ಶೀರ್ಷಿಕೆ : ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ
ಲಿಂಕ್ : ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ
ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ
ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮದ್ಯದ ಆಮಿಷವೊಡ್ಡಲು, ಸಹಕರಿಸುವ ಹಾಗೂ ಅಬಕಾರಿ ನಿಯಮಗಳನ್ನು ಉಲ್ಲಂಘಿಸುವ ಮದ್ಯದ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ನಿಮಿತ್ಯ ಜಿಲ್ಲೆಯ ಎಲ್ಲ ಅಬಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಮದ್ಯದ ಆಮಿಷವೊಡ್ಡಿ, ಮತದಾರರ ಮೇಲೆ ಪ್ರಭಾವ ಬೀರಲು ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಗೆ ಸಹಕಾರ ನೀಡುವ ಮತ್ತು ಅಬಕಾರಿ ನಿಯಮಗಳನ್ನು ಉಲ್ಲಂಘಿಸುವ ಮದ್ಯದ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 136 ಮದ್ಯದ ಅಂಗಡಿಗಳಿದ್ದು, ಈ ಮದ್ಯದ ಅಂಗಡಿಗಳಲ್ಲಿ ಕಳೆದ 2017 ರ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಇದ್ದಂತಹ ದಾಸ್ತಾನು ಹಾಗೂ ಸರಾಸರಿ ಮಾರಾಟ ವಿವರ ಹಾಗೂ ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಇದ್ದ ದಾಸ್ತಾನು ಹಾಗೂ ಸರಾಸರಿ ಮಾರಾಟ ವಿವರವನ್ನು ಜಿಲ್ಲೆಯ ಎಲ್ಲ ಮದ್ಯದ ಅಂಗಡಿವಾರು ಹಾಗೂ ತಾಲೂಕುವಾರು ವರದಿಯನ್ನು ಏ. 16 ರ ಒಳಗಾಗಿ ಸಲ್ಲಿಸಬೇಕು. ಚುನಾವಣೆ ಘೋಷಣೆಯಾದ 2018 ರ ಮಾರ್ಚ್ 27 ರಿಂದ ಈವರೆಗಿನ ಪ್ರತಿದಿನದ ಇಂಡೆಂಟ್ ಹಾಗೂ ಮಾರಾಟ ವಿವರ ಹಾಗೂ ಉಳಿಕೆ ವಿವರವನ್ನು ಬ್ರಾಂಡ್‍ವಾರು ಪ್ರತ್ಯೇಕವಾಗಿ ನಮೂದಿಸಿ, ಪ್ರತಿ ಅಂಗಡಿ ಹಾಗೂ ತಾಲೂಕುವಾರು ಸಲ್ಲಿಸಬೇಕು. ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇಂತಹ ವರದಿಯನ್ನು ನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ಚುನಾವಣಾ ವೀಕ್ಷಕರಿಗೆ ಸಲ್ಲಿಸಬೇಕು. ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಊರ ಒಳಗಡೆ ಇರುವಂತಹ ಮದ್ಯದ ಅಂಗಡಿಗಳ ಬಗ್ಗೆಯೂ ತೀವ್ರ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ಮಾರಾಟ ಹಾಗೂ ವ್ಯವಹಾರ ಇರುವ ಮದ್ಯದ ಅಂಗಡಿಗಳು ಹಾಗೂ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೆಚ್ಚಿನ ದಾಸ್ತಾನು ಹಾಗೂ ಮಾರಾಟ ಪ್ರಮಾಣ ದಾಖಲಾಗಿರುವ ಅಂಗಡಿಗಳನ್ನು ಸೂಕ್ಷ್ಮ ಮದ್ಯದ ಅಂಗಡಿಗಳೆಂದು ಗುರುತಿಸಲಾಗುತ್ತಿದ್ದು, ಇಂತಹ ಅಂಗಡಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಮದ್ಯದ ಅಂಗಡಿಗಳಲ್ಲಿ ಸ್ಟಾಕ್ ರಿಜಿಸ್ಟರ್ ಪರಿಶೀಲಿಸಲು ಸೂಚನೆ ನೀಡಲಾಗಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ 01 ಡಿಸ್ಟಿಲರಿ ಹಾಗೂ 01- ವೈನರಿ ಘಟಕಗಳಿದ್ದು, ಈ ಘಟಕಗಳು ಜೊತೆಗೆ, ಮದ್ಯದ ಬಾಕ್ಸ್‍ಗಳನ್ನು ಎತ್ತುವಳಿ ಮಾಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಸಿ, ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚೆಕ್‍ಪೋಸ್ಟ್‍ಗಳಲ್ಲಿ ತೀವ್ರ ತಪಾಸಣೆ :
