ಶೀರ್ಷಿಕೆ : NEWS AND PHOTO DATE: 31-05-2017
ಲಿಂಕ್ : NEWS AND PHOTO DATE: 31-05-2017
NEWS AND PHOTO DATE: 31-05-2017
ಕಲಬುರಗಿಗೆ ಬಂತು ಸೈನ್ಸ್ ಎಕ್‍ಪ್ರೆಸ್:
*************************************
ಹವಾಮಾನ ಬದಲಾವಣೆಯ ಕುರಿತ ಮಾಹಿತಿಗಳ ಭಂಡಾರ ಅನಾವರಣ
*********************************************************************
ಕಲಬುರಗಿ,ಮೇ.31.(ಕ.ವಾ)-ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸುವ ಸೈನ್ಸ್ ಎಕ್ಸಪ್ರೆಸ್ ಕ್ಲೈಮೇಟ್ ಆ್ಯಕ್ಷನ್ ಸ್ಪೆಷಲ್ (SಇಅಂS) ವಿಶೇಷ ರೈಲು ತೆಲಂಗಾಣಾ ರಾಜ್ಯದ ಮಿರಿಲಾಗುಡಾದಿಂದ ಕಲಬುರಗಿ ರೈಲು ನಿಲ್ದಾಣಕ್ಕೆ ಬುಧವಾರ ಬೆಳಿಗ್ಗೆ ಆಗಮಿಸಿತು. ಜೂನ್ 2ರವರೆಗೆ ಈ ರೈಲು ಕಲಬುರಗಿ ರೈಲು ನಿಲ್ದಾಣದಲ್ಲಿ ತಂಗಲಿದೆ.
ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಸೈನ್ಸ್ ಎಕ್ಸ್‍ಪ್ರೆಸ್ ವಿಶೇಷ ರೈಲಿನ ಮ್ಯಾನೇಜರ್ ನಿತೀನ ತಿವಾನೆ, ಸೈನ್ಸ್ ಎಕ್ಸ್‍ಪ್ರೆಸ್ ಅಧಿಕಾರಿ ಸಂಕೇತ ರಾವತ್, ರೈಲ್ವೆ ಸಾರಿಗೆ ವಿಭಾಗದ ಇನ್ಸ್‍ಪೆಕ್ಟರ್ ಸಿ.ಎಲ್. ಮಿನಾ, ಸಿ.ಸಿ.ಐ. ಜೆ.ಆರ್. ಅಂಬೇಕರ್, ಸಾಮಾಜಿಕ ಕಾರ್ಯಕರ್ತ ಶರಣಪ್ಪ ಹದನೂರ ಮತ್ತಿತರರು ರೈಲು ನಿಲ್ದಾಣದಕ್ಕೆ ಆಗಮಿಸಿದ ವಿಶೇಷ ರೈಲಿಗೆ ಸಾಂಕೇತಿಕವಾಗಿ ಸ್ವಾಗತಿಸಿ ಜೀವ ವೈವಿಧ್ಯ ವಿಶೇಷ ಪ್ರದರ್ಶನದ ರೈಲು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಮಾತನಾಡಿ, ಪರಿಸರ ಬದಲಾವಣೆಯ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವ ಈ ಸೈನ್ಸ್ ಎಕ್ಸ್‍ಪ್ರೆಸ್ ವಿಶೇಷ ರೈಲು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿದೆಯಲ್ಲದೇ ಕಲಬುರಗಿ ಜಿಲ್ಲೆಯಲ್ಲಿ ವೈಜ್ಞಾನಿಕ ವಾತಾವರಣ ಸೃಷ್ಟಿಸಲು ಅನುಕೂಲವಾಗಲಿದೆ. ಕಲಬುರಗಿ ಜಿಲ್ಲೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ವಿಶೇಷ ರೈಲನ್ನು ವೀಕ್ಷಿಸಿ ಹೆಚ್ಚಿನ ಜ್ಞಾನಾರ್ಜನೆ ಪಡೆಯಬೇಕೆಂದು ಕೋರಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸುವ ಸೈನ್ಸ್ ಎಕ್ಸಪ್ರೆಸ್ ಕ್ಲೈಮೇಟ್ ಆ್ಯಕ್ಷನ್ ಸ್ಪೆಷಲ್ ವಿಶೇಷ ರೈಲು ವೀಕ್ಷಣೆಗೆ ಜಿಲ್ಲೆಯ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗುವುದು ಎಂದರು. ಮೊದಲನೇ ದಿನವಾದ ಇಂದು ಕಲಬುರಗಿ ನಗರದ ಅನೇಕ ಶಾಲೆಗಳ ಮಕ್ಕಳು, ಚಿಣ್ಣರು ಸೇರಿದಂತೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಈ ಅಪೂರ್ವ ಸೈನ್ಸ್ ಎಕ್ಸ್‍ಪ್ರೆಸ್ ಪ್ರದರ್ಶನ ನೋಡಿ ಖುಷಿಪಟ್ಟರು.
