News & photos Dt.23-11-2017

News & photos Dt.23-11-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News & photos Dt.23-11-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News & photos Dt.23-11-2017
ಲಿಂಕ್ : News & photos Dt.23-11-2017

ಓದಿ


News & photos Dt.23-11-2017

ವಿಮಾನ ನಿಲ್ದಾಣದ ಹೆಚ್ಚುವರಿ ಕಾಮಗಾರಿಗೆ ಹೆಚ್.ಕೆ.ಆರ್.ಡಿ.ಬಿ. ಅನುದಾನ

ಕಲಬುರಗಿ,ನ.23(ಕ.ವಾ.)-ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಬರುವ ಫೆಬ್ರವರಿ ಮಾಹೆಯ ಅಂತ್ಯದೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹೆಚ್ಚುವರಿ ಕಾಮಗಾರಿಗಳಿಗೆ ಹೆಚ್.ಕೆ.ಆರ್.ಡಿ.ಬಿ. ನೀಡುವ ಅನುದಾನ ಬಳಕೆಮಾಡಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತ ಹಾಗೂ ಹೆಚ್.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಹರ್ಷ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆವಹಿಸಿ ಮಾತನಾಡಿ, ವಿಮಾನ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಪರಿಷ್ಕøತ 167 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕನುಗುಣವಾಗಿ ಹೆಚ್.ಕೆ.ಆರ್.ಡಿ.ಬಿ. ಪಾಲು ಅಂದಾಜು 55 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ. ಈಗಾಗಲೇ 35 ಕೋಟಿ ರೂ.ಗಳನ್ನು ನೀಡಲಾಗಿದೆ. ಇನ್ನುಳಿದ 20ಕೋಟಿ ರೂ.ಗಳನ್ನು ತಕ್ಷಣ ನೀಡಲಾಗುವುದು ಎಂದರು.
ರನ್ ವೇ ಕೋನೆಯಲ್ಲಿ 8.9 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಲಾಗುತ್ತಿರುವ 270 ಮೀಟರ್ ರೈಸಾ ಕಾಮಗಾರಿ, ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ 9.7 ಕೋಟಿ ರೂ. ವೆಚ್ಚದ ಹೆಚ್.ಟಿ.ಲೈನ್ ವಿದ್ಯುತ್ ಕಾಮಗಾರಿ ಹಾಗೂ 4.5 ಕೋಟಿ ರೂ.ಗಳ ನೀರು ಸರಬರಾಜು ಕಾಮಗಾರಿಗಳು ಹೆಚ್ಚುವರಿಯಾಗಿ ಕೈಗೊಳ್ಳಬೇಕಾಗಿದೆ. ಈ ಕಾಮಗಾರಿಗಳಿಗೆ ಹೆಚ್.ಕೆ.ಆರ್.ಡಿ.ಬಿ. ಪಾಲಿನ ಹಣದಲ್ಲಿ ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಮೂಲ ಸೌಕರ್ಯಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸಂದೀಪ ದವೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರೈಟ್ಸ್ ಅವರೊಂದಿಗೆ ಎಂ.ಓ.ಯು. ಮಾಡಿಕೊಳ್ಳಲಾಗುವುದು. ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ಎಲ್ಲ ಕಟ್ಟಡಗಳ ಹಾಗೂ ಅವಶ್ಯಕ ಉಪಕರಣಗಳ ಮಾಹಿತಿ ಮತ್ತು ನೀಲ ನಕ್ಷೆಯನ್ನು ಪಡೆದುಕೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ಅಗ್ನಿಶಾಮಕ ದಳದ ವ್ಯವಸ್ಥೆಯ ಮಾಹಿತಿ ಪಡೆಯಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಮಾತನಾಡಿ, ಮೂಲಸೌಕರ್ಯಾಭಿವೃದ್ಧಿ ಇಲಾಖೆಯಿಂದ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ವಿಮಾನ ನಿಲ್ದಾಣ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ನಾಗಾರ್ಜುನ ಕನ್ಸಟ್ರಕ್ಷನ್ ಅವರಿಗೆ 2.1 ಕೋಟಿ ರೂ.ಗಳ ಬಾಕಿ ಬಿಲ್ಲು ಹಾಗೂ ಸಾಧನ ಸಲಕರಣೆಗಳನ್ನು ಕೃಢೀಕರಿಸಲು 1.47 ಕೋಟಿ ರೂ.ಗಳನ್ನು ನೀಡಬೇಕಾಗಿದೆ. ಈ ಹಣವನ್ನು ತಕ್ಷಣ ನೀಡಲಾಗುವುದು. ಪ್ರತಿ ತಿಂಗಳು ಕಾಮಗಾರಿಗೆ ಅವಶ್ಯಕವಿರುವ ಅನುದಾನ ಬಿಡುಗಡೆ ಮಾಡಲು ಮೂಲಸೌಕರ್ಯಾಭಿವೃದ್ಧಿ ಇಲಾಖೆಗೆ ತಿಳಿಸಲಾಗಿದೆ. ಗುತ್ತಿಗೆದಾರರು ಪ್ರತಿ ತಿಂಗಳು ಕೈಗೊಳ್ಳುವ ಕಾಮಗಾರಿಯ ಬಿಲ್ಲನ್ನು ಸಲ್ಲಿಸಿದಲ್ಲಿ ತಕ್ಷಣ ಪಾವತಿಸಲಾಗುವುದು. ಹಣದ ಯಾವುದೇ ಕೊರತೆ ಇಲ್ಲ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅವರು ತಿಳಿಸಿದರು.
ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜಿಜುದ್ದೀನ್ ಮಾತನಾಡಿ, ಈಗಾಗಲೇ 3.27 ಕಿ.ಮಿ. ಉದ್ದದ ರನ್ ವೆ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕೆ ಮುಂದಿನ 45 ದಿನಗಳಲ್ಲಿ ಅಂತಿಮ ಬಿಟುಮಿನಸ್ ಲೇಯರ್ ಹಾಕಲಾಗುವುದು. 15.91 ಕೋಟಿ ರೂ.ಗಳ ಮೂರನೇ ಪ್ಯಾಕೇಜ್ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಇದರಲ್ಲಿರುವ ಸಾಧನ ಸಲಕರಣೆಗಳನ್ನು ಸರಬರಾಜು ಮಾಡುವ ಸೂಕ್ತ ಗುತ್ತಿಗೆದಾರರು ಸಿಗದ ಕಾರಣ ಅಲ್ಪಾವದಿ ಮರು ಟೆಂಡರ್ ಕರೆದು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನಿಲಕುಮಾರ, ಸಹಾಯಕ ಆಯುಕ್ತ ರಾಚಪ್ಪ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬೆಣ್ಣೆತೋರಾದಿಂದ ಶಾಸ್ವತ ಕುಡಿಯುವ ನೀರು ಸರಬರಾಜು ಯೋಜನೆ
ಕಲಬುರಗಿ,ನ.23(ಕ.ವಾ.)-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಶಾಸ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುನ ಹಿನ್ನೆಲೆಯಲ್ಲಿ ಬೆಣ್ಣೆತೋರಾ ಮೂಲದಿಂದ ನೀರುಸರಬರಾಜು ಮಾಡಲು ಅವಶ್ಯಕವಿರುವ ಕಾಮಗಾರಿಯ ಅಂದಾಜು ಪಟ್ಟಿ ನೀಡುವಂತೆ ಪ್ರಾದೇಶಿಕ ಆಯುಕ್ತ ಹಾಗೂ ಹೆಚ್.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಹರ್ಷ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕುಡಿಯುವ ನೀರು ಸರಬರಾಜು ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆವಹಿಸಿ ಮಾತನಾಡಿ, ಬೆಣ್ಣೆತೋರಾದಿಂದ ಈಗಾಗಲೇ ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಮಾರ್ಗದಲ್ಲಿ ನೀರು ಸೋರಿಕೆ ಮಾರ್ಗ ಬದಲಿಸುವುದು, ಫಿಲ್ಟರ್ ಬೆಡ್‍ದಿಂದ ಕೇಂದ್ರೀಯ ವಿಶ್ವ ವಿದ್ಯಾಲಯದ ವರೆಗೆ ನೂತನ ಕುಡಿಯುವ ನೀರಿನ ಮಾರ್ಗ ಅಳವಡಿಸುವುದು ಸೇರಿದಂತೆ ಪ್ರಮುಖ ಕಾಮಗಾರಿಗಳ ವಿವರ ಅಂದಾಜು ಪಟ್ಟಿ ನೀಡುವಂತೆ ತಿಳಿಸಿದರು.
ಬೆಣ್ಣೆತೋರಾ ಜಲಾಶಯದಿಂದ ಕಲಬುರಗಿ ನಗರಕ್ಕೆ ದಿನಂಪ್ರತಿ 20 ಎಂ.ಎಲ್.ಡಿ. ಕುಡಿಯುವ ನೀರು ಪಂಪ್ ಮಾಡಲಾಗುತ್ತಿದೆ. ಮಾರ್ಗ ಮಧ್ಯದ 9 ಕಿ.ಮಿ. ಉದ್ದದ ಮಾರ್ಗದಲ್ಲಿ ನೀರು ಸೋರಿಕೆ ಇರುವುದರಿಂದ ಫಿಲ್ಟರ್ ಬೆಡ್‍ನಲ್ಲಿ ದಿನಂಪ್ರತಿ 15 ಎಂ.ಎಲ್.ಡಿ. ನೀರು ಮಾತ್ರ ಲಭ್ಯವಾಗುತ್ತಿದೆ. ಈಗಾಗಲೇ ಕರ್ನಾಟಕ ನಗರ ಮೂಲಸೌಕರ್ಯಾಭಿವೃದ್ಧಿ ಹಣಕಾಸು ನಿಗಮದಿಂದ ಬೆಣ್ಣೆತೋರಾದಿಂದ ನಗರಕ್ಕೆ ನೀರು ಸರಬರಾಜು ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಈ ಕಾಮಗಾರಿ ಬೇಗ ಪ್ರಾರಂಭಗೊಳ್ಳುವ ನಿರೀಕ್ಷೆಗಳಿಲ್ಲ. ಇದಕ್ಕಾಗಿ ಮಹಾನಗರ ಪಾಲಿಕೆ ತನ್ನ ಪಾಲಿನ ಹಣವನ್ನು ಸಹ ಭರಿಸಿದೆ. ಈ ಕಾಮಗಾರಿ ಪೈಕಿ 9 ಕಿ.ಮಿ. ಉದ್ದದ ನೀರು ಸೋರಿಕೆ ಮಾರ್ಗವನ್ನು ಬದಲಿಸುವ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಿ, ಮಹಾನಗರ ಪಾಲಿಕೆ ನೀಡಿರುವ ತನ್ನ ಪಾಲಿನ ಅನುದಾನದಲ್ಲಿ ಸೋರಿಕೆ ಮಾರ್ಗ ಬದಲಿಸುವ ಕಾಮಗಾರಿ ಕೈಗೊಂಡು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿಯ ಅಂದಾಜು ಪಟ್ಟಿ ನೀಡಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಇಂಜನಿಯರ್ ದಿನೇಶ ಮಾಹಿತಿ ನೀಡಿದರು.
ಬೆಣ್ಣೆತೋರಾ ಮಾರ್ಗದ ನೀರು ಸೋರಿಕೆ ನಿಲ್ಲಿಸಿದಲ್ಲಿ ನಗರಕ್ಕೆ ದಿನಂಪ್ರತಿ 20 ಎಂ.ಎಲ್.ಡಿ. ನೀರು ಲಭ್ಯವಾಗುವುದು. ಇದರಿಂದ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಅವಶ್ಯಕವಿರುವ 2.33 ಎಂ.ಎಲ್.ಡಿ. ಹಾಗು ನಗರದ ನೂತನ ಬಡಾವಣೆಗೂ ಸಹ ನೀರು ಸರಬರಾಜು ಮಾಡಬಹುದಾಗಿದೆ ಎಂದು ವಿವರಿಸಿದರು.
ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಅಮರ್ಜಾ ಜಲಾಶಯದಿಂದ ನೀರು ಸರಬರಾಜು ಮಾಡಲು 41 ಕೋಟಿ ರೂ.ಗಳ ಅಂದಾಜು ಕ್ರಿಯಾ ಯೋಜನೆ ರೂಪಿಸಲಾಗಿದೆ. ಆದರೆ ಅಮರ್ಜಾ ಜಲಾಶಯದ ಮುಂದಿನ 10 ವರ್ಷಗಳ ನೀರು ಸಂಗ್ರಹಣೆ ಅಂಕಿಅಂಶಗಳನ್ನು ಪರಿಶೀಲಿಸಲಾಗಿ ಕೇವಲ ಶೇ.50ರಷ್ಟು ಮಾತ್ರ ಈ ಯೋಜನೆಯ ಮೇಲೆ ಅವಲಂಬಿಸಲು ಸಾಧ್ಯವಾಗುತ್ತಿದೆ. ಅಮರ್ಜಾ ಜಲಾಶಯದಿಂದ ಆಳಂದ ಪಟ್ಟಣಕ್ಕೆ ಹಾಗು ಸುತ್ತಲಿನ 6 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನಿಲಕುಮಾರ, ಸಹಾಯಕ ಆಯುಕ್ತ ರಾಚಪ್ಪ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ಸಿದ್ದರಿರುವ ತಜ್ಞ ವೈದ್ಯರಿಗೆ ತಕ್ಷಣ ಆದೇಶ

