ಶೀರ್ಷಿಕೆ : News and photo date: 25--09--2017
ಲಿಂಕ್ : News and photo date: 25--09--2017
News and photo date: 25--09--2017
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪ್ರವಾಸ
**********************************************
ಕಲಬುರಗಿ,ಸೆ.25.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವೆ ಉಮಾಶ್ರೀ ಅವರು ಬಾಗಲಕೋಟೆ ಜಿಲ್ಲೆಯ ತೇರದಾಳದಿಂದ ರಸ್ತೆ ಮೂಲಕ ಸೆಪ್ಟೆಂಬರ್ 26ರಂದು ರಾತ್ರಿ 11 ಗಂಟೆಗೆ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಸಚಿವರು ಸೆಪ್ಟೆಂಬರ್ 27ರಂದು ಕಲಬುರಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾರಿಗೆ ತರಲು ಉದ್ದೇಶಿಸಿರುವ ಮಾತೃಪೂರ್ಣ ಯೋಜನೆಗೆ ಸಂಬಂಧಿಸಿದಂತೆ ಇಲಾಖೆಯ ಕಲಬುರಗಿ ವಿಭಾಗದ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ನಂತರ ಸಂಜೆ 6 ಗಂಟೆಗೆ ಕಲಬುರಗಿಯಿಂದ ತೇರದಾಳಕ್ಕೆ ಪ್ರಯಾಣಿಸುವರು.
ಕೇಂದ್ರದ ಮನಗೆದ್ದ ಕಲಬುರಗಿಯ ಕೂಸು
************************************
ಕಲಬುರಗಿ,ಸೆ.25(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಹಮ್ಮಿಕೊಂಡಿರುವ ಕೂಸು ಕಾರ್ಯಕ್ರಮ ಕೇಂದ್ರ ಸರ್ಕಾರದ ಮನಗೆದ್ದಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾ ರಾಣಿ ಕೋರ್ಲಪಾಟಿ ಅವರ ಕನಸಿನ ಕೂಸಾದ ಕೂಸು ಕಾರ್ಯಕ್ರಮದಡಿ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಂಡ ಗರ್ಭಿಣಿ ಮಹಿಳೆಯರಿಗೆ ಗ್ರಾಮ ಪಂಚಾಯಿತಿಯಿಂದ ಸೀಮಂತ ಮಾಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜಿಲ್ಲೆಯಲ್ಲಿ ಸುಮಾರು 11000 ಶೌಚಾಲಯಗಳನ್ನು ನಿರ್ಮಿಸಿ ದಾಖಲೆ ಸೃಷ್ಠಿಸಲಾಗಿತ್ತು. ಈ ಪ್ರಕ್ರಿಯೇ ಮುಂದುವರೆಯುತ್ತಿದೆ.
ಗರ್ಭಿಣಿ ಮಹಿಳೆಯರು ಶೌಚಾಲಯ ಬಳಸುವುದರಿಂದ ಆರೋಗ್ಯ, ಸ್ವಚ್ಛತೆ ಹಾಗೂ ಪೌಷ್ಟಿಕತೆಯ ಮೇಲಾಗುವ ಪ್ರಯೋಜನಗಳು ಹಾಗೂ ಮುಂದೆ ಚಿಕ್ಕ ಮಕ್ಕಳೂ ಸಹ ಶೌಚಾಲಯ ಬಳಸಬೇಕೆಂಬ ಮನೋಭಾವ ಬೆಳೆಸಿ ನಡುವಳಿಕೆಯಲ್ಲಿ ಬದಲಾವಣೆ ತರುವುದೇ ಕೂಸು ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿತ್ತು.
ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ರಾಷ್ಟ್ರಮಟ್ಟದ ಸ್ವಚ್ಛತಾನ ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಾಲೆಯಲ್ಲಿ ಶೌಚಾಲಯಗಳ ಬಳಕೆ, ನಡುವಳಿಕೆಯಲ್ಲಿ ಬದಲಾವಣೆ ತರುವಂಥಹ ಒಟ್ಟು 6 ವಿಷಯಗಳನ್ನಾಧರಿಸಿ ಸ್ಪರ್ಧೆ ನಡೆಸಲಾಗಿತ್ತು. ಇದರಲ್ಲಿ ಯಾರಾದರೂ ಭಾಗವಹಿಸಬಹುದಾಗಿದ್ದು, ಕಲಬುರಗಿ ಜಿಲ್ಲಾ ಪಂಚಾಯತಿಯಿಂದ ಕೂಸು ಕಾರ್ಯಕ್ರಮದಿಂದ ನಡುವಳಿಕೆಯಲ್ಲಿ ಬದಲಾವಣೆ ವಿಷಯವನ್ನಾಧರಿಸಿ ಸ್ಪರ್ಧಿಸಲಾಗಿತ್ತು. ದೇಶದ ಒಟ್ಟು 3000 ಜನ ಸೆಮಿಫೈನಲಿಸ್ಟ್‍ರಲ್ಲಿ ಕಲಬುರಗಿ ಜಿಲ್ಲಾ ಪಂಚಾಯತಿ ಟಾಪ್ 10ರಲ್ಲಿ ಸ್ಥಾನಗಳಿಸಿತ್ತು. ಈ 10 ಜನರ ಅಭಿಪ್ರಾಯ ಸಂಗ್ರಹಿಸಿ ಬಹುಮಾನ ನೀಡಲು ಇತ್ತೀಚೆಗೆ ದೆಹಲಿಗೆ ಆಹ್ವಾನಿಸಲಾಗಿತ್ತು.
ಕೇಂದ್ರದ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವರಾದ ರಮೇಶ ಜಿಗಜಿಣಗಿ ಹಾಗೂ ಎಸ್.ಎಸ್.ಅಹಲುವಾಲಿಯಾ ಅವರು ಕಲಬುರಗಿಯ ಕೂಸು ಕಾರ್ಯಕ್ರಮದಿಂದ ಮಹಿಳೆಯರಲ್ಲಿ ಮತ್ತು ಗರ್ಭಿಣಿಯರಲ್ಲಾದ ನಡುವಳಿಕೆ ಬದಲಾವಣೆಯ ಅಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೂಸು ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪ್ರಪ್ರಥಮ ಶೌಚಾಲಯ ನಿರ್ಮಿಸಿಕೊಂಡ ಗುಂಡಗುರ್ತಿಯ ಆಶಾ ಕಾರ್ಯಕರ್ತೆ ಇಂದುಮತಿ ಮಗಳಾದ ಭಾಗ್ಯಶ್ರೀಗೆ ವಿಶೇಷ ಗೌರವ ನೀಡಲಾಯಿತು. ಕೇಂದ್ರದ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವರು ಭಾಗ್ಯಶ್ರೀಯ ಮಗುವನ್ನು ಎತ್ತಿಕೊಂಡು ಸ್ವಚ್ಛತಾ ಕೂಸು ಎಂದು ಕೊಂಡಾಡಿದ್ದು ವಿಶೇಷವಾಗಿತ್ತು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾ ರಾಣಿ ಕೋರ್ಲಪಾಟಿ, ಸ್ವಚ್ಛಭಾರತ ಮಿಷನ್ ಜಿಲ್ಲಾ ಸಂಯೋಜಕಿ ಗುರುಬಾಯಿ ಪಾಟೀಲ, ಗುಂಡಗುರ್ತಿಯ ಆಶಾ ಕಾರ್ಯಕರ್ತೆ ಇಂದುಮತಿ, ಭಾಗ್ಯಶ್ರೀಯ ಕುಟುಂಬ ಸಮೇತ ದೆಹಲಿಯಲ್ಲಿ ನಡೆದ ಸ್ವಚ್ಛತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾ ರಾಣಿ ಕೋರ್ಲಪಾಟಿ ಅವರು ಸ್ವಚ್ಛತೆ ಮತ್ತು ನೈರ್ಮಲ್ಯದ ದೃಷ್ಠಿಯಿಂದ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಶಾಲಾ ಕಾಲೇಜಿನ ಹೆಣ್ಣು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಇತ್ತೀಚೆಗೆ ಸಿರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಿಂದ ಮುಂದೆ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗುವಲ್ಲಿ ಸಂಶಯವಿಲ್ಲ.