***************** ಕೊಪ್ಪಳ ಜಿಲ್ಲೆಯಿಂದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳ ಸ್ಥಳಗಳಲ್ಲಿ ಈಗಾಗಲೆ ಒಟ್ಟು 11 ಕಡೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. ಈ ಚೆಕ್‍ಪೋಸ್ಟ್‍ಗಳಲ್ಲಿ ಅಧಿಕಾರಿಗಳು ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ. ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಈ ಚೆಕ್‍ಪೋಸ್ಟ್‍ಗಳಿಂದ ತಪ್ಪಿಸಿಕೊಳ್ಳಲು, ಗ್ರಾಮೀಣ ರಸ್ತೆಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಅಬಕಾರಿ ಅಧಿಕಾರಿಗಳು ನಿಗಾ ವಹಿಸಬೇಕು. ದಾಳಿ ಪ್ರಕರಣಗಳನ್ನು ಹೆಚ್ಚಿಸಬೇಕು. ರಾತ್ರಿ ವೇಳೆಯಲ್ಲಿ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆಗಳಿರುವುದರಿಂದ, ರಾತ್ರಿ ವೇಳೆ ತಪಾಸಣೆಯನ್ನು ಹೆಚ್ಚು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಟೋಕನ್ ವ್ಯವಸ್ಥೆ ಕಂಡಲ್ಲಿ ಲೈಸೆನ್ಸ್ ರದ್ದು :
*************** ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು, ಮದ್ಯಮ ಆಮಿಷವೊಡ್ಡುವ ಸಂಭವ ಇದ್ದು, ಟೋಕನ್ ವ್ಯವಸ್ಥೆ ಮಾಡಿಕೊಂಡು, ಮದ್ಯದ ಅಂಗಡಿಗಳಲ್ಲಿ ಹಣದ ಬದಲಿಗೆ ಈ ಟೋಕನ್ ಪಡೆದು, ಮದ್ಯದ ಬಾಟಲ್ ನೀಡುವ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆಗಳಿರುತ್ತವೆ. ಅಬಕಾರಿ ಅಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಬೇಕು. ಇಂತಹ ಅಕ್ರಮ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಯಾವುದೇ ದೂರು ನೀಡಿದಲ್ಲಿ, ತಕ್ಷಣ ಅಧಿಕಾರಿಗಳು ಧಾವಿಸಿ, ಅಕ್ರಮ ಚಟುವಟಿಕೆ ಕಂಡುಬಂದಲ್ಲಿ, ಯಾವುದೇ ಪ್ರಭಾವಕ್ಕೆ ಒಳಗಾಗದೆ, ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅಧಿಕಾರಿಗಳೇ ಯಾರದಾದರೂ ಪ್ರಭಾವಕ್ಕೆ ಒಳಗಾಗಿದ್ದು ಕಂಡುಬಂದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಅವರು ಮಾತನಾಡಿ, ಚೆಕ್‍ಪೋಸ್ಟ್‍ಗಳಿಂದ ತಪ್ಪಿಸಿಕೊಳ್ಳಲು ಗ್ರಾಮೀಣ ರಸ್ತೆಯನ್ನು ಬಳಕೆ ಮಾಡಿಕೊಂಡು ಸಂಚರಿಸುವ ವಾಹನಗಳ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲೂ ಅಕ್ರಮ ಕುರಿತು ದೂರುಗಳು ಬರುತ್ತಿದ್ದು, ಅಕ್ರಮ ಚಟುವಟಿಕೆ ಕೈಗೊಳ್ಳುವ ಯಾವುದೇ ಅಂಗಡಿಗಳಾಗಲಿ, ಅವರಿಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರಗಳಲ್ಲಿ ಮದ್ಯದ ಅಕ್ರಮ ಚಟುವಟಿಕೆಗಳ ಬಗ್ಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿದ್ದು, ಈ ಕುರಿತು ತೀವ್ರ ನಿಗಾ ವಹಿಸಲಾಗಿದೆ. ಅಬಕಾರ ಇಲಾಖೆಯವರು ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಿಎಲ್2- 56, ಸಿಎಲ್7-32, ಸಿಎಲ್9- 18, ಸಿಎಲ್4-01, ಇತರೆ-15, ಎಂಎಸ್‍ಐಎಲ್-14 ಸೇರಿದಂತೆ ಒಟ್ಟು 136 ಮದ್ಯದ ಅಂಗಡಿಗಳಿವೆ. ಅಕ್ರಮ ಪತ್ತೆಗಾಗಿ ಈಗಾಗಲೆ ಇಲಾಖೆಯಿಂದ 03 ವಿಶೇಷ ತಂಡ ರಚಿಸಲಾಗಿದೆ. 04 ಸ್ಕ್ವಾಡ್‍ಗಳನ್ನು ನೇಮಿಸಲಾಗಿದೆ. ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದ 06 ಪ್ರಕರಣಗಳನ್ನು ದಾಖಲಿಸಿ 169 ಲೀ. ಲಿಕ್ಕರ್ ವಶಕ್ಕೆ ಪಡೆಯಲಾಗಿದೆ. ಬಿಎಲ್‍ಸಿ ಸನ್ನದುದಾರರ ಮೇಲೆ 16 ಪ್ರಕರಣ ದಾಖಲಾಗಿವೆ. 75 ಕಡೆಗಳಲ್ಲಿ ದಾಳಿ ನಡೆಸಿದ್ದು, 20 ಎಫ್‍ಐಆರ್ ದಾಖಲಿಸಿದೆ. ಚುನಾವಣೆ ಸಂದರ್ಭದಲ್ಲಿ ಮದ್ಯದ ಪ್ರಭಾವ ಬೀರಲು ಯತ್ನಿಸುವ ಹಾಗೂ ಅಕ್ರಮ ಸಾಗಾಣಿಕೆ ಅಥವಾ ವಿತರಣೆ ಕೈಗೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ದಾಳಿ ಪ್ರಕರಣಗಳನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಅಬಕಾರಿ ಉಪ ಅಧೀಕ್ಷಕ ನಾರಾಯಣ ನಾಯ್ಕ ಸೇರಿದಂತೆ ಜಿಲ್ಲೆಯ ಎಲ್ಲ ಅಬಕಾರಿ ನಿರೀಕ್ಷಕರು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ
ಎಲ್ಲಾ ಲೇಖನಗಳು ಆಗಿದೆ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/04/blog-post_14.html
0 Response to "ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