ಶೀರ್ಷಿಕೆ : ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ :
ಲಿಂಕ್ : ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ :
ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ :
ಶಾಸಕಾಂಗ ತನ್ನ ಸರ್ವಾಧಿಕಾರತ್ವವನ್ನು ಮೀಡಿಯಾಂಗದ ಮೇಲೆ ಹೇರಲು ಪ್ರಯತ್ನಿಸುತ್ತಲೇ ಇರುತ್ತದೆ. ಭಿನ್ನಾಭಿಪ್ರಾಯ ಹಾಗೂ ವಿರೋಧಗಳನ್ನು ಸಾಮ ಬೇಧ ದಂಡಾದಿಗಳಿಂದ ದಮನಿಸಲು ಪ್ರಯತ್ನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಟ್ಟಹಾಕಲು ಅನೇಕಾನೇಕ ಪಟ್ಟುಗಳನ್ನು ಹಾಕುತ್ತಲೇ ಇರುತ್ತದೆ. ರಾಜಕಾರಣಿಗಳ ಹಲ್ಕಾ ಕೆಲಸಗಳನ್ನು ಹುಡುಕುಡುಕಿ ‘ತೆಹಲ್ಕಾ’ ಪತ್ರಿಕೆಯಲ್ಲಿ ಬರೆದಾಗ ಅದರ ಸಂಪಾದಕನನ್ನು ಲೈಂಗಿಕ ಹಗರಣದಲ್ಲಿ ಸಿಲುಕಿ ಹಾಕಿಸಿ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಲಾಯಿತು. ಇತ್ತೀಚೆಗೆ ಸಂಘಪರಿವಾರದ ವಿರುದ್ಧದ ನಿಲುವನ್ನು ತೆಗೆದುಕೊಂಡ ಎನ್‌ಡಿ ಟಿವಿಯ ಮಾಲೀಕರ ಮನೆಯ ಮೇಲೆ ರೇಡ್ ಮಾಡಿಸಿ ಹೆದರಿಸಲು ಕೇಂದ್ರ ಸರಕಾರ ಪ್ರಯತ್ನಿಸಿತು. ಈಗ ಕರ್ನಾಟಕದಲ್ಲಿ ಇಬ್ಬರು ಪತ್ರಕರ್ತರ ಮೇಲೆ ರಾಜಕಾರಣಿಗಳ ಕುರಿತು ಮಾನಹಾನಿಕರ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಆದೇಶ ಹೊರಡಿಸಲಾಯಿತು. ಸರಕಾರ ಯಾವುದೇ ಪಕ್ಷದ್ದಾಗಿರಲಿ ತಮ್ಮ ಪರವಾಗಿ ಬರೆಯುವವವರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವುದು ಹಾಗೂ ತಮ್ಮ ವಿರುದ್ಧ ಬರೆಯುವವರಿಗೆ ಸರ್ವ ರೀತಿಯ ಕಿರುಕುಳಗಳನ್ನು ನೀಡುವುದು ನಿರಂತರವಾಗಿ ನಡೆದುಕೊಂಡೇ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಯುತ್ತಲೇ ಇದೆ.