ಕಲಬುರಗಿ,ನ.23(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ 40 ತಜ್ಞ ವೈದ್ಯರ ಹಾಗೂ 4 ಎಂ.ಬಿ.ಬಿ.ಎಸ್. ವೈದ್ಯರ ಕೊರತೆ ಇದ್ದು, ಅವರನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ಸಿದ್ಧರಿರುವ ವೈದ್ಯರು ಸಂಪರ್ಕಿಸಿದಲ್ಲಿ ಅವರನ್ನು ತಕ್ಷಣ ಸೇವೆಗೆ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಆರೋಗ್ಯ ಇಲಾಖೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಲು ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಆಡಿಟ್ ಕೈಗೊಂಡು ಮರಣದ ಕಾರಣಗಳನ್ನು ತಿಳಿದು ಕ್ರಮ ಜರುಗಿಸಬೇಕು ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನು ಸಹ ಮನೆಗಳಲ್ಲಿ ಹೆರಿಗೆಯಾಗುತ್ತವೆ. ಅವರಲ್ಲಿ ಜಾಗೃತಿ ಮೂಡಿಸಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಪ್ರೆರೇಪಿಸಬೇಕು. ಹೆರಿಗೆ ಸಮಯದಲ್ಲಿ 108 ಅಂಬ್ಯುಲೆನ್ಸ್ ಸಹಾಯ ಪಡೆಯಲು ತಿಳಿಸಬೇಕು ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ತಿಂಗಳೂ ಎಲ್ಲ ಗರ್ಭಿಣಿಯರಿಗೆ ತಪಾಸಣೆ ಮಾಡಬೇಕೆಂದು ಸೂಚಿಸಿದರು.
ಇಂದ್ರಧನುಷ್ ಲಸಿಕಾ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ಮತ್ತು ಗರ್ಭೀಣಿಯರು ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಿ ಗುರಿ ಹಮ್ಮಿಕೊಂಡಂತೆ ಕಳೆದ ಭಾರಿ ಕೈಗೊಂಡ ಇಂದ್ರಧನುಷ್ ಕಾರ್ಯಕ್ರಮದಲ್ಲಿ 687 ಗರ್ಭಿಣಿಯರ ಪೈಕಿ 685 ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ. ಎರಡು ವರ್ಷದೊಳಗಿನ 3253 ಮಕ್ಕಳ ಪೈಕಿ 2802 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವ ಪ್ರಮಾಣ ಪ್ರತಿ ಸಲ ಹೆಚ್ಚಿಗೆ ಆಗಬೇಕು. ಕನಿಷ್ಟ ಶೇ 95 ರಷ್ಟು ಪ್ರಗತಿ ಸಾಧಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಒಂದು ಹಳ್ಳಿಯಿಂದ ಸುಮಾರ 10 ಕಿ.ಮಿ. ವ್ಯಾಪ್ತಿಯಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಿದ್ದಲ್ಲಿ ಅಂಥಹ ಗ್ರಾಮಗಳ ವ್ಯಾಪ್ತಿಯಲ್ಲಿ ವಿಸ್ತರಣಾ ಆರೋಗ್ಯ ಕೇಂದ್ರ ಸ್ಥಾಪಿಸಲು ಸರ್ಕಾರ ರಾಜ್ಯಕ್ಕೆ 150 ವಿಸ್ತರಣಾ ಕೇಂದ್ರಗಳಿಗೆ ಮಂಜೂರಾತಿ ನೀಡಿದೆ. ಈ ಪೈಕಿ ಚಿಂಚೋಳಿ 4 ಹಾಗು ಸೇಡಂ 3 ಸೇರಿದಂತೆ ಜಿಲ್ಲೆಗೆ ಒಟ್ಟು 9 ವಿಸ್ತರಣಾ ಕೇಂದ್ರಗಳು ಮಂಜೂರಾಗಿವೆ ಎಂದು ವಿವರಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ|| ನಾಗರತ್ನಾ ಚಿಮ್ಮಲಗಿ ಮಾತನಾಡಿ, ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್ ಘಟಕ ಸ್ಥಾಪಿಸಲು ಸರ್ಕಾರ ಕ್ರಮ ಜರುಗಿಸಿದೆ. ಅಫಜಲಪೂರ ತಾಲೂಕು ಆಸ್ಪತ್ರೆಯಲ್ಲಿ ಯುನಾನಿ, ಜೇವರ್ಗಿ ಹಾಗು ಆಳಂದ ತಾಲುಕು ಆಸ್ಪತ್ರೆಗಳಲ್ಲಿ ಆಯುರ್ವೇದ, ಸೇಡಂ ಹಾಗೂ ಚಿತ್ತಾಪೂರ ತಾಲೂಕು ಆಸ್ಪತ್ರೆಗಳಲ್ಲಿ ಹೊಮಿಯೋಪಥಿ ಘಟಕ ಸ್ಥಾಪಿಸಲು ಆದೇಶಿಸಲಾಗಿದೆ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್.ಆರ್.ಎಚ್.ಎಂ. ಅಡಿ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರನ್ನು ಈ ಘಟಕಗಳಿಗೆ ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಾನಪದ ಕಲೆಗೆ ಹೆಚ್ಚು ಒತ್ತು ನೀಡಿ: ಶರಣಕುಮಾರ ಮೋದಿ

