News and Photo Date:19-02-2019

News and Photo Date:19-02-2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date:19-02-2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date:19-02-2019
ಲಿಂಕ್ : News and Photo Date:19-02-2019

ಓದಿ


News and Photo Date:19-02-2019

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಪ್ರವಾಸ
***************************************
ಕಲಬುರಗಿ,ಫೆ.19.(ಕ.ವಾ.)-ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ ಅವರು ಫೆಬ್ರವರಿ 20 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಕ್ಕೆ ಭೇಟಿ ನೀಡುವರು. ಅಂದು ಕಲಬುರಗಿಯಿಂದ ಸೇಡಂಗೆ ಪ್ರಯಾಣಿಸಿ ಮಧ್ಯಾಹ್ನ 1 ಗಂಟೆಗೆ ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಕನ್ನಡ ಕಾರ್ಯಕರ್ತರನ್ನು ಭೇಟಿ ಮಾಡುವರು. ನಂತರ ಸಂಜೆ 6.40 ಗಂಟೆಗೆ ಉದ್ಯಾನ್ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಫೆಬ್ರವರಿ 21 ರಿಂದ ಕನ್ನಡ ಭವನದಲ್ಲಿ ನಾಟಕಗಳ ಪ್ರದರ್ಶನ
*****************************************************
ಕಲಬುರಗಿ,ಫೆ.19.(ಕ.ವಾ.)-ಕಲಬುರಗಿ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಮೈಸೂರು ರಂಗಾಯಣ ಯುವ ಸಂಚಾರಿ ರಂಗ ಘಟಕದ ಕಲಾವಿದರಿಂದ ಇದೇ ಫೆಬ್ರವರಿ 21, 22 ಹಾಗೂ 23ರಂದು ಪ್ರತಿದಿನ ಸಂಜೆ 6.30 ಗಂಟೆಯಿಂದ ಕಲಬುರಗಿ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯಿರುವ ಕನ್ನಡ ಭವನದಲ್ಲಿ ಕೆಳಕಂಡ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ತಿಳಿಸಿದ್ದಾರೆ.
ಫೆಬ್ರವರಿ 21ರಂದು ಶ್ರವಣಕುಮಾರ ಅವರ ನಿರ್ದೇಶನದ “ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ” ನಾಟಕ, ಫೆಬ್ರವರಿ 22ರಂದು ಭಾಗೀರಥಿ ಬಾಯಿ ಕದಂ ಅವರ ನಿರ್ದೇಶನದ “ಯಹೂದಿ ಹುಡುಗಿ” ನಾಟಕ ಹಾಗೂ ಫೆಬ್ರವರಿ 23ರಂದು ಆಶಿಷ್ ಪಾಠಕ ಅವರ ನಿರ್ದೇಶನದ “ಪುಂಟೀಲಾ” ನಾಟಕ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು, ರಂಗ ನಿರ್ದೇಶಕರು, ಕಲಾವಿದರು ಹಾಗೂ ಪ್ರೇಕ್ಷಕರು ಪಾಲ್ಗೊಂಡು ನಾಟಕವನ್ನು ವೀಕ್ಷಿಸಬೇಕೆಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಯುವ ಕಾರ್ಯಕರ್ತರ ನಿಯೋಜನೆಗಾಗಿ ಅರ್ಜಿ ಆಹ್ವಾನ
*********************************************************
ಕಲಬುರಗಿ,ಫೆ.19.(ಕ.ವಾ.)-ಭಾರತ ಸರ್ಕಾರದ ನೆಹರು ಯುವ ಕೇಂದ್ರದಿಂದ 2019-20ನೇ ಸಾಲಿನಲ್ಲಿ ರಾಷ್ಟ್ರೀಯ ಯುವ ಕಾರ್ಯಕರ್ತರ ನಿಯೋಜನೆಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳು 2018ರ ಏಪ್ರಿಲ್ 1ಕ್ಕೆ ಕನಿಷ್ಠ 18 ರಿಂದ 29 ವರ್ಷ ವಯೋಮಿತಿ ಒಳಗಿರುವ ಎಸ್.ಎಸ್.ಎಲ್.ಸಿ. ತತ್ಸಮಾನ ಅಥವಾ ಪದವಿ ತರಗತಿಯಲ್ಲಿ ತೇರ್ಗಡೆ ಹೊಂದಿದವರು ಅರ್ಹರು. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಹಾಗೂ ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದವರಿಗೆ ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಯುವಜನ ಸೇವಾ ಇಲಾಖೆಯ ತಿತಿತಿ.ಟಿಥಿಞs.oಡಿg ವೆಬ್‍ಸೈಟ್‍ನಲ್ಲಿ 2019 ಮಾರ್ಚ್ 3ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅದರ ಒಂದು ಪ್ರತಿಯನ್ನು ಜಿಲ್ಲಾ ಯುವ ಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ, ಭಗವತಿ ನಗರ, ಸಂಗಮೇಶ್ವರ ಆಸ್ಪತ್ರೆ ಎದುರುಗಡೆ ಎಮ್.ಎಸ್.ಕೆ. ಮಿಲ್ ರೋಡ ಕಲಬುರಗಿ ಕಚೇರಿಯಲ್ಲಿ ಸಲ್ಲಿಸಬೇಕು.
ಆಯಾ ತಾಲೂಕಿನ ಕಂಪ್ಯೂಟರ್ ಜ್ಞಾನÀ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದಲ್ಲದೆ ಸಕ್ರಿಯ ಯುವ ಸಂಘದ ಪದಾಧಿಕಾರಿಗಳಿಗೆ, ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ಅಭ್ಯರ್ಥಿಗಳಿಗೆ ಪ್ರಥಮಾದ್ಯತೆ ನೀಡಲಾಗುತ್ತದೆ. ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ. ಮಾಸಿಕವಾಗಿ ಪ್ರತಿ ತಿಂಗಳಿಗೆ 5000 ರೂ. ರಂತೆ ಗೌರವ ಸಂಭಾವನೆ ನೀಡಲಾಗುವುದು.
