ಶೀರ್ಷಿಕೆ : ಜಯಶ್ರೀ ದೇಶಪಾಂಡೆಯವರ ಸಾಹಿತ್ಯ-----ಭಾಗ ೨
ಲಿಂಕ್ : ಜಯಶ್ರೀ ದೇಶಪಾಂಡೆಯವರ ಸಾಹಿತ್ಯ-----ಭಾಗ ೨
ಜಯಶ್ರೀ ದೇಶಪಾಂಡೆಯವರ ಸಾಹಿತ್ಯ-----ಭಾಗ ೨
ಜಯಶ್ರೀ ದೇಶಪಾಂಡೆಯವರ ಸಾಹಿತ್ಯ ವೈವಿಧ್ಯಮಯವಾದದ್ದು. ಈ ವೈವಿಧ್ಯವು ಕಥಾನಕದ ವೈವಿಧ್ಯವೂ ಅಹುದು, ಭಾಷೆಯ ವೈವಿಧ್ಯವೂ ಹೌದು ಹಾಗು ಶೈಲಿಯ ವೈವಿಧ್ಯವೂ ಅಹುದು. ‘ಮಾಯಿ ಕೆಂದಾಯಿ’ ಎನ್ನುವ ಅವರ ಸ್ಮೃತಿಸಂಗ್ರಹದಲ್ಲಿ ಜಯಶ್ರೀಯವರ ಕಥಾನಕವು ಸರಳವಿದೆ ಹಾಗು ಆಪ್ತವಾಗಿದೆ. `ಮಾಯಿ ಕೆಂದಾಯಿ’ಯಲ್ಲಿ ಓದುಗನ ಅನುಭವಕ್ಕೆ ಬರುವುದು ಬಾಲಕಿಯೋರ್ವಳ ಮುಗ್ಧತೆ, ಹುಮ್ಮಸ್ಸು, ಅವಳ ಪರಿಸರದಲ್ಲಿಯ ಆಪ್ತತೆ ಹಾಗು ಮಾಯಿಯ ಅಂತಃಕರಣ. ಅವರ ಮನೆಯ ಕೆಂದು ಆಕಳಿಗೂ ಸಹ ಅವರು ತಾಯಿ ಎಂದೇ ತಿಳಿದು ‘ಕೆಂದಾಯಿ’ ಎಂದು ಕರೆಯುತ್ತಾರೆ. (‘ಆಯಿ =ತಾಯಿ’). ಆದರ ‘ಸ್ಥವಿರ ಜಂಗಮಗಳಾಚೆ’ ಎನ್ನುವ ಕಥಾಸಂಗ್ರಹದಲ್ಲಿರುವ ಕಥೆಗಳು ಸರಳ ಕಥೆಗಳಲ್ಲ. ಈ ಕಥೆಗಳು ನೇರವಾದ ಸರಳರೇಖೆಯಲ್ಲಿ ಹೋಗುವುದಿಲ್ಲ. ಬಹುಶಃ ಎಲ್ಲ ಕಥೆಗಳೂ ಒಂದಕ್ಕಿಂತ ಹೆಚ್ಚು ಕೋನಗಳು ಇರುವ ಕಥೆಗಳು. ಕಥಾನಕದಲ್ಲಿ ಹಾಗು ಕಥಾರಚನೆಯಲ್ಲಿ ಸಂಕೀರ್ಣತೆ ಇರುವ ಕಥೆಗಳಿವು. (ಆದರೆ ಓದುಗನನ್ನು ದಿಕ್ಕುಗೆಡಿಸುವ ಕೆಲವು ಲೇಖಕರ ಕೃತಕ ಭಾಷಾಸಂಕೀರ್ಣತೆ ಇಲ್ಲಿಲ್ಲ ಎನ್ನುವುದು ಸಂತಸದ ಸಂಗತಿ.)