ಕಲಬುರಗಿ,ನ,23(ಕ.ವಾ.)- ಜಾನಪದ ಕಲೆ ಇಂದು ಮರೆಮಾಚುತ್ತ ಅಳಿವಿನ ಅಂಚಿನಂತ ಸಾಗುತ್ತಿದೆ. ಜಾನಪದ ಕಲೆ ಅಳಿಯದೇ ಉಳಿಯಬೇಕಾದರೆ ನಾಡಿನ ಜಾನಪದಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಹೇಳಿದರು.
ಗುರುವಾರ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸ್ಪಂದನ ಕೋಶ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಕುರಿತು ಮುಂಬರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಯುವಜನೋತ್ಸವಕ್ಕಾಗಿ 50 ಸಾವಿರ ರೂ. ಮೀಸಲಿಡಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ್ ಮಾತನಾಡಿ ಇಂದಿನ ಸಂಸ್ಕøತಿ ಮುಂದಿನ ಜೀವನಕ್ಕೆ ನಾಂದಿಯಾಗಿದೆ. ಜಾನಪದ ಕಲೆ ಉಳಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜಿಸಬೇಕು ಮತ್ತು ಜನರು ಇವುಗಳಿಗೆ ಹೆಚ್ಚು ಪೋತ್ಸಾಹ ನೀಡಬೇಕು ಎಂದರು.
ಜಿ.ಪಂ ಉಪಾಧ್ಯಕ್ಷ ಶೋಭಾ ಸಿದ್ದು ಸಿರಸಗಿ ಮಾತನಾಡಿ ಮಕ್ಕಳಿಗೆ ಕಲಿಕೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದ್ದು, ಇದರ ಸದುಪಯೋಗ ವಿಧ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಕಲಬುರಗಿ ರಂಗಾಯಣದ ನಿರ್ದೇಶಕ ಮಹೇಶ ವಿ.ಪಾಟೀಲ್ ಮಾತನಾಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಉಪಸ್ಥಿತರಿದ್ದರು.
ನಂತರ ಜನಪದ ನೃತ್ಯ, ಜಾನಪದ ಗೀತೆ, ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಓಡಿಸ್ಸಿ, ಮಣಿಪುರಿ, ಕುಚಿಪುಡಿ, ಕಥಕ್, ಹಿಂದೂಸ್ಥಾನಿ/ ಕರ್ನಾಟಕ ಶಾಸ್ತ್ರೀಯ ಗಾಯನ, ಅಶುಭಾಷಣ, ಏಕಾಂಕ ನಾಟಕ ಪ್ರದರ್ಶನ ಹಾಗೂ ಶಾಸ್ತ್ರೀಯ ವಾದ್ಯಗಳಾದ ತಬಲಾ, ಮೃದಂಗಂ, ಕೊಳಲು, ವೀಣೆ ಮತ್ತು ಸಿಪಾರ್, ಹಾರ್ವೋನಿಯಂ, ಗಿಟಾರ್ ಸ್ಪರ್ದೇಗಳು ನಡೆದವು.

