ಶೀರ್ಷಿಕೆ : News & photo Dt.28-09-2017
ಲಿಂಕ್ : News & photo Dt.28-09-2017
News & photo Dt.28-09-2017
ಕಲಬುರಗಿ,ಸೆ.28(ಕ.ವಾ.)-ಗರ್ಭಿಣಿಯರಿರುವ ಮನೆಯಲ್ಲಿ ಗುಂಡಿ ತೋಡಬಾರದೆಂದ ಮೂಢ ನಂಬಿಕೆಯಿಂದ ಹೊರಬಂದು ಎಲ್ಲ ಗರ್ಭಿಣಿಯರು ತಮ್ಮ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡು ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಕರೆ ನೀಡಿದರು.
ಅವರು ಬುಧವಾರ ಕಮಲಾಪುರದಲ್ಲಿ ಸ್ವಚ್ಛಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಮಹಿಳೆಯರಿಗೆ ಮಾರಕವಾಗಿರುವಂತಹ ಇಂತಹ ಮೂಢ ನಂಬಿಕೆಗಳನ್ನು ಅನುಸರಿಸಬಾರದು ಎಂದರು.
ಮಹಿಳೆಯ ಆರೋಗ್ಯ ಕಾಪಾಡಿದಲ್ಲಿ ಅವಳು ಮಕ್ಕಳ ಆರೋಗ್ಯ ಕಾಪಾಡುವ ಮೂಲಕ ಸುಭದ್ರ ಸಮಾಜ ನಿರ್ಮಿಸಬಲ್ಲಳು. ಗರ್ಭೀಣಿಯರಿಗೆ ಸುಚಿತ್ವದ ಜೊತೆಗೆ ಆರೋಗ್ಯ ಬಹು ಮುಖ್ಯ. ತಾಯಿ ಸಧೃಡವಾಗಿದ್ದರೆ ಸಂತಾನ ಸದೃಡವಾಗಿ ಹುಟ್ಟುತ್ತವೆ. ಇದಕ್ಕೆ ಗರ್ಭೀಣಿಯರು ಪೌಷ್ಠಿಕ ಆಹಾರ ಸೇವಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಅಕ್ಟೋಬರ್ 2 ರಿಂದ ಮಾತೃಪೂರ್ಣ ಯೋಜನೆ ಜಾರಿಗೊಳಿಸುತ್ತಿದೆ ಎಂದರು.
ಶಿಸ್ತುಬದ್ಧ ಆಹಾರ ಪದ್ದತಿ ಇಲ್ಲದಿರುವುದರಿಂದ ಗರ್ಭೀಣಿ ಮತ್ತು ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ನರಳುತ್ತಾರೆ. ಶೇ.45 ರಷ್ಟು ಮಹಿಳೆಯರು ರಕ್ತ ಹೀನತೆಗೆ ಒಳಗಾಗಿದ್ದಾರೆ. ಅಂಥವರು ಕಡ್ಡಾಯವಾಗಿ ಪೌಷ್ಠಿಕ ಆಹಾರ ಸೇವಿಸುವುದರ ಜೊತೆಗೆ ಕಬ್ಬಿಣಾಂಶದ ಮಾತ್ರೆ ಸೇವಿಸಬೇಕು. ಬಡವರಿಗೆ ಇದು ಸಾಧ್ಯವಾಗುವುದಿಲ್ಲ ಎಂದು ಮನಗಂಡ ಸರ್ಕಾರ ಮಾತೃಪೂರ್ಣ ಯೋಜನೆಯ ಮೂಲಕ ಪೌಷ್ಠಿಕ ಆಹಾರ ಮತ್ತು ಕಬ್ಬಿಣಾಂಶದ ಮಾತ್ರೆಗಳನ್ನು ನೀಡುತ್ತಿದೆ. ಹೆರಿಗೆ ಸಮಯದಲ್ಲಿ ರಕ್ತದ ಅವಶ್ಯಕತೆ ಇದ್ದರೆ ಉಚಿತವಾಗಿ ರಕ್ತ ಸಹ ಪೂರೈಸಲಾಗುವುದು ಎಂದರು.
