News and photo Date: 28-2-2019

News and photo Date: 28-2-2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 28-2-2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 28-2-2019
ಲಿಂಕ್ : News and photo Date: 28-2-2019

ಓದಿ


News and photo Date: 28-2-2019

ಬರಗಾಲದಿಂದ ಜಿಲ್ಲೆಯ ಒಟ್ಟು 453.58 ಕೋಟಿ ರೂ. ಹಾನಿ ವರದಿ ಸಲ್ಲಿಕೆ
***************************************************************
ಕಲಬುರಗಿ,ಫೆ.28.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಬರಗಾಲದಿಂದಾಗಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಒಟ್ಟು 6.64 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಒಟ್ಟು ಸುಮಾರು 453.58 ಕೋಟಿ ರೂ. ಹಾನಿಯಾಗಿರುವ ಕುರಿತು ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಗುರುವಾರ ಕಲಬುರಗಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಬರಗಾಲ ಪರಿಸ್ಥಿತಿ ಕುರಿತು ವಿವರಣೆ ನೀಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ 6.56 ಲಕ್ಷ ಹೇಕ್ಟರ್ ಪ್ರದೇಶದ ಪೈಕಿ 4.17 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದ್ದು, ಹಾನಿಯು ಸುಮಾರು 290.89 ಕೋಟಿ ರೂ. ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಒಟ್ಟು 2.65 ಲಕ್ಷ ಹೆಕ್ಟೇರ್ ಪೈಕಿ 2.47 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು ಒಟ್ಟು 162.69 ಕೋಟಿ ರೂ. ಹಾನಿ ಎಂದು ವರದಿ ಸಲ್ಲಿಸಲಾಗಿದೆ ಎಂದರು.
ಮುಂಗಾರು ಹಂಗಾಮಿನಲ್ಲಿ ಮಳೆಯಾಗದ ಕಾರಣ ಜಿಲ್ಲೆಯ ಆಳಂದ ಹೊರತುಪಡಿಸಿ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಹಿಂಗಾರು ಹಂಗಾಮಿನಲ್ಲಿಯೂ ಸಮರ್ಪಕ ಮಳೆಯಾಗದ ಕಾರಣ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಬರಗಾಲದಿಂದಾಗಿ ಜಿಲ್ಲೆಯ ಕುಡಿಯುವ ನೀರಿಗಾಗಿ ಬಳಸುವ ಜಲಾಶಯಗಳಲ್ಲಿಯೂ ಸಹ ನೀರು ಸಾಕಷ್ಟು ಪ್ರಮಾಣದಲ್ಲಿ ಇಲ್ಲದಂತಾಗಿದೆ. ಬರಗಾಲದಿಂದಾಗಿ ತಲೆದೊರಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು 16 ಕೋಟಿ ರೂ.ಗಳ ಹೆಚ್ಚುವರಿ ಕ್ರಿಯಾ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಧ್ಯದ ಪರಿಸ್ಥಿತಿಯಲ್ಲಿ 10 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, 8 ಗ್ರಾಮಗಳಿಗೆ ಖಾಸಗಿ ಬೋರವೇಲ್‍ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 614 ಮಿ.ಮೀ. ಮಳೆಯಾಗಬೇಕು. ಆದರೆ ಕೇವಲ 361 ಮಿ.ಮೀ. ಮಳೆಯಾಗಿದ್ದು, ಶೇ. 41 ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿ ಹಿಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ 127 ಮಿ.ಮೀ. ಆಗಬೇಕಾಗಿತ್ತು. ಕೇವಲ 52 ಮಿ.ಮೀ. ಮಳೆಯಾಗಿ ಶೇ. 59 ರಷ್ಟು ಕೊರತೆಯಾಯಿತು. ವರ್ಷ ಪೂರ್ತಿ ವಾಡಿಕೆಯಂತೆ ಜಿಲ್ಲೆಗೆ 812 ಮಿ.ಮೀ.ಮಳೆಯಾಗಬೇಕಾಗಿದ್ದು, ಕೇವಲ 495 ಮಿ.ಮೀ.ಮಳೆಯಾಗಿ ಶೇ. 40 ರಷ್ಟು ಕೊರತೆಯಾಗಿದೆ. ಇದರಿಂದಾಗಿ ತೇವಾಂಶದ ಕೊರತೆಯಿಂದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಪಂಚಾಯತ್‍ಮಟ್ಟದಲ್ಲಿ ಜಂಟಿ ಸಮೀಕ್ಷೆಗಾಗಿ ತಂಡಗಳನ್ನು ರಚಿಸಿ ಬೆಳೆ ಹಾನಿಯ ನಿಖರ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಪಶು ಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ನಾಮದೇವ ರಾಠೋಡ ಮಾತನಾಡಿ ಮಾರ್ಚ್ ಅಂತ್ಯದವರೆಗೆ ಜಾನುವಾರುಗಳಿಗೆ ಜಿಲ್ಲೆಯಲ್ಲಿ ಮೇವು ಲಭ್ಯವಿದ್ದು, ಮಾರ್ಚ್ ಮಾಹೆಯಿಂದ ಜಿಲ್ಲೆಗೆ ಮೇವು ಸರಬರಾಜುಗಾಗಿ ಟೆಂಡರ್ ಕರೆಯಲಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಭಾಗದಿಂದ ಒಣ ಮೇವು ಪಡೆಯಲಾಗುತ್ತಿದೆ. ಪ್ರತಿಯೊಂದು ತಾಲೂಕಿನಲ್ಲಿ ಕನಿಷ್ಠ ಎರಡು ಮೇವು ಬ್ಯಾಂಕ್ ಹಾಗೂ ಎರಡು ಗೋಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಮಾರ್ಚ್ ದಿಂದ ಮೇ ಮಾಹೆಯವರೆಗೆ ಮೇವು ಬ್ಯಾಂಕ್ ಮತ್ತು ಗೋಶಾಲೆಗಳ ನಿರ್ವಹಣೆಗಾಗಿ ಒಟ್ಟು 559 ಲಕ್ಷ ರೂ.