ಶೀರ್ಷಿಕೆ : Nes & photos Dt.01-08-2018
ಲಿಂಕ್ : Nes & photos Dt.01-08-2018
Nes & photos Dt.01-08-2018
ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರು ಮತ್ತು ಭಾವಚಿತ್ರವನ್ನು ಸರಿಪಡಿಸಲು ಸೂಚನೆ
ಕಲಬುರಗಿ,ಆ.18(ಕ.ವಾ.)-ಕಲಬುರಗಿ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸುಮಾರು 34827 ಜನರ ಹೆಸರು ಹಾಗೂ 6200 ಜನರ ಭಾವಚಿತ್ರಗಳು ಡುಪ್ಲಿಕೇಟ್ ಇವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದು, ಇದನ್ನು ಸರಿಪಡಿಸಲು ಆಯಾ ತಾಲೂಕಿನ ತಹಶೀಲ್ದಾರರು ಹೆಚ್ಚು ಮುತುವರ್ಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸೂಚಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರೀಷ್ಕರಣೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ನಕಲಿ ಹೆಸರು ಮತ್ತು ಭಾವಚಿತ್ರ ಇರುವ ಮತದಾರರ ಮನೆ ಮನೆಗೆ ಬೂತ್ ಮಟ್ಟದ ಅಧಿಕಾರಿಗಳನ್ನು ಕಳುಹಿಸಿ ಸರಿಯಾದ ಮಾಹಿತಿ ಸಂಗ್ರಹಿಸಿ ಡುಪ್ಲಿಕೇಟ್ ಹೆಸರುಗಳನ್ನು ತಗೆದು ಹಾಕಬೇಕು. ಅಫಜಲಪೂರ, ಚಿತ್ತಾಪೂರ, ಆಳಂದ ಹಾಗೂ ಚಿಂಚೋಳಿ ಮತಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಡುಪ್ಲಿಕೇಟ ಎಂದು ಗುರುತಿಸಿ ನೀಡಿರುವ ಪ್ರತಿಯೊಂದು ಹೆಸರಿನ ಮತದಾರರಿಗೆ ಬಿ.ಎಲ್.ಓ.ಗಳು ಖುದ್ದಾಗಿ ಭೇಟಿಯಾಗಿ ಮಾಹಿತಿ ಸಂಗ್ರಹಿಸಿ ಮತದಾರರ ಪಟ್ಟಿಯನ್ನು ಸರಿಪಡಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ಜುಲೈ 16 ರಿಂದ ಆಗಸ್ಟ್ 10ರವರೆಗೆ ಮತದಾರರ ಪಟ್ಟಿ ಪರೀಷ್ಕರಣೆ ಕಾರ್ಯ ನಡೆಯುತ್ತಿದೆ. ಈ ಸಮಯದಲ್ಲಿ ಹೊಸದಾಗಿ ಸೇರ್ಪಡೆಯಾದ, ತಗೆದುಹಾಕಿದ ಹಾಗೂ ತಿದ್ದುಪಡಿ ಮಾಡಿದ ಮತದಾರರ ವಿವರವನ್ನು ಪ್ರತಿದಿನ ವೆಬ್‍ಸೈಟ್‍ನಲ್ಲಿ ಅಳವಡಿಸಬೇಕು. ಮತದಾರರ ಪಟ್ಟಿ ಪರೀಷ್ಕರಣೆ ಸಮಯದಲ್ಲಿ ಮತದಾರರಿಂದ ಪಡೆಯಲಾದ ಅರ್ಜಿಗಳನ್ನು ಹಾಗೇ ಇಟ್ಟುಕೊಂಡರೆ ಯಾವುದೇ ಪ್ರಯೋಜವಾಗುವುದಿಲ್ಲ. ಎಲ್ಲ ತಾಲೂಕಿನ ತಹಶೀಲ್ದಾರರು ಪ್ರತಿದಿನ ಅರ್ಜಿಗಳನ್ನು ವಿಲೇಮಾಡಿ ಕರಡು ಪಟ್ಟಿ ಪ್ರಕಟಗೊಳ್ಳುವ ಮುಂಚೆ ವೆಬ್‍ಸೈಟಿನಲ್ಲಿ ಮಾಹಿತಿ ಅಳವಡಿಸುವಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 2019ರ ಜನವರಿ ಒಂದಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕರ ಹೆಸರುಗಳನ್ನು ಹಾಗೂ ವಿಕಲಚೇತನರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಕಾಲೇಜು, ಐ.ಟಿ.ಐ., ಪಾಲಿಟೆಕ್ನಿಕ್, ಡಿಗ್ರೀ ಕಾಲೇಜು, ಮೆಡಿಕಲ್ ಮತ್ತು ಇಂಜಿನೀಯರಿಂಗ್ ಕಾಲೇಜುಗಳಲ್ಲಿಯೂ ಸಹ ಮತದಾರರ ನೋಂದಣಿ ಕಾರ್ಯ ಕೈಗೊಳ್ಳಬೇಕು. ಮತದಾರರ ಪಟ್ಟಿ ಪರೀಷ್ಕರಣೆ ಸಮಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಭಾಗವಾರು ವಿಕಲಚೇತನರ ಮಾಹಿತಿ ಸಂಗ್ರಹಿಸಿ ಅವರನ್ನು ಮತದಾರರ ಪಟ್ಟಿಗೆ ಸೇರಿಸಬೇಕು. ಎಲ್ಲ ಮತದಾರರ ಮೊಬೈಲ್ ಸಂಖ್ಯೆಯನ್ನು ಸಹ ಸಂಗ್ರಹಿಸಿ ಅಳವಡಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಸುಮಾರು 1800 ಬೂತ್ ವ್ಯಾಪ್ತಿಯಲ್ಲಿ ಯಾವುದೇ ಮತದಾರರ ಸೇರಿಸುವ ಅಥವಾ ತೆಗೆಯುವ ಪ್ರಕ್ರಿಯೆ ನಡೆದಿಲ್ಲ. ಈ ಬೂತ್‍ಗಳ ವ್ಯಾಪ್ತಿಯಲ್ಲಿ ಸರಿಯಾಗಿ ಮತದಾರರ ಪಟ್ಟಿ ಪರೀಷ್ಕರಣೆ ಕಾರ್ಯ ಕೈಗೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 119 ಸಹಾಯಕ ಬೂತ್‍ಗಳನ್ನು ನಿರ್ಮಿಸಿ ಚುನಾವಣೆ ನಡೆಸಲಾಗಿತ್ತು. ಮುಂದಿನ ಲೋಕಸಭಾ ಚುನಾವಣೆಗೆ ಈ ಬೂತ್‍ಗಳನ್ನು ಮುಖ್ಯ ಬೂತ್‍ಗಳೆಂದು ಪರಿಗಣಿಸುವುದರಿಂದ ಈ ಬೂತ್‍ಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಸಲ್ಲಿಸಬೇಕು. ತಹಶೀಲ್ದಾರರು ಚುಣಾವಣೆಗೆ ಸಂಬಂಧಿಸಿದ ಸಭೆಗಳನ್ನು ನಡೆಸಿದಾಗ ಅವುಗಳ ನಡುವಳಿಗಳನ್ನು ಹಾಗೂ ಭಾವಚಿತ್ರಗಳನ್ನು ಕಡ್ಡಾಯವಾಗಿ ಕಳುಹಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಸೇಡಂ ಸಹಾಯಕ ಆಯುಕ್ತೆ ಡಾ.ಬಿ.ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಎಲ್ಲ ತಹಶೀಲ್ದಾರರು, ಪ್ರೊಬೇಷನರಿ ಸಹಾಯಕ ಆಯುಕ್ತರು ಪಾಲ್ಗೊಂಡಿದ್ದರು.
ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಆ.01.(ಕ.ವಾ.)-ತೋಟಗಾರಿಕೆ ಇಲಾಖೆಯಿಂದ 2018-19ನೇ ಸಾಲಿಗೆ ನಾನಾ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಡಿ ವಿವಿಧ ಯೋಜನೆಗಳಲ್ಲಿ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಎಸ್.ಸಿ./ಎಸ್.ಟಿ ರೈತರಿಗೆ ಅಂಗಾಂಶ ಬಾಳೆ, ಹೈಬ್ರಿಡ್ ತರಕಾರಿಗಳು, ಪ್ರದೇಶ ವಿಸ್ತರಣೆ, 20 ಹೆಚ್.ಪಿ. ಒಳಗಿನ ಮಿನಿ ಟ್ರ್ಯಾಕ್ಟರ್ ಖರೀದಿ, ಈರುಳ್ಳಿ ಶೇಖರಣಾ ಘಟಕ, ತಳ್ಳುವ ಗಾಡಿ, ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ, ಸಾಮಾನ್ಯ ವರ್ಗ ರೈತರಿಗೆ ಕೃಷಿ ಹೊಂಡ, ನೆಲ ಹೊದಿಕೆ, ಜೇನು ಸಂಗ್ರಹಣೆ ಯಂತ್ರ, ಪಾಲಿ ಹೌಸ್ ಯೋಜನೆಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಇನ್ನು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು ಎಲ್ಲಾ ವರ್ಗದ ರೈತರಿಗೆ ಸಹಾಯಧನ ನೀಡುವ ಯೋಜನೆಗಳು ಇಲಾಖೆ ಹೊಂದಿದೆ. ಇದಲ್ಲದೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಸ್.ಸಿ./ಎಸ್.ಟಿ ರೈತರಿಗೆ ಬಾಳೆ ಬೆಳೆಯನ್ನು ಹನಿ ನೀರಾವರಿಯೊಂದಿಗೆ ನಿಖರ ಬೇಸಾಯಕ್ಕೆ ಸಹಾಯಧನ ನೀಡಲಾಗುತ್ತಿದೆ. ತೋಟಗಾರಿಕೆ ಬೆಳೆಯಲ್ಲಿ ಸಮಗ್ರ ರೋಗ ಕೀಟ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಖರೀದಿಸುವ ಸಾಮಾನ್ಯ ರೈತರಿಗೆ ಶೇ.50 ಹಾಗೂ ಪರಿಶಿಷ್ಠ ಜಾತಿ ರೈತರಿಗೆ ಶೇ.90ರಷ್ಟು ಸಹಾಯಧನ ಕಲ್ಪಿಸಲಾಗುತ್ತಿದೆ. ಅದೇ ರೀತಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೀರಿನ ಟ್ಯಾಂಕರ್ ಖರೀದಿಸಲು ಸಹ ಸಹಾಯಧನ ನೀಡಲಾಗುವುದು.
ತೋಟಗಾರಿಕೆ ಇಲಾಖೆಯ ಈ ಎಲ್ಲ ಯೋಜನೆಗಳ ಲಾಭ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.
ಕಾಣೆಯಾಗಿದ್ದಾರೆ: ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಲು ಮನವಿ
ಕಲಬುರಗಿ,ಆ.01.(ಕ.ವಾ.)-ಕಲಬುರಗಿ ನಗರದ ಆಲಂದ ರಸ್ತೆಯ ಜೆ.ಆರ್.ನಗರ ನಿವಾಸಿ 16 ವರ್ಷ ವಯಸ್ಸಿನ ಸಿದ್ರಾಮ ತಂದೆ ಹಣಮಂತರಾಯ ಗೌಡಪ್ಪಗೋಳ 2018ರ ಜುಲೈ 4 ರಂದು ಕಾಣೆಯಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.122/2018 ಪ್ರಕರಣ ದಾಕಲಿಸಿಕೊಳ್ಳಲಾಗಿದೆ. ಸದರಿ ವ್ಯಕ್ತಿ ಬಗ್ಗೆ ಯಾರಿಗಾದರು ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆ ಕಲಬುರಗಿ ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 4ರಂದು ಬೆಳಿಗ್ಗೆ 11.30 ಗಂಟೆಗೆ ಪ್ರಥಮ ಪಿ.