ನವೆಂವರ್ 25 ರಿಂದ ಮೂರು ದಿನಗಳ ಕೃಷಿ ಮೇಳ

ಕಲಬುರಗಿ,ನ.23.(ಕ.ವಾ.)-ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿಪಡಿಸಲಾದ ಹೊಸ ತಳಿಗಳ ಪ್ರಾತ್ಯಕ್ಷಿಕೆ ವೀಕ್ಷಣೆ ಹಾಗೂ ವಿವಿಧ ಬೆಳೆಗಳ ಅಧುನಿಕ ಬೇಸಾಯ ಕ್ರಮಗಳ ಬಗ್ಗೆ ರೈತಾಪಿ ವರ್ಗಕ್ಕೆ ತಿಳಿಹೇಳಲು ಆಳಂದ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ನವೆಂಬರ್ 25 ರಿಂದ 27ರ ವರೆಗೆ ಮೂರು ದಿನಗಳ ಕಾಲ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಹಾಗೂ ಕೃಷಿ ಮೇಳದ ಅಧ್ಯಕ್ಷ ಡಾ.ಡಿ.ಎಂ.ಮಣ್ಣೂರು ಹೇಳಿದರು.
ಅವರು ಗುರುವಾರ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಮೇಳದ ಕುರಿತು ವಿವರ ನೀಡಲು ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕಲಬುರಗಿ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಆತ್ಮ ಯೋಜನೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮೇಳಕ್ಕೆ ನವೆಂಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಉದ್ಘಾಟಿಸಲಿದ್ದಾರೆ ಎಂದರು.
ಈ ಮೇಳದಲ್ಲಿ ಕೇಂದ್ರದಲ್ಲಿ ನಡೆಯುವ ಸಂಶೋಧನೆಗಳನ್ನು ಅನ್ನದಾತನಿಗೆ ತಿಳಿಸಲಾಗುತ್ತದೆ. ಕಳೆದ 11 ವರ್ಷಗಳಿಂದ ಕೃಷಿ ಮೇಳ ಮಾಡುತ್ತ ಬಂದಿದ್ದು, ಇದೂವರೆಗೆ 10 ತೊಗರಿ ತಳಿಗಳು ಹಾಗೂ 6 ಕಡಲೆ ತಳಿಯನ್ನು ಈ ಕೇಂದ್ರದಿಂದ ಅಭಿವೃದ್ಧಿಪಡಿಸಿ ರೈತರಿಗೆ ಬಿಡುಗಡೆ ಮಾಡಿದೆ. ಈ ಬಾರಿ ಮುಂಗಾರಿನಲ್ಲಿ ಟಿ.ಎಸ್-3ಆರ್ ತಳಿಯ ನಂತರ ಜಿ.ಆರ್.ಜಿ-811 ಹೊಸ ತೊಗರಿ ತಳಿ ಮತ್ತು ಯಂತ್ರಚಾಲಿತ ಕಟಾವಿಗೆ ನೆರವಾಗುವಂತಹ ಜೆ.ಬಿ.ಎಮ್-2 ಕಡಲೆ ತಳಿ ಪ್ರಾತ್ಯಕ್ಷಿಕೆಯನ್ನು ರೈತರ ಹೊಲದಲ್ಲಿ ಮಾಡಲಾಗುತ್ತಿದೆ. ತಡವಾಗಿ ಬಿತ್ತನೆಗೆ ಸಹಕಾರಿಯಾಗುವ ಐ.ಸಿ.ಪಿ.ಎಲ್-87 ತೊಗರಿ ತಳಿ, ನೆಟೆ ರೋಗ ಬರದಂತೆ ಜಿಆರ್‍ಜಿ-811, ಮಣ್ಣು ಕಡಿಮೆ ಹಾಗೂ ಮಳೆಯಿಲ್ಲದ ಸಂದರ್ಭದಲ್ಲಿ ಉತ್ತಮ ಇಳುವರಿ ನೀಡುವ ಟಿ.ಎಸ್-3ಆರ್ ತೊಗರಿ ತಳಿ, ಸೂಪರ್ ಅಣ್ಣಿಗೇರಿ ಕಡಲೆ ತಳಿ ಹಾಗೂ ಆರ್.ಜಿ.ಕೆ (ರಾಯಚೂರ್ ಗ್ರೀನ್ ಕಾಬುಲಿ) ಕಡಲೆ ತಳಿಯನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಹೈದ್ರಾಬಾದ ಕರ್ನಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಜಿನಿವಿಕ್ ಲ್ಯಾಬ್ ಸ್ತಾಪನೆಯಾಗಿರುವುದರಿಂದ ತಳಿಗಳ ಅಭಿವೃದ್ಧಿಪಡಿಸಲು ತುಂಬಾ ನೆರವಾಗಿದೆ ಎಂದರು.
ಕೃಷಿ ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ವಿವಿಧ ತಳಿಯ ಜಾನವಾರುಗಳ ಪ್ರದರ್ಶನ, ಎರೆಹುಳು ಗೊಬ್ಬರ ಉತ್ಪಾದನೆ ಘಟಕ ಹಾಗೂ ಮಣ್ಣು ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಗುವುದು. ಇದಲ್ಲದೆ ಕೃಷಿ ಸಂಬಂಧಿತ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯ ಇಲಾಖೆಗಳು ಸರ್ಕಾರ ರೂಪಿಸಿರುವ ಹಲವು ರೈತಪರ ಯೋಜನೆಗಳ ಮಾಹಿತಿಯನ್ನು ರೈತರಿಗೆ ನೀಡಲಿದ್ದಾರೆ. ಕೃಷಿ ಪರಿಕರ ಉತ್ಪಾದನೆ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳ ಮಾರಾಟಗಾರರು, ಎನ್.ಜಿ.ಓ, ಸ್ವ-ಸಹಾಯ ಗುಂಪುಗಳು ಹಾಗೂ ಹಣಕಾಸಿನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, 110 ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದರು.
ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತ ಸಮೂಹ ಕೃಷಿ ಮೇಳಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ನಗರದ ಮುಖ್ಯ ಬಸ್ ನಿಲ್ದಾಣ ಮತ್ತು ಸೂಪರ ಮಾರ್ಕೇಟ್ ಬಸ್ ನಿಲ್ದಾಣದಿಂದ ಸಂಶೋಧನಾ ಕೇಂದ್ರಕ್ಕೆ ಬಸ್, ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ರಾಜು ತೆಗ್ಗೆಳ್ಳಿ ಮಾತನಾಡಿ ಕೀಟನಾಶಕ ವಿತರಕರಿಗೆ ಕೀಟನಾಶಕಗಳ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದನೆಗೆ ಹೈದ್ರಾಬಾದಿನ ಮ್ಯಾನೇಜ್ ಸಂಸ್ಥೆಯ ಸಹಯೋಗದೊಂದಿಗೆ Daesi (Diploma in Agricultural extension service for input dealers) ಎಂಬ ಒಂದು ವರ್ಷದ ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್ ಕಳೆದ ವರ್ಷದಿಂದ ಪ್ರಾರಂಭಿಸಲಾಗಿದ್ದು, ಈಗಾಗಲೆ 40 ಜನ ವಿತರಕರು ತರಬೇತಿ ಪಡೆದಿದ್ದಾರೆ. ಪ್ರಸಕ್ತ ವರ್ಷದಲ್ಲಿ 80 ಜನ ವಿತರಿಕರಿಗೆ ತರಗತಿಗಳು ಬರುವ ಡಿಸೆಂಬರ್ 1 ರಿಂದ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಜ್ಞಾನಿಗಳಾದ ಡಾ.ಮುನಿಸ್ವಾಮಿ, ಡಾ.ಬಿ.ಎಂ.ದೊಡ್ಡಮನಿ, ಡಾ.ರಾಚಪ್ಪ ವಿ., ಡಾ.ರವಿ ಗುಂಡಪಗೋಳ ಹಾಜರಿದ್ದರು.

