News and Photo Date; 10-8-2018

News and Photo Date; 10-8-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date; 10-8-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date; 10-8-2018
ಲಿಂಕ್ : News and Photo Date; 10-8-2018

ಓದಿ


News and Photo Date; 10-8-2018

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭ
************************************************************
ಕಲಬುರಗಿ,ಆ.10.(ಕ.ವಾ.)-ಕಲಬುರಗಿ ಜಿಲ್ಲೆಯ 6 ತಾಲೂಕಿನ 7 ನಗರ ಸ್ಥಳೀಯ ಸಂಸ್ಥೆಗಳ 170 ಸ್ಥಾನಗಳಿಗಾಗಿ ಚುನಾವಣೆ ಜರುಗಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಾಮಪತ್ರಗಳನ್ನು ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಮಪತ್ರ ಸಲ್ಲಿಸಲು ಆಗಸ್ಟ್ 17ರಂದು ಕೊನೆಯ ದಿನವಾಗಿದ್ದು, ಆಗಸ್ಟ್ 18 ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಆಗಸ್ಟ್ 20 ಅಂತಿಮ ದಿನವಾಗಿರುತ್ತದೆ. ಆಗಸ್ಟ್ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಅವಶ್ಯಕವಿದ್ದಲ್ಲಿ ಆಗಸ್ಟ್ 31ರಂದು ಮರು ಮತದಾನ ನಡೆಸಲಾಗುವುದು. ಸೆಪ್ಟೆಂಬರ್ 3ರಂದು ಆಯಾ ತಾಲೂಕಿನ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ವಿವರಿಸಿದರು.
ಅಫಜಲಪುರ ಸೇರಿದಂತೆ ಕಲಬುರಗಿ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 1,93,795 ಮತದಾರರಿದ್ದು, ಇದರಲ್ಲಿ 95,906 ಪುರುಷ, 97,837 ಮಹಿಳಾ ಹಾಗೂ 52 ಇತರೆ ಮತದಾರರಿದ್ದಾರೆ. ಮತದಾನಕ್ಕಾಗಿ 170 ಮೂಲ ಮತಗಟ್ಟೆ, 48 ಸಹಾಯಕ ಮತಗಟ್ಟೆಗಳು ಸೇರಿದಂತೆ ಒಟ್ಟು 218 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 103 ಸೂಕ್ಷ್ಮ, 45 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಬಂದೋಬಸ್ತ್‍ಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಲಾಗುವುದು ಎಂದರು.
ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿ 2 ಲಕ್ಷ ರೂ., ಪುರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿ 1.50 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 1 ಲಕ್ಷ ರೂ.ಗಳವರೆಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ಸ್ಪರ್ಧಿಸುವ ಅಭ್ಯರ್ಥಿಗಳು ಎಲ್ಲ ವೆಚ್ಚಗಳನ್ನು ಬ್ಯಾಂಕ್ ಖಾತೆ ಮುಖಾಂತರ ಸಂದಾಯ ಮಾಡಬೇಕು.
ಮತದಾನವನ್ನು ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ನಡೆಸಲಾಗುತ್ತಿದ್ದು, ನೋಟಾ ಮತ ಸಹಿತ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರದ ಪ್ರಥಮ ಹಂತದ ತಪಾಸಣೆ ಕೈಗೊಂಡು ಭದ್ರ ಕೋಣೆಗಳಲ್ಲಿ ಸಂಗ್ರಹಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ ನೇಮಿಸಿರುವ 22 ಚುನಾವಣಾಧಿಕಾರಿಗಳು ಹಾಗೂ 22 ಸಹಾಯಕ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಆಳಂದ, ಅಫಜಲಪುರ ಹಾಗೂ ಜೇವರ್ಗಿ ಪುರಸಭೆಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರನ್ನಾಗಿ ವಿಜಯಪುರ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ದುರಗೇಶ್ ಅವರನ್ನು ನೇಮಕ ಮಾಡಲಾಗಿದೆ. ಇವರ ಮೊಬೈಲ್ ಸಂಖ್ಯೆ 9480857001 ಹಾಗೂ ಲೆಕ್ಕ ವೀಕ್ಷಕರಾಗಿ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಜಂಟಿ ನಿಯಂತ್ರಕ ಸಿದ್ರಾಮೇಶ್ವರ ಉಕ್ಕಲಿ ಅವರನ್ನು ನೇಮಕ ಮಾಡಲಾಗಿದೆ.
