ಶೀರ್ಷಿಕೆ : ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ.
ಲಿಂಕ್ : ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ.
ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ.
ಚಿತ್ರ ೧: ಕಾವೇರಿ ತೀರದ ಕಳ್ಳಿಪೀರಗಳು. |
ಶ್ರೀರಂಗಪಟ್ಟಣದ ನಗುವನಹಳ್ಳಿ - ಚಂದಗಾಲು ಗ್ರಾಮದಲ್ಲಿನ ಕಾವೇರಿ ನದಿ ತೀರದಲ್ಲಿ ಅತಿ ಹೆಚ್ಚು ಚಿತ್ರ ತೆಗೆಸಿಕೊಂಡಿರುವ ಖ್ಯಾತಿ ನೀಲಿಬಾಲದ ಕಳ್ಳಿಪೀರಗಳದ್ದು.
ಆಂಗ್ಲ ಹೆಸರು: Blue tailed bee eater (ಬ್ಲೂ ಟೈಲ್ಡ್ ಬೀಈಟರ್)
ವೈಜ್ಞಾನಿಕ ಹೆಸರು: Merops Philippinus (ಮೆರೋಪ್ಸ್ ಫಿಲಿಪ್ಪಿನಸ್)
ಥಳ ಥಳ ಹೊಳೆಯುವ ಬಣ್ಣಗಳನ್ನೊಂದಿರುವ ಪಕ್ಷಿಗಳಿವು. ಹಸಿರು - ಹಳದಿ - ಕಿತ್ತಳೆ ಕಂದು ಬಣ್ಣಗಳನ್ನೊಂದಿವೆಯಾದರೂ ಹಸಿರು ಬಣ್ಣವೇ ಹೆಚ್ಚಿದೆ. ಕೆಂಪು ಕಣ್ಣಿನ ಸುತ್ತ ಕಪ್ಪು ಪಟ್ಟಿಯಿದೆ. ಕಣ್ಣಿನ ಮೇಲ್ಭಾಗದಲ್ಲಿ ಗಿಣಿ ಹಸಿರು ಬಣ್ಣದ ಸಣ್ಣ ಪಟ್ಟಿಯಿದೆ. ನೆತ್ತಿ ಹಸಿರು - ಕಂದು ಮಿಶ್ರಿತ ಬಣ್ಣದ್ದು. ಕಣ್ಣಿನ ಕೆಳಗೆ ಬಿಳಿ ಪಟ್ಟಿ, ಅದರ ಕೆಳಗೆ ಕೇಸರಿ ಕಂದು ಮಿಶ್ರಿತ ಬಣ್ಣದ ಪಟ್ಟಿ. ಬಿಳಿ ಮತ್ತು ಕೇಸರಿ ಕಂದು ಪಟ್ಟಿ ಪಕ್ಷಿಯ ಕತ್ತಿಗೂ ಹರಡಿಕೊಂಡಿವೆ. ದೇಹದ ಇತರೆ ಭಾಗಗಳಲ್ಲಿ ಹಳದಿ ಹಸಿರು ಬಣ್ಣದ ವಿವಿಧ ವರ್ಣಗಳಿವೆ. ಬಾಲದ ಭಾಗದಲ್ಲಿ ನೀಲಿ ಬಣ್ಣವಿರುವ ಕಾರಣ ಇವಕ್ಕೆ ನೀಲಿಬಾಲದ ಕಳ್ಳಿಪೀರಗಳೆಂದು ಹೆಸರು. ಕಿಬ್ಬೊಟ್ಟೆಯ ಭಾಗವೂ ನೀಲಿ ಬಣ್ಣವನ್ನೊಂದಿದೆ. ನೀಲಿ ಬಾಲಕ್ಕೆ ಬೂದು ಬಣ್ಣದ ಪುಕ್ಕಗಳಂಟಿಕೊಂಡಿವೆ. ಬಾಲದ ತುದಿಗೆ ಕಿರುಬಾಲಗಳಂತೆ ಎರಡು ಪುಟ್ಟ ರೆಕ್ಕೆಗಳಂಟಿಕೊಂಡಿವೆ. ಹಾರುವಾಗ ನಡುವಿನಲ್ಲೊಂದು ಅತ್ಲಾಗಿತ್ಲಾಗೊಂದೊಂದು ಬಾಲದ ರೆಕ್ಕೆಗಳನ್ನು ಗಮನಿಸಬಹುದು. ಕೊಕ್ಕು ಮತ್ತು ಕಾಲುಗಳು ಕಪ್ಪು ಬಣ್ಣದ್ದಾಗಿವೆ.
ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.