ಗಳ ಅವಶ್ಯಕತೆಯ ವರದಿಯನ್ನು ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಮಾತನಾಡಿ, ಕಲಬುರಗಿ ಜಿಲ್ಲೆಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 25 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನೀಡಲಾಗಿತ್ತು. ಈ ಗುರಿಯನ್ನು ತಲುಪಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 5 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನೀಡಲಾಗಿದೆ. ಈಗಾಗಲೇ 68 ಕೋಟಿ ರೂ.ಗಳ ವೆಚ್ಚ ಮಾಡಲಾಗಿದ್ದು, ಪ್ರತಿದಿನ 25,000 ಮಾನವ ದಿನಗಳ ಸೃಜನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 2940 ಕುಟುಂಬಗಳು 100 ದಿನಗಳ ಕೂಲಿ ಪೂರೈಸಿದ್ದಾರೆ. ಒಟ್ಟು 76773 ಕುಟುಂಬಗಳಿಗೆ ಕೂಲಿ ನೀಡಲಾಗಿದೆ. ಈವರೆಗೆ ಶೇ. 97 ರಷ್ಟು ಕುಟುಂಬಗಳಿಗೆ ಕೂಲಿ ಹಣ ಪಾವತಿಸಲಾಗಿದ್ದು, ಈ ಹಿಂದೆ ಪಾವತಿ ಮಾಡಬೇಕಾಗಿದ್ದ 21 ಕೋಟಿ ರೂ. ಕೂಲಿ ಹಣದ ಪೈಕಿ ಈಗಾಗಲೇ 18 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಬೇಸಿಗೆಯಲ್ಲಿ ಜನರು ಗುಳೆ ಹೋಗದಂತೆ ತಡೆಯಲು ಎಲ್ಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಹಾಗೂ ಎಲ್ಲರಿಗೂ ಕೂಲಿ ಸಿಗುವ ಹಾಗೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಬರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಸುಪರ್ಣಾ ಪಚೌರಿ, ತಂಡದ ಸದಸ್ಯರಾದ ಖರ್ಚು ಇಲಾಖೆಯ ಸಲಹೆಗಾರ ಆರ್.ಬಿ. ಕೌಲ್ ಹಾಗೂ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನಾ ಕೇಂದ್ರದ (ಎಂ.ಎನ್.ಸಿ.ಎಫ್.ಸಿ.) ಸಹಾಯಕ ನಿರ್ದೇಶಕಿ ಡಾ. ಶಾಲಿನಿ ಸಕ್ಸೆನಾ, ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಧರಣಿ ಸತ್ಯಾಗ್ರಹ ನಿಲ್ಲಿಸುವಂತೆ ಕಾಂತಾಗೆ ಜಿಲ್ಲಾ ಸಚಿವರ ಮನವಿ
*********************************************************
ಕಲಬುರಗಿ,ಫೆ.28.(ಕ.ವಾ.)-ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಅನಿರ್ದಿಷ್ಟ ಕಾಲದ ಸತ್ಯಾಗ್ರಹದಲ್ಲಿ ನಿರತರಾಗಿರುವ ಮುಖಂಡ ಎಸ್.ಕೆ. ಕಾಂತಾ ಅವರು ಧರಣಿ ಸತ್ಯಾಗ್ರಹ ನಿಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಮನವಿ ಮಾಡಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಧರಣಿ ನಿರತ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರನ್ನು ಭೇಟಿಯಾಗಿ ಮಾತನಾಡಿ, ತಮ್ಮ ಉಪಸ್ಥಿತಿಯಲ್ಲಿ ಶ್ರೀಸಿಮೆಂಟ್ ಹಾಗೂ ಇನ್ನಿತರ ಸಮಸ್ಯೆಗಳನ್ನು ಚರ್ಚಿಸಲು ಅನುಕೂಲವಾಗುವ ಹಾಗೆ ಸಭೆಗಳನ್ನು ಕರೆಯೋಣ. ಸಂಬಂಧಿಸಿದ ಅಧಿಕಾರಿ ಹಾಗೂ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸುವ ಮೂಲಕ ರೈತರ ತೊಂದರೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವುದು. ತಾವು ಧರಣಿ ಸತ್ಯಾಗ್ರಹದಲ್ಲಿ ಕುಳಿತುಕೊಳ್ಳುವ ಬದಲು ಸಾಧ್ಯವಾದರೆ ಸಭೆಗಳಲ್ಲಿ ಭಾಗವಹಿಸಬೇಕು. ರೈತರಿಗಾಗಿರುವ ತೊಂದರೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಧರಣಿ ಸತ್ಯಾಗ್ರಹ ಕೈಬಿಟ್ಟರೆ ಹೋರಾಟ ಕೊನೆಗೊಂಡಂತೆ ಎಂದು ಭಾವಿಸಬಾರದು ಎಂದರು.