ಗರ್ಭೀಣಿಯರಿಗೆ ಮತ್ತು ಹಾಲುಣಿಸುವ ತಾಯಂದರಿಗೆ ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆ ಹಾಗು ಗರ್ಭೀಣಿಯರು ಸಹಮತದಿಂದ ಗರ್ಭೀಣಿಯರಿಗೆ ಇಷ್ಟವಾಗುವ ರುಚಿಯ ಆಹಾರವನ್ನು ತಯಾರಿಸಿ ಸೇವಿಸಬಹುದಾಗಿದೆ. ಹೆರಿಗೆಯಾದ ನಂತರ 8 ತಿಂಗಳವರೆಗೂ ಸರ್ಕಾರದಿಂದ ಪೌಷ್ಠಿಕ ಆಹಾರ ನೀಡಲಾಗುವುದು. ಇದರಿಂದ ಮಗುವಿಗೆ ಹೆಚ್ಚುದಿನಗಳ ವರೆಗೆ ಎದೆ ಹಾಲುಣಿಸಲು ಅನುಕೂಲವಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಪ್ರಾಸ್ತಾವಿಕ ಮಾತನಾಡಿ, ಗರ್ಭಿಣಿಯರಿಗೆ ಸ್ವಚ್ಛ ಮತ್ತು ನಿರ್ಮಲ ವಾತಾವರಣ ಕಲ್ಪಿಸುವುದು, ಆಸ್ಪತ್ರೆಗಳಲ್ಲಿ ಹೆರಿಗೆಗೆ ಪ್ರೋತ್ಸಾಹಿಸುವುದು, ಗರ್ಭೀಣಿ ಹಾಗೂ ಮಗುವಿಗೆ ಕಡ್ಡಾಯವಾಗಿ ಲಸಿಕೆ ನೀಡುವುದು ಹಾಗೂ ಎದೆ ಹಾಲುಣಿಸುವುದನ್ನು ಪ್ರೋತ್ಸಾಹಿಸಲು ಕೂಸು ಕಾರ್ಯಕ್ರಮ ರೂಪಿಸಲಾಗಿದ್ದು, ಇದರಡಿ ಜಿಲ್ಲೆಯಲ್ಲಿ ಕೇವಲ ಎರಡು ವಾರಗಳಲ್ಲಿ 10ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣ ಹಣಮಂತರಾವ ಮಲಾಜಿ, ತಾಲೂಕು ಪಂಚಾಯತಿ ಅಧ್ಯಕ್ಷ ಶಿವರಾಜ ಸಜ್ಜನ, ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಬಾಯಿ ವಿಕ್ಕೆಗೌಡ, ತಾಲೂಕು ಪಂಚಾಯತಿ ಸದಸ್ಯೆ ರಾಜೇಶ್ವರಿ ಪಂಚಗಲ್ಲ, ಕಮಲಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಸತ್ತಾರ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ಮಹಿಳಾ ಮತ್ತು ಮಕ್ಕಳ ಇಲಾಖೆ ಜಂಟಿ ನಿರ್ದೇಶಕಿ ರತ್ನಾ ಬಿ. ಕಲಂದಾನಿ, ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಜೀವಣಗಿ, ಸ್ವಚ್ಛಭಾರತ ಮಿಷನ್ ಜಿಲ್ಲಾ ಸಂಯೋಜಕಿ ಗುರುಬಾಯಿ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕರ ಪ್ರವಾಸ ರದ್ದು
ಕಲಬುರಗಿ,ಸೆ.28.(ಕ.ವಾ.)-ಕರ್ನಾಟಕ ವಿಧಾನ ಪರಿಷತ್ತಿನ ಸಕರಿ ಮುಖ್ಯ ಸಚೇತಕರು ಹಾಗೂ ಕ್ರಿಶ್ಚಿಯನ್ ಡೆವಲೆಪಮೆಂಟ್ ಕೌನ್ಸಿಲ್ ಯೋಜನೆಗಳ ಅನುಷ್ಠಾನ ಮತ್ತು ಪರಿಶೀಲನಾ ಉಪ ಸಮಿತಿಯ ಅಧ್ಯಕ್ಷ ಐವಾನ್ ಡಿಸೋಜಾ ಅವರು ಅಕ್ಟೋಬರ್ 3 ರಂದು ಕೈಗೊಳ್ಳಬೇಕಾಗಿದ್ದ ಕಲಬುರಗಿ ಜಿಲ್ಲಾ ಪ್ರವಾಸ ಅನಿವಾರ್ಯ ಕಾರಣಗಳಿಂದ ರದ್ದಾಗಿರುತ್ತದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
ಕಲಬುರಗಿ,ಸೆ.28.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಹೈದ್ರಾಬಾದ್ ಮೂಲಕ ರಸ್ತೆ ಮಾರ್ಗವಾಗಿ ಕಲಬುರಗಿ ನಗರಕ್ಕೆ ಅಕ್ಟೋಬರ್ 1ರ ಮಧ್ಯರಾತ್ರಿ 1.30 ಗಂಟೆಗೆ ಆಗಮಿಸಿ ವಾಸ್ತವ್ಯ ಮಾಡುವರು.