ಪಠ್ಯದಂತೆ ಪಠ್ಯೇತರ ಚಟುವಟಿಕೆಗೂ ಮಹತ್ವ ಕೊಡಿ
**********************************************
ಕಲಬುರಗಿ,ಸೆ.25(ಕ.ವಾ.)-ಮಕ್ಕಳು ಸರ್ವಾಂಗೀಣವಾಗಿ ವಿಕಸನ ಹೊಂದಬೇಕಾದರೆ ಪಠ್ಯಕ್ರಮ ಭೋಧನೆಗೆ ನೀಡಿದಷ್ಟೆ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಂಸ್ಕøತಿಕ, ಕ್ರೀಡೆಗೂ ಕೊಡಬೇಕು ಎಂದು ವಿಧಾನ ಪರಿಷತ್ ಶಾಸಕ ಅಮರನಾಥ ಪಾಟೀಲ ಹೇಳಿದರು.
ಅವರು ಸೋಮವಾರ ಕಲಬುರಗಿ ನಗರದ ಸಂತ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 2017-18ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಮತ್ತು ವಿಜ್ಞಾನ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚಿನ ಅಂಕಗಳು ಪಡೆಯುತ್ತಿದ್ದಾರೆ, ಪಠ್ಯೇತರ ಚಟುವಟಿಯಲ್ಲಿನ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಶಿಕ್ಷಕ ಸಮುದಾಯವು ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ಜೊತೆ ಜೊತೆಯಲ್ಲಿಯೆ ಕಲೆ, ಸಾಹಿತ್ಯ, ಪರಿಸರ, ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರದ ಬಗ್ಗೆಯೂ ಅರಿಯಲು ಅವರನ್ನು ಪ್ರೇರೇಪಿಸಿ ಅವರಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮಲು ಕಾರಣರಾಗಬೇಕು. ಇತರೆ ಭಾಗಕ್ಕೆ ಹೋಲಿಸಿದಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಮಕ್ಕಳಲ್ಲಿ ಭಾಷಾ ಜ್ಞಾನದ ಕೊರತೆಯಿದೆ. ಉದ್ಯೋಗ-ಸಂದರ್ಶನದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಇರುವುದರಿಂದ ಭಾಷಾ ಕೌಶಲ್ಯವನ್ನು ಹೆಚ್ಚಿಸುವತ್ತ ಗಮನಹರಿಸಬೇಕಾಗಿದೆ ಎಂದರು.
ಇತ್ತೀಚಿಗೆ ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಯೊಂದಿಗೆ ಜನಗಣತಿ, ಸಮೀಕ್ಷೆ, ಚುನಾವಣಾ ಕಾರ್ಯ, ಶೌಚಾಲಯ ಸಮೀಕ್ಷೆ ಹೀಗೆ ಶೈಕ್ಷಣಿಕವಲ್ಲದ ಅನೇಕ ಚಟುವಟಿಕೆಗಳ ಜವಾಬ್ದಾರಿ ನೀಡಲಾಗುತ್ತಿದ್ದು, ಈ ಬಗ್ಗೆ ಸಮಗ್ರವಾಗಿ ಚಿಂತನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೆ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಶಿಕ್ಷಣ ಮತ್ತು ಶಿಕ್ಷಕರ ಅನೇಕ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಮತ್ತೆ ಸೆಪ್ಟೆಂಬರ್ 27 ರಂದು ಸಭೆ ಸೇರಲಿದ್ದೇವೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಈ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲೆಯ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಆಯ್ಕೆಗೊಂಡವರು ರಾಜ್ಯ ಮಟ್ಟಕ್ಕೆ ನಂತರ ರಾಷ್ಟ್ರ ಮಟ್ಟಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದರು. ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಅವರು ಡೋಲಕ್ ಬಾರಿಸುವ ಮೂಲಕ ಪ್ರತಿಭಾ ಕಾರಂಜಿಗೆ ಅಧಿಕೃತ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಬಿ.ಗುತ್ತೇದಾರ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಶಿವಲಿಂಗಪ್ಪ ಗೌಳೆ, ಜಿಲ್ಲಾ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು. ವಿಷಯ ಪರಿವೀಕ್ಷಕ ಯುವರಾಜ ಗಾದಿ ಸ್ವಾಗತಿಸಿದರೆ ಶಿವಶಂಕ್ರಪ್ಪ ಮಂಠಾಳ ವಂದಿಸಿರು. ಜಿಲ್ಲಾ ವಿಷಯ ಪರೀವೀಕ್ಷಕ ಎಸ್.ಪಿ.ಸುಳ್ಳದ್ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಮಿಲೇನಿಯಮ್ ಶಾಲೆಯ ಕು. ಲಾವಣ್ಯ ಅವರಿಂದ ಭರತನಾಟ್ಯ ಮತ್ತು ಅಫಜಲಪುರ ತಾಲೂಕಿನ ಇಂಗಳಿಗೆ ಸರ್ಕರಿ ಹಿರಿಯ ಪ್ರಾಥಮಿಕ ಸಾಲೆಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ನಡೆಯಿತು.