ಕಾನೂನು ಅರಿವು-ನೆರವು ಕಾರ್ಯಕ್ರಮ

ಕಲಬುರಗಿ,ನ,23(ಕ.ವಾ.)- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಲ ನ್ಯಾಯಿಕ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 24 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರುಗಡೆ ಇರುವ ಸರ್ಕಾರಿ ವೀಕ್ಷಣಾಲಯದಲ್ಲಿ ‘’ಬಾಲ ನ್ಯಾಯಿಕ ಕಾಯ್ದೆ” ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬಾಲ ನ್ಯಾಯಿಕ ಮಂಡಳಿ ಅಧ್ಯಕ್ಷೆ ಸರಸ್ವತಿದೇವಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ, ಬಾಲ ನ್ಯಾಯಿಕ ಮಂಡಳಿ ಸದಸ್ಯರಾದ ಗೀತಾ ಸಜ್ಜನಶೆಟ್ಟಿ ಮತ್ತು ಲಿಯಾಖತ್ ಫರೀದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ ರಾಮನ್ ಆಗಮಿಸಲಿದ್ದಾರೆ. ಬಾಲ ನ್ಯಾಯಿಕ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ ಅವರು “ಬಾಲ ನ್ಯಾಯಿಕ ಕಾಯ್ದೆ” ಬಗ್ಗೆ ಉಪನ್ಯಾಸ ನೀಡುವರು.

ಡಿಸೆಂಬರ್ 2ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು

ಕಲಬುರಗಿ,ನ,23(ಕ.ವಾ.)- ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿ 2017ರ ಡಿಸೆಂಬರ್ 2 ರಂದು ಮೊದಲನೇ ಶನಿವಾರ ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆಗಳು ನಡೆಯಲಿದೆ ಎಂದು ಹೆÀಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ. ತಾಲೂಕುವಾರು ನಡೆಯುವ ಜನಸ್ಪಂದನ ಸಭೆಗಳ ಹೋಬಳಿ, ಗ್ರಾಮದ ಹೆಸರು ಮತ್ತು ಸಭೆಯ ಸ್ಥಳಗಳ ವಿವರ ಇಂತಿದೆ.
ಕಲಬುರಗಿ-ಅವರಾಧ (ಬಿ)ಹೋಬಳಿಯ ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿ ಕಾರ್ಯಾಲಯ. ಆಳಂದ- ಮಾದನಹಿಪ್ಪರಗಾ ಹೋಬಳಿಯ ಸರಸಂಬಾ ಗ್ರಾಮ ಪಂಚಾಯಿತಿ ಕಾರ್ಯಾಲಯ. ಅಫಜಲಪುರ-ಕರಜಗಿ ಹೋಬಳಿಯ ಕರಜಗಿ ಗ್ರಾಮ ಪಂಚಾಯಿತಿ ಕಾರ್ಯಾಲಯ. ಜೇವರ್ಗಿ- ಇಜೇರಿ ಹೋಬಳಿಯ ಮಾರಡಗಿ ಎಸ್.ಎಮ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸೇಡಂ-ಮುಧೋಳ ಹೋಬಳಿಯ ಮುಧೋಳ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿತ್ತಾಪುರ-ಗುಂಡಗುರ್ತಿ ಹೋಬಳಿಯ ಮಾಡಬೂಳ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿಂಚೋಳಿ-ಸುಲೇಪೇಟ್ ಹೋಬಳಿಯ ಬೆಡಗಪಳ್ಳಿ ಸರ್ಕಾರಿ ಶಾಲಾ ಆವರಣ.