ಜಯಶ್ರೀಯವರ ಈ ಕಥಾಸಂಕಲನದಲ್ಲಿ ಹದಿಮೂರು ಕಥೆಗಳಿವೆ. ಇಲ್ಲಿಯ ಲೇಖಕಿ ‘ಮಾಯಿ ಕೆಂದಾಯಿ’ಯ ಮುಗ್ಧ ಬಾಲಕಿಯಲ್ಲ. ಬದುಕಿನ ಸಂಕಟಗಳನ್ನು ಅರಿತುಕೊಳ್ಳುವ, ಅನುಕಂಪಿಸುವ ಪ್ರಬುದ್ಧ ಸ್ತ್ರೀ. ‘ಸ್ತ್ರೀ ಸಂವೇದನೆ’ ಎನ್ನುವ ಪ್ರತ್ಯೇಕ ಸಂವೇದನೆಯೊಂದು ಇದೆ ಎಂದು ನಾನು ಭಾವಿಸುವದಿಲ್ಲ. ಇರುವದೆಲ್ಲವೂ ಮಾನವಸಂವೇದನೆ ಮಾತ್ರ. ಆದರೆ ಬದುಕಿನ ಸಂಕಟಗಳ ಬಹುಭಾಗವನ್ನು ಹೊತ್ತುಕೊಳ್ಳುವವಳು ಸ್ತ್ರೀ. ಸ್ತ್ರೀಶೋಷಣೆಯು ಮಾನವಸಮಾಜದ ಅತ್ಯಂತ ಹಳೆಯ ಸಂಗತಿಯಾಗಿದೆ. ಆದುದರಿಂದ ಇಲ್ಲಿಯ ಹದಿಮೂರು ಕಥೆಗಳಲ್ಲಿ, ಒಂಬತ್ತು ಕಥೆಗಳಲ್ಲಿ ಸ್ತ್ರೀಪಾತ್ರವು ಪ್ರಮುಖವಾಗಿದೆ. ಅಷ್ಟೇ ಅಲ್ಲ ಈ ಎಲ್ಲ ಸ್ತ್ರೀಪಾತ್ರಗಳು ವಿಭಿನ್ನವಾಗಿರುವುದು ಹಾಗು ಪರಿಸರವೂ ಸಹ ವಿಭಿನ್ನವಾಗಿರುವುದು ಇಲ್ಲಿಯ ವಿಶೇಷ.
ಸಾಧ್ವಿ ಹೆಂಡತಿಯ ಶೀಲವನ್ನು ಶಂಕಿಸಿದ ಗಂಡನೊಬ್ಬ ತಾನೇ ಮನೆಯನ್ನು ಬಿಟ್ಟು ಓಡಿ ಹೋಗುತ್ತಾನೆ. ಸಂಪ್ರದಾಯಸ್ಥವಾದ ಆ ಹಳ್ಳಿಯಲ್ಲಿ ಹಿತೈಷಿಗಳಿಬ್ಬರ ಸಹಾಯದಿಂದ ಈ ಸಾಧ್ವಿ ಗುಡಿಯೊಂದರಲ್ಲಿ ದೇವರ ಪೂಜೆ ಮಾಡುತ್ತ ಬದುಕು ಸಾಗಿಸುತ್ತಾಳೆ. ಹಾಗೆಂದು ಪೀಡಾಂತಕರು ಸುಮ್ಮನೆ ಕೂರುವರೆ? ಅವಳಿಗೆ ಕಿರಿಕಿರಿ ಕೊಡುವುದು ತಪ್ಪಿದ್ದಲ್ಲ. ಹತ್ತು ವರ್ಷಗಳ ನಂತರ ಆ ಗಂಡ ಸಾಧುಬಾಬಾನ ವೇಷದಲ್ಲಿ ತನ್ನ ಹಳ್ಳಿಗೆ ಮರಳುತ್ತಾನೆ. ತನ್ನ ತಪ್ಪಿಲ್ಲದೆ ವಂಚಿತಳಾದ ಹಾಗು ಲೌಕಿಕದಿಂದ ಸಂಪೂರ್ಣ ವಿಮುಖಳಾದ ಈ ಸಾಧ್ವಿ ಈಗೇನು ಮಾಡಬೇಕು? ಅವಳನ್ನು ತನ್ನ ಮಗಳಂತೆಯೇ ನೋಡುವ ಹಿತೈಷಿಯೂ ಸಹ ಅವಳಿಗೆ ಹೇಳುವುದೇನು?..... ‘ಹೆಂಡತಿಯ ಮೇಲೆ ಗಂಡನಿಗೆ ಅಧಿಕಾರವಿದೆ’!