ಮತ್ತಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ನದಿತೀರದಲ್ಲಿನ ಮೆದು ಮಣ್ಣಿನಲ್ಲಿ ಪೊಟರೆಯಂತಹ ಗೂಡು ನಿರ್ಮಿಸಿ ಮೊಟ್ಟೆಯಿಡುತ್ತವೆ ನೀಲಿಬಾಲದ ಕಳ್ಳಿಪೀರಗಳು.
ಚಿಟ್ಟೆಗಳು ಅದರಲ್ಲೂ ಹೆಲಿಕಾಪ್ಟರ್ ಚಿಟ್ಟೆಗಳು ಹೆಚ್ಚಿರುವ ಪ್ರದೇಶದಲ್ಲಿ ಎತ್ತರದ ಕೊಂಬೆಯ ಮೇಲೆ ಅಥವಾ ವಿದ್ಯುತ್ ತಂತಿಯ ಮೇಲೆ ಕುಳಿತು ನೆಲದತ್ತಲೇ ಗಮನವಿಟ್ಟಿರುತ್ತವೆ. ಗುರಿಯನ್ನು ಸ್ಪಷ್ಟವಾಗಿಸಿಕೊಂಡು ಹಾರಿ ಕೆಳಗೆ ಬಂದು ಹಾರಾಡುತ್ತಿರುವ ಚಿಟ್ಟೆಯನ್ನು ಹಾರಾಟದಲ್ಲೇ ಬಾಯಲ್ಲಿ ಕಚ್ಚಿ ಹಿಡಿದು ಮತ್ತದೇ ಕೊಂಬೆ/ ತಂತಿಯ ಮೇಲೆ ಕುಳಿತು ಚಿಟ್ಟೆಯನ್ನು ಚಚ್ಚಿ ಚಚ್ಚಿ ಕೊಂದು ಗಾಳಿಯಲ್ಲೊಂದು ಸುತ್ತು ಎಸೆದು ನುಂಗಿಕೊಳ್ಳುತ್ತವೆ. ಸಂಗಾತಿಯನ್ನು ಆಕರ್ಷಿಸಲೂ ಚಿಟ್ಟೆಯನ್ನು ಉಡುಗೊರೆಯಾಗಿ ನೀಡುತ್ತವೆ. ಗೂಡಿನಲ್ಲಿ ಮರಿಗಳಿರುವಾಗ ಚಿಟ್ಟೆ ಹಿಡಿದು ತಂದು ಗೂಡಿನ ಬಳಿಯ ಗಿಡದ ಮೇಲೆ ಕುಳಿತು ಅತ್ತಿತ್ತ ಗಮನಿಸಿ, ಅದಾದ ಮೇಲೆ ನೆಲದ ಮೇಲೆ ಕುಳಿತು ಸುತ್ತ ಮುತ್ತ ನೋಡಿ ಶತ್ರುಗಳ ಕಾಟವಿಲ್ಲವೆಂದರಿವಾದಾದ ಮೇಲೆ ಗೂಡಿನೊಳಗೆ ಸಾಗುತ್ತವೆ. ನದಿತೀರದಲ್ಲಿನ ನೂರಾರು ಗೂಡುಗಳು ನಮ್ಮ ಕಣ್ಣಿಗೆ ಒಂದೇ ರೀತಿ ಕಂಡರೂ ನೀಲಿಬಾಲದ ಕಳ್ಳಿಪೀರಗಳಿಗೆ ತಮ್ಮ ತಮ್ಮ ಗೂಡು ಗುರುತಿಸುವಲ್ಲಿ ಸಮಸ್ಯೆ ಇರಲಾರದು.
ನೀಲಿಬಾಲದ ಕಳ್ಳಿಪೀರ ನಮ್ಮಲ್ಲಿಗೆ ಬರುವ ವಲಸೆ ಪಕ್ಷಿ. ಕೆಲವೊಂದು ಕಡೆ ಈ ಪಕ್ಷಿಗಳು ವರುಷ ಪೂರ್ತಿ ಕಾಣಿಸುತ್ತವೆ. ಸ್ಥಳೀಯ ಪಕ್ಷಿಗಳಾಗುತ್ತಿವೆಯಾ?