ನವೆಂಬರ್ 25ಕ್ಕೆ ಮಸಾಜಿದ್ ಕೌನ್ಸಿಲ್ ಕಾರ್ಯಕ್ರಮ

ಕಲಬುರಗಿ,ನ,23(ಕ.ವಾ.)- ಕಲಬುರಗಿ ನಗರದ ಸಂತ್ರಾಸವಾಡಿಯ ಹಿದಾಯತ್ ಸೆಂಟರ್‍ನಲ್ಲಿ ನವೆಂಬರ್ 25 ರಂದು ಬೆಳ್ಳಿಗೆ 10-30ಕ್ಕೆ ಮಸಾಜಿದ್ ಕೌನ್ಸಿಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಯುಕ್ತ ಕಲಬುರಗಿ ಜಿಲ್ಲೆಯ ಎಲ್ಲಾ ಮಸೀದಿಗಳ ಮುತ್ತವಲ್ಲಿ, ಕಮೀಟಿಯವರು ಅಂದು ಹಾಜರಾಗಬೇಕೆಂದು ಜಿಲ್ಲಾ ವಕ್ಫ್ ಅಧಿಕಾರಿ ಗುಲಾಂ ಸಮ್‍ದಾನಿ ಅವರು ತಿಳಿಸಿದ್ದಾರೆ.

ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಅಪಲೋಡ್ ಮಾಡಲು ರೈತರಿಗೆ ಸೂಚನೆ

ಕಲಬುರಗಿ,ನ.23.(ಕ.ವಾ.)-ಜಿಲ್ಲೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳದ ಬೆಳೆಯ ವಿವರ, ಛಾಯಚಿತ್ರ, ವಿಸ್ತೀರ್ಣ ಮುಂತಾದ ವಿವರಗಳನ್ನು ಮೋಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಅಪಲೋಡ್ ಮಾಡಿ ಸರ್ಕಾರದ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೊಬೈಲ್ ಆ್ಯಪ್ ಮೂಲಕ ಪ್ರತಿ ಗ್ರಾಮದ ಸರ್ವೆ ನಂಬರಿನಲ್ಲಿ ಬೆಳೆಯಲಾದ ಬೆಳೆಯನ್ನು ಸಮೀಕ್ಷೆ ಮಾಡಿ ಆನ್‍ಲೈನ್ ಮೂಲಕ ಅಪಲೋಡ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ರೈತರು ತಮ್ಮ ಬೆಳೆಗಳ ಮಾಹಿತಿಯನ್ನು Karnataka Farmers Crop Survey App ನಲ್ಲಿ ಅಪಲೋಡ್ ಮಾಬಹುದಾಗಿದೆ. ರೈತರು ತಮ್ಮ ಆಂಡ್ರಾಯ್ಡ್ 4.4 ಅಥವಾ ಅದಕ್ಕಿಂತ ಉನ್ನತ ಮೊಬೈಲ್ ನಲ್ಲಿ Google Play Store ನಿಂದ ಹಾಗೂ http://ift.tt/2zZ1Awd ಲಿಂಕ್‍ನಿಂದ ಈ ಆ್ಯಪ್ ಡೌನಲೋಡ್ ಮಾಡಿಕೊಂಡು ಮಾಹಿತಿ ಸಲ್ಲಿಸಿ ಸರ್ಕಾರದ ವಿವಿಧ ಸೌಲಭ್ಯ ಪಡೆಯಬಹುದಾಗಿದೆ.
ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಗೆ ಸಮಸ್ಯೆಗಳು ಎದುರಾದಲ್ಲಿ ಸಂಬಂಧಿಸಿದ ಗ್ರಾಮ ಲೆಕ್ಕಿಗರ ಸಹಾಯ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಟಿ ಕಾಂಪೊಸ್ಟ್ ವಿತರಣೆಗೆ ಅರ್ಜಿ ಆಹ್ವಾನ