ಅದೇ ರೀತಿ ಸೇಡಂ, ಚಿತ್ತಾಪುರ ಪುರಸಭೆ, ಶಹಾಬಾದ ನಗರಸಭೆ ಹಾಗೂ ಚಿಂಚೋಳಿ ಪುರಸಭೆಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರನ್ನಾಗಿ ಬೆಂಗಳೂರಿನ ಮೈಸೂರಿನ ಮಿನರಲ್ಸ್ ಲಿಮಿಟೆಡ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಾಂತರಾಜು ವೈ.ಬಿ. ಅವರನ್ನು ನೇಮಕ ಮಾಡಲಾಗಿದೆ ಅವರ ಮೊಬೈಲ್ ಸಂಖ್ಯೆ 9972812977 ಇರುತ್ತದೆ. ಲೆಕ್ಕ ವೀಕ್ಷಕರನ್ನಾಗಿ ವಿಜಯಪುರ ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಮೊಹಮ್ಮದ್ ಇಕ್ಬಾಲ್ ಎಂ.ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಮಳೆ ಕೊರತೆ: ಬೆಳೆಗಳ ಜಂಟಿ ಸಮೀಕ್ಷೆಗೆ ಸೂಚನೆ
********************************************
ಕಲಬುರಗಿ,ಆ.10.(ಕ.ವಾ.)-ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಎಳ್ಳು, ಉದ್ದು, ಸೋಯಾಬಿನ್ ಬೆಳೆಗಳು ಹಾನಿಯಾಗುವ ಸಾಧ್ಯತೆಗಳಿದ್ದು, ಹಾನಿಯಾಗಬಹುದಾದ ಬೆಳೆಗಳ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷ ಜುಲೈ ಮಾಹೆಯಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಜುಲೈ ಮಾಹೆಯಲ್ಲಿ 152 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 70 ಮಿ.ಮಿ. ಮಾತ್ರ ಮಳೆಯಾಗಿದೆ. ಸುಮಾರು ಶೇ. 54 ರಷ್ಟು ಕೊರತೆಯಿದೆ. ಆಗಸ್ಟ್ ಮಾಹೆಯಲ್ಲಿ ಇಲ್ಲಿಯವರೆಗೆ 30 ಮಿ.ಮಿ. ವಾಡಿಕೆ ಮಳೆ ಆಗಬೇಕಿತ್ತು. ಆದರೆ ಶೇ. 82ರಷ್ಟು ಮಳೆ ಕೊರತೆ ಕಂಡು ಬಂದಿದೆ. ಇದರಿಂದಾಗಿ ಭೂಮಿಯಲ್ಲಿ ತೇವಾಂಶದ ಕೊರತೆ ಇದ್ದು, ಇನ್ನೂ ಮುಂದೆ ಮಳೆ ಬಾರದೇ ಇದ್ದಲ್ಲಿ ಬೆಳೆಗಳು ಹಾನಿಗೊಳಗಾಗುವ ಸಂಭವಗಳಿವೆ ಎಂದರು.
ಈಗಾಗಲೇ ಶೇ.96ರಷ್ಟು ಬಿತ್ತನೆಯಾಗಿದ್ದು, ಈ ಪೈಕಿ ಶೇ. 60ರಷ್ಟು ತೊಗರಿ ಬಿತ್ತನೆಯಾಗಿದೆ.ಸಧ್ಯ ಮಳೆ ಕೊರತೆಯಿಂದಾಗಿ ತೊಗರಿ ಬೆಳೆ ಬೆಳವಣಿಗೆ ಕುಂಠಿತವಾಗಿದೆ. ಮುಂದಿನ 15 ದಿನಗಳವರೆಗೆ ಮಳೆ ಆಗದೇ ಇದ್ದಲ್ಲಿ ತೊಗರಿ ಬೆಳೆ ಸಹ ಹಾನಿಗೊಳಗಾಗುತ್ತದೆ. ಈ ನಿಟ್ಟಿನಲ್ಲಿ ಕಂದಾಯ, ಕೃಷಿ ಹಾಗೂ ಅಂಕಿ ಸಂಖ್ಯಾ ಅಧಿಕಾರಿಗಳ ಜಂಟಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದರು.
ಕುಡಿಯುವ ನೀರು ಸರಬರಾಜು:- ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಜಲಮೂಲವಾದ ಭೋಸಗಾ ಕೆರೆ ಬತ್ತಿ ಹೊಗಿರುವುದರಿಂದ ಕಲಬುರಗಿ ನಗರದ ಹಲವಾರು ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ ಕೊರತೆ ಆಗುತ್ತಿದೆ. ಕುಡಿಯುವ ನೀರಿನ ತೊಂದರೆ ಅನುಭವಿಸುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ನಗರ ನೀರು ಸರಬರಾಜು ಮಂಡಳಿಗೆ ಸೂಚಿಸಲಾಗಿದೆ. ಬೆಣ್ಣೆತೋರಾದಿಂದ ನೀರು ಸರಬರಾಜು ಮಾಡುವ ಕೊಳವೆ ಮಾರ್ಗದ ಸೋರಿಕೆಯಿಂದ ಸಮರ್ಪಕ ನೀರು ಸರಬರಾಜು ಆಗುತ್ತಿಲ್ಲ. ಬೆಣ್ಣೆತೋರಾದಿಂದ ಕಲಬುರಗಿ ನಗರದ ಮಧ್ಯೆ ನೀರು ಸೋರಿಕೆಯಾಗುವ 9 ಕಿ.ಮೀ. ಕೊಳವೆ ಮಾರ್ಗವನ್ನು ಬದಲಾಯಿಸಲು ಹಾಗೂ ನೀರು ಎತ್ತುವ ಪಂಪ್‍ಸೆಟ್ಟು ಬದಲಾಯಿಸಲು 13 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಹಾನಗರಪಾಲಿಕೆಗೆ ಅಮೃತ್ ಯೋಜನೆಯಡಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ 12 ಕೋಟಿ ರೂ.ಗಳು ಲಭ್ಯವಿದ್ದು, ಈ ಹಣವನ್ನು ಕುಡಿಯುವ ನೀರಿಗಾಗಿ ಮಾರ್ಪಡಿಸಿ ನೀಡಲು ಸಹ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ತೊಗರಿ ಖರೀದಿ: ಜಿಲ್ಲೆಯಾದ್ಯಂತ 9652 ರೈತರಿಂದ ಬೆಂಬಲ ಬೆಲೆಯಲ್ಲಿ 125221 ಕ್ವಿಂಟಲ್ ಕಡಲೆ ಖರೀದಿಸಲಾಗಿತ್ತು. ರೈತರಿಗೆ 55 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಅದೇ ರೀತಿ ಜಿಲ್ಲೆಯಾದ್ಯಂತ 88872 ರೈತರಿಂದ ಬೆಂಬಲ ಬೆಲೆಯಲ್ಲಿ 11 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಲಾಗಿತ್ತು. ತೊಗರಿ ನೀಡಿದ ರೈತರಿಗೆ 661 ಕೋಟಿ ರೂ. ಪಾವತಿಸಲಾಗಿದೆ. ಜಿಲ್ಲೆಯಲ್ಲಿರುವ 3 ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣ ಪಾವತಿಸಿವೆ. ಆದರೆ ಆಳಂದ ಸಕ್ಕರೆ ಕಾರ್ಖಾನೆಯು ಪಾವತಿಸಿಲ್ಲ. ಆಳಂದ ಸಕ್ಕರೆ ಕಾರ್ಖಾನೆಯಲ್ಲಿರುವ ಸಕ್ಕರೆಯನ್ನು ಮಾರಾಟ ಮಾಡಿ ರೈತರ ಕಬ್ಬಿನ ಹಣ ಪಾವತಿಸುವಂತೆ ಒಂದು ತಿಂಗಳ ಹಿಂದೆ ಆದೇಶ ನೀಡಲಾಗಿತ್ತು. ಆದರೆ ಸಕ್ಕರೆ ಕಾರ್ಖಾನೆಯವರು ಆದೇಶಕ್ಕೆ ತಡೆಯಾಜ್ಞೆ ತಂದಿದ್ದರಿಂದ ರೈತರಿಗೆ ಕಬ್ಬಿನ ಹಣ ಪಾವತಿಸಲು ತೊಂದರೆಯಾಗಿದೆ ಎಂದು ವಿವರಿಸಿದರು.
ಪ್ರಾಯೋಗಿಕ ವಿಮಾನ ಹಾರಾಟ:- ಕಲಬುರಗಿ ಹೊರ ವಲಯದಲ್ಲಿರುವ ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದ ರನ್‍ವೇ ಪರೀಕ್ಷೆಗಾಗಿ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲು ವಿಮಾನ ಹಾರಾಟ ಮಾಡುವ ಸಂಸ್ಥೆಗಳು ಕಾಲಾವಕಾಶ ಕೇಳಿದ್ದರಿಂದ ಪ್ರಾಯೋಗಿಕ ವಿಮಾನ ಹಾರಾಟವನ್ನು ಆಗಸ್ಟ್ 19ರಂದು ನಡೆಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಶಾಶ್ವತವಾಗಿ ವಿಮಾನ ಹಾರಾಟಕ್ಕೆ ನಾಗರಿಕ ವಿಮಾನಯಾದ ಪ್ರಾಧಿಕಾರದ ಮಹಾನಿರ್ದೇಶಕರು ವಿಮಾನ ನಿಲ್ದಾಣವನ್ನು ಅಂತಿಮವಾಗಿ ಪರಿಶೀಲಿಸಿ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಕಾಮಗಾರಿಗಳ ಕ್ರಿಯಾ ಯೋಜನೆ 15 ದಿನದೊಳಗಾಗಿ ಸಲ್ಲಿಸಿ
******************************************************
ಕಲಬುರಗಿ,ಆ.10.(ಕ.ವಾ.)-ಪ್ರವಾಸೋದ್ಯಮ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಾಭಿವೃದ್ಧಿ ಸಂಸ್ಥೆಗೆ ವಹಿಸಲಾಗಿರುವ ಎಲ್ಲ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು 15 ದಿನದೊಳಗಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಕಾಮಗಾರಿಗಳು ಮಂಜೂರಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಸ್ಥಳದ ಲಭ್ಯತೆಗೆ ಅನುಗುಣವಾಗಿ ಹಮ್ಮಿಕೊಳ್ಳಬಹುದಾದ ಕಾಮಗಾರಿಗಳ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಿ ನಕ್ಷೆಯೊಂದಿಗೆ ಅಂದಾಜು ಪತ್ರಿಕೆ ಸಲ್ಲಿಸಬೇಕು ಎಂದರು.
ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು 2013-14ರಿಂದ 2016-17ರವರೆಗೆ ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ನೀಡಿರುವ ಕಾಮಗಾರಿಗಳು ಇನ್ನು ಪೂರ್ಣಗೊಂಡಿಲ್ಲ. ಈ ಕಾಮಗಾರಿಗಳನ್ನು ಪ್ರಥಮಾದ್ಯತೆಯ ಮೇರೆಗೆ ಕೈಗೊಂಡು ಪೂರ್ಣಗೊಳಿಸಬೇಕು. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಪಡೆದ ಅನುದಾನಕ್ಕೆ ಬಳಕೆ ಪ್ರಮಾಣಪತ್ರ ನೀಡಿ ಉಳಿದ ಅನುದಾನವನ್ನು ಪಡೆಯಬೇಕು ಎಂದರು.