ಅಕ್ಟೋಬರ್ 2 ರಂದು ಬೆಳಿಗ್ಗೆ 8.30 ಗಂಟೆಗೆ ಕಲಬುರಗಿ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಹಾಗೂ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಅಕ್ಟೋಬರ್ 3 ರಂದು ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ
ಕಲಬುರಗಿ,ಸೆ.28.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರು ಅವರು ಸೆಪ್ಟೆಂಬರ್ 29 ರಂದು ಬೆಳಿಗ್ಗೆ 6 ಗಂಟೆಗೆ ಕಲಬುರಗಿಯಿಂದ ಮಹರಾಷ್ಟ್ರದ ಅಕ್ಕಲಕೋಟ್ ಪಟ್ಣಕ್ಕೆ ಪ್ರಯಾಣಿಸಿ ಗಡಿ ಗ್ರಾಮಗಳಿಗೆ ಭೇಟಿ ನೀಡಿ ಅಕ್ಕಲಕೋಟೆಯಲ್ಲಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 30 ರಂದು ಅಕ್ಕಲಕೋಟೆ ಮತ್ತು ಜತ್ತ ಪ್ರದೇಶದ ಗಡಿ ಗ್ರಾಮಗಳಿಗೆ ಭೆಟಿ ನೀಡಿ ಸೋಲಾಪುರದಲ್ಲಿ ವಾಸ್ತವ್ಯ ಮಾಡುವರು. ಅಕ್ಟೋಬರ್ 1 ರಂದು ಸೋಲಾಪೂರದಿಂದ ಗೋವಾ ರಾಜ್ಯಕ್ಕೆ ಭೇಟಿ ನೀಡಿ ಗೋವಾ ಬೈನಾ ಬೀಚ್ ಬಳಿಯಿರುವ ನಿರಾಶ್ರಿತ ಕನ್ನಡಿಗರನ್ನು ಭೇಟಿ ಮಾಡಿ ಸ್ಥಳೀಯ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಲ್ಲಿಯೆ ವಾಸ್ತವ್ಯ ಮಾಡುವರು. ಅಕ್ಟೋಬರ್ 2 ರಂದು ಬೆಳಗಾವಿ ಜಿಲ್ಲೆಯ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಕಲಬುರಗಿಗೆ ಬಂದು ವಾಸ್ತವ್ಯ ಮಾಡುವರು.