ಕಲಬುರಗಿ,ನ.23.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ 2017-18ನೇ ಸಾಲಿಗೆ ನೇರವಾಗಿ ರೈತರ ಕೃಷಿ ಕ್ಷೇತ್ರಕ್ಕೆ ಸಿಟಿ ಕಾಂಪೋಸ್ಟನ್ನು ರಿಯಾಯಿತಿ ದರದಲ್ಲಿ ವಿತರಿಸಲು ಯೋಜಿಸಲಾಗಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್.ಮೊಕಾಶಿ ತಿಳಿಸಿದ್ದಾರೆ.
ಆಸಕ್ತ ರೈತರು ಸಂಬಂಧಿಸಿದ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಸರ್ವೇ ನಂಬರ್ ತಿಳಿಸಿ ಪಹಣಿ ಪತ್ರಿಕೆಯ ಪ್ರತಿಯೊಂದಿಗೆ ಲಿಖಿತ ಅರ್ಜಿ ನೀಡಿ ಅವಶ್ಯಕತೆ ಇರುವ ಸಿಟಿ ಕಾಂಪೋಸ್ಟ್ ಪ್ರಮಾಣ ಪಡೆಯಬಹುದಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಟಿ ಕಾಂಪೋಸ್ಟನ್ನು ಬಲ್ಕ್‍ಆಗಿ ಪಡೆಯಲು ಪ್ರತಿ ಮೆಟ್ರಿಕ್ ಟನ್‍ಗೆ 1600 ರೂ. ನಿಗದಿಪಡಿಸಿದೆ. ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆ ಸಹಾಯಧನ(106) ಮತ್ತು ಜಿಲ್ಲಾ ವಲಯದ ಸಾವಯವ ಗೊಬ್ಬರ ಯೋಜನೆ(ಸಾಮಾನ್ಯ ವರ್ಗ) ಅಡಿ ಶೇ.50ರ ರಿಯಾಯಿತಿ ದರದಲ್ಲಿ ಪ್ರತಿ ಮೆಟ್ರಿಕ್ ಟನ್‍ಗೆ 800 ರೂ. ಇದ್ದು, ಉಳಿದ ಮೊತ್ತವನ್ನು ಶೇ.50ರ ರೈತರ ವಂತಿಕೆಯಾಗಿ 800 ರೂ. ಭರಿಸಬೇಕಾಗುತ್ತದೆÉ. ಅದೇ ರೀತಿ ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ ಶೇ.75ರ ರಿಯಾಯಿತಿ ದರದಲ್ಲಿ ಪ್ರತಿ ಮೆಟ್ರಿಕ್ ಟನ್‍ಗೆ 1200 ರೂ. ಇದ್ದು, ಉಳಿದ ಮೊತ್ತವನ್ನು ಶೇ.25ರ ರೈತರ ವಂತಿಕೆಯಾಗಿ 400 ರೂ. ಭರಿಸಬೇಕಾಗುತ್ತದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಪರ್ದಾತ್ಮಕ ಪರೀಕ್ಷೆ:
ಎಲೆಕ್ಟಾನಿಕ್ ಉಪಕರಣಗಳು ಹಾಗೂ ಮೋಬೈಲ್ ಫೋನ್ ನಿಷೇಧ

ಕಲಬುರಗಿ,ನ.23.(ಕ.ವಾ.)-ಜಿಲ್ಲೆಯಲ್ಲಿ 2017ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಯುಕ್ತ ಸ್ಫರ್ಧಾತ್ಮಕ ಪರೀಕ್ಷೆಯು ಕಲಬುರಗಿ ನಗರದ 15 ಪರೀಕ್ಷಾ ಕೇಂದ್ರಗಳಲ್ಲಿ ನವೆಂಬರ್ 25 ಮತ್ತು 26 ರಂದು ಬೆಳಿಗ್ಗೆ ಮ್ತತು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿದ್ದು, ಪರೀಕ್ಷಾ ಕೋಣೆಗೆ ಅಭ್ಯರ್ಥಿಗಳು ಯಾವುದೇ ತರಹದ ಎಲೆಕ್ಟಾನಿಕ್ ಉಪಕರಣಗಳು ಹಾಗೂ ಮೋಬೈಲ್ ಫೋನ್ ತರುವುದು ಹಾಗೂ ಬಳಸುವುದನ್ನು ನಿಷೆಧಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ತಿಳಿಸಿದ್ದಾರೆ.
ಇದಲ್ಲದೇ ಪರೀಕ್ಷಾ ಕೇಂದ್ರದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಗಮನಿಸಬೇಕು. ಪರೀಕ್ಷಾ ನಡೆಯುವ ಮುನ್ನ ದಿನ ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ಸ್ಥಳವನ್ನು ಖಚಿತಪಡಿಸಿಕೊಳ್ಳುವಂತೆ ಅವರು ಕೋರಿದ್ದಾರೆ.

ನವೆಂಬರ್ 24ಕ್ಕೆ ಜಿಲ್ಲಾ ವಿಜ್ಞಾನ ಮೇಳ

ಕಲಬುರಗಿ,ನ.23(ಕ.ವಾ.)- ಜಿಲ್ಲಾ ವಿಜ್ಞಾನ ಕೇಂದ್ರ, ಡಯಟ್ ಕಮಲಾಪುರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 24 ರಂದು ಬೆಳಿಗ್ಗೆ 11-15 ಗಂಟೆಗೆ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಉದ್ಘಾಟಿಸಲಿದ್ದಾರೆ.

ಕಲಬುರಗಿ ಶಿಕ್ಷಕರ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ವಿಜಯಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಕಮಲಾಪುರ ಡಯಟ್ ಸಂಸ್ಥೆಯ ಪ್ರಾಂಶುಪಾಲ ಶಶಿಕಾಂತ ಮರ್ತುಳೆ, ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್.ಲಕ್ಷ್ಮಿನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.









ಹೀಗಾಗಿ ಲೇಖನಗಳು News & photos Dt.23-11-2017

ಎಲ್ಲಾ ಲೇಖನಗಳು ಆಗಿದೆ News & photos Dt.23-11-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News & photos Dt.23-11-2017 ಲಿಂಕ್ ವಿಳಾಸ https://dekalungi.blogspot.com/2017/11/news-photos-dt23-11-2017.html

Subscribe to receive free email updates:

0 Response to "News & photos Dt.23-11-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