ಯು.ಸಿ ವಿಜ್ಞಾನದಲ್ಲಿ ಅಭ್ಯಾಸ ಮಾಡುತ್ತಿರುವ ಮಗ ಸಿದ್ರಾಮ ಮನೆಯಿಂದ ಝರಾಕ್ಸ್ ಮಾಡಿಸಲು ಹೋಗಿ ಬರುವುದಾಗಿ ಹೇಳಿ ಹೋದವನು ಇದೂವರೆಗೆ ಬಾರದೆ ಕಾಣೆಯಾಗಿದ್ದು, ಮಗನನ್ನು ಹುಡುಕಿಕೊಡುವಂತೆ ಕಾನೆಯಾದ ವ್ಯಕ್ತಿ ತಂದೆ ಹಣಮಂತರಾಯ ಗೌಡಪ್ಪಗೋಳ ಅವರು ಪೊಲೀಸ್ ಠಾಣೆಗೆ ಜುಲೈ 6ರಂದು ದೂರು ಸಲ್ಲಿಸಿದ್ದು, ಅಂದೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಕೈಗೊಳ್ಳಲಾಗಿದೆ
ಕಾಣೆಯಾದ ವ್ಯಕ್ತಿ ವಿವರ: 16 ವಯಸ್ಸಿನ ಸಿದ್ರಾಮ ಸದಾರಣ ಮೈಕಟ್ಟು, ಗೋಧಿ ಬಣ್ಣ ಹೊಂದಿದ್ದು 5‘6’ ಅಡಿ ಎತ್ತರ ಇದ್ದಾನೆ. ಉದ್ದ ತೋಳಿನ ಕೆಂಪು ಟಿ-ಶರ್ಟ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಬಿನಿಯಾನ್, ಬಾಟಾ ಕಂಪನಿ ಚಾಕಲೇಟ್ ಬಣ್ಣದ ಚಪ್ಪಲಿಗಳು ಧರಿಸಿದ್ದು, ಕನ್ನಡ, ಇಂಗ್ಲೀಷ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ. ಕಾನೆಯಾದ ಹುಡುಗನ ಬಗ್ಗೆ ಯಾವುದೆ ಮಾಹಿತಿ ಸುಳೀವು ಸಿಕ್ಕಿದಲ್ಲಿ ರಾಘವೇಂದ್ರ ನಗರ ಪೊಲೀಸ್ ಟಾಣೆ-08472-263619, 9480830548, ಕಂಟ್ರೋಲ ರೂಮ ಸಂ.08472-100, 263608 ಹಾಗೂ ಕಲಬುರಗಿ ಜಿಲ್ಲಾ ಎಸ್.ಪಿ ಅವರ ದೂರವಾನಿ ಸಂಖಯೆ-08472-263602 ಸಂಪಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಆ.01.(ಕ.ವಾ.)-ಕಳೆದ 2017-18ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ/ದ್ವಿತಿಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲಬುರಗಿ ಜಿಲ್ಲಾ ಅಧಿಕಾರಿ ಮಹೆಬೂಬ ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ, ಹಾಗೂ 3ಬಿ ಗಳಿಗೆ ಸೇರಿದ ವಿದ್ಯಾರ್ಥಿಗಳು ಇಲಾಖೆಯ ಅಂತರ್ಜಾಲ https://ift.tt/1pXtg5j ಮೂಲಕ ಆಗಸ್ಟ್ 21ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮೆರಿಟ್ ಹಾಗೂ ಮೀಸಲಾತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಕುರಿತು ಹೆಚ್ಚಿನ ವಿವರಕ್ಕಾಗಿ ಇಲಾಖೆಯ ಅಂತರ್ಜಾಲ ಹಾಗೂ ಸಹಾಯವಾಣಿ ಸಂಖ್ಯೆ: 8050770004 ಸಂಪರ್ಕಿಸುವುದು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ: ತಾತ್ಮಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟ
ಕಲಬುರಗಿ,ಆ.01.(ಕ.ವಾ.)-2017ನೇ ಬ್ಲಾಕ್ ಅವಧಿಗೆ ಕಲಬುರಗಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಎಡ್/ ಬಿ.ಪಿ.ಎಡ್ ತರಬೇತಿ ಹೊಂದಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲಾ ಸಹ-ಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗೆ ಬಡ್ತಿಗಾಗಿ ದಿ:01-08-2018 ರಂದು ತಾತ್ಮಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಡಿಡಿಪಿಐ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
ಸದರಿ ತಾತ್ಮಾಲಿಕ ಜ್ಯೇಷ್ಠತಾ ಪಟ್ಟಿಗೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಅಥವಾ ಪಟ್ಟಿಯಲ್ಲಿ ವಿವಿರಗಳನ್ನು ಸರಿಪಡಿಸಬೇಕಾಗಿದ್ದಲ್ಲಿ ಶಿಕ್ಷಕರು ಆಗಸ್ಟ್ 10ರೊಳಗಾಗಿ ತಮ್ಮ ಆಕ್ಷೇಪಣೆಗಳನ್ನು ಪೂರಕ ದಾಖಲಾತಿಯೊಂದಿಗೆ ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಅವಧಿ ಮೀರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ಉಪನಿರ್ದೇಶಕರು ಸ್ಪಷ್ಠಪಡಿಸಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಆ.01.(ಕ.ವಾ.)- ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 2018-19ನೇ ಸಾಲಿಗೆ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆಬಾವಿ/ಏತ ನೀರಾವರಿ ಯೋಜನೆ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಕನಿಷ್ಟ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, 18 ರಿಂದ 60 ವರ್ಷದೊಳಗಿನ ವಯೋಮಾನದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ 98,000 ರೂ. ಹಾಗೂ ನಗರ ಪ್ರದೇಶದವರಿಗೆ 1,20,000 ರೂ. ಮಿತಿಯೊಳಗಿರಬೇಕು. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಧೆಯಲ್ಲಿ ನೌಕರಿಯಲ್ಲಿರಬಾರದು ಹಾಗೂ ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯವನ್ನು ಪಡೆಯದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿಯನ್ನು ನಿಗಮದ ವೆಬ್‍ಸೈಟ್ https://ift.tt/2n2dgpX ರಿಂದ ಪಡೆದು ಭರ್ತಿ ಮಾಡಿ ಅದರೊಂದಿಗೆ ಪಾಸ್‍ಪೋರ್ಟ ಅಳತೆಯ ಭಾವ ಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ ಪತ್ರ, ಆಧಾರ ಕಾರ್ಡ್ /ಪಡಿತರ ಚೀಟಿ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಯನ್ನು ಲಗತ್ತಿಸಿ ಆಗಸ್ಟ್ 31ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಡೇಪೂರ 3ನೇ ಹಂತ, ಕೆ.ಹೆಚ್.ಬಿ ಕಾಂಪ್ಲೆಕ್ಸ್ ಹತ್ತಿರ, ಶ್ರೀ ಟವರ್ ವಿಜಯ ಬ್ಯಾಂಕ್ ಮೇಲುಗಡೆ, ಕಲಬುರಗಿ ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗಾಗಿ ದೂ.ಸಂಖ್ಯೆ 08472-278660 ಸಂಪರ್ಕಿಸುವುದು.