ಈ ಹಿಂದೆ ಪತ್ರಿಕೆಗಳು ಆಳುವವರ ವಿರುದ್ಧ ಮಾನಹಾನಿಕರವಾಗಿ ಲೇಖನ ಪ್ರಕಟಿಸಿದ್ದರ ಬಗ್ಗೆ ಆಕ್ಷೇಪಣೆ ಇದ್ದವರು ನ್ಯಾಯಾಲಯಕ್ಕೆ ಹೋಗಿ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದರು. ಅಂತಹ ಹವರು ಕೇಸುಗಳು ಹತ್ತಾರು ವರ್ಷ ನ್ಯಾಯಾಲಯದ ಕಂಬಗಳನ್ನು ಸುತ್ತಿ ಸುಸ್ತಾಗಿ ಕೊನೆಗೊಮ್ಮೆ ಬಿದ್ದೇ ಹೋಗುತ್ತಿದ್ದವು. ಪ್ರಕಟಿತ ಲೇಖನ ಸುಳ್ಳಾಗಿದ್ದಲ್ಲಿ ಪತ್ರಿಕೆಯ ಸಂಪಾದಕರನ್ನು ಸದನಕ್ಕೋ ಇಲ್ಲವೇ ಸಂಸತ್ತಿಗೋ ಕರೆಯಿಸಿ ವಾಗ್ದಂಡನೆಯನ್ನು ವಿಧಿಸಲಾಗುತ್ತಿತ್ತು ಅಥವಾ ಕೆಲವೊಮ್ಮೆ ಛೀಮಾರಿ ಹಾಕಲಾಗುತ್ತಿತ್ತು. ಈಗ ಕರ್ನಾಟಕ ಸರಕಾರದ ಸದನ ಸಮಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಶಾಸಕರು ಕೊಟ್ಟ ದೂರನ್ನು ಆಧರಿಸಿ ತಾನೇ ವಿಚಾರಣೆ ಮಾಡಿ ಜೈಲು ಶಿಕ್ಷೆಯನ್ನೂ ವಿಧಿಸಿ ನ್ಯಾಯಾಲಯದ ಕೆಲಸವನ್ನು ತಾನೇ ಮಾಡಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಪತ್ರಿಕೋದ್ಯಮದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಹುನ್ನಾರವನ್ನು ಅರಂಭಿಸಿದೆ.
2017, ಜೂನ್ 22 ರಂದು ಕರ್ನಾಟಕ ಸರಕಾರದ ಸಭಾಧ್ಯಕ್ಷ (ಸ್ಪೀಕರ್) ಹಾಗೂ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾದ ಕೆ.ಬಿ.ಕೋಳಿವಾಡರವರು ಪತ್ರಿಕೋದ್ಯಮಕ್ಕೆ ಆಘಾತಕಾರಿಯಾದ ಆದೇಶವೊಂದನ್ನು ಹೊರಡಿಸಿದರು. ಅವಹೇಳನಕಾರಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸದನ ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸ್ಸಿನಂತೆ ಶಾಸಕರ ಹಕ್ಕು ಚ್ಯುತಿಯಾಯ್ತು ಎಂಬ ಕಾರಣಕ್ಕೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಈ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ತಕ್ಷಣ ಬಂಧಿಸಲು ಆದೇಶಿಸಿದರು. ಇದೂ ಸಹ ಏಕಪಕ್ಷೀಯವಾದ ತೀರ್ಮಾನವಾಗಿದೆ. ಹಕ್ಕು ಬಾಧ್ಯತಾ ಸಮಿತಿ ನೀಡಿರುವ ವರದಿಯನ್ನು ಕುರಿತು ಸದನದಲ್ಲಿ ಚರ್ಚಿಸದೇ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯಕರುಗಳ ಗಮನಕ್ಕೆ ತರದೇ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಮನಕಾರಿ ನಿಲುವಾಗಿದೆ.
