಣಯ ಕೈಗೊಳ್ಳಲಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ದಾಖಲೆ ಪ್ರಮಾಣದಲ್ಲಿ ಖರೀದಿಸಲಾದ ತೊಗರಿ, ಕಡಲೆಯಿಂದ ಜಿಲ್ಲೆಯ ಎಲ್ಲ ಗೋದಾಮುಗಳು ಭರ್ತಿಯಾಗಿದ್ದು, ಪ್ರಸಕ್ತ ವರ್ಷದಲ್ಲಿ ಖರೀದಿ ಮಾಡಿದ್ದಲ್ಲಿ ಉತ್ಪನ್ನಗಳನ್ನು ಇಡಲು ಸೂಕ್ತ ಸ್ಥಳಾವಕಾಶದ ಬಗ್ಗೆಯೂ ಅಧಿಕಾರಿಗಳು ಸ್ಥಳ ಗುರುತಿಸಬೇಕು ಎಂದರು.
ಅತೀವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗುತ್ತಿದ್ದು, ಶೇ.75ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗುವ ಮನೆಗಳ ಮಾಲೀಕರಿಗೆ 75,000 ರೂ.ಗಳ ಪರಿಹಾರವನ್ನು ನೀಡುವಂತೆ ಆದೇಶಿಸಲಾಗಿದ್ದು, ಏಪ್ರಿಲ್ 1, 2018ರಿಂದಲೇ ಇದು ಜಾರಿಗೆ ಬಂದಿರುತ್ತದೆ. ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಕೂಡಲೇ ಆ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ಧನ ಜೊತೆಗೆ ವಿಧವಾವೇತನ ಹಾಗೂ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲು ಕ್ರಮ ಜರುಗಿಸಬೇಕು ಎಂದರು.
ಶಾಸಕರಾದ ಡಾ. ಉಮೇಶ ಜಾಧವ, ಸುಭಾಷ ಗುತ್ತೇದಾರ್, ಎಂ.ವೈ. ಪಾಟೀಲ, ರಾಜಕುಮಾರ ತೇಲ್ಕೂರ, ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಪ್ರಾದೇಶಿಕ ಆಯುಕ್ತ ಸುಬೋದ್ ಯಾಧವ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಸೇಡಂ ಸಹಾಯಕ ಆಯುಕ್ತೆ ಡಾ. ಬಿ. ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಸರು-ಉದ್ದು ಖರೀದಿಗೆ ಸಿದ್ದಗೊಳ್ಳಲು ಜಿಲ್ಲಾಧಿಕಾರಿಗಳ ಸೂಚನೆ
ಕಲಬುರಗಿ,ಆ.24(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಬೆಂಬಲ ಬೆಲೆಯಲ್ಲಿ ಹೆಸರು ಮತ್ತು ಉದ್ದು ಖರೀದಿಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸಿದ್ಧಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಹೆಸರುಬೆಳೆಗೆ 6975 ರೂ. ಹಾಗೂ ಉದ್ದಿನಕಾಳಿಗೆ 5600 ರೂ.ಗಳ ಬೆಂಬಲ ಬೆಲೆಯನ್ನು ಘೋಷಿಸಿದೆ. ರಾಜ್ಯ ಸರ್ಕಾರವು ಹೆಸರು ಮತ್ತು ಉದ್ದು ಖರೀದಿಗೆ ಯಾವುದೇ ಸಮಯದಲ್ಲಿ ಅನುಮತಿ ನೀಡಬಹುದಾಗಿದ್ದು, ಸೂಕ್ತ ಸಮಯದಲ್ಲಿ ಖರೀದಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಪ್ರಸಕ್ತ ವರ್ಷ 46569 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದ್ದು, ಸುಮಾರು 3.72 ಲಕ್ಷ ಕ್ವಿಂಟಲ್ ಹಾಗೂ 26272 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬೆಳೆಯಲಾಗಿದ್ದು, ಸುಮಾರು 2.23 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆಗಳಿವೆ. ಈ ಪ್ರಮಾಣದ ತೊಗರಿ ಮತ್ತು ಉದ್ದನ್ನು ಖರೀದಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಕಳೆದ ವರ್ಷ ಹೋಬಳಿಗೊಂದರಂತೆ ಹಾಗೂ ಹೆಸರು ಮತ್ತು ಉದ್ದು ಹೆಚ್ಚಿಗೆ ಬೆಳೆದ ಪ್ರದೇಶಗಳು ಸೇರಿದಂತೆ ಒಟ್ಟು 44 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿತ್ತು. ಈ ಬಾರಿಯೂ ಸಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದ್ದು, ಎರಡು ದಿನದೊಳಗಾಗಿ ಖರೀದಿ ಕೇಂದ್ರಗಳ ಮಾಹಿತಿ ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಳೆದ ವರ್ಷ 500 ಕ್ವಿಂಟಲ್ ಸಾಮಥ್ರ್ಯದ ಗೋದಾಮು ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲಾಗಿತ್ತು. ಇವುಗಳಿಗೆ ಟ್ಯಾಬ್, ಛನ್ನಿ ಒದಗಿಸಲಾಗಿತ್ತು. ತಾಲೂಕಿಗೊಬ್ಬರಂತೆ ಜಿಲ್ಲಾಮಟ್ಟದ ಅಧಿಕಾರಿಗಳು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು. ನೋಡಲ್ ಅಧಿಕಾರಿಗಳು ಆಯಾ ತಾಲೂಕಿನ ಖರೀದಿ ಕೇಂದ್ರಗಳ ಗೋದಾಮು, ತೂಕದ ಯಂತ್ರ, ಟ್ಯಾಬ್‍ಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಸರ್ಕಾರ ಖರೀದಿಗೆ ಪರವಾನಿಗೆ ನೀಡಿದ ತಕ್ಷಣ ರೈತರ ನೋಂದಣಿ ಕಾರ್ಯ ಪ್ರಾರಂಭಿಸಿ ತಕ್ಷಣವೇ ಖರೀದಿ ಪ್ರಾರಂಭಿಸುವಂತೆ ತಯಾರಿ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ 1 ಲಕ್ಷ ಕ್ವಿಂಟಲ್ ಹಾಗೂ ಕೇಂದ್ರ ಉಗ್ರಾಣ ನಿಗಮದಲ್ಲಿ 1 ಲಕ್ಷ ಕ್ವಿಂಟಲ್ ಹೀಗೆ ಒಟ್ಟು 2 ಲಕ್ಷ ಕ್ವಿಂಟಲ್ ಆಹಾರ ಧಾನ್ಯ ದಾಸ್ತಾನಿಗೆ ಸ್ಥಳಾವಕಾಶ ಲಭ್ಯವಿದೆ. ಆದಾಗ್ಯೂ ಬೇರೆ ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯದ ಉಗ್ರಾಣ ನಿಗಮಗಳಲ್ಲಿ ಲಭ್ಯವಿರುವ ಹಾಗೂ ಸ್ಥಳೀಯ ಖಾಸಗಿ ಗೋದಾಮುಗಳಲ್ಲಿ ಲಭ್ಯವಿರುವ ಸ್ಥಳಾವಕಾಶದ ಕುರಿತು ವರದಿ ಸಂಗ್ರಹಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆ, ಮಾರ್ಕ್‍ಫೆಡ್, ಗೋದಾಮುಗಳು ಸಹಕಾರ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಆಹಾರ ಧಾನ್ಯಗಳ ಖರೀದಿಯು ಸಹ ಸಹಕಾರ ಇಲಾಖೆಯ ಮೂಲಕವೇ ಆಗುತ್ತದೆ. ಕಾರಣ ಮುಂದಿನ ಎಲ್ಲ ಸಭೆಗಳಿಗೆ ಸಹಕಾರ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿಸಿ ಖರೀದಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಬೆಳೆ ದೃಢೀಕರಣ ಪತ್ರ, ಪಹಣಿ ಪತ್ರ, ಆಧಾರ ಕಾರ್ಡ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‍ಬುಕ್ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಮಾಧ್ವಾಚಾರ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಳೆ ಹಾನಿ : ಹೆಚ್ಚವರಿ ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಪ್ರಸ್ತಾವನೆ
***********************************************************
ಕಲಬುರಗಿ.ಆ,24(ಕ.ವಾ.)-ಕೊಡಗಿನ ಅತೀವೃಷ್ಠಿ ಹಾಗೂ ಉತ್ತರ ಕರ್ನಾಟಕದ ಅನಾವೃಷ್ಠಿಯಿಂದ ಉಂಟಾಗುವÀ ಹಾನಿ ಭರಿಸಲು ಹೆಚ್ಚುವರಿ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದರು.