ಜಿಲ್ಲೆಯಲ್ಲಿ 34 ಹೆಸರು ಖರೀದಿ ಕೇಂದ್ರ ಪ್ರಾರಂಭ
******************************************
ಕಲಬುರಗಿ,ಸೆ.25.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖಾಂತರ ಪ್ರತಿ ಕ್ವಿಂಟಲ್‍ಗೆ 5575ರೂ.ಗಳ ದರದಲ್ಲಿ ಬೆಲೆ ಸ್ಥೀರಕರಣ ಯೋಜನೆಯಡಿ ಹೆಸರು ಖರೀದಿಸಲು ಜಿಲ್ಲೆಯಲ್ಲಿ ಒಟ್ಟು 34 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಎಲ್ಲ ರೈತ ಬಾಂಧವರು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಬರುವ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡುವ ಅವಶ್ಯಕತೆ ಇರುತ್ತದೆ. ಆನ್‍ಲೈನ್ ಮೂಲಕ ನೋಂದಣಿಯನ್ನು ಮಾಡಲಾಗುವುದು. ನಂತರ ಸಂಬಂಧಿಸಿದ ರೈತರಿಗೆ ಖರೀದಿ ದಿನಾಂಕ ಮತ್ತು ಸಮಯವನ್ನು ನೀಡಲಾಗುವುದು. ರೈತರು ನಿಗದಿಪಡಿಸಿದ ದಿನಾಂಕದಂದು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬೇಕೆಂದು ಅವರು ರೈತರಲ್ಲಿ ವಿನಂತಿಸಿದ್ದಾರೆ.
ಎಲ್ಲ ರೈತರು ತಮ್ಮ ಆಧಾರ್ ಕಾರ್ಡದೊಂದಿಗೆ ನೋಂದಣಿಯಾದ ಬ್ಯಾಂಕ್ ಖಾತೆಯಿರುವ ಬ್ಯಾಂಕ್‍ಗಳಿಗೆ ಭೇಟಿ ನೀಡಿ, ಬ್ಯಾಂಕ್ ಅಧಿಕಾರಿಗಳ ದೃಢೀಕರಣದೊಂದಿಗೆ ಖರೀದಿ ಕೇಂದ್ರಕ್ಕೆ ಒದಗಿಸಲು ಕೋರಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಎಲ್ಲ ಖರೀದಿ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.
ರೈತರು ನೋಂದಣಿ ಸಮಯದಲ್ಲಿ ಆಧಾರ ಕಾರ್ಡ್ (ಮೂಲ ಮತ್ತು ಜಿರಾಕ್ಸ್ ಪ್ರತಿ), ಇತ್ತೀಚಿನ ಪಹಣಿ ಪತ್ರ, ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಅಧಿಕಾರಿಗಳಿಂದ ದೃಢೀಕರಿಸಿದ ಆಧಾರ ಕಾರ್ಡದೊಂದಿಗೆ ಜೋಡಣೆಗೊಂಡ ಬ್ಯಾಂಕ್ ಖಾತೆ ಜಿರಾಕ್ಸ್ ದಾಖಲಾತಿಗಳ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಕ್ಟೋಬರ್ 17ರಂದು ಖರೀದಿ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಹೆಸರು ಹಾಗೂ ಖರೀದಿ ಕೇಂದ್ರಗಳ ವಿವರ ಇಂತಿದೆ. ಅಫಜಲಪುರ ತಾಲೂಕು: ಬಡದಾಳ(ಬಳೂರಗಿ), ಆತನೂರ, ಕರಜಗಿ. ಆಳಂದ ತಾಲೂಕು: ಮುನ್ನೋಳ್ಳಿ, ಸರಸಂಬಾ, ಕಮಲಾಪುರ, ನಿಂಬರಗಾ, ಮಾದನ ಹಿಪ್ಪರಗಾ, ಖಜೂರಿ. ಚಿಂಚೋಳಿ ತಾಲೂಕು: ಸಾಲೇಬೀರನಳ್ಳಿ, ಚಿಮ್ಮನಚೂಡ, ಕೋಡ್ಲಿ, ಐನಾಪುರ, ಸುಲೇಪೇಟ, ನಿಡಗುಂದಾ. ಚಿತ್ತಾಪುರ ತಾಲೂಕು: ದಂಡೋತಿ, ರಾವೂರ, ಗುಂಡಗುರ್ತಿ, ಹಲಕಟ್ಟಾ, ಕಾಳಗಿ, ಟೇಂಗಳಿ. ಕಲಬುರಗಿ ತಾಲೂಕು: ಫರತಾಬಾದ, ಬೇಲೂರ, ಸೊಂತ, ಕುರಿಕೋಟಾ, ಅವರಾದ(ಬಿ). ಜೇವರ್ಗಿ ತಾಲೂಕು: ಮುತ್ತಕೋಡ, ಕೊಲ್ಲೂರ(ಕೆ). ಸೇಡಂ ತಾಲೂಕು: ಅಡಕಿ, ರಂಜೋಳ, ಮುಧೋಳ, ಕೋಡ್ಲಾ, ಬಟಗೇರಾ(ಬಿ), ಮಳಖೇಡ.
ಸೇಡಂ: ನಲ್ಮ ಯೋಜನೆಯಡಿ ಅರ್ಜಿ ಆಹ್ವಾನ
*****************************************
ಕಲಬುರಗಿ,ಸೆ.25.(ಕ.ವಾ.)-ದೀನದಯಾಳ ಅಂತ್ಯೋದಯ ಯೋಜನೆ ನಲ್ಮ ಅಭಿಯಾನ ಯೋಜನೆಯಡಿ 2017-18ನೇ ಸಾಲಿನ ಸ್ವಯಂ ಉದ್ಯೋಗಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸೇಡಂ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೇಡಂ ಪುರಸಭೆಗೆ ಒಟ್ಟು 09 ಭೌತಿಕ ಗುರಿ ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ಮೀಸಲಾತಿ ಹಾಗೂ ಗುರಿ ವಿವರ ಇಂತಿದೆ. ಪರಿಶಿಷ್ಟ ಜಾತಿ-02, ಪರಿಶಿಷ್ಟ ಪಂಗಡ-01, ಅಲ್ಪಸಂಖ್ಯಾತ-01, ಮಹಿಳೆ-03, ಇತರರು-02.
ಅಭ್ಯರ್ಥಿಗಳು ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ ಕಾರ್ಡ, ಇತ್ತೀಚಿನ ನಾಲ್ಕು ಭಾವಚಿತ್ರಗಳು, ಸ್ವಯಂ ಉದ್ಯೋಗ ಮತ್ತು ಗುಂಪು ಉದ್ಯಮಶೀಲತೆ ಘಟಕದಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಫಲಾನುಭವಿಗಳ ಕುಟುಂಬದ ಓರ್ವ ಸದಸ್ಯರು ಕಡ್ಡಾಯವಾಗಿ ಸ್ವಸಹಾಯ ಸಂಘದ ಸದಸ್ಯರಾಗಿರುವ ಕುರಿತು ಎಲ್ಲ ದಾಖಲೆಗಳನ್ನು ದೃಢೀಕರಿಸಿ ದ್ವಿಪ್ರತಿಯಲ್ಲಿ ಅಕ್ಟೋಬರ್ 4ರ ಸಂಜೆ 5.30 ಗಂಟೆಯೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಸೇಡಂ ಪುರಸಭೆ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.
