ಶೀರ್ಷಿಕೆ : news and photo Date: 13--04-2018
ಲಿಂಕ್ : news and photo Date: 13--04-2018
news and photo Date: 13--04-2018
ಜಿಲ್ಲಾ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳಿಗೆ ವಿವಿಪ್ಯಾಟ್ ಮಾಹಿತಿ
ಕಲಬುರಗಿ,ಏ.13.(ಕ.ವಾ)-ಕಲಬುರಗಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ಬಾರ್ ಅಸೋಸಿಯೇಶನ್ ಸದಸ್ಯರಿಗೆ, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳಿಗೆ ಶುಕ್ರವಾರ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ (ಮತ ಖಾತ್ರಿ ಯಂತ್ರ) ಕುರಿತು ಮಾಹಿತಿ ನೀಡಲಾಯಿತು.
ಜಿಲ್ಲಾ ಪ್ರಭಾರಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ವಿ. ಮಲ್ಲಾಪುರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಕಾರ್ಯದರ್ಶಿ ಬಿ.ಎನ್. ಪಾಟೀಲ ಸೇರಿದಂತೆ ವಿವಿಧ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರುಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ಭಾರತ ಇಲೆಕ್ಟ್ರಿಕಲ್ ಲಿಮಿಲಿಟೆಡ್‍ನ ಇಂಜಿನಿಯರ್ ನರೇಂದ್ರ ಕೌಶಿಕ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಕೌಶಿಕ ಅವರು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ನೊಂದಿಗೆ ಪ್ರಥಮ ಬಾರಿಗೆ ಮತ ಖಾತ್ರಿ ಪಡಿಸುವ ವಿವಿಪ್ಯಾಟ್ ಯಂತ್ರ ಬಳಸಲಾಗುತ್ತಿದೆ. ಇವಿಎಂನ ಬ್ಯಾಲೆಟ್ ಯುನಿಟ್‍ನಲ್ಲಿ ಮತದಾನದ ಗುಂಡಿ ಒತ್ತಿದ ನಂತರ ಯಾರಿಗೆ ಮತ ಹಾಕಲಾಗಿದೆ ಎಂಬುವುದರ ಬಗ್ಗೆ ಅಭ್ಯರ್ಥಿಯ ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯ ವಿವರವುಳ್ಳ ಏಳು ಸೆಕೆಂಡ್‍ಗಳ ಕಾಲ ಚೀಟಿ ವಿವಿ ಪ್ಯಾಟ್ ಯಂತ್ರದಲ್ಲಿ ಪ್ರದರ್ಶನಗೊಂಡು ಸ್ವಯಂ ಚಾಲಿತವಾಗಿ ಕತ್ತರಿಸಿ ಪೆಟ್ಟಿಗೆಯಲ್ಲಿ ಬೀಳುತ್ತದೆ. ಇ.ವಿ.ಎಂ. ಮತ್ತು ವಿವಿ ಪ್ಯಾಟ್ ಯಂತ್ರ ವಿರೂಪಗೊಳಿಸುವುದು ಅಸಾಧ್ಯವಾಗಿದ್ದು, ಇವುಗಳು ವಿಶ್ವಾಸಾರ್ಹ ಯಂತ್ರವಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾ ನ್ಯಾಯಾಲಯದ ವಿವಿಧ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರು, ಕಲಬುರಗಿ ಸಹಾಯಕ ಆಯುಕ್ತ ಎನ್.ಆರ್. ಉಮೇಶಚಂದ್ರ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ನ್ಯಾಯವಾದಿಗಳು, ಬಾರ್ ಅಸೋಸಿಯೇಶನ್ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕು ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮ ಏರ್ಪಡಿಸಲು ಸೂಚನೆ