ರವಿ ಬೆಳಗೆರೆಯವರ ಮೇಲೆ ಸಾಕಷ್ಟು ಜನರಿಗೆ ಅಸಮಾಧಾನವಿದೆ. ಹಲವಾರು ಪತ್ರಕರ್ತರಿಗೆ ಬೆಳಗೆರೆಯವರ ಅಕ್ಷರ ವ್ಯಾಪಾರದ ಒಳವ್ಯವಹಾರಗಳ ಬಗ್ಗೆ ಬೇಸರವಿದೆ. ತುಂಬಾ ವ್ಯಕ್ತಿಗತವಾಗಿ ನಿಂದನೆಗೆ ಇಳಿಯುವ ಈ ಟ್ಯಾಬ್ಲೈಡ್ ಪತ್ರಿಕೆಯ ಮೇಲೆ ಆಳುವ ವರ್ಗಗಳಿಗೆ ವಿಪರೀತ ಕೋಪವೂ ಇದೆ. ಅತಿರೇಕದ ವರದಿಗಳನ್ನು ರಂಜನೀಯವಾಗಿ ಹೇಳುವ ಈ ಪತ್ರಿಕೆಯ ದಾವಂತದಲ್ಲಿ ಹಲವಾರು ಪ್ರಜ್ಞಾವಂತರೂ ಸಹ ಅವಮಾನಕ್ಕೊಳಗಾಗಿದ್ದಾರೆ. ಈ ಪತ್ರಿಕೆಯ ವಿಕ್ಷಿಪ್ತ ವರದಿ, ಲೇಖನಗಳು ಸಮಾಜದಲ್ಲಿ ನಕಾರಾತ್ಮಕತೆಯನ್ನು ಹುಟ್ಟಿಸಲು ಪ್ರೇರಣೆಯಾಗಿವೆ ಎಂಬುದರಲ್ಲಿ ಸುಳ್ಳಿಲ್ಲಾ. ಆದರೆ.. ಯಾವುದೇ ಪತ್ರಿಕೆ ಏನನ್ನೇ ಬರೆಯಲಿ ಅದನ್ನು ಪ್ರಶ್ನಿಸಲು ನ್ಯಾಯಾಲಯದಲ್ಲಿ ಅವಕಾಶವಿದೆ. ಮಾನಹಾನಿಕರವಾಗಿ ವರದಿಯನ್ನು ಯಾವುದೇ ಪತ್ರಿಕೆ ಪ್ರಕಟಿಸಿದರೆ ಆ ಪತ್ರಿಕೆಯ ಸಂಪಾದಕರು ಹಾಗೂ ಮಾಲೀಕರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಬಹುದಾಗಿದೆ. ಆದರೆ.. ಈ ರೀತಿ ಶಾಸಕಾಂಗದ ಹಕ್ಕು ಬಾಧ್ಯತಾ ಸಮೀತಿಯೊಂದು ತಾನೇ ಏಕಪಕ್ಷೀಯವಾಗಿ ವಿಚಾರಣೆ ಮಾಡಿ ಶಿಕ್ಷೆಯನ್ನೂ ವಿಧಿಸಿರುವುದು ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ಯದ ಮೇಲೆ ನಡೆದ ಹಲ್ಲೆಯಾಗಿದೆ. ಇಷ್ಟಕ್ಕೂ ಜೈಲು ಶಿಕ್ಷೆ ವಿಧಿಸುವ ಅಧಿಕಾರವೇ ಶಾಸಕಾಂಗ ಸಮಿತಿಗಿಲ್ಲ. ತನ್ನ ಅಧಿಕಾರವನ್ನು ಅತಿರೇಕವಾಗಿ ಬಳಸಿಕೊಂಡು ಆರೋಪಿತರಿಗೆ ತಮ್ಮ ವಾದವನ್ನು ಮಂಡಿಸಲು ಅವಕಾಶವನ್ನೂ ಕೊಡದೇ ಜೈಲು ಶಿಕ್ಷೆಯನ್ನು ಪ್ರಕಟಿಸಿ ಬಂಧನಕ್ಕೆ ಆದೇಶ ಹೊರಡಿಸಿದ್ದು ಅಸಂವಿಧಾನಿಕ ಕ್ರಮವಾಗಿದೆ. ಮತ್ತೊಬ್ಬ ಪತ್ರಕರ್ತ ಅನಿಲ್ ರಾಜ್ ಸಮಿತಿಯ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದ್ದರೂ ಅವರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಇಂತಹ ಆದೇಶವನ್ನು ಪ್ಯಾಸಿಸ್ಟ್ ಮನಸ್ಥಿತಿಯ ಸರಕಾರ ಹೊರಡಿಸಿದ್ದರೆ ಅದು ಅಪೇಕ್ಷಣೀಯವಾಗಿರುತ್ತಿತ್ತು. ಆದರೆ ಜನಪರ ಸರಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರಕಾರದ ಆಡಳಿತ ಇರುವಾಗಲೇ ಪತ್ರಿಕಾ ಸ್ವಾತಂತ್ರ್ಯದ ದಮನವಾಗಿರುವುದನ್ನು ಪ್ರಗತಿಪರರೆಂದು ಅನ್ನಿಸಿಕೊಂಡವರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಾ. ಎಲ್ಲಾ ಆಳುವ ಪಕ್ಷಗಳ ಜಂಡಾ ಬೇರೆ ಬೇರೆಯಾಗಿದ್ದರೂ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಅಜೆಂಡಾ ಒಂದೇ ಎನ್ನುವುದು ಸಾಬೀತಾದಂತಾಯಿತು.