ಅವರು ಶುಕ್ರವಾರ ಕಮಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಳೆಯ ಅಭಾವದಿಂದ ತೇವಾಂಶದ ಕೊರತೆಯಿಂದ ಹಾನಿಗೀಡಾದ ರಾಮಸಿಂಗ್ ಮದನಲಾಲ್ ಅವರ ಉದ್ದು ಬೆಳೆಯನ್ನು ವೀಕ್ಷಿಸಿದ ನಂತರ ಮಾತನಾಡಿ, ಕೊಡಗಿನಲ್ಲಿ ಪುನರ್ವಸತಿ ಹಾಗೂ ನಿರ್ಮಾಣದ ಕುರಿತು ಸಮೀಕ್ಷೆ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ನೇಮಿಸಲಾಗಿದೆ. ಅವರ ವರದಿ ಪಡೆದು ಹೆಚ್ಚಿನ ಸಹಾಯಕ್ಕೆ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.
ಕೊಡಗಿನ ಅತೀವೃಷ್ಠಿಯ ಹಾನಿಯ ಕುರಿತು ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳು ನಮ್ಮ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ. ಕೊಡಗಿನಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರದಿಂದ ಹೆಲಿಕಾಪ್ಟರ್ ಹಾಗೂ ಸೇನೆಯ ಸಹಾಯ ನೀಡಿದೆ. ರೈತರಿಗೆ ಹಾಗೂ ಸಂತಸ್ಥರಿಗೆ ಹೆಚ್ಚಿನ ನೆರವು ನೀಡಲು ಕೇಂದ್ರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕಳೆದ ವರ್ಷದಲ್ಲಿ 50 ತಾಲೂಕುಗಳನ್ನು ರಚಿಸಲಾಗಿದೆ. ನೂತನವಾಗಿ ರಚಿಸಲಾದ ತಾಲೂಕುಗಳಲ್ಲಿ ಆಹಾರ, ಆರೋಗ್ಯ, ಪೊಲೀಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸುಮಾರು 14 ಇಲಾಖೆಗಳು ಕಾರ್ಯಾರಂಭ ಮಾಡಬೇಕಾಗುತ್ತದೆ. ನೂತನÀ ತಾಲೂಕುಗಳಲ್ಲಿ ವಿವಿಧ ಇಲಾಖೆಗಳ ಹುದ್ದೆ ಸೃಜನೆಯಾಗಬೇಕು ಹಾಗು ಕಟ್ಟಡಗಳ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಈಗಾಗಲೇ ನೂತನ ತಾಲೂಕುಗಳಲ್ಲಿ ಕಂದಾಯ ಇಲಾಖೆಗಳ ಕಚೇರಿಗಳು ಪ್ರಾರಂಭಗೊಂಡಿದ್ದು, ಭೂಮಿ ದಾಖಲೆಗಳು ವರ್ಗಾವಣೆ ಆಗಬೇಕಾಗಿದೆ. ಸುಮಾರು 37 ನೂತನ ತಾಲೂಕುಗಳಲ್ಲಿ ಭೂಮಿ ದಾಖಲೆಗಳು ಆಗಸ್ಟ್ ಅಂತ್ಯದವರೆಗೆ ವರ್ಗಾವಣೆಯಾಗಲಿವೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಹಾನಿಗೊಳಗಾಗುವ ಬೆಳೆಗಳ ಜಂಟಿ ಸಮೀಕ್ಷೆ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ರೈತರು ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಲ್ಲಿ ಅತೀವೃಷ್ಠಿ ಅಥವಾ ಅನಾವೃಷ್ಠಿಯಿಂದ ಹಾನಿಗೊಳಗಾಗುವ ಬೆಳೆಗಳಿಗೆ ಸೂಕ್ತ ವಿಮೆ ದೊರೆಯುತ್ತದೆ. ಈ ಯೋಜನೆಯನ್ನು ಹೆಚ್ಚಿಗೆ ಪ್ರಚಾರ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಸಹಾಯಕ ಆಯುಕ್ತ ರಾಚಪ್ಪ, ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಎಲ್ಲ ಕಾರ್ಮಿಕರಿಗೆ ಆಗಸ್ಟ್ 31ರಂದು ವೇತನ ಸಹಿತ ರಜೆ ನೀಡಲು ಆದೇಶ
****************************************************************
ಕಲಬುರಗಿ,ಆ.24(ಕ.ವಾ.)-ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018ರ ಹಿನ್ನೆಲೆಯಲ್ಲಿ ಇದೇ ಆಗಸ್ಟ್ 31ರಂದು ಮತದಾನ ನಡೆಯಲಿದೆ. ಜಿಲ್ಲೆಯ ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವುಂತೆ ಇದೇ ಆಗಸ್ಟ್ 31ರಂದು ವೇತನ ಸಹಿತ ರಜೆ ನೀಡಲಾಗಿದೆ ಎಂದು ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.