ಪ್ರವಾಸಿ ಟ್ಯಾಕ್ಸಿ ಖರೀದಿ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಸೆ.25.(ಕ.ವಾ.)-ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ 2017-18ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಕಲಬುರಗಿ ಜಿಲ್ಲೆಯ ಅರ್ಹ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಂದ ಸ್ವಯಂ ಉದ್ಯೋಗಕ್ಕಾಗಿ ಪ್ರವಾಸಿ ಟ್ಯಾಕ್ಸಿ ಖರೀದಿಯ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಒಟ್ಟು 33 ವಿದ್ಯಾವಂತ ನಿರುದ್ಯೋಗಿ (ಎಸ್.ಸಿ.-26, ಎಸ್.ಟಿ.-07) ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಯ ಸಹಾಯಧನ ಒದಗಿಸಲಾಗುವುದು. ಅದೇ ರೀತಿ ಹಿಂದುಳಿದ/ಅಲ್ಪಸಂಖ್ಯಾತರ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿಯಲ್ಲಿ ಹಿಂದುಳಿದ/ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಒಟ್ಟು 32 ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಸಹಾಯಧನ ಒದಗಿಸಲಾಗುವುದು. ಪ್ರತಿ ಪ್ರವಾಸಿ ಟ್ಯಾಕ್ಸಿಗೆ 3 ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು. ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಲಘು ವಾಹನ ಚಾಲನಾ ಪರವಾನಗಿ (ಲೈಸೆನ್ಸ್) ಹಾಗೂ ಎಲ್.ಎಂ.ವಿ. ಬ್ಯಾಡ್ಜ್ ಹೊಂದಿರಬೇಕು. ಕನಿಷ್ಟ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ 20 ವರ್ಷ ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿ ಹೊಂದಿರಬೇಕು. ಲಘು ಮೋಟಾರ ವಾಹನ ಚಾಲನಾ ಪರವಾನಿಗೆ ಪಡೆದು ಕನಿಷ್ಠ ಒಂದು ವರ್ಷ ಅವಧಿಯಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಷರತ್ತು ನಿಬಂಧನೆಗಳ ಪ್ರತಿಯನ್ನು ಉಪನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸಾರ್ವಜನಿಕ ಉದ್ಯಾನವನ ಕಲಬುರಗಿ-585103 ಕಚೇರಿಯಲ್ಲಿ ರಜಾದಿನಗಳನ್ನು ಹೊರತುಪಡಿಸಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಅವಶ್ಯಕ ಎಲ್ಲ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಅಕ್ಟೋಬರ್ 31 ರ ಸಂಜೆ 4 ಗಂಟೆಯೊಳಗಾಗಿ ಮೇಲ್ಕಂಡ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯ ದೂರವಾಣಿ ಸಂಖ್ಯೆ 08472-277848ನ್ನು ಸಂಪರ್ಕಿಸಲು ಕೋರಲಾಗಿದೆ.
ಅಕ್ಟೋಬರ್ 10ರಂದು ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆ
*************************************************************
ಕಲಬುರಗಿ,ಸೆ.25.(ಕ.ವಾ.)-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ 2017-18ನೇ ಸಾಲಿನ ಕಲಬುರಗಿ ಜಿಲ್ಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ “ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆ”ಯನ್ನು ಅಕ್ಟೋಬರ್ 10ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ದರ್ಗಾ ರಸ್ತೆಯಲ್ಲಿರುವ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ ಎಂದು ಕಮಲಾಪುರ ಡಯಟ್ ಸಂಸ್ಥೆಯ ಉಪನಿರ್ದೇಶಕ ಶಶಿಕಾಂತ ಮರ್ತುಳೆ ತಿಳಿಸಿದ್ದಾರೆ.
ಜಿಲ್ಲೆಯ ಎಂಟು ತಾಲೂಕಿನ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ಓರ್ವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಮೊದಲು ಬಂದ 50 ವಿದ್ಯಾರ್ಥಿಗಳ ಅರ್ಜಿಗಳನ್ನು ಮಾತ್ರ ಪ್ರಬಂಧ ಸ್ಪರ್ಧೆಗೆ ಪರಿಗಣಿಸಲಾಗುವುದು.