ಬೆಂಬಲ ಬೆಲೆ ಯೋಜನೆಯಡಿ ಉದ್ದು ಖರೀದಿಗೆ ಖರೀದಿ ಕೇಂದ್ರಗಳು
ಕಲಬುರಗಿ,ಸೆ.28.(ಕ.ವಾ.)- ಬೆಂಬಲ ಬೆಲೆ ಯೋಜನೆಯಡಿ 2017-18ನೇ ಸಾಲಿಗೆ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ಕ್ವಿಂಟಾಲ್‍ಗೆ 5400 ರೂ.ಗಳಂತೆÉ ಉದ್ದು ಖರೀದಿಸಲು ಹೋಬಳಿ ಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ರೈತ ಭಾಂಧವರು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಬರುವ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಹೆಸರು ಕಾಳು ಖರೀದಿಸಲು ಪ್ರಾರಂಭಿಸಿದ ಹೋಬಳಿ ಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳ ತೆರೆಯಲಾಗಿದ್ದು, ರೈತರು ಅಲ್ಲಿಗೆ ಭೇಟಿ ನೀಡಿ ಅಂತರ್ಜಾಲದ ಮೂಲಕ ನೊಂದಣಿ ಮಾಡಿಕೊಳ್ಳುವುದು. ರೈತರಿಗೆ ಖರೀದಿಯ ದಿನಾಂಕ ಹಾಗೂ ಸಮಯವನ್ನು ನಂತರ ನೀಡಲಾಗುವುದು. ರೈತಭಾಂಧವರು ನಿಗದಿಪಡಿಸಿದ ದಿನಾಂಕದಂದು ಖರೀದಿ ಕೇಂದ್ರಕ್ಕೆ ಉದ್ದು ಮಾರಾಟ ಮಾqಬಹುದಾಗಿದ್ದು, ಪ್ರತಿ ರೈತರಿಂದ ಗರಿಷ್ಠ 10 ಕ್ವೀಂಟಾಲ್ ವರೆಗೆÉ ಖರೀದಿಸಲಾಗುವುದು. ಖರೀದಿ ಪ್ರಕ್ರಿಯೆ ಕೊನೆಯ ದಿನಾಂಕ: 23.10.2017 ಇರುತ್ತದೆ.
ನೋಂದಣಿ ಸಮಯದಲ್ಲಿ ರೈತರು ಬ್ಯಾಂಕ್ ಅಧಿಕಾರಿಗಳಿಂದ ಆಧಾರ್ ಜೋಡಣೆಗೊಂಡಿರುವ ಬಗ್ಗೆ ದೃಢೀಕೃತ ಬ್ಯಾಂಕ್ ಖಾತೆ ಪ್ರತಿ, ಅಧಾರ್ ಕಾರ್ಡ್ ಮೂಲ ಹಾಗೂ ಝರಾಕ್ಸ್ ಪ್ರತಿ, ಬೆಳೆ ದೃಢಿಕರಣ ಪತ್ರ, ಇತ್ತೀಚಿನ ಪಹಣಿ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಹೆಚ್.ಕೆ.ಆರ್.ಡಿ.ಬಿ. ಕಚೇರಿ ಸ್ಥಳಾಂತರ
ಕಲಬುರಗಿ,ಸೆ.28.(ಕ.ವಾ.)-ಕಲಬುರಗಿ ನಗರದ ಐವಾನೆ-ಎ-ಶಾಹಿ ಪ್ರದೇಶದಲ್ಲಿರುವ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಕಾರ್ಯಾಲಯವನ್ನು ಆಡಳಿತ ಹಿತದೃಷ್ಠಿಯಿಂದ ತಾತ್ಮಲಿಕವಾಗಿ ಕಲಬುರಗಿ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಲಯ, 2ನೇ ಮಹಡಿ, ಕೋಣೆ ಸಂ.15 ಇಲ್ಲಿಗೆ ಸ್ಥಳಂತರಿಸಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ಅಕ್ಟೋಬರ್ 5 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ
ಕಲಬುರಗಿ,ಸೆ.28.(ಕ.ವಾ.)-ಕಲಬುರಗಿ ಜಿಲ್ಲಾಡಳಿತ ಹಾಗೂ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿಯಿಂದ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಅಕ್ಟೋಬರ್ 5 ರಂದು ಗುರುವಾರ ಮಧ್ಯಾಹ್ನ 12.30 ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಹೆಚ್.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ.ಶ್ರೀ.ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಘನ ಉಪಸ್ಥಿತಿ ವಹಿಸುವರು.
ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಚಿಂಚೋಳಿ ಶಾಸಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ವ್ಹಿ. ಗುತ್ತೇದಾರ್, ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ್, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ, ಬಿ.ಜಿ. ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ ಅಸ್ಗರ್ ಚುಲಬುಲ್, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಈಶಾನ್ಯ ಕರ್ನಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕ ಕುಮಾರ, ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಪಿ. ರತ್ನಗಿರಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ನೂತನ ವಿದ್ಯಾಲಯ ಕನ್ಯಾ ಪ್ರೌಢ ಶಾಲೆಯ ಸಹ ಶಿಕ್ಷಕಿ ಲಕ್ಷ್ಮೀದೇವಿ ಶ್ರೀಧರ ರತ್ನಗಿರಿ ವಿಶೇಷ ಉಪನ್ಯಾಸ ನೀಡುವರು.