ಈ ನಿಯೋಜನೆಯ ಅವಧಿಯು ಸಂಪೂರ್ಣ ತಾತ್ಕಾಲಿಕವಾಗಿ ಒಂದು ವರ್ಷದ ಮಾತ್ರ ಇದ್ದು, ಅಭ್ಯರ್ಥಿಯ ಕಾರ್ಯಚಟುವಟಿಕೆ ತೃಪ್ತಿಕರವಾಗಿದ್ದಲ್ಲಿ ಮತ್ತೊಂದು ವರ್ಷದ ಅವಧಿಗೆ ಅವಕಾಶ ಕಲ್ಪಿಸಲಾಗುವುದು. ಆಯಾ ತಾಲೂಕಿನಲ್ಲಿ ಯುವ ಸಂಘಗಳ ಸ್ಥಾಪನೆ, ಹಳೆಯ ಸಂಘಗಳಿಗೆ ಪುನರುಜ್ಜೀವನಗೊಳಿಸುವುದು ಹಾಗೂ ಗ್ರಾಮೀಣ ಯುವ ಕಾರ್ಯ ಚಟುವಟಿಕೆಗಳನ್ನು ನಡೆಸಲು ಈ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ದೂರವಾಣಿ ಸಂಖ್ಯೆ 08472-248528ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಲು ಸೂಚನೆ
******************************
ಕಲಬುರಗಿ,ಫೆ.19.(ಕ.ವಾ.)-ಚಿತ್ತಾಪುರ ಸರ್ಕಾರಿ ಪ್ರೌಢಶಾಲೆ ಆದರ್ಶ ವಿದ್ಯಾಲಯದ ಸಹ ಶಿಕ್ಷಕರಾದ ಉಮೇಶ ಅವರು 2015ರ ಜೂನ್ 05 ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಸದರಿ ಸಿಬ್ಬಂದಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಶಾಲೆಯ ಮುಖ್ಯಗುರುಗಳ ಮುಖಾಂತರ ಮೂರು ನೋಟೀಸು ಜಾರಿ ಮಾಡಲಾಗಿದೆ. 2018ರ ಮೇ 30 ರಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಂತಿಮ ನೋಟೀಸು ಸಹ ಜಾರಿ ಮಾಡಲಾಗಿದ್ದರೂ ಸಹ ಸದರಿ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.
ಸದರಿ ನೌಕರರು ಈ ಪತ್ರಿಕಾ ಪ್ರಕಟಗೊಂಡ 15 ದಿನದೊಳಗಾಗಿ ಚಿತ್ತಾಪುರ ಸರ್ಕಾರಿ ಪ್ರೌಢಶಾಲೆ ಆದರ್ಶ ವಿದ್ಯಾಲಯದಲ್ಲಿ ಶಾಲಾ ಕರ್ತವ್ಯಕ್ಕೆ ಹಾಜರಾಗಬೇಕು. ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರುತಾ ಮಾರ್ಕ ಶರ್ಮಾ ಅವರಿಗೆ ಪಿಹೆಚ್.ಡಿ.
***************************************
ಕಲಬುರಗಿ,ಫೆ,19.(ಕ.ವಾ)-ಗುಲಬರ್ಗಾ ವಿಶ್ವವಿದ್ಯಾಲಯವು ಪ್ರಾಣಿಶಾಸ್ತ್ರ ವಿಷಯದಲ್ಲಿ ರುತಾ ಮಾರ್ಕ ಶರ್ಮಾ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಕೆ. ವಿಜಯಕುಮಾರ ಅವರ ಮಾರ್ಗದರ್ಶನದಲ್ಲಿ “ಸ್ಟಡಿಸ್ ಆನ್ ಇಂಪ್ಯಾಕ್ಟ್ ಆಫ್ ಬಯೋ-ಮೆಡಿಕಲ್ ವೇಸ್ಟ್ ಆಂಡ್ ಇಟೀಸ್ ಮ್ಯಾನೇಜ್‍ಮೆಂಟ್ ವಿಥ್ ರೆಫಿರೆನ್ಸ್ ಟು ಲೋಕಲ್ ಎನ್ವಿರಾನ್‍ಮೆಂಟ್ ಇನ್ ಬೀದರ ಡಿಸ್ಟ್ರಿಕ್ಟ್ ಕರ್ನಾಟಕ” (SಖಿUಆIಇS ಔಓ IಒPಂಅಖಿ ಔಈ ಃIಔ-ಒಇಆIಅಂಐ WಂSಖಿಇ ಂಓಆ IಖಿS ಒಂಓಂಉಇಒಇಓಖಿ WIಖಿಊ ಖಇಈಇಖಇಓಅಇ ಖಿಔ ಐಔಅಂಐ ಇಓಗಿIಖಔಓಒಇಓಖಿ Iಓ ಃIಆಂಖ ಆISಖಿಖIಅಖಿ ಏಂಖಓಂಖಿಂಏಂ) ಕುರಿತು ರುತಾ ಮಾರ್ಕ ಶರ್ಮಾ ಅವರು ಪ್ರಬಂಧವನ್ನು ಮಂಡಿಸಿದ್ದರು.
ಮೊರಾಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನ
****************************************************************
ಕಲಬುರಗಿ,ಫೆ,19.(ಕ.ವಾ)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಲಬುರಗಿ ಹಾಗೂ ಸೇಡಂ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಖಾಲಿಯಿರುವ 6ನೇ ತರಗತಿಯ 50 ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ಅಲ್ಪಸಂಖ್ಯಾತರ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಸ್ಥಾನ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಸ್ಥಾನವನ್ನು ಮೀಸಲಿಡಲಾಗಿದೆ. ಶೇ. 50 ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಿಡಲಾಗಿದೆ.
ಆಸಕ್ತಿಯುಳ್ಳ ಪೋಷಕರು ಆಯಾ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ತಾಲೂಕು ಮಾಹಿತಿ ಕೇಂದ್ರಗಳಲ್ಲಿ ಅರ್ಜಿ ನಮೂನೆಯಲ್ಲಿ ಪಡೆದು ಭರ್ತಿ ಮಾಡಿ 2019ರ ಮಾರ್ಚ್ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಐವಾನ್ ಶಾಹಿಯಲ್ಲಿರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಹಾಗೂ ದೂರವಾಣಿ ಸಂಖ್ಯೆ 08472-244006/247260ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಜಿಲ್ಲಾ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ
******************************************
ಕಲಬುರಗಿ,ಫೆ,19.(ಕ.ವಾ)-ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಕಾರ್ಯಕ್ರಮದಡಿ ಕಲಬುರಗಿ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿಯಿರುವ ಓರ್ವ ಜಿಲ್ಲಾ ಸಮಾಲೋಚಕರ (ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ) ಹುದ್ದೆಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ. ರಾಜಾ ಅವರು ತಿಳಿಸಿದ್ದಾರೆ.
ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್/ ಬಿ.ಇ. ಸಿವಿಲ್ ಇಂಜಿನಿಯರಿಂಗ್ ವಿತ್ ಸ್ಪೇಷಲೈಜೇಶನ್ ಇನ್ ಎನ್ವಿರಾನ್ಮೆಂಟಲ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು. ದೂರ ಶಿಕ್ಷಣ ಮೂಲಕ ವಿದ್ಯಾಭ್ಯಾಸ ಮಾಡಿದವರಿಗೆ ಅವಕಾಶವಿರುವುದಿಲ್ಲ. ಕನಿಷ್ಠ 3 ವರ್ಷಗಳ ಅನುಭವ ಹಾಗೂ ನೀರು ಮತ್ತು ನೈರ್ಮಲ್ಯ/ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು. 22,000 ರೂ.ಗಳ ಮಾಸಿಕ ವೇತನ ನೀಡಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮ ಶಾಖೆಯಲ್ಲಿ 2019ರ ಫೆಬ್ರವರಿ 26ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕ.ರಾ.ಮು.ವಿ.: ಎಂ.ಎ.-ಎಂ.ಕಾಂ. ವಿಷಯಗಳ ಸಂಪರ್ಕ ಕಾರ್ಯಕ್ರಮ
*************************************************************
ಕಲಬುರಗಿ,ಫೆ,19.(ಕ.ವಾ)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಇದೇ ಫೆಬ್ರವರಿ 21 ರಿಂದ 25 ರವರೆಗೆ ಕಲಬುರಗಿ ನಗರದ ದರ್ಗಾ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ (ಎಂ.ಎ./ಎಂ.ಕಾಂ. ವಿಷಯಗಳಿಗೆ) ಸಂಪರ್ಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಎಂ.ಎ. ಪ್ರಥಮ ಕನ್ನಡ, ಇಂಗ್ಲೀಷ, ಹಿಂದಿ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಹಾಗೂ ಎಂ.ಕಾಂ. ವಿಷಯಗಳ ಎಲ್ಲ ಅಭ್ಯರ್ಥಿಗಳು ತಪ್ಪದೇ ಈ ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ. ಸಂಗಮೇಶ ಹಿರೇಮಠ ಅವರ ಮೊಬೈಲ್ ಸಂಖ್ಯೆ 9916783555, ದೂರವಾಣಿ ಸಂಖ್ಯೆ 08472-265868 ಗಳಿಗೆ ಅಥವಾ ಕ.ರಾ.ಮು.ವಿ. ಅಂತರ್ಜಾಲ hಣಣಠಿ://ಞsoumಥಿsoಡಿe.ಞಚಿಡಿಟಿಚಿಣಚಿಞಚಿ.iಟಿ ವಿಳಾಸಕ್ಕೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಸೌತೆಕಾಯಿ ಬೆಳೆಯ ಬೇಸಾಯ ಕ್ರಮಗಳು
*************************************
ಕಲಬುರಗಿ,ಫೆ,19.(ಕ.ವಾ)-ಸೌತೆಕಾಯಿ ಜನಪ್ರೀಯ ತರಕಾರಿಗಳಲ್ಲಿ ಒಂದು. ಇದನ್ನು ಎಳೆಯ ಕಾಯಿ ಇರುವಾಗಲೇ ಕಟಾವು ಮಾಡಿ, ತಾಜಾ ರೂಪದಲ್ಲಿ ತಿನ್ನಲು ಹಾಗೂ ಉಪ್ಪಿನ ಕಾಯಿ ತಯಾರಿಸಲು ಹೆಚ್ಚು ಬಳಸಲಾಗುತ್ತದೆ. ಇದರಲ್ಲಿ ‘ಎ’ ಮತ್ತು ‘ಸಿ’ ವಿಟ್ಯಾಮಿನ್‍ಗಳನ್ನು ಹೊಂದಿರುತ್ತದೆ. ಜಿಲ್ಲೆಯಲ್ಲಿ ಸೌತೆಕಾಯಿ ಬೆಳೆಯನ್ನು ಬೆಳೆಯುವ ರೈತರು ಕೆಳಕಂಡ ಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಹವಾಗುಣ: ಇದು ಮುಖ್ಯವಾಗಿ ಉಷ್ಣ ವಲಯದ ತರಕಾರಿ ಬೆಳೆಯಾಗಿದ್ದು ಮರಳು ಅಥವಾ ಮರಳು ಮಿಶ್ರಿತ ಗೋಡು ಮಣ್ಣಿನಲ್ಲೂ ಬೆಳೆಯಬಹುದು. ಜಪಮೀಸ್ ಲಾಂಗ್‍ಗ್ರೀನ್, ಫೈನ್ ಸೆಟ್, ಬೆಳಗಾವಿ ಲೋಕಲ್, ಹಾಸನ್ ಲೋಕಲ್ ಮತ್ತು ಹಿಮಾಂಗಿ ಲೋಕಲ್ ಇತ್ಯಾದಿ ತಳಿಗಳಿವೆ. ಜನೆವರಿ, ಫೆಬ್ರುವರಿಯಲ್ಲಿ ನಾಟಿಗೆ ಸೂಕ್ತಕಾಲವಾಗಿದೆ.
ಭೂಮಿಯನ್ನು 2 ರಿಂದ 3 ಸಾರಿ ಉಳುಮೆ ಮಾಡಿ ಚೆನ್ನಾಗಿ ಹದ ಮಾಡಿ.1.5 ರಿಂದ 2 ಮೀಟರ್ ಅಂತರದಲ್ಲಿ ಹರಿಗಳನ್ನು ತೆಗೆದು. ಚೆನ್ನಾಗಿ ಕೊಳೆತ ಸಾವಯವ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ, ಬಿತ್ತುವ ಪೂರ್ವದಲ್ಲಿಯೇ ಶೀಫಾರಸ್ಸು ಮಾಡಿದ ಶೇ.50 ರಷ್ಟು ಸಾರಜನಕ, ಪೂರ್ಣ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ನೀಡಬೇಕು. 75 ರಿಂದ 90 ಸೇ.ಮೀ.ಅಂತರದಲ್ಲಿ ಪ್ರತಿಗುಣಿಗೆ 3-4 ಬೀಜಗಳನ್ನು ಬಿತ್ತಬೇಕು.