ದೇವಲಗಾಣಗಾಪುರಕ್ಕೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ 2013-14ರಲ್ಲಿ ನೀಡಿರುವ ಒಂದು ಕೋಟಿ ರೂ.ಗಳ ಅನುದಾನದಲ್ಲಿ ಖರ್ಚಾಗದೇ ಉಳಿದಿರುವ 50 ಲಕ್ಷ ರೂ.ಗಳಲ್ಲಿ ಹಮ್ಮಿಕೊಳ್ಳಬಹುದಾದ ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕು. ದೇವಸ್ಥಾನಗಳಲ್ಲಿ ಯಾತ್ರಿ ನಿವಾಸ ನಿರ್ಮಿಸಬೇಕಾದರೆ ಸ್ಥಳವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕಾಗುತ್ತದೆ. ಕೆಲವು ದೇವಸ್ಥಾನಗಳು ಯಾತ್ರಿ ನಿವಾಸ ನಿರ್ಮಾಣದ ಸ್ಥಳ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸದ ಕಾರಣದಿಂದ ಕಾಮಗಾರಿ ಪ್ರಾರಂಭಗೊಂಡಿಲ್ಲ. ಇಂತಹ ದೇವಸ್ಥಾನಗಳ ಪಟ್ಟಿ ಸಲ್ಲಿಸಬೇಕು ಎಂದರು.
ಮಳಖೇಡದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 6 ಕೋಟಿ ರೂ.ಗಳಲ್ಲಿ ಮಳಖೇಡ ಪ್ರವಾಸಿ ತಾಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆಯಿಂದ ಸಹ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎರಡೂ ಇಲಾಖೆಗಳ ಕಾಮಗಾರಿಗಳು ಬೇರೆ ಬೇರೆ ಆಗಿರುವಂತೆ ಜಾಗೃತಿ ವಹಿಸಬೇಕು. ಮಳೆಖೇಡನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮ ಜರುಗಿಸಬೇಕೆಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕ ಸಬಲೀಕರಣಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ 3 ಲಕ್ಷ ರೂ.ಗಳ ಧನಸಹಾಯ ನೀಡಿ ಪ್ರವಾಸಿ ಟ್ಯಾಕ್ಸಿ ಮಂಜೂರು ಮಾಡಲಾಗುತ್ತಿದೆ. ಕೆಲವು ಬ್ಯಾಂಕಿನಲ್ಲಿ ಇಲಾಖೆಯಿಂದ ಧನಸಹಾಯ ಬಿಡುಗಡೆ ಮಾಡಿದರೂ ಸಾಲ ಮಂಜೂರು ಮಾಡಿ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಕರಿಸುತ್ತಿಲ್ಲ. ಇಂತಹ ಬ್ಯಾಂಕುಗಳ ವ್ಯವಸ್ಥಾಪಕರ ವಿರುದ್ಧ ಲೀಡ್ ಬ್ಯಾಂಕ್‍ನವರು ಆರ್‍ಬಿಐ ಗೆ ದೂರು ಸಲ್ಲಿಸಬೇಕು. ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ಸಹಕರಿಸದ ಬ್ಯಾಂಕುಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಫೀಕ್ ಲಾಡಜಿ ಮತ್ತಿತರ ಜಿಲ್ಲಾ ಮಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018: ರಾಷ್ಟ್ರಪಿತನ ಕನಸು ಸಾಕಾರಗೊಳಿಸಲು ಕರೆ
**********************************************************************
ಕಲಬುರಗಿ,ಆ.10.(ಕ.ವಾ.)-ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಅಂಗವಾಗಿ ದೇಶದಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತಾ ಮತ್ತು ನೈರ್ಮಲೀಕರಣ ಬಗ್ಗೆ ಸಾರ್ವಜನಿರಕಲ್ಲಿ ಅರಿವು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಭಾಗವಾಗಿ ಕಲಬುರಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸರ್ವೇಕ್ಷಣದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಸರ್ವೇಕ್ಷಣ ಕಾರ್ಯದಲ್ಲಿ ಭಾಗಿಯಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಬೇಕು “ ಸ್ವಚ್ಚ ಮೇವ ಜಯತೆ” ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಅಂಗವಾಗಿ ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ 8 ರಿಂದ 14ರ ವರೆಗೆ ಹಮ್ಮಿಕೊಂಡಿರುವ ಸರ್ವೇಕ್ಷಣ ಸಪ್ತಾಹದ ಅಂಗವಾಗಿ ಸರ್ವೇಕ್ಷಣ ಕಾರ್ಯದಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ಪ್ರೋತ್ಸಾಹಿಸಲು ಶುಕ್ರವಾರ ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ರೇಡಿಯೋ ಕಾರ್ಯಕ್ರಮದ ಮುಖೇನ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಕಾರ್ಯಕ್ರಮಕ್ಕೆ ಕಳೆದ ಜುಲೈ 13 ರಂದು ಚಾಲನೆ ನೀಡಿದ್ದು, ದೇಶದಾದ್ಯಂತ 2018 ಆಗಸ್ಟ್ 1 ರಿಂದ 30ರ ವರೆಗೆ ಸರ್ವೇಕ್ಷಣ ಕಾರ್ಯ ಚಾಲ್ತಿಯಲ್ಲಿದೆ. ಸಾರ್ವಜನಿಕ ಸ್ಥಳಗಳಾದ ಗ್ರಾಮ ಪಂಚಾಯತಿ, ಅಂಗನವಾಡಿ, ಆರೋಗ್ಯ ಕೇಂದ್ರ, ಧಾರ್ಮಿಕ ಸ್ಥಳಗಳು, ಶಾಲೆ ಆವರಣಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ಮನವರಿಕೆ ಮಾಡಲಾಗುತ್ತದೆ. ತದನಂತರ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ಬಗ್ಗೆ ಮೌಲ್ಯಮಾಪನ ಕೈಗೊಂಡು ಜಿಲ್ಲಾವಾರು ಶ್ರೇಣಿ ನೀಡುವುದೆ ಸರ್ವೇಕ್ಷಣದ ಉದ್ದೇಶವಾಗಿದೆ. ಉತ್ತಮ ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಸರ್ವೇಕ್ಷಣದಲ್ಲಿ ಕಲಬುರಗಿ ಜಿಲ್ಲೆ ಅಗ್ರ ಶ್ರೇಣಿಯಲ್ಲಿ ಬರುವಂತೆ ಎಲ್ಲರು ಶ್ರಮಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ ಸ್ವಚ್ಛ ಸರ್ವೇಕ್ಷಣ ಅಂಗವಾಗಿ ಜಿಲ್ಲೆಯಲ್ಲಿ ಆಗಸ್ಟ್ 8 ರಿಂದ 14ರ ವರೆಗೆ ಸರ್ವೇಕ್ಷಣ ಸಪ್ತಾಹ ಆಯೋಜಿಸಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 8 ರಿಂದ ಇದೂವರೆಗೆ ಸುಮಾರು 2000 ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದ್ದು, ಈ ಕಾರ್ಯವು ಆಗಸ್ಟ್ 14ರ ವರೆಗೆ ಮಿಷನ್ ರೀತಿಯಲ್ಲಿ ಸಾಗಲಿದೆ. ಭಾರತದಾದ್ಯಂತ ನಡೆಯುತ್ತಿರುವ ಈ ಸರ್ವೇಕ್ಷಣದಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಿಂದ, ಸ್ಥಳೀಯ ಆಡಳಿತಗಳಿಂದ ಮಾಹಿತಿ ಪಡೆದು ಮೌಲ್ಯಮಾಪನ ಮಾಡಿ ಜಿಲ್ಲಾವಾರು ಶ್ರೇಣಿ ನೀಡುತ್ತದೆ. ರಾಜ್ಯದ ಜಿಲ್ಲೆಗಳು ಸರ್ವೇಕ್ಷಣದಲ್ಲಿ ಉತ್ತಮ ಶ್ರೇಣಿ ಪಡೆಯುವಂತೆ ಇತ್ತೀಚಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಅದರಂತೆ ಕಲಬುರಗಿ ಜಿಲ್ಲೆ ಉನ್ನತ ಶ್ರೇಣಿಯಲ್ಲಿ ಬರುವಂತೆ ಎಲ್ಲ ರೀತಿಯ ಶ್ರಮ ವಹಿಸಲಾಗುತ್ತಿದೆ ಎಂದರು.
ಸ್ವಚ್ಛ ಭಾರತ ಮಿಷನ್ ಅಂಗವಾಗಿ ಈಗಾಗಲೆ ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಶೇ.80ರಷ್ಟು ಸಾಧನೆ ಮಾಡಲಾಗಿದೆ. ಬಾಕಿಯಿರುವ ಇನ್ನೂ 44000 ಶೌಚಾಲಯಗಳನ್ನು ಬರುವ ಅಕ್ಟೋಬರ್ 2 ರೊಳಗೆ ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡುವುದೆ ನಮ್ಮ ಮುಂದಿನ ಗುರಿಯಾಗಿದೆ. ಇನ್ನು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಯಾವುದೇ ಅನುದಾನದ ಕೊರತೆಯಿಲ್ಲ. ಈಗಾಗಲೆ 30 ಕೋಟಿ ರೂ. ಅನುದಾನ ಬಂದಿದ್ದು, ಇನ್ನೂ 30 ಕೋಟಿ ರೂ. ಅನುದಾನ 20 ದಿನದೊಳಗಾಗಿ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಹೀಗಾಗಿ ಸಾರ್ವಜನಿಕರು, ಶಾಲಾ ಮಕ್ಕಳು ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದರು.
ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಡಿಪಿಐ ಶಾಂತಗೌಡ ಪಾಟೀಲ ಮಾತನಾಡಿ ಸರ್ವೇಕ್ಷಣ ಸಪ್ತಾಹದ ಭಾಗವಾಗಿ ಮೊದಲನೆಯದಾಗಿ ಶಾಲಾ ಕಟ್ಟಡ ಮತ್ತು ಕಂಪೌಂಡ್‍ಗಳನ್ನು ಸ್ವಚ್ಛಗೊಳಿಸಿ ಅದರ ಮೇಲೆ ಸರ್ವೇಕ್ಷಣದ ಲೋಗೊ ಮತ್ತು ಸ್ವಚ್ಛತೆಯ ಅರಿವಿನ ಚಿತ್ರ ಬಿಡಿಸಲಾಗುತ್ತಿದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶಾಲಾ ಆವರಣ, ಉದ್ಯಾನವನ, ಸರ್ಕಾರಿ ಕಚೇರಿಗಳಲ್ಲಿ 1 ಲಕ್ಷ ಸಸಿ ನೆಡೆಯುವ ಗುರಿ ಹೊಂದಲಾಗಿದೆ. ಪ್ರತಿದಿನ ಬೆಳಿಗ್ಗೆ ಮಕ್ಕಳಿಂದ ಗ್ರಾಮದಲ್ಲಿ ಪ್ರಭಾತ ಫೇರಿ ಮೂಲಕ ಗ್ರಾಮೀಣ ನೈರ್ಮಲ್ಯ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ದೇಹದ ಒಳಗೆ ಹಾಗೂ ಹೊರಗೆ ಎರಡು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಆರೋಗ್ಯ ಇಲಾಖೆಯ ಸಹಾಯದೊಂದಿಗೆ ಜಂತು ನಾಶಕ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳನ್ನು ಜಂತು ಹುಳುವಿನ ಬಾಧೆಯಿಂದ ರಕ್ಷಿಸಲು ಮಧ್ಯಾಹ್ನದ ಬಿಸಿಯೂಟದ ನಂತರ ಅಲ್ಬೆಂಡಾಜೋಲ್ ಮಾತ್ರೆ ವಿತರಿಸಲಾಗುತ್ತಿದೆ ಎಂದು ಸರ್ವೇಯಲ್ಲಿ ಇಲಾಖೆಯ ಪಾತ್ರದ ಬಗ್ಗೆ ವಿವರಿಸಿದರು.
ಸ್ವಚ್ಛ ಭಾರತ ಮಿಷನ್ ಅಧಿಕಾರಿ ಪಾಪರೆಡ್ಡಿ ಮಾತನಾಡಿ ಸ್ವಚ್ಛ ಸರ್ವೇಕ್ಷಣ ಸಪ್ತಾಹದ ಅಂಗವಾಗಿ ಪ್ರತಿ ದಿನ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಸ್ವಚ್ಛ ಭಾರತ ಮಿಷನ್ ಅಧಿಕಾರಿ ಅನ್ನಪೂರ್ಣ ಅವರು ಸ್ವಚ್ಛ ಸರ್ವೇಕ್ಷಣದಲ್ಲಿ ಸಾರ್ವಜನಿಕರು ಭಾಗಿಯಾಗಲು ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರು ಗೂಗಲ್ ಪ್ಲೇಸ್ಟೋರಿನಿಂದ ssg18 ಆ್ಯಪ್ ಡೌನಲೋಡ್ ಮಾಡಿಕೊಳ್ಳುವ ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ನಾಲ್ಕು ಕೋಣೆ ಆವ್ರಿ, ಶೌಚಾಲಯ ಕಟ್ಟಿಸಲು ಮನ್ಯಾಗ್ ಒಪ್ಪತಿಲ್ರಿ:- ರೇಡಿಯೋ ಕಾರ್ಯಕ್ರಮದ ಭಾಗವಾಗಿ ಕೇಳುಗರ ಪ್ರಶ್ನೆ ಅವಧಿಯಲ್ಲಿ ಜೇವರ್ಗಿ ತಾಲೂಕಿನ ಹಿಪ್ಪರಗಾ ಸರ್ಕಾರಿ ಪ್ರೌಢ ಶಾಲೆಯ 10ನೇ ವಿದ್ಯಾರ್ಥಿನಿ ಜ್ಯೋತಿ ಕರೆ ಮಾಡಿ ಮನೆಯಲ್ಲಿ ನಾಲ್ಕು ಕೋಣೆ ಆವ್ರಿ, ಆದರ ಶೌಚಾಲಯ ಕಟ್ಟಿಸಲು ತಂದೆ-ತಾಯಿಗಳು ನೀರು ಮತ್ತು ಸ್ಥಳದ ನೆಪವೊಡ್ಡಿ ಒಪ್ಪತಿಲ್ರಿ ಎಂದಾಗ ಸಿ.ಇ.ಓ ಹೆಪ್ಸಿಬಾರಾಣಿ ಮಾತನಾಡಿ ಮನೆಯಲ್ಲಿ ನಾಲ್ಕು ಕೋಣೆ ಇದ್ದ ಮೇಲೆ ಶೌಚಾಲಯಕ್ಕೆ ಸ್ಥಳದ ಸಮಸ್ಯೆಯಿಲ್ಲ, ವೈಯಕ್ತಿಕ ಶೌಚಾಲಯವು ಹೊಂದುವ ಮನೋಭಾವನೆಯ ಕೊರತೆ ಇದೆ. ಈ ಬಗ್ಗೆ ಪಾಲಕರಿಗೆ ತಿಳಿಹೇಳಲು ನಿಮ್ಮ ಮನೆಗೆ ತಾಲೂಕಿನ ನೋಡಲ್ ಅಧಿಕಾರಿಗಳನ್ನು ಕಳುಹಿಸುತ್ತೇನೆ ಇನ್ನೂ ನೀರಿನ ಸಮಸ್ಯೆ ಬಗೆಹರಿಸಲು ಪಿ.ಡಿ.ಓ.ಗೆ ಸೂಚನೆ ನೀಡಲಾಗುವುದು. ತಾಜ ಸುಲ್ತಾನಪುರಿನ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ರಾಜಕುಮಾರ ಪಾಟೀಲ ಕರೆ ಮಾಡಿ ಶಾಲೆ ಸುತ್ತು ಗೋಡೆ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಿದ್ದು, ಇದೂವರೆಗೆ ಮಂಜೂರಾತಿ ದೊರೆತಿಲ್ಲ ಎಂದರು. ಪ್ರಸ್ತಾವನೆ ಬಂದಿದ್ದರೆ ಇಂದೇ ಅದಕ್ಕೆ ಅನುಮೋದನೆ ನೀಡುತ್ತೇನೆ ಎಂದು ಸಿ.ಇ.ಓ. ಅವರು ತಿಳಿಸಿದರು. ಚಿಂಚೋಳಿ ತಾಲೂಕಿನ ಛತ್ರಸಾಲ ಗ್ರಾಮದಿಂದ ಅತಿಥಿ ಶಿಕ್ಷಕ ಸುದರ್ಶನ ರಾಜು ಕರೆ ಮಾಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರು ಸರ್ಕಾರದಿಂದ ಅನುದಾನ ಬರಲು ತುಂಬಾ ವಿಳಂಬವಾಗುತ್ತಿದೆ ಎಂದಾಗ ಕಳೆದ ಎರಡು ವರ್ಷದಲ್ಲಿ ಅನುದಾನ ಬಿಡುಗಡೆ ತಡವಾಗಿದ್ದರಿಂದ ಈ ಸಮಸ್ಯೆಯಾಗಿದೆ. ಪ್ರಸ್ತುತ ಅನುದಾನ ಲಭ್ಯವಿದ್ದು ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಠಪಡಿಸಿದರು.
ರೇಡಿಯೋ ಕಾರ್ಯಕ್ರಮದಲ್ಲಿ ಕರೆ ಮಾಡಿದ ಬಹುತೇಕ ಸಾರ್ವಜನಿಕರು ಮತ್ತು ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಸಿ.ಇ.ಓ. ಮುಂದೆ ಹಂಚಿಕೊಂಡರು. ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕಿ ಅಂಜನಾ ಯಾತನೂರ ಕಾರ್ಯಕ್ರಮ ನಡೆಸಿಕೊಟ್ಟರು. ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಅಂಗವಾಗಿ 698 ಜಿಲ್ಲೆಗಳ 6980 ಗ್ರಾಮ ಪಂಚಾಯತಿಯ ಸುಮಾರು 34900 ಸಾರ್ವಜನಿಕ ಸ್ಥಳಗಳಲ್ಲಿ ಸಮೀಕ್ಷೆ ಕೈಗೊಂಡು 50 ಲಕ್ಷ ಜನರನ್ನು ಸಂದರ್ಶಿಸಿ ಅಭಿಪ್ರಾಯ ಪಡೆಯಲಾಗುತ್ತಿದೆ.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ. ರಾಗಪ್ರಿಯಾ ಅಧಿಕಾರ ಸ್ವೀಕಾರ
******************************************************************
ಕಲಬುರಗಿ,ಆ.10.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಡಾ. ರಾಗಪ್ರಿಯಾ ಆರ್. ಅವರು ಇಂದು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಡಾ. ರಾಗಪ್ರಿಯಾ ಅವರು ರಜೆಯ ಮೇಲೆ ತೆರಳಿದ್ದರಿಂದ ಮಹಾನಗರ ಪಾಲಿಕೆಯ ಆಯುಕ್ತರಾದ ರಘುನಂದನ ಮೂರ್ತಿ ಅವರಿಗೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕರ ಪ್ರಭಾರ ವಹಿಸಲಾಗಿತ್ತು.
ಡಿ. ದೇವರಾಜು ಅರಸು ಜನ್ಮ ದಿನಾಚರಣೆ: ಪೂರ್ವಭಾವಿ ಸಭೆ
******************************************************
ಕಲಬುರಗಿ,ಆ.10.(ಕ.ವಾ.)-ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸುರವರ ಜನ್ಮದಿನಾಚರಣೆಯನ್ನು ಆಗಸ್ಟ್ 20ರಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಭೆಯನ್ನು ಇದೇ ಆಗಸ್ಟ್ 13ರಂದು ಸಂಜೆ 5.30 ಗಂಟೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
ಈ ಪೂರ್ವಭಾವಿ ಸಭೆಗೆ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಬೇಕೆಂದು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ತಾಪುರ: ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆ ಪರಿಷ್ಕರಣೆ
**********************************************
ಕಲಬುರಗಿ,ಆ.10.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವ್ಯಾಪ್ತಿಯ ಸ್ಥಿರಾಸ್ಥಿಗಳ ಮಾರ್ಗದರ್ಶಿ ಮಾರುಕಟ್ಟೆ ಬೆಲೆಗಳನ್ನು 2018-19ನೇ ಸಾಲಿಗೆ ಪರಿಷ್ಕರಿಸಲಾಗಿದೆ. ಈ ಪರಿಷ್ಕøತ ಮಾರುಕಟ್ಟೆ ಬೆಲೆಯ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕರೆಯಲಾಗಿದೆ ಎಂದು ಚಿತ್ತಾಪುರ ಉಪ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಈ ಮಾರ್ಗದರ್ಶಿ ಮಾರುಕಟ್ಟೆ ಬೆಲೆಯ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ಷೇಪಗಳೆನಾದರೂ ಇದ್ದಲ್ಲಿ 15 ದಿವಸಗಳೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಲಿಖಿತವಾಗಿ ಚಿತ್ತಾಪುರ ತಹಶೀಲ್ದಾರ ಕಾರ್ಯಾಲಯದ ಕಂಪೌಂಡ್‍ನಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 12ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ,ಆ.10.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-2 ರಿಂದ ಶಹಾಬಾದ-ಬಾಗೇವಾಡಿ ವಿದ್ಯುತ್ ಮಾರ್ಗದಲ್ಲಿ ಮಧ್ಯಂತರ ಟವರ್ ಅಳವಡಿಸುವ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಕೆಳಕಂಡ ಗ್ರಾಮಗಳಲ್ಲಿ ಇದೇ ಆಗಸ್ಟ್ 12ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ವ್ಯತ್ಯಯ ಉಂಟಾಗುವ ಗ್ರಾಮಗಳ ವಿವರ ಇಂತಿದೆ. ಮಂದೇವಾಲ, ಕಲ್ಲೂರ ಕೆ., ನೆಲೋಗಿ, ಸೊನ್ನ, ಕಲ್ಲಹಂಗರಗಾ, ನೇಗಲಗಿ, ದೇಸಣಗಿ, ಜೇರಟಗಿ, ಯಡ್ರಾಮಿ, ಕುಕನೂರ, ಆಲೂರ, ಕಡಗೋಳ, ಅರಳಗುಂಡಗಿ, ಮಳ್ಳಿ, ಸುಂಬಡ, ಕಾಚಾಪುರ, ಕರಕಿಹಳ್ಳಿ, ಮಾಗಣಗೇರಾ, ಹುಳಗೇರಾ ಹಾಗೂ ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪಡೆದ ಕ್ರೀಡಾಪಟುಗಳಿಗೆ ಸನ್ಮಾನ: ಅರ್ಜಿ ಆಹ್ವಾನ