ಇದಕ್ಕೂ ಮುನ್ನ ಬೆಳಗಿನ 10.30 ಗಂಟೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಜರುಗುವುದು.
ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕಲಬುರಗಿ,ಸೆ.28.(ಕ.ವಾ.)-ಹಿಂದುಳಿಗ ವರ್ಗಗಳ ಕಲ್ಯಾಣ ಇಲಾಖೆಯಿಂದ ಕಲಬುರಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ, ಮಾದರಿ, ವೃತ್ತಿಪರ, ನರ್ಸಿಂಗ್, ಇಂಜಿನೀಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ 2017-18ನೇ ಸಾಲಿಗೆ ಖಾಲಿ ಉಳಿದಿರುವ ಸ್ಥಾನಗಳ ಪ್ರವೇಶಕ್ಕೆ ಅರ್ಹ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಠ ಜಾತಿ/ ಪರಿಶಿಷ್ಟ ವರ್ಗ ಹಾಗೂ ಇತರೆ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್ http://ift.tt/1pXtg5j ಮೂಲಕ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದೆ. ಪ್ರವರ್ಗ-1, ಪರಿಶಿಷ್ಠ ಜಾತಿ/ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗೆ 2.50 ಲಕ್ಷ ರೂ. ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಹಾಗೂ ಇತರೆ ಜನಂಗದ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ಪೋಷಕರ ಆದಾಯ ಮಿತಿ ಇರುತ್ತದೆ.
ಪ್ರವೇಶಕ್ಕೆ ಇರಬೇಕಾದ ಅರ್ಹತೆ, ತಾಲೂಕಾವಾರು ವಸತಿ ನಿಲಯಗಳ ವಿವರ ಹಾಗೂ ಇನ್ನೀತರ ಹೆಚ್ಚಿನ ವಿವರಗಳಿಗೆ ಇಲಾಖೆಯ ಅಂತರ್ಜಾಲ ವೀಕ್ಷಿಸಬಹುದಾಗಿದೆ. ಆನ್‍ಲೈನ್ ನೋಂದಣಿಯಲ್ಲಿ ಯಾವುದೇ ತೊಂದರೆ ಕಂಡುಬಂದಲ್ಲಿ bcwhosteladmission@gmail.com ಇಮೇಲ್ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ಸಹಾಯವಾಣಿ ಸಂಖ್ಯೆ:080-65970006 ಇರುತ್ತದೆ.
ಗುಣಾತ್ಮಕ ಕಲಿಕೆಗೆ ಪ್ರೋತ್ಸಾಹಿಸಿ
ಕಲಬುರಗಿ,ಸೆ.28.(ಕ.ವಾ.)-ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದಲ್ಲದೇ ಅವರಿಗೆ ಗುಣಾತ್ಮಕ ಕಲಿಕೆಗೆ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಚಿಂಚನಸೂರು ಪಿ.ಡಿ.ಓ ವಿಜಯ ಬಿ. ಸನದಿ ತಿಳಿಸಿದರು.