ನೀರು ನಿರ್ವಹಣೆ ಮತ್ತು ಸಸ್ಯ ಪ್ರಚೋದಕಗಳ ಬಳಕೆ: ಸೌತೆಕಾಯಿ ಆಳವಾದ ಉದ್ದ ಬೇರುಗಳನ್ನು ಹೊಂದಿರದೆ ಇರುವದರಿಂದ ಪ್ರತಿ 4 ರಿಂದ 5 ದಿನಗಳಿಗೊಮ್ಮೆ ನೀರು ಪೂರೈಸುವುದು ಅವಶ್ಯಕ. ಬಳ್ಳಿಗಳಲ್ಲಿ ಶೀಘ್ರ ಹೆಚ್ಚು ಹೂಗಳನ್ನು ಬಿಟ್ಟು ಬೇಗನೆ ಕಾಯಿಗಳು ಕೊಯ್ಲಿಗೆ ಬರುವಂತೆ ಮಾಡಲು ಹಾಗೂ ಹೆಚ್ಚಿನ ಇಳುವರಿಯನ್ನು ಪಡೆಯಲು 250 ಪಿ.ಪಿ.ಎಂ.(1 ಮೀಲೀ/4 ಲೀ.ನೀರಿಗೆ) ಸಾಂದ್ರತೆಯ ಇಥರೆಲ್ ದ್ರಾವಣವನ್ನು ಬಳ್ಳಿಗಳಲ್ಲಿ 2-4 ಎಲೆಗಳು ಬಂದ ನಂತರ 15 ದಿನಗಳ ಅಂತರದಲ್ಲಿ ಎರಡು ಸಾರಿ ಸಿಂಪರಣೆ ಮಾಡಬೇಕು.
ಕೊಯ್ಲು ಮತ್ತು ಇಳುವರಿ: ಬಿತ್ತಿದ 45 ರಿಂದ 60 ದಿನಗಳಲ್ಲಿ ಕಟಾವಿಗೆ ಸಿದ್ದವಾಗುವುದು. ಇಳುವರಿಯ ಪ್ರಮಾಣ ಪ್ರತಿ ಎಕರೆಗೆ 6 ರಿಂದ 8 ಟನ್ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ (ಹಾರ್ಟಿಕ್ಲಿನಿಕ್) ವಿಷಯ ತಜ್ಞ ಮಂಜುನಾಥ ಪಾಟೀಲ ಮೊಬೈಲ್ ಸಂಖ್ಯೆ 7259984026ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳಿಗೆ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ
********************************************************
ಕಲಬುರಗಿ,ಫೆ.19.(ಕ.ವಾ.)-ಕೇಂದ್ರದಲ್ಲಿ ಈ ಹಿಂದಿನ ಯುಪಿಎ ಸರ್ಕಾರ ಇದ್ದಾಗ ದೊಡ್ಡ ದೊಡ್ಡ ಕಂಪನಿಗಳ ಆದಾಯದಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡುವಂತೆ ಕಾನೂನು ರೂಪಿಸಲಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅವರು ಮಂಗಳವಾರ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (ಕರ್ನಾಟಕ ರಾಜ್ಯ ಕಚೇರಿ) ಹಾಗೂ ಕೃತಕ ಅಂಗಾಂಗಗಳು ಭಾರತದ ಉತ್ಪಾದನಾ ನಿಗಮ, ಕಲಬುರಗಿ ಜಿಲ್ಲಾ ಆಡಳಿತ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿವತಿಯಿಂದ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ದಿವ್ಯಾಂಗರಿಗಾಗಿ ಸಾಧನ ಸಲಕರಣೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೊಡ್ಡ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಬೇಕೆನ್ನುವ ಕಾನೂನು ರೂಪಿಸಿದ್ದಕ್ಕಾಗಿ ಈ ನಿಧಿಯು ವಿಕಲಚೇತನರಿಗೆ ಕೃತಕ ಅಂಗಗಳನ್ನು ಪೂರೈಸುವಲ್ಲಿ ಹಾಗೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಅನುಕೂಲವಾಗುತ್ತಿದೆ. ಇದಕ್ಕಿಂತ ಮೊದಲು ದೊಡ್ಡ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ತೆಗೆದುಕೊಳ್ಳುತ್ತಿದ್ದವು. ಇದರಿಂದ ಅವಶ್ಯಕತೆಯಿರುವ ಸಾರ್ವಜನಿಕರಿಗೆ ಯಾವುದೇ ಲಾಭವಾಗುತ್ತಿದ್ದಿಲ್ಲ ಎಂದರು.
ದೊಡ್ಡ ದೊಡ್ಡ ಕಾರ್ಖಾನೆಗಳು ಇಂಡಿಯನ್ ಆಯಿಲ್ ಕಂಪನಿಗಳಂತಹ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನರಿತು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಬಡ ಜನರಿಗೆ ಸಹಾಯ ಮಾಡಿದರೆ ಅನುಕೂಲವಾಗುತ್ತದೆ. ಇಂದು ಸಾರ್ವಜನಿಕರು ಅಭಿವೃದ್ಧಿ ಕಾಮಗಾರಿಗಳಿಗೆ ಬೇಡಿಕೆ ನೀಡುತ್ತಿದ್ದು, ಹಳ್ಳಿಗಳಲ್ಲಿ ರಸ್ತೆ ಅಥವಾ ಇನ್ನಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಕೈಗೊಂಡರೆ ಅನುಕೂಲವಾಗುತ್ತದೆ. ಕಲಬುರಗಿಯಲ್ಲಿ ಜಿಲ್ಲಾ ಖನಿಜ ನಿಧಿಯಡಿ ಸಾಕಷ್ಟು ಅನುದಾನ ಲಭ್ಯವಿದ್ದು, ಅದನ್ನು ಶಾಲಾ ಕಟ್ಟಡ, ವಸತಿ ನಿಲಯಗಳ ನಿರ್ವಹಣೆಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಬನ್ಸಿ ಪವಾರ ಪ್ರಾಸ್ತಾವಿಕ ಮಾತನಾಡಿ, ಕೃತಕ ಅಂಗಾಂಗಗಳು ಭಾರತ ಉತ್ಪಾದನಾ ನಿಗಮದ ವತಿಯಿಂದ ಅಕ್ಟೋಬರ್ ಮಾಹೆಯಲ್ಲಿ ಸಮೀಕ್ಷೆ ಕೈಗೊಂಡು 214 ವಿಕಲಚೇತನರಿಗೆ ಅಂದಾಜು 29.75 ಲಕ್ಷ ರೂ.ಗಳಲ್ಲಿ ಕೃತಕ ಅಂಗಾಂಗಗಳನ್ನು ಪೂರೈಸಲು ಯೋಜನೆ ರೂಪಿಸಿತು. ಅದರ ಅಂಗವಾಗಿ 14-ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ, 31-ಗಾಲಿ ಕುರ್ಚಿ, 46-ತ್ರಿಚಕ್ರ ಸೈಕಲ್, 42-ಶ್ರವಣ ಸಾಧನ, 18-ಮಾನಸಿಕ ಅಸ್ವಸ್ಥ ಮಕ್ಕಳಿಗೆ ಕಿಟ್, 1-ಕುಷ್ಠರೋಗಿಯ ಕಿಟ್, 6-ಸ್ಮಾರ್ಟ್‍ಫೋನ್, 12-ಸ್ಮಾರ್ಟ್ ಉರುಗೋಲು, 1-ಟ್ಯಾಬ್ಲೇಟ್ ಸೇರಿದಂತೆ ಮತ್ತಿತರ ಸಲಕರಣೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಶಾಸಕಿ ಖನೀಜ್ ಫಾತೀಮಾ, ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಐಓಸಿಎಲ್-ಕೆ.ಎಸ್.ಓ.(ಹೆಚ್.ಆರ್.) ಡಿಜಿಎಮ್ ರಾಜೇಶ ಪಂತ್ ಮತ್ತಿತರರು ಪಾಲ್ಗೊಂಡಿದ್ದರು.
ವಾಡಿ-ಗದಗ ರೈಲ್ವೆ ಹಳಿ ಭೂಸ್ವಾಧೀನ ಕಾರ್ಯ ಚುರುಕುಗೊಳಿಸಿ
*******************************************************
ಕಲಬುರಗಿ. ಫೆ,19(ಕ-ವಾ). ವಾಡಿ-ಗದಗ ರೈಲ್ವೆ ಹಳಿಯ ಭೂಸ್ವಾಧೀನ ಕಾರ್ಯಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಕಲಬುರಗಿ ಜಿಲ್ಲೆಯಿಂದ ಕೈಗೊಳ್ಳಬೇಕಾದ ಭೂಸ್ವಾಧೀನ ಕಾರ್ಯ ಮಂದಗತಿಯಲ್ಲಿದ್ದು, ಇದರ ವೇಗ ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಕಲಬುರಗಿ ಲೋಕಸಭಾ ಸದಸ್ಯ ಹಾಗೂ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದರು.
ಅವರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಪುರಸ್ಕøತ ಯೋಜನೆಗಳ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಗದಗ ಕಡೆಯಿಂದ ಭೂಸ್ವಾಧೀನ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆಯಾದರು ಆ ವೇಗ ಇಲ್ಲಿ ಕಂಡುಬರುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರು ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕಾರ್ಯವನ್ನು ಚುರುಕುಗೊಳಿಸಬೇಕು ಎಂದರು.
ಇದಲ್ಲದೆ ಕಲಬುರಗಿ ಜಿಲ್ಲೆಯಲ್ಲಿನ ರೈಲ್ವೆ ಮಾರ್ಗ ವಿದ್ಯುತ್ತೀಕರಣ, ರೈಲ್ವೆ ರಸ್ತೆ ಮೇಲ್ಸೇತುವೆ, ರೈಲ್ವೆ ರಸ್ತೆ ಕೆಳಸೇತುವೆ ಸೇರಿದಂತೆ ಇನ್ನೀತರ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಅನುಷ್ಟಾನಗೊಳಿಸಲು ಹಾಗೂ ಕಾಮಗಾರಿ ಪೂರ್ಣಗೊಳಲ್ಲು ಇರುವ ತೊಡಕುಗಳನ್ನು ನಿವಾರಿಸಲು ಸೆಂಟ್ರಲ್ ರೈಲ್ವೆ, ದಕ್ಷಿಣ ಕೇಂದ್ರ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ರೈಲ್ವೇ ಯೋಜನೆಗಳಿಗೆ ಮತ್ತು ಭೂಸ್ವಾಧೀನಕ್ಕೆ ಕರ್ನಾಟಕ ಸರ್ಕಾರವು ಶೇ.50-50ರ ದರದಲ್ಲಿ ಅನುದಾನ ನೀಡುತ್ತಿದೆ. ಈ ರೀತಿಯ ರೈಲ್ವೆ ಯೋಜನೆಗಳಿಗೆ ಶೇ.50ರಷ್ಟು ಅನುದಾನ ನೀಡುವ ಕೆಲವೆ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. 371ಜೆ ಸ್ಥಾನಮಾನ ಹೊಂದಿರುವ ಹಾಗೂ ಹಿಂದುಳಿದ ಕಲಬುರಗಿ ವಿಭಾಗದಲ್ಲಿ ರೈಲ್ವೆ ಇಲಾಖೆಯು ಹೆಚ್ಚಿನ ಆಸಕ್ತಿ ವಹಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಬುರಗಿ ನಗರದ ಮದರ ತೆರೆಸಾ ಬಳಿ ರೈಲ್ವೆ ರಸ್ತೆ ಮೇಲ್ಸೇತುವೆ ಒಂದು ಬದಿಯ ರಸ್ತೆಯನ್ನು ಕೂಡಲೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಬೇಕು. ನಂತರ ಇನ್ನೊಂದು ಬದಿಯ ರಸ್ತೆ ಮತ್ತು ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೇಸಿಗೆಯ ತೀವ್ರತೆ ಅರಿತು ಮುಂಜಾಗೃತವಾಗಿ ನಾರಾಯಣಪುರ ಆಣೆಕಟ್ಟಿನಿಂದ ಜಿಲ್ಲೆಗೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಕೆಬಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಡಾ.ಮಲ್ಲಿಕಾರ್ಜುನ ಖರ್ಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ ಗದಗ-ವಾಡಿ ರೈಲ್ವೆ ಹಳಿ ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೆ ಇದಕ್ಕಾಗಿ 35 ಕೋಟಿ ವ್ಯಯ ಮಾಡಲಾಗಿದೆ ಎಂದರು.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ರಸ್ತುತ 2 ಎಸ್ಕಲೇಟರ್ ಕಾರ್ಯನಿರ್ವಹಿಸುತ್ತಿದ್ದು, ಇನ್ನೆರಡು ಸ್ಥಾಪನೆಗೆ ಯೋಜಿಸಲಾಗಿದೆ. ಇಲ್ಲಿ 2ನೇ ಪಿಟ್ ಲೈನ್ ಕಾಮಗಾರಿಗೆ ಭೂಮಿಯ ಅವಶ್ಯಕತೆ ಇದೆ. ವಾಡಿ-ಶಹಾಬಾದ ಮದ್ಯೆ 2 ರೈಲ್ವೆ ರಸ್ತೆ ಮೇಲ್ಸೇತುವೆ ನಿರ್ಮಿಸಲು ಅನುಮೋದನೆಗೆ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸೋಲಾಪುರ ರೈಲ್ವೆ ವಿಭಾಗದ ಅಧಿಕಾರಿಗಲು ಸಭೆಯ ಗಮನಕ್ಕೆ ತಂದರು.