ಅರ್ಥಾತ್, ಹೆಣ್ಣು ಎನ್ನುವುದು ಒಂದು ಸ್ವತಂತ್ರ ಜೀವವಲ್ಲ; in fact ಅದು ಜೀವವೇ ಅಲ್ಲ! ಗಂಡಸಿನ ಅಧೀನದಲ್ಲಿರುವ, ಅವನ ಇಚ್ಛೆಯಂತೆ ನಡೆಯುವ, ಮೂಗುದಾರದ ಒಂದು ಪ್ರಾಣಿ. ಇದು ಸಂಪ್ರದಾಯಸ್ಥ ಹಳ್ಳಿಯಲ್ಲಿ ನಡೆಯುವ ಸಂಗತಿಯಾದರೆ, ಆಧುನಿಕ ನಾಗರಿಕತೆಯ ಸೆರಗಿನಲ್ಲಿ ನಡೆಯುವ ಕಥೆಯೂ ಈ ಸಂಕಲನದಲ್ಲಿದೆ. ಈ ಕಥೆಯಲ್ಲಿ ಎರಡು ಕಥೆಗಳು ಸೇರಿವೆ. ಒಂದು ಜೀವವಿಜ್ಞಾನದ ಸಂಶೋಧಕಿಯ ಕಥೆಯಾದರೆ, ಇನ್ನೊಂದು ಅವಳ ಮನೆಗೆಲಸದವಳ ಕಥೆ. ಎರಡೂ ಕಥೆಗಳಲ್ಲಿರುವ ಶೋಷಣೆ ಮಾತ್ರ ಒಂದೇ.
ಸಂಪ್ರದಾಯಸ್ಥ ಸಮಾಜದ ಸ್ತ್ರೀ ಏನನ್ನು ಆರಿಸಿಕೊಳ್ಳುತ್ತಾಳೆ ಎನ್ನುವುದನ್ನು ಲೇಖಕಿ ಹೇಳಿಲ್ಲ. ಆದರೆ ಆಧುನಿಕ ಸ್ತ್ರೀ ಮಾತ್ರ ಶೋಷಣೆಗೆ ತನ್ನನ್ನು ಒಪ್ಪಿಸಿಕೊಳ್ಳುವವಳಲ್ಲ ಎನ್ನುವುದು ಇಲ್ಲಿ ಮಹತ್ವದ ಅಂಶವಾಗಿದೆ.
ಸಂಪ್ರದಾಯಸ್ಥ ಸಮಾಜದ ಸ್ತ್ರೀ ಏನನ್ನು ಆರಿಸಿಕೊಳ್ಳುತ್ತಾಳೆ ಎನ್ನುವುದನ್ನು ಲೇಖಕಿ ಹೇಳಿಲ್ಲ. ಆದರೆ ಆಧುನಿಕ ಸ್ತ್ರೀ ಮಾತ್ರ ಶೋಷಣೆಗೆ ತನ್ನನ್ನು ಒಪ್ಪಿಸಿಕೊಳ್ಳುವವಳಲ್ಲ ಎನ್ನುವುದು ಇಲ್ಲಿ ಮಹತ್ವದ ಅಂಶವಾಗಿದೆ.