ಈ ಸೈನ್ಸ್ ಎಕ್ಸ್‍ಪ್ರೆಸ್ ವಿಶೇಷ ರೈಲು 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಿದ್ದು, 13 ಬೋಗಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪೈಕಿ 11 ಬೋಗಿಗಳನ್ನು ವಿದ್ಯಾರ್ಥಿ ಹಾಗೂ ಸಾರ್ವಜನಿಕರು ಪ್ರಾತ್ಯಕ್ಷಿಕೆ, ಭಿತ್ತಿಚಿತ್ರ ಮತ್ತು ಛಾಯಾಚಿತ್ರಗಳನ್ನು ಪ್ರದರ್ಶನ ವೀಕ್ಷಿಸಬಹುದಾಗಿದೆ. ಇದಲ್ಲದೇ ಕಿಡ್ಸ್ ಜೋನ್ ಎಂಬ ಒಂದು ಬೋಗಿ 4ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಮತ್ತು ಪರಿಸರದಲ್ಲಿನ ಆಟ ಮತ್ತು ಒಗಟುಗಳನ್ನು ತಿಳಿಯಲು ಹಾಗೂ ಜಾಯ್ ಆಫ್ ಸೈನ್ಸ್ ಲ್ಯಾಬ್ ಎಂಬ ಇನ್ನೊಂದು ಭೋಗಿಯಲ್ಲಿ ಇದೇ ವಿಷಯಗಳಿಗೆ ಸಂಬಂಧಿಸಿದಂತೆ 5 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಭಾರತ ಸರ್ಕಾರದ ರೈಲ್ವೆ ಇಲಾಖೆಯು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯೂಕೇಷನ್ ಹಾಗೂ ವಿಕ್ರಮ ಏ ಸರಾಭಾಯಿ ಕಮ್ಯುನಿಟಿ ಸೈನ್ಸ್ ಸೆಂಟರ್ ಇವುಗಳ ಸಹಯೋಗದೊಂದಿಗೆ ಈ ರೈಲು ದೇಶದಾದ್ಯಂತ ಸಂಚರಿಸುತ್ತಿದೆ. 2007 ರಿಂದ 2016ರ ವರೆಗೆ ಒಟ್ಟು 8 ಹಂತಗಳನ್ನು ಈ ರೈಲು ಸಂಚರಿಸಿದೆ. ಒಂಭತ್ತನೇ ಹಂತದ ಪ್ರಸಕ್ತ ಸೈನ್ಸ್ ಎಕ್ಸ್‍ಪ್ರೆಸ್-2 ರೈಲಿಗೆ 2017ರ ಫೆಬ್ರವರಿ 17 ರಂದು ದೆಹಲಿ ಸಫ್ದರ್‍ಜಂಗ್ ರೈಲು ನಿಲ್ದಾಣದಲ್ಲಿ ರೈಲ್ವೆ ಸಚಿವ ಸುರೇಶ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ|| ಹರ್ಷವರ್ಧನ್, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಅನೀಲ ಮಾಧವ ದವೆ ಚಾಲನೆ ನೀಡಿದ್ದರು.
ಈ ರೈಲು 2017ರ ಸೆಪ್ಟೆಂಬರ್ 8ರವರೆಗೆ ವಿವಿಧ ರಾಜ್ಯಗಳ 68 ರೈಲು ನಿಲ್ದಾಣಗಳಲ್ಲಿ ಸಂಚಾರಿ ಪ್ರದರ್ಶನ ನೀಡಿ 19000 ಕಿ.ಮೀ. ಸಂಚರಿಸಿ ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ಅಂತ್ಯಗೊಳ್ಳಲಿದೆ. ಈಗಾಗಲೇ 37 ರೈಲು ನಿಲ್ದಾಣಗಳಲ್ಲಿ ಅನನ್ಯ ವಸ್ತು ಪ್ರದರ್ಶನ ನೀಡಿರುವ ಸೈನ್ಸ್ ಎಕ್ಸಪ್ರೆಸ್ ಕಲಬುರಗಿ ರೈಲು ನಿಲ್ದಾಣದಲ್ಲಿ ಇಂದಿನಿಂದ ಜೂನ್2ರ ವರಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಾಯಂಕಾಲ 5ರ ವರಗೆ ಉಚಿತ ಪ್ರದರ್ಶನ ನೀಡಲಿದೆ. ಕರ್ನಾಟಕದಲ್ಲಿ ವೈಟ್‍ಫೀಲ್ಡ್ ರೈಲು ನಿಲ್ದಾಣದÀಲ್ಲಿ ಜೂನ್ 6ರಿಂದ 8ರವರೆಗೆ ಮತ್ತು ಕೆಂಗೇರಿ ರೈಲು ನಿಲ್ದಾಣದÀಲ್ಲಿ ಜೂನ್ 9ರಿಂದ 11ರವರೆಗೆ ಪ್ರದರ್ಶನ ಭಾಗ್ಯ ಸಿಗಲಿದೆ.