ಕಲಬುರಗಿ ವಿಮಾನ ನಿಲ್ದಾಣದ ಬಹುತೇಕ ಎಲ್ಲಾ ಕಾಮಗಾರಿಗಳನ್ನು ಪ್ಯಾಕೇಜ್ 1, 2 ಮತ್ತು 3ರಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ವಾಣಿಜ್ಯ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ವಿಮಾನ ನಿಲ್ದಾಣಕ್ಕೆ ನಿರ್ದೇಶಕರನ್ನು ನೇಮಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರತ್ಯೇಕವಾಗಿ ನೀರು ಸರಬರಾಜು ಮತ್ತು ವಿದ್ಯುತ್ ಸರಬರಾಜು ಒದಗಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಪಿಎಸಿ ಸಮಿತಿ ನಿರ್ದೇಶನÀದನ್ವಯ ಕೆಲವೊಂದು ಅಗತ್ಯ ಕಾಮಗಾರಿಗಳು ಇಲ್ಲಿ ಕೈಗೊಳ್ಳಬೇಕಾಗಿದ್ದು, ಇದಕ್ಕಾಗಿ 6.5 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರ್ ಅಮೀನ ಮುಖ್ತಾರ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಚಿತ್ತಾಪುರ ಕ್ರಾಸ್-ಯಾದಗಿರಿ ವರೆಗಿನ 37 ಕಿ.ಮಿ.ರಸ್ತೆ ಪೈಕಿ ಈಗಾಗಲೆ 28 ಕಿ.ಮಿ. ರಸ್ತೆ ಪೂರ್ಣಗೊಂಡಿದ್ದು, 9 ಕಿ.ಮಿ. ರಸ್ತೆ ಪ್ರಗತಿಯಲ್ಲಿದೆ. ಹುಮನಾಬಾದ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ 50 ಮತ್ತು ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ 150 ರಡಿ ಒಟ್ಟಾರೆ 106 ಎಕರೆ ಭೂಮಿ ಭೂಸ್ವಾಧೀನಕ್ಕೆ ಅವಶ್ಯಕತೆ ಇದೆ ಎಂದು ರಾಷ್ಟರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಸಭೆಗೆ ವಿವರಿಸಿದರು.
ಸಭೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ, ಕಲಬುರಗಿ ದಕ್ಷಿಣ ಶಾಸಕಿ ಕನೀಜ್ ಫಾತಿಮಾ, ಅಫಜಲಪುರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಮಲ್ಲಮ್ಮ ಎಸ್.ವಳಕೇರಿ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಪಾಲಿಕೆಯ ಆಯುಕ್ತೆ ಬಿ.ಫೌಜಿಯಾ ತರನ್ನುಮ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲರನ್ನೂ ಸಮಾನರಾಗಿ ಕಂಡ ಶಿವಾಜಿ ಮಹಾರಾಜರ ಅವಶ್ಯಕತೆ ಇಂದಿಗೂ ಪ್ರಸ್ತುತ
*************************************************************************
ಕಲಬುರಗಿ,ಫೆ.19(ಕ.ವಾ.)-ಶಿವಾಜಿ ಮಹಾರಾಜರು ಒಂದೇ ಸಮುದಾಯಕ್ಕೆ ಸೀಮಿತರಾಗಿಲ್ಲ. ಅವರು ಎಲ್ಲ ಸಮುದಾಯ, ಧರ್ಮಗಳನ್ನು ಸಮಾನವಾಗಿ ಪರಿಗಣಿಸಿ ಎಲ್ಲರನ್ನೂ ಜೊತೆಗೂಡಿಸಿ ಮುನ್ನಡೆಯುತ್ತಿದ್ದರು. ಇಂದು ಅಂಥಹ ಮಹಾನ್ ವ್ಯಕ್ತಿಗಳ ಅವಶ್ಯಕತೆ ಇದೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಹೇಳಿದರು.
ಅವರು ಮಂಗಳವಾರ ಕಲಬುರಗಿಯ ಡಾ.ಎಸ್.ಎಂ ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯ ತರಹ ಈಗಿನ ತಾಯಂದಿರು ತಮ್ಮ ಮಕ್ಕಳಿಗೆ ಮಹಾರಾಜ ಶಿವಾಜಿಯವರ ತತ್ವ ಸಿದ್ದಾಂತಗಳನ್ನು ತಿಳಿಹೇಳುವ ಮೂಲಕ ಮಕ್ಕಳಲ್ಲಿ ಶಿವಾಜಿ ಮಹಾರಾಜರಲ್ಲಿದ್ದ ದೈರ್ಯವನ್ನು ತುಂಬಬೇಕು. ಮಕ್ಕಳನ್ನು ಶ್ರೇಷ್ಠ ಹೊರಟಗಾರರನ್ನಾಗಿಸಬೇಕು ಎಂದರು.