ಹಾಗಿದ್ದರೆ, ಈ ಎಲ್ಲ ಕಥೆಗಳೂ ಒಂದೇ ಪಡಿಯಚ್ಚಿನಲ್ಲಿ ಮೂಡಿದ ಕಥೆಗಳೇ ಎಂದು ಕೇಳಿದರೆ, ‘ಅಲ್ಲ’ ಎಂದೇ ಹೇಳಬೇಕಾಗುತ್ತದೆ. ಪ್ರತಿಯೊಂದು ಕಥೆಯೂ ತನ್ನ ಪರಿಸರಕ್ಕೆ ಅನುಗುಣವಾಗಿ ವಿಭಿನ್ನ ಭಾಷೆ ಹಾಗು ವಿಭಿನ್ನ ಕಥನಶೈಲಿಯಲ್ಲಿವೆ. ಓರ್ವ ಶಿಶುವಿನ ಅಂಗಾಂಗಳು ಪೂರಕವಾಗಿ ಬೆಳೆಯುವಂತೆ, ಕಥಾನಕದಲ್ಲಿಯ ವರ್ಣನೆಗಳು ಪರಸ್ಪರ ಪೂರಕವಾಗಿ, ಸಂಕೀರ್ಣವಾಗಿ ಹಾಗು ಲೇಖಕಿಯ ಹಿಡಿತದಲ್ಲಿ ಬೆಳೆದಿವೆ. ಆದುದರಿಂದ ಅವರ ದೀರ್ಘಕಥೆಗಳನ್ನು(೨೦ಕ್ಕಿಂತ ಹೆಚ್ಚು ಪುಟಗಳ ಕಥೆಗಳನ್ನು) ಓದುವಾಗಲೂ ಸಹ ಸಂಕ್ಷಿಪ್ತ ಕಥೆಗಳನ್ನು ಓದುವಂತೆಯೇ ಭಾಸವಾಗುತ್ತದೆ. ಇಲ್ಲಿಯ ಒಂದೇ ಒಂದು ಸಾಲು ಸಹ ಕಥೆಗೆ ಅನವಶ್ಯಕವಾಗಿಲ್ಲ. ಹಾಗೆಂದು ಇಲ್ಲಿಯ ಎಲ್ಲ ಕಥೆಗಳೂ ದೀರ್ಘವಾಗಿವೆ ಎಂದಲ್ಲ. ಕೇವಲ ಎರಡೇ ಪುಟಗಳ ಕಥೆಯೂ ಸಹ ಓದುಗನ ಮನವನ್ನು ಕಲಕುತ್ತದೆ.
ಜಯಶ್ರೀಯವರು ಹಳ್ಳಿಯ ಬದುಕನ್ನು ಹತ್ತಿರದಿಂದ ಕಂಡವರು. ಹೀಗಾಗಿ ಎರಡು ಹಳ್ಳಿಗಳ ನಡುವಿನ ಹೋರಾಟಕ್ಕೆ (-ಇದು ನೀರಿಗಾಗಿ ನಡೆಯುವ ಹೋರಾಟ!-) ಮುಗ್ಧ ಯುವಪ್ರೇಮಿಗಳು ಬಲಿಯಾದ ಕಥೆಯನ್ನು ವಾಸ್ತವವಾಗಿ ಚಿತ್ರಿಸಲು ಸಾಧ್ಯವಾಗಿದೆ. ಅದರಂತೆಯೇ, ಅತ್ಯಾಧುನಿಕ ನಾಗರಿಕ ಜಗತ್ತಿನ ವಿಸಂಗತಿಗಳನ್ನೂ ಸಹ ಅಷ್ಟೇ ವಾಸ್ತವತೆಯಿಂದ ಚಿತ್ರಿಸಿದ್ದಾರೆ. ಕೆಲವೊಮ್ಮೆ ಸ್ವದೇಶವೇ ಇರಲಿ, ಪರದೇಶವೇ ಇರಲಿ, ತಾಯಿಯ ಕರುಳು, ತನ್ನ ದಾರಿ ಜಾರಿದ ಮಗಳಿಗೆ ಮಿಡಿಯುವ ರೀತಿ ಒಂದೇ ಆಗಿದೆ ಎನ್ನುವುದೂ ಇಲ್ಲಿ ಕಥಿತವಾಗಿದೆ. ಅಷ್ಟೇ ಅಲ್ಲ, ಪರದೇಶದಲ್ಲಿರುವ ಮಗ, ವೃದ್ಧಾಶ್ರಮದಲ್ಲಿರುವ ತಾಯಿ, ತಂದೆ; ದಯಾಮರಣ ಇಂತಹ ಈ ಕ್ಷಣದ ಕಥೆಗಳೂ ಇಲ್ಲಿವೆ.