ಹವಾಮಾನ ಬದಲಾವಣೆಯ ಬಗೆಗಿನ ವೈಜ್ಞಾನಿಕ ಮಾಹಿತಿಗಳನ್ನು ಬಹು ಮಾಧ್ಯಮದ ಮೂಲಕ ನೀಡುವ ಈ ರೈಲಿನಲ್ಲಿ ಪರಿಸರ ಮೇಲಾಗುತ್ತಿರುವ ವಿವಿಧ ರೀತಿಯ ದುಷ್ಪರಿಣಾಮ ಇದರಿಂದ ಉಂಟಾಗುವ ಹವಾಮಾನ ಬದಲಾವಣೆ ಮತ್ತು ಅದರ ರೂಪಾಂತರಗಳು, ಹವಾಮಾನ ತಗ್ಗಿಸುವಿಕೆ ಹಾಗೂ ಸಮತೋಲನ ಕಾಪಾಡುವುದು, ಹವಾಮಾನ ಬದಲಾವಣೆ ಕುರಿತ ಭಾರತ ಕೈಗೊಂಡ ಕ್ರಮ, ಜಾಗತಿಕ ಹವಾಮಾನ ಬದಲಾವಣೆ ಕುರಿತು ಅಂತರರಾಷ್ಟ್ರೀಯ ನಾಯಕರ ಸಮಾಲೋಚನೆಗಳು, ಕೈಗೊಳ್ಳಬೇಕಾದ ಧನಾತ್ಮಕ ಕ್ರಿಯೆಗಳು, ನೈಸರ್ಗಿಕ ಸಂರಕ್ಷಣೆಗೆ ಜೈವಿಕ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇತ್ತೀಚಿನ ಬೆಳವಣಿಗೆಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಹಾಗೂ ವಿಜ್ಞಾನ ಕುರಿತು ಜ್ಞಾನರ್ಜನೆ ಬಯಸುವ ವಿದ್ಯಾರ್ಥಿಗಳಿಗೆ ಮಾಹಿತಿಯ ಭಂಡಾರ ಅನಾವರಣಗೊಳ್ಳಲಿದೆ.
ಇದಲ್ಲದೆ ಪರಿಸರಕ್ಕೆ ಹಾನಿಯಾಗದ ರೀತಿಯ ಪ್ರಾಚೀನ-ಬುಡಕಟ್ಟು ಜನರ ಜೀವನ ಕ್ರಮ, ಪರಿಸರಕ್ಕೆ ಹಾನಿಯಾಗುವ ಮಾನವ ನಿರ್ಮಿತ ಪರಿಸರ, ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯಾಗುವ ಸಚಿತ್ರ ಮಾಹಿತಿ, ಪ್ರಪಂಚದ ವಿವಿಧ ಭಾಗಗಳಲ್ಲಿ ವಾಸವಾಗಿರುವ ಜೀವ ಪ್ರಭೇದ, ಜೀವ ಜಗತ್ತಿನಲ್ಲಿ ಅಳಿದು ಹೋದ ಡೈನಾಸರ್‍ಗಳ ಬಗ್ಗೆ ಮಾಹಿತಿ ನೀಡುವ ಮಾದರಿಗಳು, ಹವಾಮಾನ ಬದಲಾವಣೆಯಿಂದ ಸೂರ್ಯನ ಕಿರಣದ ಪ್ರಖರತೆ ಮನುಷ್ಯನ ಮೇಲಾಗುವ ಪರಿಣಾಮ ಕುರಿತ ಮಾಹಿತಿ, ಸೌರಶಕ್ತಿ ಬಳಕೆ, ನೀರು ಮತ್ತು ವಿದ್ಯುತ್ತಿನ ಮಿತ ಬಳಕೆ, ಸೌರಶಕ್ತಿ ಮತ್ತು ನವೀಕರಿಸಬಹುದಾಧ ಇಂಧನ ಶಕ್ತಿಯ ಮಾಹಿತಿ ಹಾಗೂ ಅನೇಕ ಸರಳ ವಿಜ್ಞಾನದ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ರೈಲಿನ ಮ್ಯಾನೇಜರ್ ನಿತಿನ್ ತಿವಾನೆ ಮತ್ತು ಅವರ ತಂಡ ಶಾಲಾ ಮಕ್ಕಳಿಗೆ ಎಳೆ ಎಳೆಯಾಗಿ ಮಾಹಿತಿ ನೀಡುತ್ತಾರೆ.
ಜಾಗತಿಕ ಹವಾಮಾನ ಬದಲಾವಣೆ ಕುರಿತು ಮಾಹಿತಿ ನೀಡುವ ಸೈನ್ಸ್ ಎಕ್ಸ್‍ಪ್ರೆಸ್ ರೈಲು ಹಿಂದುಳಿದ ಭಾಗವಾದ ಕಲಬುರಗಿ ರೈಲು ನಿಲ್ದಾಣಕ್ಕೆ ಬಂದಿದ್ದು, ಇಲ್ಲಿನ ಜನರ-ವಿದ್ಯಾರ್ಥಿಗಳ ಸೌಭಾಗ್ಯ. ನೀರು, ಮರ, ಜೀವ-ಜಂತು ಮತ್ತು ವಿಜ್ಞಾನದ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಪ್ರಯತ್ನ ಇದಾಗಿದೆ. ಮಕ್ಕಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ವಿಶೇಷ ಪ್ರದರ್ಶನ ವೀಕ್ಷಿಸಬೇಕು. ಸ್ಥಳೀಯ ಸಂಘ-ಸಂಸ್ಥೆಗಳು ಬೀದಿ ಮಕ್ಕಳನ್ನು ಸಹ ಈ ಪ್ರದರ್ಶನಕ್ಕೆ ಕರೆದುಕೊಂಡು ಬಂದು ತೋರಿಸಬೇಕು.
