ಶೀರ್ಷಿಕೆ : ಸಂತ್ರಸ್ಥ ಮಹಿಳೆಯರಿಗೆ ಪರಿಹಾರದ ಜೊತೆಗೆ ನ್ಯಾಯ ದೊರೆಯುವುದೂ ಮುಖ್ಯ- ನಾಗಲಕ್ಷ್ಮಿ ಬಾಯಿ
ಲಿಂಕ್ : ಸಂತ್ರಸ್ಥ ಮಹಿಳೆಯರಿಗೆ ಪರಿಹಾರದ ಜೊತೆಗೆ ನ್ಯಾಯ ದೊರೆಯುವುದೂ ಮುಖ್ಯ- ನಾಗಲಕ್ಷ್ಮಿ ಬಾಯಿ
ಸಂತ್ರಸ್ಥ ಮಹಿಳೆಯರಿಗೆ ಪರಿಹಾರದ ಜೊತೆಗೆ ನ್ಯಾಯ ದೊರೆಯುವುದೂ ಮುಖ್ಯ- ನಾಗಲಕ್ಷ್ಮಿ ಬಾಯಿ
ಕೊಪ್ಪಳ ನ. 14 (ಕರ್ನಾಟಕ ವಾರ್ತೆ): ಲೈಂಗಿಕ ಹಾಗೂ ಇತರೆ ದೌರ್ಜನ್ಯದಿಂದ ಸಂತ್ರಸ್ಥರಾಗುವ ಮಹಿಳೆಯರಿಗೆ ನಿಯಮಾನುಸಾರ ದೊರೆಯುವ ಪರಿಹಾರದ ಜೊತೆಗೆ ಅವರಿಗೆ ನ್ಯಾಯ ದೊರೆಯುವುದೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಹೇಳಿದರು.
ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ಥ ಮಹಿಳೆಯರಿಗೆ ಪರಿಹಾರ ಶೀಘ್ರ ಲಭ್ಯವಾಗುತ್ತಿದೆಯಾದರೂ, ನ್ಯಾಯ ದೊರೆಯುವುದು ವಿಳಂಬವಾಗುತ್ತಿದೆ. ಸಂತ್ರಸ್ಥರಿಗೆ ಪರಿಹಾರ ಹೇಗೆ ಮುಖ್ಯವೋ, ನ್ಯಾಯ ದೊರೆಯುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಅಧಿಕಾರಿಗಳು, ಪೊಲೀಸ್ ಇಲಾಖೆಯವರು ಸಂತ್ರಸ್ಥರಿಗೆ ತ್ವರಿತವಾಗಿ ನ್ಯಾಯ ದೊರಕಿಸಲು ಮುಂದಾಗಬೇಕು. ಬಾಲ್ಯ ವಿವಾಹ ಪದ್ಧತಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಬಗ್ಗೆ ವರದಿಯಿದ್ದು, ಬಾಲ್ಯ ವಿವಾಹ ತಡೆಗಟ್ಟಲು ಇನ್ನಷ್ಟು ಕಾರ್ಯಕ್ರಮಗಳು ಆಗಬೇಕು. ಜನರಲ್ಲಿ ಜಾಗೃತಿ ವ್ಯಾಪಕವಾಗಿ ಮೂಡಿಸಬೇಕು. ಅಪರಾಧಿಗಳಿಗೆ ಶಿಕ್ಷಯಾಗುವಂತಾಗಬೇಕು ಎಂದರು.
ಮಹಿಳಾ ಕಾರ್ಮಿಕರ ಸ್ಥಿತಿ-ಗತಿ ವಿವರ ನೀಡಿ :
*****************ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸಂಖ್ಯೆ, ಸ್ಥಿತಿ-ಗತಿಗಳು ಹಾಗೂ ದೂರು ಪೆಟ್ಟಿಗೆ ನಿರ್ವಹಣೆ ಬಗ್ಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷರು, ಯಾವುದೇ ಕಾರ್ಖಾನೆ ಅಥವಾ ಉದ್ಯಮವಿರಲಿ, 10 ಕ್ಕಿಂತ ಹೆಚ್ಚು ಮಹಿಳೆಯರ ಸಂಖ್ಯೆ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ದೂರು ಪೆಟ್ಟಿಗೆಯನ್ನು ಇರಿಸಿ, ನಿಯಮಿತವಾಗಿ ಪರಿಶೀಲನೆ ಮಾಡುವುದು ಕಡ್ಡಾಯವಾಗಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸಂಖ್ಯೆ, ಅಲ್ಲಿನ ಸ್ಥಿತಿ-ಗತಿ, ವೇತನ ಪಾವತಿ, ದೂರು ಪೆಟ್ಟಿಗೆಗಳ ನಿರ್ವಹಣೆ ಕುರಿತಂತೆ ಸಮಗ್ರ ವಿವರವನ್ನು ಮಹಿಳಾ ಆಯೋಗಕ್ಕೆ ಹಾಗೂ ಜಿಲ್ಲಾಡಳಿತಕ್ಕೆ 15 