ಭರತಖಂಡದ ಮೇಲೆ ಪರಕೀಯರಿಂದ ದಾಳಿ, ದೇವಸ್ಥಾನಗಳÀ ವಿನಾಶ, ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಅನ್ಯಾಯವಾದಾಗ ಶಿವಾಜಿ ಮಹಾರಾಜರು ಅವರ ವಿರುದ್ದ ಹೊರಾಡಿ ಅಖಂಡ ಭಾರತ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದ ಮಹಾನ್ ಚೇತನರಾಗಿದ್ದಾರೆ ಎಂದು ಹೇಳಿದರು.
ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕ ಬಸವರಾಜ ಬಿ.ಮತ್ತಿಮೂಡ ಮಾತನಾಡಿ, ಧೈರ್ಯ ಶಕ್ತಿಗೆ ಮತ್ತೊಂದು ಹೆಸರೇ ಛತ್ರಪತಿ ಶಿವಾಜಿ ಮಹಾರಾಜರು. ಪ್ರಾಣದ ಹಂಗು ತೊರೆದು ಹೊರಾಡಿದ ಮಹಾನ್ ರಾಜರು. ಬ್ರೀಟಿಷರು ಕೂಡ ಛತ್ರಪತಿ ಶಿವಾಜಿ ಮಹಾರಾಜರ ಆಡಳಿತದ ಅಂಶಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡಿದ್ದರು. ಇದರಿಂದ ಶಿವಾಜಿ ಮಹಾರಾಜ ಒಬ್ಬ ಶ್ರೇಷ್ಠ ವಿಚಾರವುಳ್ಳ ವ್ಯಕ್ತಿ ಎಂಬುದು ತಿಳಿದುಬರುತ್ತದೆ ಎಂದು ಹೇಳಿದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಮ ಪ್ರಸ್ತಾವಿಕ ಮಾತನಾಡಿ, ಶಿವಾಜಿ ಜಯಂತಿಯನ್ನು ದೇಶವಲ್ಲದೇ ವಿದೇಶದಲ್ಲಿಯೂ ಕೂಡ ಆಚರಣೆ ಮಾಡಲಾಗುತ್ತಿದೆ. ಸರ್ಕಾರವು ಮರಾಠಾ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು, ಕಲಬುರಗಿ ಜಿಲ್ಲೆಯಲ್ಲಿ ಒಂದು ಮರಾಠ ಭವನ ನಿರ್ಮಿಸಿ ಕೂಡಬೇಕು ಎಂಬ ಬೇಡಿಕೆಗಳನ್ನಿಟ್ಟರು.
ಸಂತ ಜೋಸೆಫ್ ಪಿ.ಯು.ಕಾಲೇಜಿನ ಉಪನ್ಯಾಸಕ ಹಾಗೂ ಸಾಹಿತಿ ಡಾ.ಚಿ.ಸಿ ನಿಂಗಣ್ಣ ವಿಶೇಷ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಆರ್.ಬಿ.ಜಗದಾಳೆ, ಗೌರವಾಧ್ಯಕ್ಷ ಡಾ.ದಿನಕರ ಮೋರೆ, ಶಿಷ್ಠಾಚಾರ ತಶಿಲ್ದಾರ ಪ್ರಕಾಶ ಚಿಂಚೋಳಿಕರ, ಕಲಬುರಗಿ ತಶಿಲ್ದಾರ ಸಂಜೀವಕುಮಾರ, ಮರಾಠ ಸಮುದಾಯದ ಮುಖಂಡರಾದ ರತನ್ ರಾವ ಮೋರೆ, ಜೀವನ ರಾವ ಮೋರೆ, ವೆಂಕಟೇಶ ಮೋರೆ, ಪ್ರತಾಪ್ ತಾಕಡೆ, ಸುಭಾಷ ಮೋರೆ ಸೇರದಂತೆ ಅನೇಕರು ಉಪಸ್ಥಿತರಿದ್ದರು.
ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಣೆ ಮಾಡಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸ್ವಾಗತಿಸಿದರು, ಆರ್.ಬಿ.ಜಗದಾಳೆ ವಂದಿಸಿದರು.
ಇದಕ್ಕು ಮುನ್ನ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಕಲಬುರಗಿ ನಗರದ ಐರವಾಡಿ ಹನುಮಾನ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಸೂಪರ್ ಮಾರ್ಕೇಟ್, ಜಗತ್ ವೃತ್ತದ ಮೂಲಕ ಡಾ.ಎಸ್.ಎಂ ಪಂಡಿತ ರಂಗಮಂದಿರದವರೆಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.
ಫೆಬ್ರವರಿ 21ರಂದು
*****************
ಜಿಲ್ಲಾ ಸಚಿವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ-ಉದ್ಘಾಟನೆ
**************************************************************
ಕಲಬುರಗಿ,ಫೆ.19.(ಕ.ವಾ.)-ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳ ಒಟ್ಟು 112.94 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಫೆಬ್ರವರಿ 21 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ರಾಜಾಪುರ ರಸ್ತೆಯಲ್ಲಿರುವ ಆರ್.ಟಿ.ಓ. ಕ್ರಾಸ್‍ನ ಡಾ.ಬಿ.ಆರ್. ಅಂಬೇಡ್ಕರ ವಸತಿ ನಿಲಯ ಆವರಣದಲ್ಲಿ ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು.