ಕಲಬುರಗಿ,ಏ.13.(ಕ.ವಾ.)-ಜಿಲ್ಲೆಯ ಎಲ್ಲ ತಾಲೂಕು ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ತಾಲೂಕಿಗೆ 50 ಸಾವಿರ ರೂ.ಗಳನ್ನು ನೀಡಲಾಗುತ್ತಿದ್ದು, ಸ್ವೀಪ್ ಕಾರ್ಯಕ್ರಮಕ್ಕೆ ಅವಶ್ಯಕವಿರುವ ಸಾಮಗ್ರಿ ಮತ್ತು ಪರಿಕರಗಳನ್ನು ಖರೀದಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಹೆಪ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ತಾಲೂಕಾ ಮಟ್ಟದಲ್ಲಿ ಸೈಕಲ್, ಬೈಕ್ ರ್ಯಾಲಿ, ಕ್ಯಾಂಡಲ್ ಮಾರ್ಚ್ ಹಾಗೂ ಮ್ಯಾರಾಥಾನ್‍ಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಎಲ್ಲ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್ ಕುರಿತು ಮಾಹಿತಿ ನೀಡಲು ಪೋಸ್ಟರ್, ಬ್ಯಾಡ್ಜ್, ಕ್ಯಾಪ್‍ಗಳ ವ್ಯವಸ್ಥೆ ಮಾಡಲಾಗಿದೆ. ಅವುಗಳನ್ನು ಎಲ್ಲ ತಾಲೂಕುಗಳಿಗೂ ವಿತರಿಸಲಾಗುವುದು. ಉದ್ಯೋಗ ಖಾತರಿ ಕೆಲಸಗಳು ಎಲ್ಲ ಗ್ರಾಮ ಪಂಚಾಯಿತಿ
ಗಳಲ್ಲಿ ಪ್ರಾರಂಭಿಸಿ ಉದ್ಯೋಗ ಖಾತರಿ ನಡೆಯುವ ಸ್ಥಳಗಳಲ್ಲಿ ಕೂಲಿ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಬೇಕು. ಪ್ರತಿ ವಾರ ಕನಿಷ್ಠ ಐದು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕಳೆದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಜರುಗುವ ಸಂತೆ, ಜಾತ್ರೆಗಳಲ್ಲಿ ವಿನೂತನವಾಗಿ ಸ್ವೀಪ್ ಕಾರ್ಯಕ್ರಮ ರೂಪಿಸಬೇಕು. ಚಿತ್ತಾಪುರ ಮತ್ತು ಸೇಡಂ ತಾಲೂಕುಗಳಲ್ಲಿ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಾರ್ಖಾನೆಯ ಕಾರ್ಮಿಕರಿಗೆ ಕಡ್ಡಾಯವಾಗಿ ಮತದಾನ ಮಾಡಲು ಜಾಗೃತಿ ಮೂಡಿಸಬೇಕು. ವಿಕಲಚೇತನ ಮತದಾರರಿಗಾಗಿಯೇ ವಿಶೇಷವಾಗಿ ಸ್ವೀಪ್ ಕಾರ್ಯಕ್ರಮ ರೂಪಿಸಬೇಕು. ಏಪ್ರಿಲ್ 16ರಿಂದ ಎಲ್ಲ ಮತಗಟ್ಟೆಗಳಲ್ಲಿಯೂ ವಿವಿ ಪ್ಯಾಟ್ ಮತ್ತು ಇಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಜಾಗೃತಿ ಮೂಡಿಸಲು ತರಬೇತಿ ಹಮ್ಮಿಕೊಳ್ಳಬೇಕು. ಈ ಸಂದರ್ಭದಲ್ಲಿ ಸಹಿ ಸಂಗ್ರಹ, ಮತದಾನದ ಪ್ರತಿಜ್ಞಾ ವಿಧಿ, ಪೋಸ್ಟರ್‍ಗಳ ಪ್ರದರ್ಶನ, ಯಾವುದಾದರೂ ಒಂದು ಸ್ಪರ್ಧೆ ಹಮ್ಮಿಕೊಳ್ಳಬೇಕು. ವಿವಿ ಪ್ಯಾಟ್ ತರಬೇತಿ ಕುರಿತು ಮುಂಚಿತವಾಗಿಯೇ ಗ್ರಾಮದಲ್ಲಿ ಡಂಗುರ ಹೊರಡಿಸಬೇಕು ಎಂದು ಹೇಳಿದರು.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶೇ. 64ರಷ್ಟು ಮತದಾನವಾಗಿತ್ತು. ಈ ಬಾರಿ ಕನಿಷ್ಠ ಶೇ. 80ರಷ್ಟು ಮತದಾನವಾಗುವಂತೆ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಕಲಬುರಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿಯ ಮತದಾನದ ಪ್ರಮಾಣ ತುಂಬಾ ಕಡಿಮೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಸ್ವೀಪ್ ಕಾರ್ಯಕ್ರಮ ರೂಪಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಾಡುಗಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಇದಕ್ಕಾಗಿ ಮೊದಲಿನ 25 ಪ್ರವೇಶಗಳನ್ನು ಪರಿಗಣಿಸಿ ಸ್ಪರ್ಧೆ ಏರ್ಪಡಿಸಬೇಕು. ಇವುಗಳಲ್ಲಿ ವಿಜೇತರಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸಿ ಮಾದರಿ ಹಾಡುಗಾರರನ್ನು ಗುರುತಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ಎಲ್ಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಸಾಕ್ಷರ ಭಾರತ ಪ್ರೇರಕರಿಗೆ ವಿವಿ ಪ್ಯಾಟ್ ತರಬೇತಿ