ಜಯಶ್ರೀಯವರು ರೂಪಕಪ್ರಿಯರೂ ಹೌದು. ಈ ಸಂಕಲನದ ಮೂರು ಕಥೆಗಳು ರೂಪಕ ಕಥೆಗಳೇ ಆಗಿವೆ. ರೂಪಕ ಕಥೆಗಳು ವರ್ತಮಾನವನ್ನಷ್ಟೇ ಅಲ್ಲ, ಭೂತಕಾಲವನ್ನೂ ವ್ಯಾಪಿಸುತ್ತವೆ.
ಕನ್ನಡದ ಬಗೆಗಿನ ಪ್ರೀತಿ ಹಾಗು ಅಭಿಮಾನ ಇವು ಜಯಶ್ರೀಯವರ ಸ್ವಭಾವದ ‘ಅವಿಭಾಜ್ಯ ಭಾಗ’ಗಳಾಗಿವೆ. ಜಯಶ್ರೀಯವರ ಬಾಲ್ಯದ ಸ್ಮೃತಿಸಂಗ್ರಹವಾದ ‘ಮಾಯಿ ಕೆಂದಾಯಿ’ಯಲ್ಲಿಯೂ ಸಹ ಇಂತಹ ಕೆಚ್ಚು ತೋರುವ ಲೇಖನವಿದ್ದರೆ, ಈ ಕಥಾಸಂಕಲನದಲ್ಲಿಯೂ ಸಹ, ಕಥೆಯೊಂದರ ಭಾಗವಾಗಿ ಈ ಕೆಚ್ಚು ಎದ್ದು ಕಾಣುತ್ತದೆ. ಆದರೆ ಇಲ್ಲಿರುವುದು ಕೆಚ್ಚೇ ಹೊರತು ಕಿಚ್ಚಲ್ಲ!
ಜಯಶ್ರೀಯವರ ಕಥೆಗಳಲ್ಲಿ ಅಥವಾ ಲೇಖನಗಳಲ್ಲಿ ವ್ಯಕ್ತವಾಗುತ್ತಿರುವಂತೆ, ಅವರು ಕವಿವರ್ಯ ಬೇಂದ್ರೆಯವರನ್ನು ಆಳವಾಗಿ ಅಧ್ಯಯನ ಮಾಡಿದವರು. ಹೀಗಾಗಿ ಅವರ ಅನೇಕ ಕಥೆಗಳಿಗೆ ಬೇಂದ್ರೆಯವರ ಕವನಗಳ ನುಡಿಯೊಂದು‘ಮುನ್ನುಡಿ’ಯಾಗಿ ಕಂಡು ಬರುತ್ತದೆ.
ಕಥೆ ಹೇಳುವದಷ್ಟೇ ಲೇಖಕರ ಉದ್ದೇಶವಾಗಿರುತ್ತದೆಯೇ? ಕೆಲವಾರು ಆಂಗ್ಲ ಕತೆಗಾರರನ್ನು ಈ ಮಾತಿಗೆ ಉದಾಹರಣೆ ಎಂದು ಹೇಳಬಹುದು: ಓ ಹೆನ್ರಿ, ಸೋಮರಸೆಟ್ ಮಾ̆ಮ್ ಇತ್ಯಾದಿ. ಕನ್ನಡದ ಶ್ರೇಷ್ಠ ಕತೆಗಾರರಾದ ಮಾಸ್ತಿ, ಲಂಕೇಶ, ದೇವನೂರು ಮಹಾದೇವ ಹಾಗು ಅಮರೇಶ ನುಗಡೋಣಿ ಇವರ ಕಥೆಗಳಿಗೆ ಒಂದು ನೈತಿಕ ಅಥವಾ ಸಾಮಾಜಿಕ ಉದ್ದೇಶವಿರುತ್ತದೆ. ಈ ಕಥೆಗಾರರು ಏಕೆ ಬರೆಯುತ್ತಾರೆ ಎನ್ನುವುದು ನಮಗೆ ತಿಳಿದಿದೆ.
