ಶೀರ್ಷಿಕೆ : ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು- ಎಸ್.ಆರ್. ಶ್ರೀನಿವಾಸ್
ಲಿಂಕ್ : ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು- ಎಸ್.ಆರ್. ಶ್ರೀನಿವಾಸ್
ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು- ಎಸ್.ಆರ್. ಶ್ರೀನಿವಾಸ್
ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗವನ್ನು ಸೃಷ್ಟಿಸುವುದರಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚಿನದ್ದಾಗಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯ ಅಭಿವೃದ್ಧಿ ಪರಿಶೀಲನೆ ಹಾಗೂ ಜಿಲ್ಲೆಯ ಉದ್ಯಮಿಗಳೊಂದಿಗೆ ಬುಧವಾರದಂದು ಏರ್ಪಡಿಸಲಾದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸಲು ನೆರವಾಗುತ್ತಿವೆ. ಇಂತಹ ಸಣ್ಣ ಕೈಗಾರಿಕಾ ಕ್ಷೇತ್ರವನ್ನು ಬಲಪಡಿಸಲು, ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಕೈಗಾರಿಕೆಗಳು ಹಾಗೂ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು. ಸಣ್ಣ ಕೈಗಾರಿಕೆಗಳು ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ತೊಂದರೆ ಎದುರಿಸುತ್ತಿವೆ. ಕೈಗಾರಿಕಾ ನೀತಿಯ ಅನುಷ್ಠಾನದ ನಂತರ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದೆ. ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಸಬ್ಸಿಡಿ ನೀಡುವ ಯೋಜನೆಯಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಲಾಗಿದೆ. ಆದಷ್ಟು ಶೀಘ್ರ ಬಾಕಿ ಇರುವ ಸಬ್ಸಿಡಿ ಮೊತ್ತವನ್ನು ಬಿಡುಗಡೆಗೊಳಿಸಲು, ರಾಜ್ಯ ಮಟ್ಟದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರ ಕ್ರಮ ವಹಿಸಲಾಗುವುದು. ಬಳ್ಳಾರಿ ಜಿಲ್ಲೆಗೆ ಕೊಪ್ಪಳ ಜಿಲ್ಲೆ ಸಮೀಪವಿದ್ದು, ಇಲ್ಲಿಯೂ ಗಾರ್ಮೆಂಟ್ಸ್ ಉದ್ಯಮ ಬೆಳವಣಿಗೆಗೆ ಉತ್ತಮ ಅವಕಾಶವಿದೆ. ಬಸಾಪುರ ಬಳಿ ಅಭಿವೃದ್ಧಿಗೊಳಿಸಲಾಗುತ್ತಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಗಾರ್ಮೆಂಟ್ ಉದ್ಯಮಿಗಳಿಗೆ ಹಾಗೂ ಮಹಿಳೆಯರಿಗೂ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಬಸಾಪುರ ಬಳಿಯ ಕೈಗಾರಿಕಾ ವಸಾಹತು ಪ್ರದೇಶ ಅಭಿವೃದ್ಧಿ ದಿಸೆಯಲ್ಲಿ ಈಗಾಗಲೆ 104 ಎಕರೆ ಅಭಿವೃದ್ಧಿಗೊಳಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಇದಕ್ಕಾಗಿ 44 ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ. ಅಲ್ಲಾನಗರ ಬಳಿ ನೂತನವಾಗಿ ಕೈಗಾರಿಕಾ ವಸಾಹತು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಈವರೆಗೆ 374 ಉದ್ಯಮಿಗಳು ವಸಾಹತುವಿನಲ್ಲಿ ಸಣ್ಣ ಕೈಗಾರಿಕೆ ಸ್ಥಾಪಿಸಲು ಉತ್ಸುಕತೆ ತೋರಿದ್ದಾರೆ. 02 ತಿಂಗಳ ಒಳಗಾಗಿ ಬಸಾಪುರ ಕೈಗಾರಿಕಾ ವಸಾಹತು ಸಿದ್ಧವಾಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಅಧಿಸೂಚನೆ ಜಾರಿಯ ಬಳಿಕ ಬರುವ ಆಕಾಂಕ್ಷಿ ಅರ್ಜಿಗಳ ಸಂಖ್ಯೆಯ ಆಧಾರದಲ್ಲಿ ಹಂಚಿಕೆ ಕಾರ್ಯ ಕೈಗೊಳ್ಳಲಾಗುವುದು. ಬೆಲೆ ನಿಗದಿ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕುಷ್ಟಗಿಯ ಕೈಗಾರಿಕಾ ವಸಾಹತು ಸ್ಥಾಪನೆಗೆ ಈಗಾಗಲೆ ಭೂಮಿ ವಶಕ್ಕೆ ಪಡೆಯಲಾಗಿದ್ದು, ಆದರೆ ಕೆಲವು ತಾಂತ್ರಿಕ ತೊಂದರೆಯಿಂದಾಗಿ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವುದರಿಂದ, ಅಭಿವೃದ್ಧಿ ಕಾರ್ಯದಲ್ಲಿ ವಿಳಂಬವಾಗಿರುವುದು ನಿಜ ಸಂಗತಿಯಾಗಿದೆ. ಸದ್ಯ, ಇಂತಹ ಸಮಸ್ಯೆಗಳನ್ನು ನಿವಾರಿಸಿ, ಕುಷ್ಟಗಿ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಲು ಕೂಡಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ಅವರು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಉದ್ಯಮಿಗಳಾದ ಶ್ರೀನಿವಾಸ ಗುಪ್ತ ಅವರು ಮಾತನಾಡಿ, ಭಾಗ್ಯನಗರದ ಕೂದಲು ಉದ್ಯಮ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಬರ್ಮಾ, ಚೀನಾ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಆದರೆ ಕಚ್ಚಾ ಸಾಮಗ್ರಿ ಕೊರತೆಯಿಂದಾಗಿ, ಸಂಸ್ಕರಣೆ ಕಾರ್ಯದಲ್ಲಿ ತೊಂದರೆಯಾಗುತ್ತಿದ್ದು, ಈ ಉದ್ಯಮ ಸಂಕಷ್ಟದಲ್ಲಿದೆ ಎಂದರು. ಉದ್ಯಮಗಳ ಒಕ್ಕೂಟದ ಪ್ರತಿನಿಧಿಗಳು ಮಾತನಾಡಿ, ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಬೃಹತ್ ಮೇಳಗಳು, ವಸ್ತುಪ್ರದರ್ಶನಗಳು ಕೇವಲ ಬೆಂಗಳೂರು ಮತ್ತು ಮಂಗಳೂರಿನಂತಹ ಬೃಹತ್ ನಗರಗಳಿಗೆ ಕೇಂದ್ರೀಕೃತವಾಗಿದ್ದು, ಇವುಗಳನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸುವಂತಾಗಬೇಕು. ಇಂಡಸ್ಟ್ರಿಯಲ್ ವಲಯಗಳು ಸ್ಥಾಪನೆಯಾಗಬೇಕು. ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ ಸುಧಾರಿತಗೊಳ್ಳಬೇಕು ಎಂದರು. ವೀರೇಶ್ ಮಹಾಂತಯ್ಯನಮಠ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳ ಅತಿ ಹೆಚ್ಚು ಬೆಳೆಯಲಾಗುತ್ತಿದ್ದು, ಈ ಬೆಳೆಯ ಉಪ ಉತ್ಪನ್ನಗಳ ತಯಾರಿಕೆ ಘಟಕವನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಗ್ರಾನೈಟ್ ಉದ್ಯಮಿಗಳು ಮಾತನಾಡಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಬಾಗಲಕೋಟೆ ಜಿಲ್ಲೆಯ ಇಲಕಲ್ ನಲ್ಲಿ ಗ್ರಾನೈಟ್ ಉದ್ಯಮ ಹೆಚ್ಚಾಗಿದೆ. ಸುಮಾರು 50 ಸಾವಿರ ಉದ್ಯೋಗವನ್ನು ಈ ಉದ್ಯಮ ಸೃಷ್ಟಿಸಿದ್ದು, ವರ್ಷಕ್ಕೆ ಸುಮಾರು ಒಂದು ಸಾವಿರ ಕೋಟಿ ರೂ. ಆದಾಯವನ್ನು ಈ ಉದ್ಯಮದಿಂದ ಸರ್ಕಾರಕ್ಕೆ ಲಭ್ಯವಾಗುತ್ತಿದೆ. ಆದರೆ ಸದ್ಯ ಈ ಉದ್ಯಮ ಉತ್ತಮ ಸ್ಥಿತಿಯಲ್ಲಿ ಇಲ್ಲ. ಕಚ್ಚಾ ಸಾಮಗ್ರಿಗಳ ಕೊರತೆಯನ್ನು ಉದ್ಯಮ ಎದುರಿಸುತ್ತಿದೆ. ಗ್ರಾನೈಟ್‍ಗಾಗಿ ಲೀಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ತೊಂದರೆಗಳು ಎದುರಾಗುತ್ತಿವೆ. ಆದ್ದರಿಂದ ಆದಷ್ಟು ಶೀಘ್ರ ಇಂತಹ ಕಡಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಈ ಕುರಿತಂತೆ ಕಾಯ್ದೆಯಲ್ಲಿ ತಿದ್ದುಪಡಿಯಾಗಿದ್ದು, ಅಕ್ರಮ ಗಣಿಗಾರಿಕೆ, ದಂಡ ಹಾಕುವ ಪ್ರಮಾಣ, ಗಣಿಗಾರಿಕೆ ಮುಚ್ಚಿರುವ ಪ್ರಕರಣಗಳ ಕುರಿತು ತ್ವರಿತ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ. ಆದಾಗ್ಯೂ ಒಟ್ಟು 16 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಕೊಪ್ಪಳ ಜಿಲ್ಲೆಯಲ್ಲಿಯೇ ವಿಲೇವಾರಿಯಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಪ್ರಶಾಂತ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ, ಕರ್ನಾಟಕ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್. ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು, ಉದ್ಯಮಿಗಳು ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು- ಎಸ್.ಆರ್. ಶ್ರೀನಿವಾಸ್
ಎಲ್ಲಾ ಲೇಖನಗಳು ಆಗಿದೆ ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು- ಎಸ್.ಆರ್. ಶ್ರೀನಿವಾಸ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು- ಎಸ್.ಆರ್. ಶ್ರೀನಿವಾಸ್ ಲಿಂಕ್ ವಿಳಾಸ https://dekalungi.blogspot.com/2018/07/blog-post_55.html
0 Response to "ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು- ಎಸ್.ಆರ್. ಶ್ರೀನಿವಾಸ್"
ಕಾಮೆಂಟ್ ಪೋಸ್ಟ್ ಮಾಡಿ