ಇಂದು ಈ ಇಬ್ಬರು ಪತ್ರಕರ್ತರಿಗೆ ಆದ ಜೈಲು ಶಿಕ್ಷೆ ನಾಳೆ ಬೇರೆ ನಿಷ್ಟುರ ಪತ್ರಕರ್ತರಿಗೆ ಆಗುವುದರಲ್ಲಿ ಸಂದೇಹವಿಲ್ಲಾ. ಪತ್ರಕರ್ತರಿಗೆ ಜೈಲು ಶಿಕ್ಷೆ ಜಾರಿ ಆಗಿದ್ದನ್ನು ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘಗಳು, ಪ್ರೆಸ್‌ಕ್ಲಬ್‌ಗಳು ಮತ್ತು ಅವುಗಳ ಘಟಕಗಳು ತೀವ್ರವಾಗಿ ವಿರೋಧಿಸಬೇಕಾಗಿತ್ತು, ಸರಕಾರದ ಮೇಲೆ ಒತ್ತಡ ತಂದು ಹಕ್ಕು ಚ್ಯುತಿ ನಿರ್ಣಯವನ್ನು ಹಿಂಪಡೆಯಬೇಕೆಂದು ಆಗ್ರಹಿಸಬೇಕಾಗಿತ್ತು, ಇಡೀ ಪತ್ರಿಕಾ ಮಾಧ್ಯಮವೇ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಶಾಸಕಾಂಗದ ಪ್ರಹಾರವನ್ನು ಒಕ್ಕೂರಲಿನಿಂದ ಪ್ರತಿಭಟಿಸಬೇಕಾಗಿತ್ತು. ಆದರೆ ಹಾಗಾಗಲೇ ಇಲ್ಲಾ. ಇದಕ್ಕೆ ಮೂಲ ಕಾರಣ ರವಿ ಬೆಳಗೆರೆಯ ಮೇಲಿರುವ ತೀವ್ರ ಅಸಮಾಧಾನ ಹಾಗೂ ಆಳುವವರನ್ನು ವಿರೋಧ ಕಟ್ಟಿಕೊಳ್ಳಲಾಗದ ಅನಿವಾರ್ಯತೆಗಳೇ ಆಗಿವೆ. ಹೀಗಾಗಿ ಎಲ್ಲರೂ ಜಾಣ ಮೌನಕ್ಕೆ ಜಾರಿಕೊಂಡರು. ಆದರೆ.. ದೂರದ ದೆಹಲಿಯಲ್ಲಿರುವ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಎನ್‌ಯುಜೆ)ವು “ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಮುಕ್ತ ದಾಳಿ” ಎಂದು ಪತ್ರಿಕಾ ಹೇಳಿಕೆ ನೀಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ಕೂಡಲೇ ಜೈಲು ಶಿಕ್ಷೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ನಿರ್ಣಯ ಮಂಡಿಸುವಂತೆ ಕರ್ನಾಟಕ ಸರಕಾರಕ್ಕೆ ಎನ್‌ಯುಜೆ ಹಾಗೂ ಅದರ ದಿಲ್ಲಿ ಘಟಕ “ದಿಲ್ಲಿ ಪತ್ರಕರ್ತರ ಸಂಘ” (ಡಿಜೆಎ) ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿತು. ‘ಎಡಿಟರ್ ಗಿಲ್ಡ್ ಆಪ್ ಇಂಡಿಯಾ’ ಕೂಡಾ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವುದನ್ನು ತೀವ್ರವಾಗಿ ವಿರೋಧಿಸಿ, ‘ಶಾಸಕಾಂಗದ ಈ ನಿರ್ಣಯವು ಸಂವಿಧಾನವು ಕೊಟ್ಟ ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹಲ್ಲೆ ಮಾಡಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ’ ಎಂದು ತನ್ನ ತೀಕ್ಷ್ಣ ಪ್ರತಿಭಟನೆಯನ್ನು ವ್ಯಕ್ತಪಡಿಸಿತು.