ಖಾಸಗಿ ಕಂಪನಿಗಳಿಗೆ ಜಮೀನು ನೀಡಿರುವ ರೈತರ ಕುಟುಂಬದವರನ್ನು ಅದೇ ಕಂಪನಿಯಲ್ಲಿ ನೌಕರರಿಗೆ ತೆಗೆದುಕೊಳ್ಳಬೇಕೆಂದು ಡಾ. ಮಹಿಷಿ ವರದಿಯಲ್ಲಿ ತಿಳಿಸಲಾಗಿದೆ. ಅದಕ್ಕೂ ಹೆಚ್ಚಾಗಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೇರೆ ರಾಜ್ಯ ಅಥವಾ ರಾಷ್ಟ್ರದ ಕಂಪನಿಗಳು ನಮ್ಮ ರಾಜ್ಯದಲ್ಲಿ ಪ್ರಾರಂಭವಾದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಿರ್ಣಯಿಸಲಾಗಿದೆ. ಇದನ್ನು ಜಾರಿಗೆ ತರಲಾಗುವುದು. ಸೇಡಂ ಮತ್ತು ಕಲಬುರಗಿಯಲ್ಲಿ ನೂತನವಾಗಿ ಪ್ರಾರಂಭಿಸುತ್ತಿರುವ ಕಂಪನಿಗಳ ಅಧ್ಯಕ್ಷರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರೆಯಿಸಿ ಚರ್ಚಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಶ್ರೀಸಿಮೆಂಟ್ ಕಂಪನಿ ಬಗ್ಗೆಯೂ ತನಿಖೆ ಮಾಡಿಸಲು ಹೇಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೆರೆ ಒತ್ತುವರಿ ಕುರಿತಂತೆ ಕೆರೆಗಳ ಸಂರಕ್ಷಣೆ ಮತ್ತು ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆರೆ ಒತ್ತುವರಿ ವರದಿಯನ್ನು ಪಡೆಯಲಾಗುತ್ತಿದೆ. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಈಗಾಗಲೇ ಒಂದು ಸಭೆ ಜರುಗಿಸಲಾಗಿದ್ದು, ಪ್ರಥಮ ಹಂತವಾಗಿ ಕಲಬುರಗಿ ನಗರದಲ್ಲಾಗಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು. ಅದೇ ರೀತಿ ವಕ್ಫ್ ಮತ್ತು ಸರ್ಕಾರಿ ಜಮೀನುಗಳ ಒತ್ತುವರಿ ಬಗ್ಗೆಯೂ ವರದಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ವೈ. ಪಾಟೀಲ, ಗಣ್ಯರಾದ ಜಗದೇವ ಗುತ್ತೇದಾರ್, ಅಲ್ಲಮಪ್ರಭು ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಸ್ವಸಹಾಯ ಸಂಘದ ಸದಸ್ಯರಿಗೆ ನಿವೇಶನ
*************************************
ಕಲಬುರಗಿ,ಫೆ.28.(ಕ.ವಾ.)-ಕಲಬುರಗಿ ನಗರದಲ್ಲಿರುವ ಸುಮಾರು 500 ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಅನುಕೂಲವಾಗುವ ಹಾಗೆ ನಿವೇಶನಗಳನ್ನು ದೊರಕಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಅವರು ಗುರುವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಬೃಹತ್ ಜನಸ್ಪಂದನ ಸಭೆಯಲ್ಲಿ ಶಾಂಭವಿ ಮಹಿಳಾ ವಿವಿದ್ದೋದ್ದೇಶ ಸಂಘದ ಮನವಿಯನ್ನು ಆಲಿಸಿ, ನಗರದ ಅಕ್ಕಪಕ್ಕದಲ್ಲಿ ನಿವೇಶನ ದೊರಕಿಸಲಾಗುವುದು. ಆದರೆ ನಿವೇಶನ ದೂರದಲ್ಲಿವೆ ಎಂದು ಸ್ವಸಹಾಯ ಸಂಘದವರು ಪುನ: ಮನವಿ ಸಲ್ಲಿಸಬಾರದು ಎಂದು ತಿಳಿಸಿ ಕಲಬುರಗಿ ನಗರದ ಸಮೀಪದಲ್ಲಿ ಮಹಿಳಾ ಸ್ವಸಹಾಯ ಸಂಘದವರು ಮನೆ ನಿರ್ಮಿಸಲು ಅನುಕೂಲವಾಗುವ ಹಾಗೆ ಜಮೀನು ಗುರುತಿಸಿ ವರದಿ ನೀಡಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಸರ್ಕಾರ ನಿಗದಿಪಡಿಸಿರುವ ಸಾಲ ಯೋಜನೆಗಳಿಗೆ ಬ್ಯಾಂಕುಗಳು ಸ್ಪಂದಿಸುತ್ತಿಲ್ಲ. ಎರಡು ವರ್ಷಗಳಿಂದ ಫಲಾನುಭವಿಗಳಿಗೆ ಸಾಲ ನೀಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಫಲಾನುಭವಿಗಳಿಗೆ ಪ್ರೋತ್ಸಾಹಧನ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದರೂ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಈ ಕುರಿತು ಲೀಡ್ ಬ್ಯಾಂಕ್ ಮ್ಯಾನೇಜರ್ ಜವಾಬ್ದಾರಿ ವಹಿಸಬೇಕು. ನಾಲವಾರ ಬ್ಯಾಂಕ್ ಮ್ಯಾನೇಜರ್ ವಿರುದ್ಧ ತುಂಬಾ ದೂರುಗಳಿದ್ದು, ಅವರನ್ನು ಬದಲಾಯಿಸಲು ಕ್ರಮ ಜರುಗಿಸಬೇಕು. ಫಲಾನುಭವಿಗಳಿಗೆ ಸಾಲ ದೊರಕಿಸಬೇಕು ಎಂದು ಸೂಚಿಸಿದರು.