ಪ್ರಬಂಧ ರಚನಾ ವಿಷಯದ ವಿವರ ಇಂತಿದೆ. ಕನಕದಾಸರ ಜೀವನ, ಕಲಿಯಾಗಿ ಕನಕದಾಸ, ಕವಿಯಾಗಿ ಕನಕದಾಸ, ಸಂತನಾಗಿ ಕನಕದಾಸ, ಸಮಾಜಕ್ಕೆ ಕನಕದಾಸರು ನೀಡಿದ ಸಂದೇಶ, ಕನಕದಾಸರು ರಚಿಸಿದ ಕಾವ್ಯಗಳು ಮತ್ತು ಕೀರ್ತನೆಗಳಲ್ಲಿ ಗ್ರಹಿಸಿದ ಅಂಶಗಳು, ಕನಕದಾಸರ ಸಮಕಾಲೀನ ಸಾಮಾಜಿಕ ಸ್ಥಿತಿಗತಿ, ಕನಕದಾಸರು ಮತ್ತು ಉಳಿದ ಹರಿದಾಸರ ಕಾವ್ಯ ಕೀರ್ತನೆಗಳ ಬಗ್ಗೆ ತೌಲನಿಕ ಚಿಂತನೆ ಇತ್ಯಾದಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಒಂದು ವಿಷಯವನ್ನು ಆರಿಸಿಕೊಂಡು ಪ್ರಬಂಧವನ್ನು ಬರೆಯಬೇಕು. ಡಯಟ್ ಸಂಸ್ಥೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 3ಕೊನೆಯ ದಿನವಾಗಿದೆ.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 5000ರೂ., ದ್ವಿತೀಯ-4000ರೂ., ಮತ್ತು ತೃತೀಯ ಸ್ಥಾನ ಪಡೆದವರಿಗೆ 3000ರೂ. ನೀಡಲಾಗುವುದು. 4 ಮತ್ತು 5ನೇ ರ್ಯಾಂಕ್ ಪಡೆದವರಿಗೆ ಸಮಾಧಾನಕರ ಸ್ಥಾನ ತಲಾ 1000ರೂ. ರಂತೆ ಬಹುಮಾನ ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 2017ರ ನವೆಂಬರ್ 6ರಂದು ಜಿಲ್ಲಾಮಟ್ಟದ ಕನಕದಾಸ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಮಾಳಪ್ಪ ಎನ್. ಪೂಜಾರಿ ಇವರ ಮೊಬೈಲ್ ಸಂಖ್ಯೆ 9980095383ನ್ನು ಸಂಪರ್ಕಿಸಲು ಕೋರಲಾಗಿದೆ.
ಕರಡು ಅಧಿಸೂಚನೆ ಪ್ರಕಟ: ಆಕ್ಷೇಪಣೆ ಆಹ್ವಾನ
*****************************************
ಕಲಬುರಗಿ,ಸೆ.25.(ಕ.ವಾ.)-ರಾಜ್ಯದಲ್ಲಿನ ಎಲ್ಲ ಮಹಾನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು ಅನ್ವಯವಾಗುವಂತೆ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ತೊಡಗಿಸಿಕೊಳ್ಳಲಾಗುವ ಪೌರಕಾರ್ಮಿಕರ ಉದ್ಯೋಗಗಳಿಗೆ ಸಂಬಂಧಿಸಿದಂತೆ, ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ಧತಿ) ಕಾಯ್ದೆ, 1970ರ ಪ್ರಾವಧಾನಗಳು ಹಾಗೂ ಅದರನ್ವಯ ಕರ್ನಾಟಕ ನಿಯಮಾವಳಿಗಳು ಎರಡು ವರ್ಷಗಳ ಅವಧಿಯವರೆಗೆ ಈ ಕೆಳಕಂಡ ಆರು ಷರತ್ತುಗಳಿಗೆ ಒಳಪಟ್ಟು ಅನ್ವಯಿಸುವುದಿಲ್ಲವೆಂದು ತೀರ್ಮಾನಿಸಿ ಕರ್ನಾಟಕ ಸರ್ಕಾರವು ದಿ:07-09-2017ರಂದು ಕರಡು ಅಧಿಸೂಚನೆ ಹೊರಡಿಸಿರುತ್ತದೆ.