ದಿನಗಳ ಒಳಗಾಗಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷರು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಇಲಾಖೆ ಮಹಿಳೆಯರಿಗೆ ಸ್ಥೈರ್ಯ ತುಂಬಲಿ :
*************** ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹು ಮುಖ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಲ್ಲಿ ನೀಡುವ ಹಿಂಸೆಯನ್ನು ಅನುಭವಿಸಿ, ಸಹಿಸಿಕೊಂಡು ಮನೆಯಲ್ಲಿಯೇ ಮಹಿಳೆಯರು ಇರುತ್ತಾರೆ. ಪೊಲೀಸ್ ಠಾಣೆಗೆ ಹೋಗಲು ಹೆಣ್ಣು ಮಕ್ಕಳು ಸಾವಿರ ಬಾರಿ ಯೋಚಿಸುವ ಸ್ಥಿತಿ ಇದೆ. ವಿಚಾರಣೆಯ ನೆಪದಲ್ಲಿ ದಿನಗಟ್ಟಲೆ ಮಹಿಳೆಯರನ್ನು ಠಾಣೆಯಲ್ಲಿಯೇ ಇರಿಸುವುದು ಬಹುತೇಕ ಠಾಣೆಗಳಲ್ಲಿ ಕಂಡುಬರುತ್ತಿದೆ. ನಿಜಕ್ಕೂ ಇದೊಂದು ಅಸಮಂಜಸ ಕ್ರಮವಾಗಿದೆ. ಠಾಣೆಗೆ ಬರುವ ಮಹಿಳೆಯರಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ನೈತಿಕ ಸ್ಥೈರ್ಯ ತುಂಬಬೇಕು. ಮಹಿಳೆಯರ ವಿಚಾರಣೆಯನ್ನು ಆದಷ್ಟು ಬೇಗ ಮುಗಿಸಿ, ತ್ವರಿತವಾಗಿ ಕಳುಹಿಸಿಕೊಟ್ಟಲ್ಲಿ, ಅವರಲ್ಲೂ ಭದ್ರತೆ ಹಾಗೂ ಧೈರ್ಯದ ಭಾವನೆ ಮೂಡುತ್ತದೆ. ಕೇವಲ ಕಾನೂನು ದೃಷ್ಟಿಯಲ್ಲಿಯೇ ಎಲ್ಲವನ್ನು ಪರಿಹರಿಸಲು ಸಾಧ್ಯವಿಲ್ಲ. ಮಾನವೀಯತೆಯನ್ನೂ ಸಹ ಮುಖ್ಯ ಅಂಶವನ್ನಾಗಿ ಪರಿಗಣಿಸಬೇಕು ಎಂದು ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದರು.
ಮಕ್ಕಳ ಮೊಬೈಲ್ ಬಳಕೆಯತ್ತ ನಿಗಾ ಇರಲಿ :
*************** ಮೊಬೈಲ್ ಬಳಕೆ ಹೆಚ್ಚುತ್ತಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ತಮಗೆ ತಿಳಿದೋ, ತಿಳಿಯದೆಯೋ ಮಹಿಳೆಯರು, ಮಕ್ಕಳು ಸೈಬರ್ ಕ್ರೈಂನಲ್ಲಿ ಭಾಗಿಯಾಗುತ್ತಿದ್ದಾರೆ. ಸಮಾಜದಲ್ಲಿ ಕೆಟ್ಟ ಕೆಲಸಗಳಾಗುತ್ತಿವೆ. ಶಾಲಾ ಕಾಲೇಜು ಮಕ್ಕಳು ಹಾಳಾಗುತ್ತಿದ್ದಾರೆ. ಕದ್ದು-ಮುಚ್ಚಿ ನೋಡಬಾರದ್ದನ್ನು ನೋಡಿ, ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಕಾರಣರಾಗುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಆದಷ್ಟು ನಿಯಂತ್ರಿಸುವುದು ಒಳ್ಳೆಯದು. ಮೊಬೈಲ್‍ನಿಂದ ಜ್ಞಾನಾರ್ಜನೆ ಆಗಬೇಕೆ ಹೊರತು, ದುರುಪಯೋಗ ಪಡಿಸಿಕೊಳ್ಳುವುದಲ್ಲ. ಸಾಮಾಜಿಕ ಜಾಲತಾಣಗಳ ಉಪಯೋಗ, ದುರುಪಯೋಗದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶಾಲೆ, ಕಾಲೇಜುಗಳಲ್ಲಿ ಆಗಬೇಕು ಎಂದರು.