***************************************************
ಕಲಬುರಗಿ,ಆ.10.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತರಾದ ಕ್ರೀಡಾಪಟುಗಳಿಗೆ ಸನ್ಮಾನಿಸಲಾಗುತ್ತಿದೆ. ಇದಕ್ಕಾಗಿ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಕಲಬುರಗಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅರ್ಹ ಕ್ರೀಡಾಪಟುಗಳು ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 13ರ ಮಧ್ಯಾಹ್ನ 2 ಗಂಟೆಯೊಳಗಾಗಿ ಕಲಬುರಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ಸಂಖ್ಯೆ 9480886476 ನ್ನು ಸಂಪರ್ಕಿಸಲು ಕೋರಲಾಗಿದೆ.
ಅಫಜಲಪುರ: ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆ ಪರಿಷ್ಕರಣೆ
*************************************************
ಕಲಬುರಗಿ,ಆ.10.(ಕ.ವಾ.)-ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ವ್ಯಾಪ್ತಿಯ ಸ್ಥಿರಾಸ್ಥಿಗಳ ಮಾರ್ಗದರ್ಶಿ ಮಾರುಕಟ್ಟೆ ಬೆಲೆಗಳನ್ನು 2018-19ನೇ ಸಾಲಿಗೆ ಪರಿಷ್ಕರಿಸಲಾಗಿದೆ. ಈ ಪರಿಷ್ಕøತ ಮಾರುಕಟ್ಟೆ ಬೆಲೆಯ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕರೆಯಲಾಗಿದೆ. ಮಾರ್ಗದರ್ಶಿ ಮಾರುಕಟ್ಟೆ ಬೆಲೆಯ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಗಳೆನಾದರೂ ಇದ್ದಲ್ಲಿ 15 ದಿವಸಗಳೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಲಿಖಿತವಾಗಿ ಅಫಜಲಪುರ ಉಪ ನೋಂದಣಾಧಿಕಾರಿಗಳು ಹಾಗೂ ತಾಲೂಕು ಸ್ಥಿರಾಸ್ಥಿ ಮೌಲ್ಯ ಮಾಪನ ಉಪಸಮಿತಿ ಸದಸ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕೆಂದು ಅಫಜಲಪುರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
******************************
ಕಲಬುರಗಿ,ಆ.10.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1 ರ ವ್ಯಾಪ್ತಿಯಲ್ಲಿ ಬರುವ 220ಕೆವಿ ಶಹಾಬಾದ ಸ್ವೀಕರಣಾ ಕೇಂದ್ರದಲ್ಲಿ ಸುಧಾರಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ 110/33/11ಕೆ.ವಿ. ಅಫಜಲಪುರ, ಕರಜಗಿ, ಕೆವಿ ರೇಣುಕಾ ಶುಗರ್ಸ್ ಹಾವಳಗಾ, ಘತ್ತರಗಾ ಮತ್ತು 33ಕೆವಿ ಡೌನ್ ಸ್ಟ್ರೀಮ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ನಗರ, ಪಟ್ಟಣ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದೇ ಆಗಸ್ಟ್ 12ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.












ಹೀಗಾಗಿ ಲೇಖನಗಳು News and Photo Date; 10-8-2018

ಎಲ್ಲಾ ಲೇಖನಗಳು ಆಗಿದೆ News and Photo Date; 10-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date; 10-8-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-10-8-2018.html

Subscribe to receive free email updates:

0 Response to "News and Photo Date; 10-8-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