ಸೈನ್ಸ್ ಎಕ್ಸ್‍ಪ್ರೆಸ್ ಪ್ರವೇಶ ಉಚಿತ:
-----------------------------------
ಸೈನ್ಸ್ ಎಕ್ಸ್‍ಪ್ರೆಸ್ ರೈಲು ವೀಕ್ಷಣೆ ಉಚಿತವಾಗಿದೆ. ಬೋಗಿಯಲ್ಲಿ ಮೊಬೈಲ್, ಕ್ಯಾಮೆರಾ, ಬ್ಯಾಗ್, ಬೆಂಕಿ ಪೊಟ್ಟಣ, ಸಿಗರೇಟ್, ಬೀಡಿ, ತಂಬಾಕು ಉತ್ಪನ್ನದ ವಸ್ತುಗಳು, ನೀರಿನ ಬಾಟಲಿ, ಯಾವುದೇ ದ್ರವ ವಸ್ತು, ಚೂಪಾದ ವಸ್ತುಗಳನ್ನು ಒಯ್ಯುವಂತಿಲ್ಲ.
ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಪ್ರಾಶಸ್ತ್ಯ ನೀಡಲು ಕರೆ
*******************************************************
ಕಲಬುರಗಿ,ಮೇ.31.(ಕ.ವಾ)-ಪ್ರತಿಯೊಬ್ಬ ಮನುಷ್ಯನ ನೆಮ್ಮದಿಯ ಮತ್ತು ಉತ್ತಮ ಜೀವನಕ್ಕೆ ಆರೋಗ್ಯವೇ ಭಾಗ್ಯವಾಗಿದ್ದು, ಈ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಹೇಳಿದರು.
ಅವರು ಬುಧವಾರ ಕಲಬುರಗಿಯಲ್ಲಿ ಆಯೋಜಿಸಿದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ 1988ರ ಮೇ 31ರಿಂದ ಪ್ರತಿ ವರ್ಷ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ತಿಳುವಳಿಕೆ ನೀಡುವ ಕಾರ್ಯ ನಡೆದಿದೆ ಎಂದರು.
ಸಮಾಜದ ಬಹುದೊಡ್ಡ ಆಸ್ತಿಯಾಗಿರುವ ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುವುದರೊಂದಿಗೆ ಯಾವುದೇ ದುಶ್ಚಟಕ್ಕೊಳಗಾಗದೇ ಜೀವನ ಪರ್ಯಂತ ಉತ್ತಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಆರೋಗ್ಯ ಹಣದಿಂದ ಖರೀದಿಸುವ ವಸ್ತುವಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ|| ಬಿ.ಎನ್. ಜೋಶಿ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯದಲ್ಲಿ ಸಮಾಜದಲ್ಲಿರುವ ಪ್ರತಿಯೊಬ್ಬರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದಲ್ಲದೇ ಆರೋಗ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಚ್.ಸಿ.ಜಿ. ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ|| ನಂದೀಶಕುಮಾರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕ್ಯಾನ್ಸರ್ ರೋಗದಿಂದ ಉಂಟಾಗುವ ದುಷ್ಪರಿಣಾಮ ಮತ್ತು ಕ್ಯಾನ್ಸರ್ ರೋಗ ತಡೆಗೆ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|| ಶಿವಶರಣಪ್ಪ ಭೂಸನೂರ ಸ್ವಾಗತಿಸಿದರು. ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರ್ತಿ ಸುಜಾತಾ ಜೆ. ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.
ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಕರೆ
**********************************
ಕಲಬುರಗಿ,ಮೇ.31.(ಕ.ವಾ)-ಮಾನವ ಸಂಕುಲದ ಅಭಿವೃದ್ಧಿಯಲ್ಲಿ ಸ್ವಚ್ಛತೆ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲ ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಜಗನ್ನಾಥ ಪ್ರಸಾದ ಉದ್‍ಗಾತಾ ತಿಳಿಸಿದರು.