ಕಲಬುರಗಿಯಲ್ಲಿ ಕೆರೆಗಳ ಒತ್ತುವರಿ ಕುರಿತಂತೆ ಕಲಬುರಗಿ ಸಹಾಯಕ ಆಯುಕ್ತರು ವರದಿ ಸಂಗ್ರಹಿಸಬೇಕು. ಎಲ್ಲ ಕೆರೆಗಳ ಪುನರುಜ್ಜೀವನಕ್ಕಾಗಿ ಕ್ರಮ ಜರುಗಿಸಲಾಗುವುದು. ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಲಬುರಗಿ ನಗರದಿಂದ ಪ್ರಾರಂಭಿಸಲಾಗುವುದು. ಜೇವರ್ಗಿ ತಾಲೂಕಿನ ಜನಿವಾರ ಗ್ರಾಮದ ಜಿನಗು ಕೆರೆಯಿಂದ ಪಂಪ್‍ಸೆಟ್ ಮೂಲಕ ನೀರು ಪಡೆಯುತ್ತಿರುವ ಬಗ್ಗೆ ಜೇವರ್ಗಿ ತಹಶೀಲ್ದಾರರು ನಿಖರ ಮಾಹಿತಿ ಸಂಗ್ರಹಿತಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ಎರಡು ತಿಂಗಳಿನಿಂದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಮಗಾರಿ ಪ್ರಾರಂಭಿಸಿಲ್ಲ. ಅಲ್ಲಿಯ ಪಿಡಿಓ ಕಚೇರಿಗೆ ಬರುತ್ತಿಲ್ಲ ಎಂಬ ದೂರುಗಳಿವೆ. ಈ ಕುರಿತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರದ ಜಗತ್ ಪ್ರದೇಶದಲ್ಲಿರುವ ಮಾರುತಿ ನಾರಾಯಣ ಕಾವಳೆ ಎಂಬುವರ ಮನೆಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಮಹಾನಗರ ಪಾಲಿಕೆ ಆಯುಕ್ತರು ನೊಂದವರಿಗೆ ಸಹಾಯ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್, ಲೋಕೋಪಯೋಗಿ, ನಿರ್ಮಿತಿ ಕೇಂದ್ರ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿ ನಿಗಮದವರು ಪ್ರಾರಂಭಿಸಬೇಕಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಆಡಳಿತಾತ್ಮಕ ಮಂಜೂರಾತಿಯನ್ನು ಪಡೆದು ಕೂಡಲೇ ಕಾಮಗಾರಿಗಳ ವರದಿ ಸಲ್ಲಿಸಬೇಕು ಎಂದು ಹೇಳಿದ ಸಚಿವರು ಚಿಂಚೋಳಿ ತಾಲೂಕಿನಲ್ಲಿ U್ಫ್ರಮ ಮತ್ತು ತಾಂಡಾಗಳಲ್ಲಿ ಕುಡಿಯುವ ನೀರಿನ ತೊಂದರೆಯಿದೆ. ಈಗಾಗಲೇ ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚುವರಿ ಅನುದಾನ ಬೇಕಾಗಿದ್ದರೂ ಸಹ ಎಸ್.ಸಿ.ಪಿ., ಟಿ.ಎಸ್.ಪಿ. ಅನುದಾನದಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ನೀಡಲಾಗುವುದು. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಬಿ. ಪೌಜಿಯಾ ತರನ್ನುಮ್, ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ವಳಕೇರಿ, ಉಪ ಮಹಾಪೌರ ಆಲಿಯಾ ಶಿರೀನ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಮಟ್ಟದ ಜನಸ್ಪಂದನ ಸಭೆ: 900 ಅರ್ಜಿಗಳು ಸ್ವೀಕಾರ
****************************************************
ಕಲಬುರಗಿ,ಫೆ.28.(ಕ.ವಾ.)-ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಮೂಲಕ ಸ್ಥಳದಲ್ಲಿಯೇ ಪರಿಹಾರ ನೀಡುವ ಉದ್ದೇಶದಿಂದ ಎಲ್ಲ ಅಧಿಕಾರಿಗಳನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಬೃಹತ್ ಜನಸ್ಪಂದನ ಸಭೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಇಂದು ಸುಮಾರು 900ಕ್ಕಿಂತ ಹೆಚ್ಚು ಕುಂದುಕೊರತೆಗಳು ದಾಖಲಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಅವರು ಗುರುವಾರ ಕಲಬುರಗಿ ಜಿಲ್ಲಾಧಿಕಾರಿಗಳ ಆವರಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಜನಸ್ಪಂದನ ಸಭೆಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ಇಂದು ಕೈಗೊಂಡಿರುವ ಜನಸ್ಪಂದನ ಸಭೆಯ ಯಶಸ್ಸಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮೂರು ತಿಂಗಳು ಅಥವಾ ಆರು ತಿಂಗಳಿಗೊಂದು ಬಾರಿ ಬೃಹತ್ ಮಟ್ಟದ ಜನಸ್ಪಂದನ ಸಭೆಯನ್ನು ನಡೆಸಲು ಯೋಚಿಸಲಾಗುವುದು ಎಂದರು.