ಪ್ರತಿಯೊಬ್ಬ ಪತ್ರಕರ್ತರಿಗೂ ಹಾಗೂ ಪತ್ರಿಕೆಗಳಿಗೂ ಚುನಾಯಿತ ಪ್ರತಿನಿಧಿಗಳ ಕುರಿತು ವಿಶ್ಲೇಷನಾತ್ಮಕ ಲೇಖನಗಳನ್ನು ಬರೆಯುವ ಹಕ್ಕಿದೆ. ಹಾಗೂ ಜನರಿಂದ ಆಯ್ಕೆಯಾದವರು ಜನವಿರೋಧಿಯಾದಾಗ, ಜನತೆ ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಾಗ, ಇಲ್ಲವೇ ಬ್ರಷ್ಟಾಚಾರದಲ್ಲಿ ಭಾಗಿಯಾಗಿ ಫಲಾನುಭವಿಯಾದಾಗ ಅವರ ಬಗ್ಗೆ ಬರೆದು ಜನರಲ್ಲಿ ಜಾಗೃತಿ ಮೂಡಿಸಬೇಕಾದದ್ದು ಪತ್ರಕರ್ತರಾದವರ ಹೊಣೆಗಾರಿಕೆಯಾಗಿದೆ. ದುರುದ್ದೇಶಪೂರ್ವಕ ಮಾನಹಾನಿಕರ ವರದಿ ಲೇಖನಗಳಿದ್ದರೆ ಅದನ್ನು ಪ್ರಕಟಿಸಿದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಮ್ಮ ಪ್ರಾಮಾಣಿಕತೆಯನ್ನು ಸಾಕ್ಷಿ ಸಮೇತ ಸಾಬೀತು ಪಡಿಸಬಹುದಾಗಿದೆ. ಅದನ್ನೆಲ್ಲಾ ಬಿಟ್ಟು ಶಾಸಕರ ದೂರನ್ನು ಆಧರಿಸಿ ಹಕ್ಕು ಬಾಧ್ಯತಾ ಸಮಿತಿ ತಾನೇ ವಿಚಾರಣೆಯನ್ನು ಆರಂಭಿಸಿ ಜೈಲು ಶಿಕ್ಷೆಯನ್ನೂ ವಿಧಿಸುವುದು ಪಕ್ಕಾ ಸಂವಿಧಾನ ವಿರೋಧಿತನವಾಗಿದೆ. ಇನ್ನು ಮುಂದೆ ಶಾಸಕರುಗಳು ಮಾನಹಾನಿಯಾಯಿತೆಂದು ನ್ಯಾಯಾಲಯಗಳಿಗೆ ಹೋಗುವ ಅಗತ್ಯವೇ ಇಲ್ಲಾ. ತಮ್ಮ ವಿರುದ್ದವಾಗಿ ಬರೆದ ಪತ್ರಕರ್ತರನ್ನು ಜೈಲಿಗಟ್ಟಲು ಹಕ್ಕು ಬಾಧ್ಯತಾ ಸಮೀತಿಯೇ ಇದೆಯಲ್ಲಾ..? ಈ ರಾಜಕಾರಣಿಗಳೆಲ್ಲಾ ಸಾಚಾ ಅಂದರೆ ಯಾರೂ ನಂಬುವುದಿಲ್ಲಾ. ಸಂಪೂರ್ಣ ಪ್ರಾಮಾಣಿಕರಾದವರು ಈ ವ್ಯವಸ್ಥೆಯಲ್ಲಿ ಶಾಸಕರಾಗುವುದೂ ಕಷ್ಟಸಾಧ್ಯ. ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರುಪಯೋಗಗಳು ಬಹುತೇಕ ಜನಪ್ರತಿನಿಧಿಗಳ ದಿನಚರಿಯ ಭಾಗವೇ ಆಗಿವೆ. ಇಂತಹ ಸಂದರ್ಭದಲ್ಲಿ ಅವರ ಕರ್ಮಕಾಂಡಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯಲೇ ಬಾರದು, ಬರೆದರೆ ಜೈಲಿಗೆ ಕಳಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದರೆ ಸಂವಿಧಾನದತ್ತ ಪತ್ರಿಕಾ ಸ್ವಾತಂತ್ರ್ಯ ಉಳಿದೀತೆ?