ಸಮಾಜ ಕಲ್ಯಾಣ ಇಲಾಖೆಯ 6.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೋಟನೂರ ಡಿ ಬಡಾವಣೆಯ ಕಲಬುರಗಿ ಟೌನ್ (ಪದವಿ) ಸರ್ಕಾರಿ ಕಾಲೇಜು ಬಾಲಕರ ವಸತಿ ನಿಲಯ, 6.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೋಟನೂರ ಡಿ ಬಡಾವಣೆಯ ಕಲಬುರಗಿ ಟೌನ್ ಬ್ಲಾಕ್-ಎ ಸರ್ಕಾರಿ ಕಾಲೇಜು ಬಾಲಕರ ವಸತಿ ನಿಲಯ, 5.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವಿಶ್ವವಿದ್ಯಾಲಯದ ಆವರಣದಲ್ಲಿನ ಕಲಬುರಗಿ ಟೌನ್ (ಹೊಸ) ಸರ್ಕಾರಿ ಸ್ನಾತಕೋತ್ತರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಹಾಗೂ 9.3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕುಸನೂರ ರಸ್ತೆಯ ಸರ್ಕಾರಿ ಪದವಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟಿಸುವರು.
ಅದೇ ರೀತಿ 22.7 ಕೋಟಿ ರೂ. ವೆಚ್ಚಗಳಲ್ಲಿ ಕಲಬುರಗಿ ಟೌನ್ (ಎಂ.ಎಸ್.) ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಕಲಬುರಗಿ ಟೌನ್ ಹಾಗೂ ಕಲಬುರಗಿ (ಪರಿಶಿಷ್ಟ ಪಂಗಡ) ಮೆಟ್ರಿಕ್ ನಂತರದ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಹಾಗೂ 11.75 ಕೋಟಿ ರೂ. ವೆಚ್ಚದ ಕಲಬುರಗಿ ಟೌನ್ ಸರ್ಕಾರಿ ಬಿ.ಆರ್. ಅಂಬೇಡ್ಕರ ಪದವಿ ಪೂರ್ವ ಬಾಲಕರ ವಸತಿ ನಿಲಯ, 11.73 ಕೋಟಿ ರೂ. ವೆಚ್ಚದ ಕಲಬುರಗಿ ಟೌನ್ ಸರ್ಕಾರಿ ಬಾಬು ಜಗಜೀವನರಾಂ ಪದವಿ ಪೂರ್ವ ಕಾಲೇಜು ಬಾಲಕರ ವಸತಿ ನಿಲಯ ಹಾಗೂ 10 ಕೋಟಿ ರೂ. ವೆಚ್ಚದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಲಾ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ (ಆಜಾದಪುರ) ಕರುಣೇಶ್ವರ ನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಕಲಬುರಗಿ ಶಾಂತಿ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ಗಾಬ್ರೆ ಲೇಔಟ್‍ನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳನ್ನು ಉದ್ಘಾಟಿಸುವರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಲಾ 1.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಲಬುರಗಿಯ ಕೆ.ಎನ್.ಝಡ್. ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಕೆ.ಎನ್.ಝಡ್-2 ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಹಾಗೂ ಮದಿನಾ ಕಾಲೋನಿಯ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ನಿಲಯಗಳನ್ನು ಉದ್ಘಾಟಿಸುವರು. ಅದೇ ರೀತಿ ತಲಾ 2 ಕೋಟಿ ರೂ. ವೆಚ್ಚದ ಜಫರಾಬಾದ ಮತ್ತು ಮಾಲಗತ್ತಿಗಳ ವೃತ್ತಿಪರ ಬಾಲಕಿಯರ ವಸತಿ ನಿಲಯಗಳಿಗೆ ಹಾಗೂ ಉದನೂರ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.
ಲೋಕೋಪಯೋಗಿ ಇಲಾಖೆಯ ತಲಾ 2.5 ಕೋಟಿ ರೂ. ವೆಚ್ಚದ ಕಲಬುರಗಿ ನಗರದಲ್ಲಿನ ಸ್ಥಳೀಯ ಲೆಕ್ಕಪರಿಶೋಧನಾ ವೃತ್ತ ಕಚೇರಿ ಕಟ್ಟಡ ಹಾಗೂ ಲೆಕ್ಕ ಪರಿಶೋಧನಾ ಅಧಿಕಾರಿಗಳ ವಸತಿ ಕಟ್ಟಡಗಳನ್ನು, 1.5 ಕೋಟಿ ರೂ. ವೆಚ್ಚದ ಕಲಬುರಗಿ ನಗರದ ಮಹಲ್ ಶಾಹಿ ಆವರಣದಲ್ಲಿ ಎ ಟೈಪ್ ಮಾದರಿಯ ಸರ್ಕಾರಿ ವಸತಿ ಗೃಹ ಹಾಗು ಬಿ. ಟೈಪ್ ಮಾದರಿಯ ಸರ್ಕಾರಿ ವಸತಿ ಗೃಹಗಳನ್ನು ಉದ್ಘಾಟಿಸುವರು.
ಅದೇ ರೀತಿ ತಲಾ 2 ಕೋಟಿ ರೂ. ವೆಚ್ಚದ (ಹೈ.ಕ.ಪ್ರ.ಅ.ಮಂ.) ಕಲಬುರಗಿ ನಗರದ ಜೆ.ಆರ್. ನಗರದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆ (ಕಲಬುರಗಿ ಕಡಾಯಿ ಹೊಟೇಲ್)ದಿಂದ ಕೆ.ಹೆಚ್.ಬಿ. ಕಾಲೋನಿವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.
ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿಯಾದ ಡಾ. ಅಜಯ ಸಿಂಗ್ ವಿಶೇಷ ಆಹ್ವಾನಿತರಾಗಿ ಹಾಗೂ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಬಸವರಾಜ ಬಿ. ಮತ್ತಿಮೂಡ, ಖನೀಜ್ ಫಾತೀಮಾ, ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಸುಬೋಧ ಯಾದವ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ. ಕುಮಾರನಾಯಕ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ವಿಕಾಶ ಕುಮಾರ ವಿಕಾಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಗೂ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.














ಹೀಗಾಗಿ ಲೇಖನಗಳು News and Photo Date:19-02-2019

ಎಲ್ಲಾ ಲೇಖನಗಳು ಆಗಿದೆ News and Photo Date:19-02-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date:19-02-2019 ಲಿಂಕ್ ವಿಳಾಸ https://dekalungi.blogspot.com/2019/02/news-and-photo-date19-02-2019.html

Subscribe to receive free email updates:

0 Response to "News and Photo Date:19-02-2019"

ಕಾಮೆಂಟ್‌‌ ಪೋಸ್ಟ್‌ ಮಾಡಿ