ಇಂದಿನ ಜನಸ್ಪಂದನ ಸಭೆಯಲ್ಲಿ ಹೆಚ್ಚಾಗಿ ಕುಡಿಯುವ ನೀರು, ಅಂಗವಿಕಲರ ಪ್ರಮಾಣಪತ್ರ ವಿತರಣೆ, ಕಂದಾಯ ಹಾಗೂ ಕಲಬುರಗಿ ನಗರಕ್ಕೆ ಸಂಬಂಧಿಸಿದ ಅರ್ಜಿಗಳು ಹೆಚ್ಚಾಗಿ ದಾಖಲಾಗಿವೆ. ವಿವಿಧ ಇಲಾಖೆಗಳಿಗೆ ದಾಖಲಾಗಿರುವ ಅರ್ಜಿಗಳನ್ನು ಮೂರು ದಿನದೊಳಗಾಗಿ ಪರಿಹಾರ ಹಾಗೂ ವಿಲೇವಾರಿಯೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕಳೆದ ಬಾರಿ ಜಿಲ್ಲಾಧಿಕಾರಿಗಳು ಅಫಜಲಪುರದಲ್ಲಿ ಜನಸ್ಪಂದನ ಸಭೆ ಕೈಗೊಂಡಿದ್ದರು. ಜನಸ್ಪಂದನ ಸಭೆಯಿಂದ ಇಲಾಖೆಗಳ ಮಧ್ಯ ಸಾಮರಸ್ಯವನ್ನು ಹೆಚ್ಚಿಸುವ ಮೂಲಕ ತೊಂದರೆಗಳನ್ನು ನಿವಾರಿಸಲು ಅನುಕೂಲವಾಗುವುದು ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಣೆಗೆ ತಾಲೂಕು ಮಟ್ಟದಲ್ಲಿರುವ ಟಾಸ್ಕ್‍ಫೋರ್ಸ್ ಸಮಿತಿಗಳಿಗೆ ಈಗಾಗಲೇ ಪ್ರತಿ ಸಮಿತಿಗೆ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕ್ರಿಯಾ ಯೋಜನೆ ರೂಪಿಸಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಪ್ರತಿ ಜಿಲ್ಲಾಪಂಚಾಯಿತಿ ಸದಸ್ಯರಿಗೆ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ.ಅನುದಾನದಡಿ 25 ಲಕ್ಷ ರೂ.ಗಳನ್ನು ಹಾಗೂ ಶಾಸಕರಿಗೆ 1 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಮಂಡಳಿಯವರು ಎಲ್ಲ ಗ್ರಾಮಗಳ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಕ್ರಿಯಾ ಯೋಜನೆಯೊಂದಿಗೆ ಒಂದು ವಾರದಲ್ಲಿ ವರದಿ ನೀಡುವಂತೆ ತಿಳಿಸಲಾಗಿದೆ ಎಂದರು.
ಕಲಬುರಗಿ ನಗರದಲ್ಲಿ 15 ವರ್ಷಗಳ ಹಳೆಯ ಮಾಸ್ಟರ್ ಪ್ಲ್ಯಾನ್ ಇದೆ. ಇದನ್ನು ಸಧ್ಯದ ಜನಸಂಖ್ಯೆಗೆ ಅನುಗುಣವಾಗಿ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿ.ಡಿ.ಎ. ಮಾಸ್ಟರ್ ಪ್ಲ್ಯಾನ್ ಸಮರ್ಪಕವಾಗಿ ಕೈಗೊಳ್ಳಲು ಅರ್ಬನ್ ಪ್ಲಾನರ್‍ಗಳನ್ನು ಸಂಪರ್ಕಿಸಲಾಗುತ್ತಿದೆ. ನಗರದಲ್ಲಿ ಸಮರ್ಪಕ ವಾಹನ ಸಂಚಾರದ ಯೋಜನೆಯು ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಗೃಹ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರಿ ಹಾಗೂ ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ ವರ್ಧಿತ ಮಾಸ್ಟರ್ ಪ್ಲ್ಯಾನ್ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಮಹಾನಗರಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಉಪಸ್ಥಿತರಿದ್ದರು.