ಕಲಬುರಗಿ,ಏ.13.(ಕ.ವಾ.)-ಸಾಕ್ಷರ ಭಾರತ ಪ್ರೇರಕರು ತಮ್ಮ ಗ್ರಾಮದ ಎಲ್ಲ ಅನಕ್ಷರಸ್ಥ ಮತದಾರರಿಗೆ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ ಕುರಿತು ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಹೆಪ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲಾ ಪಂಚಾಯಿತಿಯ ಹಳೆ ಸಭಾಂಗಣದಲ್ಲಿ ಸಾಕ್ಷರ ಭಾರತ ಕಾರ್ಯಕ್ರಮದ ಪ್ರೇರಕರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್) ಬಳಸಲಾಗುತ್ತಿದ್ದು, ಮತದಾರರು ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ವಿವಿ ಪ್ಯಾಟ್ ಯಂತ್ರದಲ್ಲಿ ಮತದಾನ ಮಾಡಿದ ನಂತರ ಏಳು ಸೆಕೆಂಡುಗಳ ಕಾಲ ಮತದಾನ ಮಾಡಿದ ಬಗ್ಗೆ ಮಾಹಿತಿ ಪ್ರದರ್ಶನವಾಗುತ್ತದೆ. ಈ ಮಾಹಿತಿಯಲ್ಲಿ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ಕ್ರಮ ಸಂಖ್ಯೆ ಹಾಗೂ ಪಕ್ಷದ ಚಿಹ್ನೆ ಒಳಗೊಂಡಿರುತ್ತದೆ ಎಂದರು.
ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ರಾಘವೇಂದ್ರ ಅಳವಂಡಿ, ಸಹ ಪ್ರಾಧ್ಯಾಪಕ ಶಿವಶರಣ ಗೊಳ್ಳೆ, ರವೀಂದ್ರ ರಡ್ಡಿ ಅವರು ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ ಕಾರ್ಯವಿಧಾನದ ಬಗ್ಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎನ್. ವಿ. ಶಿವಪ್ಪ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಅನಧಿಕೃತ ಡಿಜೆ ಧ್ವನಿವರ್ಧಕಗಳ ಜಪ್ತಿ
ಕಲಬುರಗಿ,ಏ.13.(ಕ.ವಾ.)-ಜಿಲ್ಲೆಯಲ್ಲಿ ಡಿಜೆ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಅನಧಿಕೃತ ಡಿಜೆ ಧ್ವನಿವರ್ಧಕಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಡಿಜೆ ಧ್ವನಿ ವರ್ಧಕಗಳ ಬಳಕೆಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯವು ಚಿಕ್ಕ ಮಕ್ಕಳ, ಹೆಚ್ಚು ವಯಸ್ಸಾದವರ, ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣ ಮಾಡುವುದು ಅತ್ಯಗತ್ಯವಾಗಿದೆ. ಸುಪ್ರಿಂ ಕೋರ್ಟಿನ ಆದೇಶದನ್ವಯ ಡಿಜೆ ಧ್ವನಿ ವರ್ಧಕಗಳು ನಿಗದಿತ ಶಬ್ದದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದವನ್ನು ಹೊರಸೂಸುತ್ತವೆ. ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಂದ ನಗರಕ್ಕೆ ಕರೆಸಿಕೊಂಡಿರುವ ಹಾಗೂ ಎಲ್ಲ ತಾಲೂಕುಗಳಲ್ಲಿನ ಡಿಜೆ ಧ್ವನಿವರ್ಧಕಗಳನ್ನು ಸೀಜ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭತ್ತದ ಬೆಳೆಗಳಿಗೆ ನೀರು ಒದಗಿಸುತ್ತಿಲ್ಲ ಎನ್ನುವ ಆರೋಪಗಳಿಗೆ ಪ್ರತಿಕ್ರಿಯೆ