ವಾರ್ಷಿಕ ಕೋರ್ಸ್ ಶುಲ್ಕ ಅನುದಾನಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಆ.01.(ಕ.ವಾ.)- ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಬಿ.ಎಸ್.ಸಿ.(ನರ್ಸಿಂಗ್), ಜಿ.ಎನ್.ಎಂ(ನರ್ಸಿಂಗ್) ಮತ್ತು ಪ್ಯಾರಾ ಮೆಡಿಕಲ್ ಕೋರ್ಸುಗಳಲ್ಲಿ ವ್ಯಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಾರ್ಷಿಕ ಕೋರ್ಸ್ ಶುಲ್ಕವಾಗಿ 35000 ರೂ. ಅನುದಾನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮಹೆಬೂಬ ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಕಳೆದ ವರ್ಷದ ತರಗತಿಯಲ್ಲಿ ಶೇ.40 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಪಾಲಕ/ಪೋಷಕರ ವಾರ್ಷಿಕ ಆದಾಯ 2.50 ಲಕ್ಷ ರೂ. ಮೀರಿರಬಾರದು. ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಥವಾ ಪ್ಯಾರಾ ಮೆಡಿಕಲ್ ಬೋರ್ಡಿನಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಈ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿಗಳನ್ನು ಇಲಾಖೆಯ ಅಂತರ್ಜಾಲ https://ift.tt/2NrQaoz ದಿಂದ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಯಿಂದ ಪಡೆದು ಭರ್ತಿ ಮಾಡಿ ವ್ಯಾಸಂಗ ಮಾಡುತ್ತಿರುವ ಕಾಲೇಜಿಗೆ ಆಗಸ್ಟ್ 31 ರೊಳಗಾಗಿ ಸಲ್ಲಿಸಬೇಕು. ಕಾಲೇಜಿನ ಮುಖ್ಯಸ್ಥರು ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಪಡೆದು ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಕ್ಕಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಜಿ.ಡಿ.ಎ. ಮೊದಲನೇ ಮಹಡಿ ಕಲಬುರಗಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ
ಕಲಬುರಗಿ,ಆ.01.(ಕ.ವಾ.)- ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನಾಗಿದ್ದು, ಶಿಶು ಜನಿಸಿದ ತಕ್ಷಣ ತಾಯಂದಿರು ಮಗುವಿಗೆ ಸ್ತನ್ಯಪಾನ ಮಾಡಿಸಬೇಕು ಎಂದು ಶಹಾಬಜಾರ ವೈದ್ಯಾಧಿಕಾರಿ ಡಾ.ನಂದಿನಿ ಹೇಳಿದರು.
ಬುಧವಾರ ಕಲಬುರಗಿ ನಗರದ ಶಹಾಬಜಾರ ‘ಬಿ’ ವಲಯದ ಶಿವಶಕ್ತಿ ನಗರದಲ್ಲಿ ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನೆಯಿಂದ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಯಿಯ ಮೊದಲ ಹಾಲಿನಲ್ಲಿ ಮಗುವಿಗೆ ರೋಗನಿರೋಧಕ ಶಕ್ತಿ ಹೊಂದಿರುವ ಗಿಂಪದ ಹಾಲು ಅಥವಾ ಹಳದಿ ಹಾಲು ದೊರೆಯುತ್ತದೆ. ಈ ಹಾಲಿನಲ್ಲಿ ಮಗುವಿಗೆ ಬೇಕಾಗುವ ಅಗತ್ಯ ಪ್ರೋಟಿನಾಂಶವಿರುತ್ತದೆ ಎಂದರು.
ಕಾರ್ಯಕ್ರಮವನ್ನು ಕಲಬುರಗಿ ನಗರ ಸಿಡಿಪಿಓ ಪ್ರೇಮಾ ಕಲಬುರಗಿ ಉದ್ಘಾಟಿಸಿದರು. ಅಂಗನವಾಡಿ ಕಾರ್ಯಕರ್ತೆ ಶಿವಲೀಲಾ ಸ್ವಾಗತಿಸಿದರೆ ನೇತ್ರಾವತಿ ನಿರೂಪಿಸಿದರು. ಅಂಗನವಾಡಿ ಮೇಲ್ವಿಚಾರಕಿ ವಿಲಾಸಮತಿ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಮಾತೃಪೂರ್ಣ ಯೋಜನೆಯ ಫಲಾನುಭವಿಗಳು, ಮಹಿಳೆಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು Nes & photos Dt.01-08-2018
ಎಲ್ಲಾ ಲೇಖನಗಳು ಆಗಿದೆ Nes & photos Dt.01-08-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ Nes & photos Dt.01-08-2018 ಲಿಂಕ್ ವಿಳಾಸ https://dekalungi.blogspot.com/2018/08/nes-photos-dt01-08-2018.html




0 Response to "Nes & photos Dt.01-08-2018"
ಕಾಮೆಂಟ್ ಪೋಸ್ಟ್ ಮಾಡಿ