ಬರ ಇರುವುದು ಖಾತ್ರಿಯಾಗಿದೆ, ಶೀಘ್ರದಲ್ಲಿಯೆ ಕೇಂದ್ರಕ್ಕೆ ವರದಿ ಸಲ್ಲಿಕೆ
***********************************************************
-ಡಾ.ಸುಪರ್ಣಾ ಪಚೌರಿ
********************
ಕಲಬುರಗಿ.ಫೆ,28(ಕ-ವಾ)- ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಸಂಪೂರ್ಣ ಬರ ಆವರಿಸಿರುವುದು ವೀಕ್ಷಣೆಯಿಂದ ಖಾತ್ರಿಯಾಗಿದ್ದು, ಶೀಘ್ರದಲ್ಲಿಯೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥೆಯಾಗಿರುವ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಸುಪರ್ಣಾ ಪಚೌರಿ ಹೇಳಿದರು.
ಗುರುವಾರ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗ್ರಾಮದ ರೈತ ಸಿದ್ದರಾಮ ಮತ್ತು ಶಿವಶರಣಪ್ಪ ಅವರ ಹೊಲದಲ್ಲಿ ಬೆಳೆದ ಜೋಳ ಮತ್ತು ಕಡಲೆ ಬೆಳೆಗಳು ಮಳೆ ಇಲ್ಲದ ಕಾರಣ ಸಂಪೂರ್ಣ ಬೆಳೆ ನಾಶವಾಗಿರುವುದನ್ನು ವೀಕ್ಷಿಸಲಾಗಿದೆ. ರಾಜ್ಯದಲ್ಲಿನ ಬರ ಅಧ್ಯಯನಕ್ಕೆ ಕೇಂದ್ರದಿಂದ ಒಟ್ಟು ಮೂರು ತಂಡಗಳು ಆಗಮಿಸಿದ್ದು, ಆಯಾ ತಂಡಗಳು ತಮಗೆ ನಿಗದಿಪಡಿಸಿರುವ ಬರ ಪೀಡಿತ ಜಿಲ್ಲೆಗಳಲ್ಲಿ ಅಧ್ಯಯನ ಕೈಗೊಳ್ಳುತ್ತಿವೆ. ಅದರಂತೆ ಕಲಬುರಗಿ ಜಿಲ್ಲೆಗೂ ತ್ರಿಸದಸ್ಯ ತಂಡ ಇಂದು ಭೇಟಿ ನೀಡಿ ಖುದ್ದಾಗಿ ಸ್ಥಳೀಯ ರೈತರಿಂದ ಮಾಹಿತಿ ಪಡೆಯುತ್ತಿದ್ದೇವೆ. ಇದಲ್ಲದೆ ಜಿಲ್ಲಾಡಳಿತದಿಂದ ಬೆಳೆ ನಾಶ, ಮಳೆ ಪ್ರಮಾಣ, ಕುಡಿಯುವ ನೀರಿನ ಅಭಾವ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಸಹ ಪಡೆಯಲಾಗಿದೆ ಎಂದರು.
ಆಯಾ ತಂಡಗಳು ಜಿಲ್ಲೆಗಳಲ್ಲಿ ಬರ ಅಧ್ಯಯನದ ನಂತರ ಮರಳಿ ಬೆಂಗಳೂರಿನಲ್ಲಿ ಒಟ್ಟಾಗಿ ಸೇರಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯವೆನಿಸಿದಲ್ಲಿ ಇನ್ನೀತರ ಪೂರಕ ಮಾಹಿತಿಯನ್ನು ಪಡೆಯಲಾಗುತ್ತದೆ. ತದನಂತರ ದೆಹಲಿಗೆ ಮರಳಿದ ನಂತರ ಕೇಂದ್ರ ಸರ್ಕಾರಕ್ಕೆ ಅಧ್ಯಯನ ತಂಡ ತನ್ನ ವರದಿ ಸಲ್ಲಿಸಲಿದೆ ಎಂದರು.
ಲಾಡ ಚಿಂಚೋಳಿ ಗ್ರಾಮದ ಸಿದ್ದರಾಮ ಬಾಬುರಾವ ಸಾಳುಂಕೆ ಮಾತನಾಡಿ 9 ಎಕರೆಯಲ್ಲಿ ಕಡಲೆ ಹಾಗೂ 5 ಎಕರೆಯಲ್ಲಿ ಜೋಳ ಬೆಳೆದಿದ್ದು ಸಂಪೂರ್ಣ ಬೆಳೆ ನೆಲಕಚ್ಚಿದೆ. ಇನ್ನೋರ್ವ ರೈತ ಶಿವಶರಣಪ್ಪ ಮಾತನಾಡಿ 12 ಎಕರೆಯಲ್ಲಿ ಸಂಪೂರ್ಣ ಜೋಳ ಬೆಳೆದಿದ್ದೇನೆ ಬೆವರು ಸುರಿಸಿದ್ದಕ್ಕೆ ಫಲವಾಗಿ ಇಳುವರಿಯೂ ಇಲ್ಲ, ಅತ್ತ ದನಕರುಗಳಿಗೂ ಮೇವು ಇಲ್ಲ ಎನ್ನುವ ಮೂಲಕ ಭೀಕರ ಬರಗಾಲದ ಚಿತ್ರಣ ತಂಡದ ಮುಂದಿರಿಸಿ, ಸರ್ಕಾರ ನಮಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ತಂಡಕ್ಕೆ ಮನವಿ ಮಾಡಿಕೊಂಡರು.