ಲಭ್ಯವಿರುವ ನೀರು ಬಳಸಿಕೊಂಡು ನೀರಿನ ಬವಣೆ ನೀಗಿಸಲು ಕ್ರಮ:
ಮುಖ್ಯ ಕಾರ್ಯದರ್ಶಿ ರತ್ನಪ್ರಭ
ಕಲಬುರಗಿ,ಏ.13.(ಕ.ವಾ.)-ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ನೀರಾವರಿ ಸೌಲಭ್ಯ ಒದಗಿಸಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪಗಳಿಗೆ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಪ್ರತಿ ವರ್ಷವು ಬೆಳೆಗಳ ಬಿತ್ತನೆಗೆ ಮುಂಚಿತವಾಗಿ ಪ್ರಾದೇಶಿಕ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಜಿಲ್ಲಾಧಿಕಾರಿಗಳ ಒಳಗೊಂಡ ನೀರಾವರಿ ಸಮಾಲೋಚನಾ ಸಮಿತಿಯು ನೀರಿನ ಲಭ್ಯತೆ ಆಧರಿಸಿ ಹಂಚಿಕೆಯನ್ನು ನಿರ್ಣಯಿಸುತ್ತದೆ ಹಾಗೂ ಬೆಳೆಗಳಿಗೆ ನೀರು ಒದಗಿಸಲು ಸಾಕಷ್ಟು ನೀರು ಲಭ್ಯವಿಲ್ಲದ ಪಕ್ಷದಲ್ಲಿ ಬೆಳೆಗಳ ಬಿತ್ತನೆಯನ್ನು ಮಾಡುವುದು ಸಲಹಾರ್ಹವಲ್ಲ ಎಂದು ಅವರು ತಿಳಿಸಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ 13, ನವೆಂಬರ್ 2017 ರಂದು ನೀರಾವರಿ ಸಮಾಲೋಚನಾ ಸಮಿತಿಯ ನಿರ್ಣಯಿಸಿದಂತೆ ಮುಂಗಾರು ಬೆಳೆಗೆ 50 ಟಿಎಂಸಿ ನೀರು ಒದಗಿಸಲಾಗಿದ್ದು, 30ನೇ ನವೆಂಬರ್ 2017ರಂತ್ಯಕ್ಕೆ 25 ಟಿಎಂಸಿ ಕರ್ನಾಟಕ ಪಾಲು ಲಭ್ಯವಿರುತ್ತದೆ. ಸಮಿತಿಯು 13ನೇ ನವೆಂಬರ್ 2017 ರಂದು ಕೈಗೊಂಡ ನಿರ್ಣಯದಂತೆ ಒಣ ಹಾಗೂ ಮಳೆಯಾಶ್ರಿತ ಬೆಳೆಗಳಿಗೆ 5, ಮಾರ್ಚ್ 2018ರವರೆಗೆ ಎಡದಂಡೆ ಹಾಗೂ 30, ಮಾರ್ಚ್ 2018ರವರೆಗೆ ಬಲದಂಡೆ ನಾಲೆಯಲ್ಲಿ ನೀರನ್ನು ಹರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಲಬುರಗಿ ಪ್ರಾದೇಶಿಕ ಆಯುಕ್ತರು ದಿನಾಂಕ: 14-2-2018ರಂದು ಕೊಪ್ಪಳ,ಬಳ್ಳಾರಿ ಮತ್ತು ರಾಯಚೂರು ಜಿಲ್ಲಾಧಿಕಾರಿಗಳೊಡನೆ ಸಭೆ ನಡೆಸಿ ನಿರ್ಣಯಿಸಿದಂತೆ 3.5 ರಷ್ಟು ಟಿಎಂಸಿ ನೀರನ್ನು ಈ ಮೂರು ಜಿಲ್ಲೆಗಳಿಗೆ ಮಾರ್ಚ್‍ನಿಂದ ಜೂನ್‍ವರೆಗಿನ ಅವಧಿಯ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಮೀಸಲಿರಿಸಲು ನಿರ್ಣಯ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ತುಂಗಭದ್ರ ಅಣೆಕಟ್ಟಿನಲ್ಲಿ 3.082 ಟಿಎಂಸಿಯಷ್ಟು ನೀರು ಬಳಕೆಗೆ ಲಭ್ಯವಿದ್ದು, ಇದರಲ್ಲಿ 0.464 ಟಿಎಂಸಿಯಷ್ಟು ನೀರನ್ನು ರಾಯಬಸವ ಹಾಗೂ ವಿಜಯನಗರ ನಾಲೆಗಳಿಗೆ 30ನೇ ಮೇ 2018ರವರೆಗೆ ಹರಿಸಲು ಮೀಸಲಿರಿಸಿದ್ದು, ಉಳಿದ 2.61 ಟಿಎಂಸಿಯನ್ನು ನೀರನ್ನು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಬಳಸಿಕೊಳ್ಳಲಾಗುವುದು. ಕುಡಿಯುವ ನೀರಿನ ಪೂರೈಕೆಯು ಬೆಳೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದಕ್ಕಿಂತ ಹೆಚ್ಚಿನ ಆದ್ಯತೆ ಹೊಂದಿರುವುದು ತಿಳಿದ ವಿಷಯವಾಗಿರುತ್ತದೆ. ಆದ್ದರಿಂದ ಬೆಳೆಗಳಿಗೆ ಹರಿಸಲು ನೀರು ಲಭ್ಯವಿರುವುದಿಲ್ಲ. ಈ ವಿಷಯದಲ್ಲಿ ಮುಖ್ಯ ಕಾರ್ಯದರ್ಶಿಯವರು ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ವಿಷಯವು ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಚುನಾವಣಾ ಮಾದರಿ ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಲಭ್ಯವಿರುವ ನೀರನ್ನು ಬಳಸಿಕೊಂಡು ನೀರಿನ ಬವಣೆಯನ್ನು ನೀಗಿಸಲು ಸರ್ಕಾರದ ವತಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರಿನ ಅಭಾವ: ಪರಿಸ್ಥಿತಿ ನಿಭಾಯಿಸಲು ಬದ್ಧ
ಕಲಬುರಗಿ,ಏ.13.(ಕ.ವಾ.)-ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಿಗೆ ನೀರನ್ನು ಪೂರೈಸುವುದು ಒಂದು ಅನಿವಾರ್ಯ ಹಾಗೂ ಅದ್ಯ ಕರ್ತವ್ಯವಾಗಿರುತ್ತದೆ. ಸಿಆರ್‍ಎಫ್ ಮಾರ್ಗಸೂಚಿಗಳನ್ವಯ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಅವಕಾಶವಿದ್ದು, ಸಾಕಷ್ಟು ಹಣ ಸಿಆರ್‍ಎಫ್ ಅಡಿ ಎಲ್ಲ ಜಿಲ್ಲಾಧಿಕಾರಿಗಳ ಹತ್ತಿರ ಲಭ್ಯವಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನ ಪ್ರಭ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕುಡಿಯುವ ನೀರಿನ ಅಭಾವ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡ ಒಂದು ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸಿ, ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು/ ತಹಶೀಲ್ದಾರ್ ಹಾಗೂ ಸ್ಥಳೀಯ ಅಧಿಕಾರಿಗಳಿಂದ ಒಂದು ವಾಸ್ತವಿಕ ವರದಿಯನ್ನು ಪಡೆದು ಈ ವರದಿಯನ್ವಯ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ಅವಶ್ಯವಿರುವ ಪ್ರದೇಶದಲ್ಲಿ ಬೋರ್‍ವೆಲ್ ಕೊರೆಯುವ/ ನಿರ್ವಹಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಅಂದರೆ ಸಂಸತ್ ಸದಸ್ಯರು, ಶಾಸಕರುಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಭಾಗಿಯಾಗತ್ಕದಲ್ಲ. ಇದನ್ನು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ರೀತಿಯ ದೂರುಗಳು ಸ್ವೀಕೃತವಾದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ ಜಯಂತಿ ಪ್ರಯುಕ್ತ ಮದ್ಯ ಮಾರಾಟ ನಿಷೇಧ
ಕಲಬುರಗಿ,ಏ.13.(ಕ.ವಾ.)-ಸಂವಿಧಾನ ಶಿಲ್ಪಿ ಹಾಗೂ ಮಹಾ ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ ಅವರ ಜಯಂತಿಯನ್ನು 2018ರ ಏಪ್ರಿಲ್ 14ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲ ತರಹದ ಮದ್ಯ, ಸರಾಯಿ, ಸೇಂದಿ, ಸ್ವದೇಶಿ ಹಾಗೂ ವಿದೇಶಿ ಮದ್ಯ ಹಾಗೂ ಎಲ್ಲ ತರಹದ ಮಾದಕ ವಸ್ತುಗಳ ಮಾರಾಟವನ್ನು ಏಪ್ರಿಲ್ 13ರ ಮಧ್ಯರಾತ್ರಿಯಿಂದ ಏಪ್ರಿಲ್ 15ರ ಬೆಳಗಿನ 6 ಗಂಟೆಯವರೆಗೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರರ ಜಯಂತಿ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಈ ಆದೇಶ ಹೊರಡಿಸಲಾಗಿದೆ.