ಜಯಶ್ರೀಯವರ ಬಗೆಗೆ ಏನು ಹೇಳಬಹುದು? ಇದನ್ನು ತಿಳಿಯಬೇಕಾದರೆ, ‘ನೀವು ಏಕೆ ಬರೆಯುತ್ತೀರಿ?’ ಎಂದು ಅವರನ್ನೇ ಕೇಳುವುದು ಸಮಂಜಸವಾದದ್ದು. ಆದರೂ ನನ್ನ ಅನಿಸಿಕೆಯನ್ನು ಹೇಳುವ ಸಾಹಸವನ್ನು ಇಲ್ಲಿ ಮಾಡುತ್ತಿದ್ದೇನೆ:
ಸಮಾಜವನ್ನು, ತಮ್ಮ ಸುತ್ತಲಿನ ಪರಿಸರವನ್ನು ತೆರೆದ ಕಣ್ಣುಗಳಿಂದ ಹಾಗು ಮುಕ್ತ ಮನಸ್ಸಿನಿಂದ ನೋಡುತ್ತಿರುವ ಜಯಶ್ರೀಯವರಿಗೆ, ತಮ್ಮ ಮನಸ್ಸಿನಲ್ಲಿ ಪುಟಿಯುತ್ತಿರುವ ಭಾವನೆಗಳನ್ನು ಓದುಗನಿಗೆ ತಲುಪಿಸುವುದು ಒಂದು ಸಾಹಿತ್ಯಕ ಅವಶ್ಯಕತೆಯಾಗಿದೆ, ಭಾವರೇಚನವಾಗಿದೆ(catharsis ಆಗಿದೆ). ಇದೇ ಜಯಶ್ರೀಯವರ ಕಥೆಗಳ ಮುಖ್ಯ ಉದ್ದೇಶ ಎಂದು ನಾನು ಭಾವಿಸುತ್ತೇನೆ. (ನನ್ನ ಅಭಿಪ್ರಾಯ ತಪ್ಪಾಗಿದ್ದರೆ, ‘ಕ್ಷಮಿಸಿ’ ಎಂದು ಅವರನ್ನು ಕೋರುತ್ತೇನೆ.) ಜಯಶ್ರೀಯವರು ತಮ್ಮ ಉದ್ದೇಶದಲ್ಲಿ ಸಂಪೂರ್ಣ ಸಫಲರಾಗಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಜಯಶ್ರೀಯವರ ಎಲ್ಲ ಕಥೆಗಳ ಬಗೆಗೆ ಟಿಪ್ಪಣಿ ಬರೆಯಲು ಹೊರಟರೆ, ಒಂದೊಂದು ಕಥೆಗೂ ಹತ್ತು ಪುಟ ಬೇಕಾಗಬಹುದು! ಆ ಕಾರಣಕ್ಕಾಗಿ ನನ್ನ ಲೇಖನವು ಅಪೂರ್ಣವಾಗಿದೆ ಹಾಗು ಜಯಶ್ರೀ ದೇಶಪಾಂಡೆಯವರ ಕೃತಿಗೆ ಈ ಲೇಖನದಿಂದ ನ್ಯಾಯ ದೊರೆತಿಲ್ಲ ಎನ್ನುವ ಭಾವನೆಯಿಂದಲೇ ನಾನು ಲೇಖನವನ್ನು ಮುಗಿಸುತ್ತಿದ್ದೇನೆ.
ಹೀಗಾಗಿ ಲೇಖನಗಳು ಜಯಶ್ರೀ ದೇಶಪಾಂಡೆಯವರ ಸಾಹಿತ್ಯ-----ಭಾಗ ೨
ಎಲ್ಲಾ ಲೇಖನಗಳು ಆಗಿದೆ ಜಯಶ್ರೀ ದೇಶಪಾಂಡೆಯವರ ಸಾಹಿತ್ಯ-----ಭಾಗ ೨ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಯಶ್ರೀ ದೇಶಪಾಂಡೆಯವರ ಸಾಹಿತ್ಯ-----ಭಾಗ ೨ ಲಿಂಕ್ ವಿಳಾಸ https://dekalungi.blogspot.com/2019/04/blog-post_17.html
0 Response to "ಜಯಶ್ರೀ ದೇಶಪಾಂಡೆಯವರ ಸಾಹಿತ್ಯ-----ಭಾಗ ೨"
ಕಾಮೆಂಟ್ ಪೋಸ್ಟ್ ಮಾಡಿ