ನಗರ ಸ್ಥಳೀಯ ಸಂಸ್ಥೆಗಳು, ಬ್ಯಾಂಕ್ ಮುಖಾಂತರವಾಗಿ ಅನ್ವಯವಾಗುವ ಕನಿಷ್ಠ ವೇತನ ದರಗಳನ್ವಯ ವೇತನವನ್ನು ಮುಂಬರುವ ತಿಂಗಳಿನ ಏಳನೇ ತಾರೀಖಿನೊಳಗಾಗಿ ಕಡ್ಡಾಯವಾಗಿ ಪೌರಕಾರ್ಮಿಕರಿಗೆ ಪಾವತಿಸತಕ್ಕದ್ದು. ನಗರ ಸ್ಥಳೀಯ ಸಂಸ್ಥೆಗಳು ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ಧತಿ) (ಕರ್ನಾಟಕ) ನಿಯಮಗಳು, 1974ರ ಉಪ ನಿಯಮ 25ರ ಖಂಡ (ವಿ) ರ ಉಪಖಂಡ (ಎ)ರಲ್ಲಿ ನಿರ್ದಿಷ್ಟಪಡಿಸಲಾಗಿರುವ ಷರತ್ತುಗಳನ್ನು ಪಾಲಿಸತಕ್ಕದ್ದು. ಈ ಮಧ್ಯೆ ಮೇಲೆ ತಿಳಿಸಿದ ಖಾಲಿ ಹುದ್ದೆಗಳಿಗೆ ಖಾಯಂ ಪೌರ ಕಾರ್ಮಿಕರನ್ನು ನಗರ ಸ್ಥಳೀಯ ಸಂಸ್ಥೆಗಳು ಭರ್ತಿ ಮಾಡಲು ಕ್ರಮ ವಹಿಸತಕ್ಕದ್ದು. ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ಎರಡೂ ಜೊತೆ ಸಮವಸ್ತ್ರ, ಶೂಗಳು, ಕೈಗವಸು, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸತಕ್ಕದ್ದು. ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ನೌಕರರ ಭವಿಷ್ಯ ನಿಧಿ ಹಾಗೂ ಇತರೆ ಪ್ರಾವಧಾನಗಳ ಕಾಯ್ದೆ, 1952 ಹಾಗೂ ಕಾರ್ಮಿಕ ರಾಜ್ಯ ವಿಮಾ ಕಾಯ್ದೆ, 1948 ಕಾಯ್ದೆಗಳ ಪ್ರಾವಧಾನಗಳನ್ವಯ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸತಕ್ಕದ್ದು. ನಗರ ಸ್ಥಳೀಯ ಸಂಸ್ಥೆಗಳು ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆ, ಸೇವಾ ವಿವರಗಳು ಬಯೋಮೆಟ್ರಿಕ್ ಹಾಜರಾತಿ ಆಧಾರದ ವೇತನ ಪಾವತಿ ಕುರಿತಂತೆ ನಿಖರವಾದ ದತ್ತಾಂಶಗಳನ್ನು ನಿರ್ವಹಿಸತಕ್ಕದ್ದು.
ಈ ಕರಡು ಅಧಿಸೂಚನೆಯಿಂದ ಬಾಧಿತವಾಗುವ ವ್ಯಕ್ತಿಗಳು, ಉದ್ಯೋಗಿಗಳು, ಉದ್ಯೋಗದಾತರು, ಕಾರ್ಮಿಕ ಸಂಘಗಳು, ಕಾರ್ಮಿಕ ಒಕ್ಕೂಟಗಳು ತಮ್ಮ ಲಿಖಿತ ಹೇಳಿಕೆಗಳು, ಆಕ್ಷೇಪಣೆಗಳು, ಸಲಹೆಗಳನ್ನು 15 ದಿನದೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆ, 4ನೇ ಮಹಡಿ, ವಿಕಾಸಸೌಧ ಬೆಂಗಳೂರು-560001 ಈ ವಿಳಾಸಕ್ಕೆ ಸಲ್ಲಿಸಬೇಕೆಂದು ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಅ. ಶಿಂದಿಹಟ್ಟಿ ತಿಳಿಸಿದ್ದಾರೆ.
ಸೆಪ್ಟೆಂಬರ್ 26ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಸೆ.25.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ದೂರದರ್ಶನ ಫೀಡರ್ ವ್ಯಾಪ್ತಿಯಲ್ಲಿ ಸ್ವಯಂ ನಿರ್ಮಾಣ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯುಕ್ತ ಸೆಪ್ಟೆಂಬರ್ 26ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸದರಿ ಫೀಡರಿನ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ಹೀಗಾಗಿ ಲೇಖನಗಳು News and photo date: 25--09--2017
ಎಲ್ಲಾ ಲೇಖನಗಳು ಆಗಿದೆ News and photo date: 25--09--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo date: 25--09--2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-25-09-2017.html
0 Response to "News and photo date: 25--09--2017"
ಕಾಮೆಂಟ್ ಪೋಸ್ಟ್ ಮಾಡಿ