ವಿದ್ಯುತ ಮಾರ್ಗದ ಸಮೀಪ ಹೋಗದಂತೆ ಸೂಚನೆ
ಕಲಬುರಗಿ,ಏ.13.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಆಳಂದ ತಾಲೂಕಿನ 110/11 ಕೆ.ವಿ. ಮಾಡ್ಯಾಳ ಉಪ ವಿತರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲ್ಪಟ್ಟ 11 ಕೆ.ವಿ. ಭೂಸನೂರ ಫೀಡರ್‍ಗೆ 2018ರ ಏಪ್ರಿಲ್ 16ರಂದು (ಚಾರ್ಜ್) ವಿದ್ಯುತ್ ಪ್ರವಹಿಸಲಾಗುತ್ತಿದೆ ಎಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಇಂಜನಿಯರ್ ತಿಳಿಸಿದ್ದಾರೆ.
ಇದರ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಈ ಮಾರ್ಗದ ಸಮೀಪ ಹೋಗಬಾರದು ಹಾಗೂ ಕಂಬಗಳನ್ನು ಏರಬಾರದು, ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದೆಂದು ಕಲಬುರಗಿ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಇಂಜಿನಿಯರರು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಜೂನ್ 11 ರಂದು ಬಹಿರಂಗ ಹರಾಜು ಮೂಲಕ ಕಾಗದ ಪತ್ರಗಳ ವಿವೇವಾರಿ
ಕಲಬುರಗಿ,ಏ.13.(ಕ.ವಾ.)-ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಲಭ್ಯವಿರುವ ಕಡತಗಳ ಹಾಗೂ ರಜಿಸ್ಟರ್‍ಗಳ ಹರಿದ ಕಾಗದ ಪತ್ರಗಳನ್ನು (ಕೆ.ಸಿ.ಎಸ್.ಆರ್. ನಿಯಮಗಳನ್ವಯ ವಿನಾಶಗೊಳಿಸಿದ ಕಡತಗಳು) 2018ರ ಜೂನ್ 11ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಆಸಕ್ತಿಯುಳ್ಳ ಖರೀದಿದಾರರು ಹರಾಜು ಪ್ರಕ್ರಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.