ಕಾಂಗ್ರೆಸ್ ಸರಕಾರವಿದ್ದಾಗಲೇ ಹೀಗೆ ಪತ್ರಕರ್ತರನ್ನು ಜೈಲಿಗಟ್ಟುವುದು ಶುರುವಾದರೆ ಮುಂದೊಮ್ಮೆ ಪ್ಯಾಸಿಸ್ಟ್ ಸರಕಾರವೇನಾದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ವ್ಯವಸ್ಥೆಯ ಅವ್ಯವಸ್ಥೆಗಳ ಬಗ್ಗೆ ಬರೆಯುವ ಪತ್ರಕರ್ತರು ಹಾಗೂ ಪತ್ರಿಕೆಯ ಸಂಪಾದಕರುಗಳೆಲ್ಲಾ ಜೈಲಿನಲ್ಲಿರಬೇಕಾಗುತ್ತದೆ. ಇಲ್ಲವೇ ಈಗಾಗಲೇ ಇರುವ ಕೆಲವಾರು ರಾಜೀಕೋರ ಪತ್ರಕರ್ತರಂತೆ ಆಳುವ ಪಕ್ಷಗಳ ಹೊಗಳುಭಟ್ಟರಾಗಿ ಬಾಲ ಅಲ್ಲಾಡಿಸಬೇಕಾಗುತ್ತದೆ. ಇವೆರಡರಲ್ಲಿ ಯಾವುದೇ ಆದರೂ ಅದು ಸಾಮಾಜಿಕ ಸ್ವಾಸ್ತ್ಯವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲಾ. ಸಂವಿಧಾನದ ನಾಲ್ಕನೇ ಆಧಾರ ಸ್ಥಂಬವನ್ನು ದುರ್ಬಲಗೊಳಿಸುವ ಪ್ರಯತ್ನವಂತೂ ಜಾರಿಯಲ್ಲಿದೆ.
ಈಗ ಕನ್ನಡದಲ್ಲಿ ಕಳೆದ ಒಂದೂವರೆ ದಶಕದಿಂದ ವಾರ್ತಾಭಾರತಿ ದಿನಪತ್ರಿಕೆ ತುಂಬಾ ವಸ್ತುನಿಷ್ಟವಾಗಿ ಪ್ರಕಟಗೊಳ್ಳುತ್ತಿದೆ. ಅದರ ಲೇಖನಗಳು ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿಯೂ ಸಹ ಬಿತ್ತರಗೊಳ್ಳುತ್ತದೆ. ಆದರೆ ಸಂಘಪರಿವಾರದ ಟ್ರೋಲ್‌ಗಳು ಈಗ ವಾರ್ತಾಭಾರತಿಯ ಫೇಸ್‌ಬುಕ್ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಈ ಟ್ರೋಲ್‌ಗಳ ದ್ವೇಷಪೂರಿತ ಹಾವಳಿ ಎಷ್ಟಾಗಿದೆ ಎಂದರೆ ಫೇಸ್‌ಬುಕ್ ಸಂಸ್ಥೆ ವಾರ್ತಾಭಾರತಿಯ ಫೇಸ್‌ಬುಕ್ ಅಕೌಂಟನ್ನೇ ಬ್ಲಾಕ್ ಮಾಡಿಬಿಟ್ಟಿದೆ. ಈ ದಮನದ ವಿರುದ್ಧವೂ ಸಹ ಪತ್ರಕರ್ತರ ಹಿತಕಾಯಲು ಹುಟ್ಟಿದ, ಪತ್ರಿಕೋದ್ಯಮದ ಹಿತರಕ್ಷಣೆಯ ಹೊಣೆಗಾರಿಕೆ ಹೊತ್ತ ಯಾವ ಸಂಘಗಳೂ ಚಕಾರ ಎತ್ತಲಿಲ್ಲಾ. ಎನ್‌ಡಿಟಿವಿ ಇಂಡಿಯಾದ ಕಾರ್ಯನಿರ್ವಾಹಕ ಸಂಪಾಕದರಾದ ರವೀಶ್ ಕುಮಾರ್‌ರವರು ಈ ಪೇಸ್‌ಬುಕ್ ಬ್ಲಾಕ್ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಪ್ರೆಸ್ ಕ್ಲಬ್ ಆಪ್ ಇಂಡಿಯಾದಲ್ಲಿ ಪ್ರಸ್ತಾಪಿಸಿ ವಿರೋಧಿಸಿದರು. “ಈಗ ಅತ್ಯಂತ ಮಹತ್ವದ ಹುದ್ದೆಯಾದ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್‌ರವರೇ ಪತ್ರಕರ್ತರು ಅಪ್ರೀಯ ಸತ್ಯಗಳನ್ನು ಹೇಳಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ. ಸರಕಾರದ ಜೊತೆಗೆ ಪ್ರೀತಿಯಿಂದ ಮಾತಾಡಿ ಎಂದು ಕರೆಕೊಟ್ಟಿದ್ದಾರೆ. ಈಗ ಯಾವುದು ಸತ್ಯ ಹಾಗೂ ಯಾವುದು ಅಪ್ರೀಯ ಸತ್ಯ ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಇನ್ನು ಈ ಬೆದರಿಕೆಯ ಯೋಜನೆಗಳು ಯಾವುದೇ ಹೆದರಿಕೆ ಇಲ್ಲದೇ ಖುಲಂ ಖುಲ್ಲಾ ನಡೆಯುತ್ತವೆ..” ಎಂದು ಹೇಳಿದ ರವೀಶ್‌ರವರು ಆಳುವವರ ಸರ್ವಾಧಿಕಾರಿ ದಮನವನ್ನು ವಿವರಿಸಿದ್ದಾರೆ. ಈ ಸಾಮಾಜಿಕ ಜಾಲ ತಾಣ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಿವೆ. ಅಸಲಿ ವಿಚಾರಗಳು, ಮುಚ್ಚಿಟ್ಟ ಸತ್ಯಗಳು ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಗಿದೆ. ಈ ಮಾರ್ಗಗಳನ್ನೂ ಬಂದ್ ಮಾಡುವ ಹುನ್ನಾರಗಳು ನಡೆಯುತ್ತಿವೆ. ವಾರ್ತಾಭಾರತಿ ಫೇಸ್ ಬುಕ್ ಅಕೌಂಟ್ ಮಾಡಿದ್ದು ಕೇವಲ ಒಂದು ಸ್ಯಾಂಪಲ್ ಮಾತ್ರ. ಇನ್ನು ಮುಂದೆ ಆಳುವವರ ಜನವಿರೋಧಿತನ ಕುರಿತು ಬರೆದು ಜನತೆಯನ್ನು ಜಾಗೃತ ಮಾಡುವ ಎಲ್ಲರ ವಿರುದ್ಧ ಈ ಬ್ಲಾಕಾಸ್ತ್ರ ಪ್ರಯೋಗಗಳು ನಡೆಯುತ್ತವೆ. ಅಘೋಷಿತ ತುರ್ತು ಪರಿಸ್ಥಿತಿ ಯಾವುಯಾವುದೋ ರೂಪದಲ್ಲಿ ದೇಶದಲ್ಲಿ ಜಾರಿಯಲ್ಲಿದೆ. ಇನ್ನೂ ಕರಾಳ ದಿನಗಳು ಮುಂದಿವೆ.
-ಶಶಿಕಾಂತ ಯಡಹಳ್ಳಿ
ಹೀಗಾಗಿ ಲೇಖನಗಳು ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ :
ಎಲ್ಲಾ ಲೇಖನಗಳು ಆಗಿದೆ ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ : ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ : ಲಿಂಕ್ ವಿಳಾಸ https://dekalungi.blogspot.com/2017/06/98.html
0 Response to "ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ :"
ಕಾಮೆಂಟ್ ಪೋಸ್ಟ್ ಮಾಡಿ