ನಂತರ ಬರ ಅಧ್ಯಯನ ತಂಡವು ಕಲಬುರಗಿ ತಾಲೂಕಿನ ಹರಸೂರ ಗ್ರಾಮದಲ್ಲಿ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮದಲ್ಲಿ 2018-19ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೈತ ಸಮುದಾಯದ ಸಮಸ್ಯೆಗಳನ್ನು ಆಲಿಸಿತು. ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ದಿನ ಕೂಲಿ ಕೆಲಸ ನೀಡಲಾಗಿದೆ, ಜಾಬ್ ಕಾರ್ಡ್ ವಿತರಣೆ ಮಾಡಲಾಗಿದೆಯೆ, ವಸತಿ ಸೌಲಭ್ಯ ಕಲ್ಪಿಸಲಾಗಿದೆಯೆ ಎಂಬಿತ್ಯಾದಿ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯಿತು. ಜಿಲ್ಲೆಯಲ್ಲಿ ಬರ ಹಿನ್ನೆಲೆಯಲ್ಲಿ ರೈತ ಸಮುದಾಯದ ವಲಸೆ ತಡೆಗಟ್ಟಲು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸದ ದಿನದ ಮಿತಿಯನ್ನು 150ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ತಂಡಕ್ಕೆ ಮಾಹಿತಿ ನೀಡಿದರು.
ತಂಡದ ಸದಸ್ಯರಾದ ಖರ್ಚು ಇಲಾಖೆಯ ಸಲಹೆಗಾರ ಆರ್.ಬಿ. ಕೌಲ್ ಹಾಗೂ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನಾ ಕೇಂದ್ರದ (ಎಂ.ಎನ್.ಸಿ.ಎಫ್.ಸಿ.) ಸಹಾಯಕ ನಿರ್ದೇಶಕಿ ಡಾ. ಶಾಲಿನಿ ಸಕ್ಸೆನಾ, ಬರ ಅಧ್ಯಯನ ತಂಡದ ಜೊತೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ., ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ್ ಸೂಗೂರ, ಆಳಂದ ತಹಶೀಲ್ದಾರ ಬಸವರಾಜ, ಕಲಬುರ್ಗಿ ತಹಶೀಲ್ದಾರ್ ಸಂಜೀವ್ ಕುಮಾರ್, ಆಳಂದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಕಲಬುರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕಲಬುರಗಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ ಶ್ರಿಂಗೇರಿ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ದಿಗ್ಗಾಂವ ಗ್ರಾಮಕ್ಕೂ ಭೇಟಿ ನೀಡಿದ ಸೆಂಟ್ರಲ್ ಸ್ಟಡಿ ಟೀಂ:- ಬರ ಅಧ್ಯಯನ ತಂಡ ಇದಕ್ಕು ಮುನ್ನ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಬರಕ್ಕೆ ತುತ್ತಾಗಿರುವ ಹೊಲಗಳ ವೀಕ್ಷಣೆ ಮಾಡಿತು. ನಂತರ ಗ್ರಾಮದ ನಿವಾಸಿಗಳಿಗೆ ಜಿಲ್ಲಾಡಳಿತವು ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದನ್ನು ಸಹ ಗಮನಿಸಿತು.
ಲೋಕಸಭಾ ಸದಸ್ಯರ ಪ್ರವಾಸ
**************************
ಕಲಬುರಗಿ,ಫೆ.28.(ಕ.ವಾ.)-ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮುಂಬಯಿಯಿಂದ ವಿಶೇಷ ವಿಮಾನದ ಮೂಲಕ ಮಾರ್ಚ್ 2 ರಂದು ಮಧ್ಯಾಹ್ನ 12 ಗಂಟೆಗೆ ಕಲಬುರಗಿಗೆ ಆಗಮಿಸಿ, ಅಂದು ಸಂಜೆ 4 ಗಂಟೆಗೆ ಕಲಬುರಗಿಯಲ್ಲಿ ಎರಡು ಆರ್.ಓ. ಪ್ಲಾಂಟ್‍ಗಳನ್ನು ಉದ್ಘಾಟಿಸುವರು. ನಂತರ ಎರಡು ಆರ್.ಓ. ಪ್ಲಾಂಟ್‍ಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಮಾರ್ಚ್ 3 ರಂದು ಬೆಳಿಗ್ಗೆ 11 ಗಂಟೆಗೆ ಉದಯಕಲಾ ಕನ್ನಡ ದಿನಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಫರತಹಾಬಾದನಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವರು. ಸಂಜೆ 5 ಗಂಟೆಗೆ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಬ್ರಿಜ್ಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮಾರ್ಚ್ 4 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಮಾರ್ಚ್ 5 ರಂದು ಮಧ್ಯಾಹ್ನ 12 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
ಮಾರ್ಚ್ 1ರಂದು ಕಾರ್ಮಿಕರ ಸಮ್ಮಾನ ದಿನ
***************************************
ಕಲಬುರಗಿ,ಫೆ.28,(ಕ.ವಾ)-ಕಲಬುರಗಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವುಗಳ ಸಂಯುಕ್ತಾಶ್ರಯದಲ್ಲಿ 2019ರ ಮಾರ್ಚ್ 1 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ “ಕಾರ್ಮಿಕರ ಸಮ್ಮಾನ ದಿನ”ವನ್ನು ಏರ್ಪಡಿಸಲಾಗಿದೆ.
ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜೇವರ್ಗಿ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿಯಾದ ಡಾ. ಅಜಯ ಸಿಂಗ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಎಂ.ವಾಯ್. ಪಾಟೀಲ, ಸುಭಾಷ ಆರ್. ಗುತ್ತೇದಾರ್, ಬಸವರಾಜ ಬಿ. ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ, ಖನೀಜ್ ಫಾತೀಮಾ ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಬಿ. ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮದಲ್ಲಿ ವಿಶೇಷ ಪುರಸ್ಕಾರ ಪ್ರಶಸ್ತಿ ಹಾಗೂ ಶ್ರಮ ಸಮ್ಮಾನ್ ಪ್ರಶಸ್ತಿ ವಿತರಿಸಲಾಗುವುದು.
ಲೋಕಸಭಾ ಚುನಾವಣೆ:
ಅಕ್ರಮ ಸರಾಯಿ, ಮದ್ಯ ಸಾಗಾಟ ತಡೆಯಲು ನಿಯಂತ್ರಣಾ ಕೊಠಡಿ ಸ್ಥಾಪನೆ
*****************************************************************
ಕಲಬುರಗಿ.ಫೆ.28.(ಕ.ವಾ)-ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆ ಘೋಷಿಸಿ, ನೀತಿ ಸಂಹಿತೆ ಜಾರಿಗೊಳಿಸುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯಾದ್ಯಂತ ಚುನಾವಣೆಯು ಶಾಂತಿಯುತವಾಗಿ, ಮುಕ್ತವಾಗಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ, ಮದ್ಯ ಮತ್ತು ಸೇಂದಿಗಳಂತಹ ಅಬಕಾರಿ ವಸ್ತುಗಳ ಸಂಗ್ರಹಣೆ, ಸಾಗಾಟ ಮತ್ತು ಮಾರಾಟ ಚಟುವಟಿಗಳನ್ನು ತಡೆಗಟ್ಟಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ದಿನದ 24 ಗಂಟೆ ಕಾರ್ಯನಿರ್ವಹಿಸಲು ತಾತ್ಕಾಲಿಕ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಅದೇ ರೀತಿ ಜಿಲ್ಲೆಯಾದ್ಯಂತ ಒಟ್ಟು 9 ತಂಡಗಳು ಹಾಗೂ 1 ವಿಶೇಷ ತನಿಖಾ ತಂಡ ರಚಿಸಲಾಗಿದೆ. ಜಿಲ್ಲೆಯ ನೆರೆ ರಾಜ್ಯಗಳಾದ ಮಹಾರಾಷ್ಟ್ರ ಗಡಿಭಾಗದಲ್ಲಿ 3 ಮತ್ತು ತೆಲಂಗಾಣ ರಾಜ್ಯ ಗಡಿಭಾಗದಲ್ಲಿ 3 ಹೀಗೆ ಒಟ್ಟು 6 ಅಬಕಾರಿ ತನಿಖಾ ಠಾಣೆಗಳು ಸ್ಥಾಪಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸಲು ಸಿಬ್ಬಂದಿಗಳು ನಿಯೋಜಿಸಲಾಗಿದೆ.
ತಾತ್ಕಾಲಿಕ ನಿಯಂತ್ರಣ ಕೊಠಡಿಗಳ ವಿವರ: ಕಲಬುರಗಿ ಅಬಕಾರಿ ಉಪ ಆಯುಕ್ತರ ಕಚೇರಿ ದೂರವಾಣಿ ಸಂಖ್ಯೆ 08472-278682. ಕಲಬುರಗಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು ದೂರವಾಣಿ ಸಂಖ್ಯೆ 08472-278684, ಮೊಬೈಲ್ ಸಂಖ್ಯೆ 9916244473. ಚಿತ್ತಾಪೂರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ದೂರವಾಣಿ 08474-236811, ಮೊಬೈಲ್ ಸಂಖ್ಯೆ 9880814399. ಆಳಂದ ವಲಯ ಅಬಕಾರಿ ನಿರೀಕ್ಷಕರ ಕಛೇರಿ ದೂರವಾಣಿ ಸಂಖ್ಯೆ 08477-202200, 9035636664. ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08442-235215, ಮೊಬೈಲ್ ಸಂಖ್ಯೆ 8880621110. ಚಿತ್ತಾಪುರ ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08474-236770, ಮೊಬೈಲ್ ಸಂಖ್ಯೆ 9880988464. ಸೇಡಂ ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08441-277141, ಮೊಬೈಲ್ ಸಂಖ್ಯೆ 9902568412 ಹಾಗೂ ಚಿಂಚೋಳಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08475-273490, ಮೊಬೈಲ್ ಸಂಖ್ಯೆ 9449980028.













ಹೀಗಾಗಿ ಲೇಖನಗಳು News and photo Date: 28-2-2019

ಎಲ್ಲಾ ಲೇಖನಗಳು ಆಗಿದೆ News and photo Date: 28-2-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 28-2-2019 ಲಿಂಕ್ ವಿಳಾಸ https://dekalungi.blogspot.com/2019/02/news-and-photo-date-28-2-2019.html

Subscribe to receive free email updates:

0 Response to "News and photo Date: 28-2-2019"

ಕಾಮೆಂಟ್‌‌ ಪೋಸ್ಟ್‌ ಮಾಡಿ