ಅವರು ಬುಧವಾರ ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಯೋಗದೊಂದಿಗೆ ಕಲಬುರಗಿ ರಾಜಾಪುರ-ಕುಸನೂರ ರಸ್ತೆಯಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರವನ್ನು ಸ್ವಚ್ಛವಾಗಿಡುವುದು ಕೇವಲ ಸರ್ಕಾರದ ಕೆಲಸವಲ್ಲ. ಎಲ್ಲರೂ ಜತೆಗೂಡಿ ದಿನಂಪ್ರತಿ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ಕ್ರಿಯಾಶೀಲರಾಗಬೇಕು. ನಾವು ವಾಸಿಸುವ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರದಿದ್ದರೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡಿ ಮಾನವನ ಅಭಿವೃದ್ಧಿಗೆ ಮಾರಕವಾಗುತ್ತದೆ. ಇದರಿಂದ ಸಾಮಾಜಿಕ ಜೀವನ, ಪರಿಸರ ಹಾಳಾಗುತ್ತದೆ. ತಮ್ಮ ತಮ್ಮ ಮನೆ, ಕಾರ್ಯಾಲಯ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಲು ಸಮಯವನ್ನು ಕಾಯ್ದಿರಿಸಿಕೊಳ್ಳಬೇಕು. ಈ ಕುರಿತು ಎಲ್ಲರೂ ಪ್ರತಿಜ್ಞೆ ಮಾಡುವ ಮೂಲಕ ಪರಿಸರವನ್ನು ಸ್ವಚ್ಛಗೊಳಿಸಬೇಕೆಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ನಾಗಶೆಟ್ಟಿ ಜಿ. ಗಂದಗೆ ಮಾತನಾಡಿ, ಮಹಾನಗರ ಪಾಲಿಕೆಯವರು ಬೀದಿ, ರಸ್ತೆ ಸ್ವಚ್ಛಗೊಳಿಸುತ್ತಾರೆ. ಮನೆಯಲ್ಲಿ ಉತ್ಪನ್ನವಾಗುವ ಘನತ್ಯಾಜ್ಯ ವಸ್ತುಗಳನ್ನು ಅಲ್ಲಿ ಇಲ್ಲಿ ಬಿಸಾಡದೇ ನಗರ ಪಾಲಿಕೆಯವರು ಗುರುತಿಸಿರುವ ಸ್ಥಳದಲ್ಲಿ ಸಂಗ್ರಹಿಸಬೇಕು. ಎಲ್ಲರೂ ತಮ್ಮ ಮನೆ ಹಾಗೂ ಕಚೇರಿಗಳ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಸಹಕರಿಸಬೇಕು. ಆರೋಗ್ಯದಿಂದ ಇರಬೇಕಾದರೆ ಸ್ವಚ್ಛತೆ ಅತೀ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಯ ಶಿರಸ್ತೇದಾರ ಮಲ್ಲಿಕಾರ್ಜುನ ಒಡೆಯರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಜೂನ್ 2ರಂದು ಚಿತ್ತಾಪುರ ಸರ್ಕಾರಿ ಐಟಿಐ ಕಟ್ಟಡದ ಅಡಿಗಲ್ಲು
*************************************************************
ಕಲಬುರಗಿ,ಮೇ.31.(ಕ.ವಾ.)-ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ನಬಾರ್ಡ್ ಯೋಜನೆಯಡಿಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ನಿರ್ಮಿಸಲಾಗುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡದ ಅಡಿಗಲ್ಲು ಸಮಾರಂಭ ಜೂನ್ 2ರಂದು ಬೆಳಿಗ್ಗೆ 10 ಗಂಟೆಗೆ ಚಿತ್ತಾಪುರದಲ್ಲಿ ಜರುಗಲಿದೆ.
ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರ ಘನ ಉಪಸ್ಥಿತಿಯಲ್ಲಿ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಅವರು ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸುವರು.
ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಚಿತ್ತಾಪುರ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಭೀಮರಾವ ಹೊತಿನಮಡಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪೋ|| ಪಾಟೀಲ, ಪುರಸಭೆ ಉಪಾಧ್ಯಕ್ಷ ಮಹ್ಮದ್ ರಸುಲ್‍ಸಾಬ್ ಮೌಲಾನಸಾಬ್ ಮುಸ್ತಫಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜೂನ್ 1ರಂದು ಬಾಲ್ಯ ವಿವಾಹ ನಿಷೇಧ ಅರಿವು ಜಾಥಾ ಕಾರ್ಯಕ್ರಮ
******************************************************************
ಕಲಬುರಗಿ,ಮೇ.31.(ಕ.ವಾ)-ಮಕ್ಕಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶ್ವ ಸೇವಾ ಮಿಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬಾಲ್ಯ ವಿವಾಹ ನಿಷೇಧ ಮತ್ತು ಶಾಲೆ ಕಡೆ ನನ್ನ ನಡೆ ಕುರಿತು ಜಾಗೃತಿ ಮೂಡಿಸುವ ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಹಮ್ಮಿಕೊಂಡ ಸಂಚಾರಿ ವಾಹನ ಜಾಥಾ ಕಾರ್ಯಕ್ರಮಕ್ಕೆ ಜೂನ್ 1ರಂದು ಬೆಳಗಿನ 9 ಗಂಟೆಗೆ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅವರು ಮಿನಿ ವಿಧಾನಸೌಧದಲ್ಲಿ ಚಾಲನೆ ನೀಡುವರು ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಿಳಿಸಿದ್ದಾರೆ.