ಅಸಮಾಧಾನ :
********* ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿನ ಮಹಿಳಾ ವಿಶೇಷ ಘಟಕಕ್ಕೆ ಆಕಸ್ಮಿಕ ಭೇಟಿ ನೀಡಿದ ಆಯೋಗದ ಅಧ್ಯಕ್ಷರು, ಅಲ್ಲಿನ ಸ್ವಚ್ಛತೆಯ ಕೊರತೆ, ರೋಗಿಗಳಿಗಿರುವ ಸೌಲಭ್ಯ, ಆಸ್ಪತ್ರೆ ಹೊರಗೆ ಹಂದಿಗಳ ಓಡಾಟ ಮುಂತಾದ ಅಸ್ತವ್ಯಸ್ಥತೆಯನ್ನು ಗಮನಿಸಿ, ವೈದ್ಯಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊಪ್ಪಳಕ್ಕೆ ಈಗಿರುವ ಒಂದು ಜಿಲ್ಲಾ ಆಸ್ಪತ್ರೆ ಸಾಕಾಗುವುದಿಲ್ಲ. ಬಹುಶಃ ಇನ್ನೊಂದು ಆಸ್ಪತ್ರೆ ಬೇಕಾಗಿದೆ. ಸಾಮಾನ್ಯ ಜನರೂ ಕೂಡ ಇಲ್ಲಿಗೆ ಬಂದರೆ, ರೋಗಿಗಳಾಗುತ್ತಾರೆ. ಆಸ್ಪತ್ರೆ ಅವ್ಯವಸ್ಥೆಯ ಗೂಡಾಗಿದೆ. ಇನ್ನಾದರೂ, ಆಸ್ಪತ್ರೆಯನ್ನು ಸ್ವಚ್ಛವಾಗಿರಿಸಿಕೊಳ್ಳಿ ಎಂದು ತಾಕೀತು ಮಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀರೇಂದ್ರ ನಾವದಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಈವರೆಗೆ 44 ಪ್ರಕರಣಗಳಲ್ಲಿ 3. 25 ಲಕ್ಷ ರೂ. ಪರಿಹಾರವನ್ನು ಸಂತ್ರಸ್ಥರಿಗೆ ನೀಡಲಾಗಿದೆ. ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿರುವ ಮಹಿಳಾ ವಿಶೇಷ ಚಿಕಿತ್ಸಾ ಘಟಕದಲ್ಲಿ ಈವರೆಗೆ 156 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಮುಂತಾದ ಪ್ರಕರಣಗಳಿವೆ ಎಂದರು. ಯೂನಿಸೆಫ್‍ನ ಹರೀಶ್ ಜೋಗಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಸುಮಾರು 1500 ಬಾಲ್ಯ ವಿವಾಹವನ್ನು ತಡೆಗಟ್ಟಲಾಗಿದೆ ಎಂದರು.
ಕೊಪ್ಪಳ ನಗರಠಾಣೆ ಪಿಐ ರವಿ ಉಕ್ಕುಂದ ಅವರು ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ 82- ಮಹಿಳಾ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 60 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. 22- ತನಿಖಾ ಹಂತದಲ್ಲಿವೆ. 37- ವರದಕ್ಷಿಣೆ ಪ್ರಕರಣಗಳು, 11- ಅತ್ಯಾಚಾರ ಪ್ರಕರಣಗಳು, 22- ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದರು.
ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಮಾಲತಿ ನಾಯಕ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಸಂತ್ರಸ್ಥ ಮಹಿಳೆಯರಿಗೆ ಪರಿಹಾರದ ಜೊತೆಗೆ ನ್ಯಾಯ ದೊರೆಯುವುದೂ ಮುಖ್ಯ- ನಾಗಲಕ್ಷ್ಮಿ ಬಾಯಿ
ಎಲ್ಲಾ ಲೇಖನಗಳು ಆಗಿದೆ ಸಂತ್ರಸ್ಥ ಮಹಿಳೆಯರಿಗೆ ಪರಿಹಾರದ ಜೊತೆಗೆ ನ್ಯಾಯ ದೊರೆಯುವುದೂ ಮುಖ್ಯ- ನಾಗಲಕ್ಷ್ಮಿ ಬಾಯಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಂತ್ರಸ್ಥ ಮಹಿಳೆಯರಿಗೆ ಪರಿಹಾರದ ಜೊತೆಗೆ ನ್ಯಾಯ ದೊರೆಯುವುದೂ ಮುಖ್ಯ- ನಾಗಲಕ್ಷ್ಮಿ ಬಾಯಿ ಲಿಂಕ್ ವಿಳಾಸ https://dekalungi.blogspot.com/2017/11/blog-post_14.html
0 Response to "ಸಂತ್ರಸ್ಥ ಮಹಿಳೆಯರಿಗೆ ಪರಿಹಾರದ ಜೊತೆಗೆ ನ್ಯಾಯ ದೊರೆಯುವುದೂ ಮುಖ್ಯ- ನಾಗಲಕ್ಷ್ಮಿ ಬಾಯಿ"
ಕಾಮೆಂಟ್ ಪೋಸ್ಟ್ ಮಾಡಿ