ಅವರು ಆಳಂದ ತಾಲೂಕಿನ ಚಿಂಚನಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್, ಶಿಕ್ಷಣ ಇಲಾಖೆ ಸಮುದಾಯ ಶೈಕ್ಷಣಿಕ ಸ್ವಯಂ ಸೇವಕರು ಹಾಗೂ ಅಕ್ಷರ ಫೌಂಡೇಷನ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ 4 ರಿಂದ 6ನೇ ತರಗತಿ ವರೆಗಿನ ಮಕ್ಕಳಿಗೆ ಏರ್ಪಡಿಸಲಾದ ಗ್ರಾಮ ಪಂಚಾಯತ್ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಹಾಗೂ ಗಣಿತ ಕಲಿಕಾ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಪ್ರೌಢಶಾಲೆಯ ಮುಖ್ಯಗುರು ಎಸ್.ವಿನೋದಕುಮಾರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಣಿತ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದ್ದು, ಇದನ್ನು ಅಕ್ಷರ ಫೌಂಡೇಷನ್ ಸಂಸ್ಥೆಯು ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ ಹಾಗೂ ಇದಕ್ಕೆ ಗ್ರಾಮ ಪಂಚಾಯಿತಿಯಿಂದಲು ಧನಸಹಾಯ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಚಿಂಚನಸೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ಶಿವಶರಣಪ್ಪ ಈರಣ್ಣ ಘಂಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶಿವಶರಣಪ್ಪ ಸಿ.ಸಜ್ಜನ್, ತೀರ್ಥಪ್ಪ ಟಿ. ಭೀಮನ್, ಪಾಂಡುರಂಗ ಎಂ.ಮಾವಿನ್, ಅಕ್ಷರ ಫೌಂಡೇಷನ್ ಸಂಸ್ಥೆಯ ತಾಲೂಕು ಸಂಯೋಜಕ ಜಗದೀಶ ಪಡಸಾವಳಿ, ಪರಮೇಶ್ವರ ಬುಟ್ಟಿ, ಶ್ರೀಶೈಲ್ ಜೆ.ಮಾವಿನ, ರಾಜಕುಮಾರ ವಾಡೇಕರ್, ಗುಂಡಪ್ಪ ಎಸ್.ಹುಲಿಮನಿ, ವಿಠ್ಠಲ ರಾಠೋಡ, ನಾಗೇಂದ್ರಪ್ಪ, ತೀರ್ಥಪ್ಪ ಎಸ್. ಹಡಪದ, ಗುಂಡಪ್ಪ ಕಾಮನ್ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮದ ಮುಖಂಡರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ಪರ್ದೇಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕೃಷಿ ಸಂಸ್ಕರಣ ಯೋಜನೆಯಡಿ ತಾಡಪತ್ರಿ ವಿತರಣೆ
ಕಲಬುರಗಿ,ಸೆ.28(ಕ.ವಾ.)- ಕಲಬುರಗಿ ತಾಲೂಕಿನ ಪಟ್ಟಣ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ 2017-18ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ ತಾಡಪತ್ರಿಗಳ ಹಂಚಿಕೆಗೆ ಲಾಟರಿ ಮುಖಾಂತರ ಫಲಾನುಭವಿಗಳ ಆಯ್ಕೆ ಪ್ರಕ್ರೀಯೆ ನಡೆದು, ಆಯ್ಕೆಯಾದ ಫಲಾನುಭವಿಗಳಿಗೆ ತಾಡಪತ್ರಿಗಳನ್ನು ವಿತರಿಸಲಾಯಿತು ಎಂದು ಪಟ್ಟಣ ರೈತ ಸಂಪರ್ಕ ಕೆಂದ್ರದ ಕೃಷಿ ಅಧಿಕಾರಿ ಶೇಕಪ್ಪ ತಳವಾರ ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯಲ್ಲಿ ಪಟ್ಟಣ ಗ್ರಾಮ ಪಂಚಾಯತ ಅಧ್ಯಕ್ಷ ವಿಜಯಕುಮಾರ ಪಾಳಾ, ತಾಲೂಕ ಪಂಚಾಯತ ಸದಸ್ಯೆ ವಿಠಾಬಾಯಿ ಹಿರೇಗೌಡರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯ ಚಂದ್ರಶೇಖರ ಪಾಟೀಲ, ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗಣ್ಣ ಕಂಡೂಜಿ, ಕೃಷಿ ಪಂಡಿತ ಪ್ರಶಸ್ತಿ ವಿಜೇತ ಗುಂಡಪ್ಪ ಧೂಳಗೊಂಡ, ಸಹಾಯಕ ಕೃಷಿ ಅಧಿಕಾರಿಗಳಾದ ಷಣ್ಮುಖಪ್ಪ ಜೇವರ್ಗಿ, ಶಿವಪುತ್ರ ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ರೈತರು ಪಾಲ್ಗೋಂಡಿದರು.
ಹೀಗಾಗಿ ಲೇಖನಗಳು News & photo Dt.28-09-2017
ಎಲ್ಲಾ ಲೇಖನಗಳು ಆಗಿದೆ News & photo Dt.28-09-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News & photo Dt.28-09-2017 ಲಿಂಕ್ ವಿಳಾಸ https://dekalungi.blogspot.com/2017/09/news-photo-dt28-09-2017.html
0 Response to "News & photo Dt.28-09-2017"
ಕಾಮೆಂಟ್ ಪೋಸ್ಟ್ ಮಾಡಿ