ಚಿತ್ರ ೨: ಹಾರುವ ಕೊನೆಯ ಕ್ಷಣದಲ್ಲಿ... |
ಚಿತ್ರನೆನಪು:
ಚಿತ್ರ ೧: ಪಕ್ಷಿ ಛಾಯಾಗ್ರಹಣ ಪ್ರಾರಂಭಿಸಿದ ಹೆಚ್ಚಿನವರ ಬಳಿ ಈ ರೀತಿಯ ಚಿತ್ರವೊಂದು ಇದ್ದೇ ಇರುತ್ತದೆ! ಶ್ರೀರಂಗಪಟ್ಟಣದ ಚಂದಗಾಲಿನಲ್ಲಿ ಕಾವೇರಿ ನದಿ ತೀರದ ಬಳಿ ವರುಷಗಳ ಹಿಂದೆ ತೆಗೆದ ಪಟವಿದು. ನದಿ ತೀರಕ್ಕೊಂದು ವಾಕಿಂಗ್ ಹೋಗಿ ಸುತ್ತಮುತ್ತ ಮುರಿದು ಬಿದ್ದಿದ್ದ ಬಾಗಿದ ಕೊಂಬೆಯನ್ನು ಆರಿಸಿಕೊಂಡು ಒಂದೆಡೆ ನೆಟ್ಟು ಕೊಂಚ ದೂರದಲ್ಲಿ ಕುಳಿತರಾಯಿತು. ಮನುಷ್ಯರ ಓಡಾಟಕ್ಕೆ ಒಗ್ಗಿಹೋಗಿರುವ ಇಲ್ಲಿನ ಕಳ್ಳಿಪೀರಗಳು ಯಾವುದೇ ಅಂಜಿಕೆಯಿಲ್ಲದೆ ಬಿಗುಮಾನವಿಲ್ಲದೆ ಬಂದು ಕುಳಿತು ತಮ್ಮ ಕೆಲಸದಲ್ಲಿ ನಿರತವಾಗುತ್ತವೆ. ಕೊಂಬೆಯನ್ನು ಕೃತಕವಾಗಿ ಫೋಟೋ ಕ್ಲಿಕ್ಕಿಸುವುದ್ಯಾಕೋ ಅಸಹವೆನ್ನಿಸಿಬಿಟ್ಟಿತು.
ಈಗ ಚಂದಗಾಲಿನ ನದಿ ತೀರದಲ್ಲಿ ಈ ಪಕ್ಷಿಗಳಿಗೆ ರಕ್ಷಣೆ ನೀಡುವ ಸಲುವಾಗಿ ಬೇಲಿಹಾಕಿದ್ದಾರಂತೆ. ರಕ್ಷಣೆ ಊರಿನ ಜನರಿಂದ ಎನ್ನುವುದು ಕಾರಣ, ನಿಜಕ್ಕೂ ರಕ್ಷಣೆ ಸಿಗುತ್ತಿರುವುದು ಛಾಯಾಚಿತ್ರಕಾರರಿಂದ ಎಂದರೆ ತಪ್ಪಾಗಲಾರದು.
ಚಿತ್ರ ೨: ಮಂಡ್ಯದ ಸೂಳೆಕೆರೆಯ ಪಕ್ಕದಲ್ಲಿ ತೆಗೆದ ಪಟವಿದು. ಕೆರೆಯಲ್ಲೊಂದಷ್ಟು ಪಕ್ಷಿ ವೀಕ್ಷಣೆ ನಡೆಸಿ ವಾಪಸ್ಸಾಗುವಾಗ ನೀಲಿಬಾಲದ ಕಳ್ಳಿ ಪೀರವೊಂದು ಉದ್ದನೆಯ ಕಡ್ಡಿಯ ಮೇಲೆ ಕುಳಿತಿತು. ಒಂದು ಕ್ಷಣವೂ ನಿಲ್ಲದೆ ಹಾರಿಹೋಯಿತು. ಹಾರುವ ಸಿದ್ಧತೆಯಲ್ಲಿ ರೆಕ್ಕೆ - ಬಾಲಗಳನ್ನಗಲಿಸಿದಾಗ ಅದ್ಯಾವುದೋ ಮಾಯೆಯಲ್ಲಿ ಕ್ಯಾಮೆರಾದೊಳಗೆ ಸೆರೆಯಾಗಿಬಿಟ್ಟಿತು!
ಕೃತಕ ಕೊಂಬೆಗಳ ಮೇಲಿನ ಫೋಟೋಗಿಂತ ಇದೇ ಹೆಚ್ಚು ಚೆಂದ.
ಹೀಗಾಗಿ ಲೇಖನಗಳು ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ.
ಎಲ್ಲಾ ಲೇಖನಗಳು ಆಗಿದೆ ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ. ಲಿಂಕ್ ವಿಳಾಸ https://dekalungi.blogspot.com/2018/08/blog-post_85.html
0 Response to "ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ."
ಕಾಮೆಂಟ್ ಪೋಸ್ಟ್ ಮಾಡಿ