ಸದರಿ ದಿನದಂದು ಕಾರ್ಮಿಕರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ 3-ಎ ಹಾಗೂ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ) ರಡಿಯಲ್ಲಿ ವೇತನ ಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕದಾ ಮತವನ್ನು ಚಾಯಿಸುವುದಕ್ಕಾಗಿ ಎಲ್ಲ ಸಂಸ್ಥೆಗಳು, ನಿಯೋಜಕರು ಅನುವು ಮಾಡಿಕೊಡಬೇಕು.
ಚುನಾವಣೆ ನಡೆಯುವ ಸ್ಥಳಗಳಲ್ಲಿ ಅರ್ಹ ಕಾರ್ಮಿಕರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳ ಮಾಲೀಕರು ವೇತನ ಸಹಿತ ರಜೆ ನೀಡಲು ಸರ್ಕಾರ ಆದೇಶಿಸಿದ್ದು, ಇದಕ್ಕೆ ತಪ್ಪಿದ್ದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಾಲಕನ ಪೋಷಕರ ಪತ್ತೆಗೆ ಮನವಿ
*******************************
ಕಲಬುರಗಿ,ಆ.24(ಕ.ವಾ.)-ಕಲಬುರಗಿ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿರುವ 13 ವರ್ಷದ ಬಾಲಕನು 2018ರ ಜುಲೈ 26ರಂದು ಜೇವರ್ಗಿ ತಾಲೂಕಿನ ದುಮ್ಮದು ಗ್ರಾಮದಲ್ಲಿ ಚೈಲ್ಡ್ ಲೈನ್ ಸಿಬ್ಬಂದಿಗೆ ಸಿಕ್ಕಿದ್ದು, ಈ ಬಾಲಕನು ಯಾವುದೇ ಮಾಹಿತಿ/ವಿಳಾಸ ತಿಳಿಸಿರುವುದಿಲ್ಲ.
ಬಾಲಕನ ಹೇಳಿಕೆ ಪ್ರಕಾರ ಆತನ ತಂದೆ ಹೆಸರು ಕೃಷ್ಣಾ ಮಂಜುನಾಥ ಹಾಗೂ ತಾಯಿ ಹೆಸರು ಲಕ್ಷ್ಮೀ ಇರುತ್ತದೆ. ಕಲಬುರಗಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ಕಂಡ ಬಾಲ ಮಂದಿರದಲ್ಲಿ ದಾಖಲಾಗಿದ್ದು, ಈ ಬಾಲಕ ಕಪ್ಪು ಬಣ್ಣ, 4.5 ಅಡಿ ಎತ್ತರ, 30 ಕೆ.ಜಿ ತೂಕ ಹೊಂದಿರುತ್ತಾನೆ.
ಮೇಲ್ಕಂಡ ಬಾಲಕನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 60 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಕಲಬುರಗಿಯ ಪ್ರಗತಿ ಕಾಲೋನಿಯ ಸರ್ಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂ. 08472-269438 ನ್ನು ಸಂಪರ್ಕಿಸಲು ಕೋರಿದೆ.
ಆಗಸ್ಟ್ 25ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಆ.24.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿನ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆವಿ. ಗಣೇಶ ನಗರ ಫೀಡರ ವ್ಯಾಪ್ತಿಯ 33ಕೆ.ವಿ. ಜಿಆಯ್‍ಎಸ್ ಸ್ಟೇಶನ್ ಕೆಲಸದ ಹಿನ್ನೆಲೆಯಲ್ಲಿ ಇದೇ ಆಗಸ್ಟ್ 25ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಹೀಗಾಗಿ ಲೇಖನಗಳು news and photo Date:" 24-8-2018
ಎಲ್ಲಾ ಲೇಖನಗಳು ಆಗಿದೆ news and photo Date:" 24-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date:" 24-8-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-24-8-2018.html



















0 Response to "news and photo Date:" 24-8-2018"
ಕಾಮೆಂಟ್ ಪೋಸ್ಟ್ ಮಾಡಿ