ಸಂಚಾರಿ ವಾಹನ ಆಗಮಿಸುವ ಸ್ಥಳ ಹಾಗೂ ಸಮಯ ವಿವರ ಇಂತಿದೆ. ರೈಲ್ವೆ ನಿಲ್ದಾಣ-ಬೆಳಿಗ್ಗೆ 9.30 ಗಂಟೆ. ತಾರಫೈಲ್-ಬೆಳಿಗ್ಗೆ 10 ಗಂಟೆ. ರೆಹಮತನಗರ-ಬೆಳಿಗ್ಗೆ 10.30 ಗಂಟೆ. ಕೇಂದ್ರ ಬಸ್ ನಿಲ್ದಾಣ-ಬೆಳಿಗ್ಗೆ 11 ಗಂಟೆÉ. ಎಂ.ಎಸ್.ಕೆ. ಮಿಲ್-ಬೆಳಿಗ್ಗೆ 11.30 ಗಂಟೆ. ಬಸವನಗರ-ಮಧ್ಯಾಹ್ನ 12 ಗಂಟೆ. ಸುಪರ ಮಾರ್ಕೆಟ್-ಮಧ್ಯಾಹ್ನ 12.30 ಗಂಟೆ. ಹುಮನಾಬಾದ್ ಬೇಸ್-ಮಧ್ಯಾಹ್ನ 1 ಗಂಟೆ. ಸಂಜೀವನಗರ-ಮಧ್ಯಾಹ್ನ 1.30 ಗಂಟೆ ಹಾಗೂ ರಾಜೀವಗಾಂಧಿ ನಗರ-ಮಧ್ಯಾಹ್ನ 2 ಗಂಟೆ.
ಕಲಬುರಗಿ ಜಿಲ್ಲೆಗೆ ಹೆಚ್‍ಕೆಆರ್‍ಡಿಬಿಯ 218.97 ಕೋಟಿ ರೂ. ಅನುದಾನ
*********************************************************************
ಕಲಬುರಗಿ,ಮೇ.31.(ಕ.ವಾ)-ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಆರು ಜಿಲ್ಲೆಗಳಿಗೆ 2017-18ನೇ ಸಾಲಿನಲ್ಲಿ ಒಟ್ಟು 750 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ ಕಲಬುರಗಿ ಜಿಲ್ಲೆಗೆ ಒಟ್ಟು 218.97 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಬುಧವಾರ ಕಲಬುರಗಿಯಲ್ಲಿ ಹೆಚ್.ಕೆ.ಆರ್.ಡಿ.ಬಿ. ಯೋಜನೆಯ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಬುರಗಿ ಜಿಲ್ಲೆಗೆ ಒದಗಿಸಿದ ಒಟ್ಟು ಅನುದಾನದಲ್ಲಿ ಸಾಂಸ್ಥಿಕ ಯೋಜನೆಗಳಿಗಾಗಿ 65.69 ಕೋಟಿ ರೂ. ಮತ್ತು ಮೂಲಭೂತ ಸೌಕರ್ಯ ಯೋಜನೆಗಳಿಗಾಗಿ 153.28 ಕೋಟಿ ರೂ. ನೀಡಲಾಗಿದೆ. ಈ ಪೈಕಿ ಎಸ್.ಸಿ.ಪಿ. ಯೋಜನೆಯಡಿ 66.03 ಕೋಟಿ ರೂ. ಮತ್ತು ಟಿ.ಎಸ್.ಪಿ. ಯೋಜನೆಯಡಿ 6.94 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯ ಎಲ್ಲ ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು ಹಾಗೂ ಇತರರು 2017-18ನೇ ಸಾಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಗಳನ್ನು ತುರ್ತಾಗಿ ಸಲ್ಲಿಸಿದರೆ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲು ಅನುಕೂಲವಾಗುತ್ತದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ, ವಿಧಾನ ಪರಿಷತ್ ಶಾಸಕರಾದ ಕೆ.ಬಿ. ಶಾಣಪ್ಪ, ಶರಣಪ್ಪ ಮಟ್ಟೂರ, ಬಿ.ಜಿ. ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಸಲಹಾ ಸಮಿತಿ ಇತರ ಸದಸ್ಯರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸೇಡಂ ಐ.ಟಿ.ಐ. ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*********************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2017-18ನೇ ಸಾಲಿನ ಎಸ್.ಸಿ.ವಿ.ಟಿ ಅಡಿಯಲ್ಲಿ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ವೃತ್ತಿಯ ಪ್ರವೇಶಕ್ಕಾಗಿ ಅರ್ಹ ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಮಲ್ಲಣ್ಣ ತಿಳಿಸಿದ್ದಾರೆ.
ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿರ ಮೂಲಕ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 12 ಆಗಿರುತ್ತದೆ. ಪ್ರವೇಶ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಹೆಚ್ಚಿನ ಮಾಹಿತಿಗೆ ಮೇಲ್ಕಂಡ ಸಂಸ್ಥೆಯ ಪ್ರಾಚಾರ್ಯರನ್ನು ಹಾಗೂ ಮೊಬೈಲ್ ಸಂಖ್ಯೆ 9449123886, 9900634282ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಬುರಗಿ ಮಹಿಳಾ ಐ.ಟಿ.ಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
********************************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ 2017-18ನೇ ಸಾಲಿಗೆ ಎನ್.ಸಿ.ವಿ.ಟಿ. ಯೋಜನೆಯಡಿ ಎರಡು ವರ್ಷದ ಎಲೆಕ್ಟ್ರಿಶಿಯನ್, ಫಿಟ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹಾಗೂ ಒಂದು ವರ್ಷದ ಕಂಪ್ಯೂಟರ್ ಹಾರ್ಡ್‍ವೇರ್ ಆ್ಯಂಡ್ ನೆಟ್‍ವರ್ಕಿಂಗ್ ಮೆಂಟೆನೆನ್ಸ್ ಹಾಗೂ ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವೃತ್ತಿಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಪಾಸಾದ (ಮಹಿಳೆ ಮತ್ತು ಪುರುಷ) ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಪ್ರವೇಶ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿರ ಮೂಲಕ ಅರ್ಜಿ ಸಲ್ಲಿಸಬೇಕು. ಮಹಿಳಾ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಅದೇ ರೀತಿ ಪಿ.ಪಿ.ಪಿ. ಯೋಜನೆಯಡಿಯಲ್ಲಿಯೂ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರ ಪ್ರವೇಶ (ಡೊನೇಶನ್ ಸೀಟ್) ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಮಹಿಳಾ ತರಬೇತಿ ಸಂಸ್ಥೆಯ ಕಚೇರಿಯನ್ನು ದೂರವಾಣಿ ಸಂಖ್ಯೆ 08472-236753 ಅಥವಾ ಕಿರಿಯ ತರಬೇತಿ ಅಧಿಕಾರಿ ಶರಣಬಸಪ್ಪ ಕುಂಬಾರ ಮೊಬೈಲ್ ಸಂಖ್ಯೆ 9972910066ನ್ನು ಸಂಪರ್ಕಿಸಲು ಕೋರಿದೆ.
ಐ.ಟಿ.ಐ. ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿನ 12 ಸರ್ಕಾರಿ ಮತ್ತು 09 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2017-18ನೇ ಸಾಲಿನ ಶೈಕ್ಷಣಿಕ ಸಾಲಿನ ಕುಶಲಕರ್ಮಿ ತರಬೇತಿ ಯೋಜನೆಯಡಿ ಡಿ.ಜಿ.ಇ.ಟಿ. ನವದೆಹಲಿಯಿಂದ ಸಯೋಜನೆ ಪಡೆದ (ಎನ್.ಸಿ.ವಿ.ಟಿ.) ಹಾಗೂ ರಾಜ್ಯ ವೃತ್ತಿ ಪರಿಷತ್ತಿನಿಂದ (ಎಸ್.ಸಿ.ವಿ.ಟಿ.) ಸಂಯೋಜನೆ ಪಡೆದ ವಿವಿಧ ವೃತ್ತಿ ಹಾಗೂ ಘಟಕಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ (ಪುರುಷ) ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಸ್.ಎನ್. ಪಾಂಚಾಳ ತಿಳಿಸಿದ್ದಾರೆ.
ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಿಂದ ಇಲಾಖೆಯ ವೆಬ್‍ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿರ ಮೂಲಕ ಯಾವುದೇ ಸೈಬರ್ ಕೇಂದ್ರದಿಂದ ಅಥವಾ ಹತ್ತಿರದ ಸರ್ಕಾರಿ/ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2017ರ ಜೂನ್ 12ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು ಹಾಗೂ ಸಂಸ್ಥೆಯ ದೂರವಾಣಿ ಸಂಖ್ಯೆ 08472-278611ನ್ನು ಸಂಪರ್ಕಿಸಲು
ಚಿಂಚೋಳಿ: ಮೆಟ್ರಿಕ್ ನಂತರ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*****************************************************************
ಕಲಬುರಗಿ,ಮೇ.30.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಚಿಂಚೋಳಿ ತಾಲೂಕಿನ ನಡೆಸಲಾಗುತ್ತಿರುವ ಮೆಟ್ರಿಕ್ ನಂತರ ಬಾಲಕ ಬಾಲಕಿಯರ ವಸತಿ ನಿಲಯಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಬಿ.ಎ., ಬಿ.ಕಾಂ. ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಸತಿ ನಿಲಯದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಫಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಸ್ಥಾನ ಮತ್ತು ಉಳಿದ ಶೇ. 25ರಷ್ಟು ಪ.ಜಾ. ಮತ್ತು ಪ.ಪಂ. ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.
ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಪದವಿಪೂರ್ವ ಕಾಲೇಜಿನ ಎದುರುಗಡೆಯಿರುವ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಅಥವಾ ಸಂಬಂಧಪಟ್ಟ ವಸತಿ ನಿಲಯ, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಿಂದ ಪಡೆದು ಭರ್ತಿ ಮಾಡಿ ಜೂನ್ 30ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 9845848048, 9591867111, 9901739071ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ವಸತಿ ನಿಲಯಗಳ ವಿವರ ಇಂತಿದೆ. ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ಸುಲೇಪೇಟ್, ಸುಲೇಪೇಟ್ (ಮೇಲ್ದರ್ಜೆ), ಚಿಂಚೋಳಿ. ಬಾಲಕಿಯರ ಮೆಟ್ರಿಕ್ ನಂತರ ವಸತಿ ನಿಲಯ ಚಿಂಚೋಳಿ ಮತ್ತು ಚಂದಾಪುರ(ಮೇಲ್ದರ್ಜೆ).
ಅಫಜಲಪುರ: ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
********************************************************
ಕಲಬುರಗಿ,ಮೇ.31.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಫಜಲಪುರ ತಾಲೂಕಿನ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ/ನಂತರ ಬಾಲಕ ಬಾಲಕಿಯರ ವಸತಿ ನಿಲಯಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ನಂತರ ವಸತಿ ನಿಲಯ ಪ್ರವೇಶಕ್ಕಾಗಿ ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಬಿ.ಎ., ಬಿ.ಕಾಂ. ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಸತಿ ನಿಲಯದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಫಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಸ್ಥಾನ ಮತ್ತು ಉಳಿದ ಶೇ. 25ರಷ್ಟು ಪ.ಜಾ. ಮತ್ತು ಪ.ಪಂ. ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.
ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಅಫಜಲಪುರ ಅಂಚೆ ಕಚೇರಿ ಪಕ್ಕದಲ್ಲಿರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ಆಯಾ ವಸತಿ ನಿಲಯದ ನಿಲಯ ಪಾಲಕರಿಂದ ಪಡೆದು ಭರ್ತಿ ಮಾಡಿ ಜೂನ್ 15ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9535496381, 9611674030ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ವಸತಿ ನಿಲಯಗಳ ವಿವರ ಇಂತಿದೆ. ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ಅಫಜಲಪುರ, ಬಾಲಕಿಯರ ಮೆಟ್ರಿಕ್ ನಂತರ ವಸತಿ ನಿಲಯ ಅಫಜಲಪುರ. ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯ ಆತನೂರ, ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯ ಕರಜಗಿ.
ಕಲಬುರಗಿ: ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
******************************************************
ಕಲಬುರಗಿ,ಮೇ.30.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಲಬುರಗಿ ತಾಲೂಕಿನ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ/ನಂತರ ಬಾಲಕ ಬಾಲಕಿಯರ ವಸತಿ ನಿಲಯಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ನಂತರ ವಸತಿ ನಿಲಯ ಪ್ರವೇಶಕ್ಕಾಗಿ ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಬಿ.ಎ., ಬಿ.ಕಾಂ. ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಫಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಸ್ಥಾನ ಮತ್ತು ಉಳಿದ ಶೇ. 25ರಷ್ಟು ಪ.ಜಾ. ಮತ್ತು ಪ.ಪಂ. ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.
ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಕಲಬುರಗಿ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಅಥವಾ ಆಯಾ ವಸತಿ ನಿಲಯದ ನಿಲಯ ಪಾಲಕರಿಂದ ಪಡೆದು ಭರ್ತಿ ಮಾಡಿ ಜೂನ್ 15ರೊಳಗಾಗಿ ಸಲ್ಲಿಸಬೇಕು. ವಸತಿ ನಿಲಯಗಳ ವಿವರ ಇಂತಿದೆ. ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ರಿಂಗ್ ರೋಡ ರಾಮಮಂದಿರ ಕಲಬುರಗಿ, ಕೋಟನೂರ(ಡಿ) ಕಲಬುರಗಿ, ಸ್ನಾತಕೋತ್ತರ ವಿಶ್ವವಿದ್ಯಾಲಯ ಕಲಬುರಗಿ, ಮದೀನಾ ಕಾಲೋನಿ ಕಲಬುರಗಿ, ಬಾಲಕಿಯರ ಮೆಟ್ರಿಕ್ ನಂತರ ವಸತಿ ನಿಲಯ ಮದೀನಾ ಕಾಲೋನಿ ಕಲಬುರಗಿ, ಸ್ನಾತಕೋತ್ತರ ವಿಶ್ವವಿದ್ಯಾಲಯ ಕಲಬುರಗಿ, ಎನ್.ಜಿ.ಓ. ಕಾಲೋನಿ ಕಲಬುರಗಿ, ಮಿಲ್ಲತ ನಗರ ಕಲಬುರಗಿ. ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ತಾವರಗೇರಾ.
ಜೂನ್ 1ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಮೇ.31.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಸಿದ್ದೇಶ್ವರ ಫೀಡರ್ ವ್ಯಾಪ್ತಿಯ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಜೂನ್ 1ರಂದು ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
ಹೀಗಾಗಿ ಲೇಖನಗಳು NEWS AND PHOTO DATE: 31-05-2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 31-05-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 31-05-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-31-05-2017.html
0 Response to "NEWS AND PHOTO DATE: 31-05-2017"
ಕಾಮೆಂಟ್ ಪೋಸ್ಟ್ ಮಾಡಿ