ಹರಾಜಿನಲ್ಲಿ ಭಾಗವಹಿಸುವವರು ಹರಾಜು ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ 1000 ರೂ.ಗಳ ಠೇವಣಿ ಮೊತ್ತದೊಂದಿಗೆ ಸೂಕ್ತ ಗುರುತಿನ (ಭಾವಚಿತ್ರ ಸಹಿತ) ಚೀಟಿಯನ್ನು ಮೇಲ್ಕಂಡ ಕಾರ್ಯಾಲಯದಲ್ಲಿ ನೀಡಬೇಕು. ಹರಾಜಿನ ಬಿಡ್ಡನ್ನು ಒಪ್ಪುವ, ಹೆಚ್ಚು ಮಾಡುವ, ಮರು ಹರಾಜು ಮಾಡುವ ಅಥವಾ ತಿರಸ್ಕರಿಸುವ ಮತ್ತು ಯಾವುದೇ ತಕರಾರುಗಳನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಇರುತ್ತದೆ. ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕಚೇರಿ ಸ್ಥಳಾಂತರ
ಕಲಬುರಗಿ,ಏ.13.(ಕ.ವಾ.)-ಕಲಬುರಗಿಯ ನಗರಾಭಿವೃದ್ಧಿ ಪ್ರಾಧಿಕಾರದ ಮೊದಲನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯನ್ನು ಕಲಬುರಗಿಯ ಕುಸನೂರ ರಸ್ತೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಯ ಎದುರುಗಡೆ ಇರುವ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಮೊದಲನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ಇನ್ನು ಮುಂದೆ ಈ ಕಚೇರಿಗೆ ಸಂಬಂಧಿಸಿದ ಯಾವುದೇ ಪತ್ರ ವ್ಯವಹಾರವನ್ನು ಈ ವಿಳಾಸಕ್ಕೆ ಮಾಡಬೇಕೆಂದು ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆ
ಕಲಬುರಗಿ,ಏ.13.(ಕ.ವಾ.)-ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ ಅವರ 127ನೇ ಜಯಂತ್ಯೋತ್ಸವವನ್ನು ಏಪ್ರಿಲ್ 14ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ನಗರದ ಜಗತ ವೃತ್ತದಲ್ಲಿನ ಡಾ.ಬಿ.ಆರ್. ಅಂಬೇಡ್ಕರ ಪುತ್ಥಳಿ ಹತ್ತಿರ ಆಚರಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಕಲಬುರಗಿ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 15ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಏ.13.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಗಾಜಿಪುರ, 11ಕೆ.ವಿ. ಟಿ.ವಿ. ಸ್ಟೇಶನ್, 11ಕೆ.ವಿ. ಸಿನಿಮಾ ಫೀಡರಗಳ ಮೇಲೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ರವಿವಾರ ಏಪ್ರಿಲ್ 15ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ. ಗಾಜಿಪುರ ಫೀಡರ್: ಜಿ.ಡಿ.ಎ., ಗೋಕುಲ ನಗರ, ಜಿಲ್ಲಾಧಿಕಾರಿಗಳ ಕಚೇರಿ, ಮಾಲಿ ಪಾಟೀಲ ಟಿ.ಸಿ., ಬಸವಣ್ಣಾ ಟೆಂಪಲ್, ಮಿಲ್ ಚೌಕ್, ಶಂಕರಲಿಂಗ್ ಟೆಂಪಲ್, ಮಟನ ಮಾರ್ಕೇಟ್, ಕಾವೇರಿ ನಗರ, ತಹಶೀಲ್ದಾರ ಕಚೇರಿ, ಚನ್ನಮಲ್ಲೇಶ್ವರ ನಗರ, ಮಜಗಿ ಲೇಔಟ್, ಸುಪರ ಮಾರ್ಕೇಟ್ ರೇಮ್ಯಾಂಡ್ ಟಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಟಿವಿ ಸ್ಟೇಶನ್ ಫೀಡರ್: ಮುನಿಂ ಸಂಘ, ಕಾಕಡೆ ಚೌಕ್, ರಾಮನಗರ, ರೇವಣಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ ಮತ್ತು ಭವಾನಿ ನಗರ.
11 ಕೆ.ವಿ. ಸಿನಿಮಾ ಫೀಡರ್: ಸುಪರ ಮಾರ್ಕೆಟ್, ಶಹಾ ಬಜಾರ್ ಜಿಡಿಎ., ಕಟಗರಪುರ, ಪ್ರಕಾಶ ಟಾಕೀಸ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬಜಾರ, ಮಹಾಲಕ್ಷ್ಮೀ ಲೇಔಟ್, ಕಿರಾಣಾ ಬಜಾರ್, ಮಾರವಾಡಿ ಗಲ್ಲಿ, ಚೌಕ್ ಪೊಲೀಸ್ ಸ್ಟೇಶನ್, ಫೋರ್ಟ ರಸ್ತೆ, ಬಾಂಡಾ ಬಜಾರ, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಹೀಗಾಗಿ ಲೇಖನಗಳು news and photo Date: 13--04-2018
ಎಲ್ಲಾ ಲೇಖನಗಳು ಆಗಿದೆ news and photo Date: 13--04-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 13--04-2018 ಲಿಂಕ್ ವಿಳಾಸ https://dekalungi.blogspot.com/2018/04/news-and-photo-date-13-04-2018.html




0 Response to "news and photo Date: 13--04-2018"
ಕಾಮೆಂಟ್ ಪೋಸ್ಟ್ ಮಾಡಿ