ಶೀರ್ಷಿಕೆ : News and Photo Date: 12--09--2017
ಲಿಂಕ್ : News and Photo Date: 12--09--2017
News and Photo Date: 12--09--2017
ವಿಶೇಷ ಘಟಕ-ಗಿರಿಜನ ಉಪಯೋಜನೆ:
ಅನುದಾನ ಸಂಪೂರ್ಣ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಸಾಮಾಜಿಕವಾಗಿ ತುಳಿತಕ್ಕೊಳಗಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸಮಾನತೆ ಕಲ್ಪಿಸುವ ದೃಷ್ಟಿಯಿಂದ ಸರ್ಕಾರ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳು 100 ಪ್ರತಿಶತ ಅನುಷ್ಠಾನಗೊಳಿಸಲು ಅಧಿಕಾರಿಗಳು ತಾರತಮ್ಯ ಮಾಡಬಾರದು ಎಂದರು.
ಕಲಬುರಗಿ ಸೇರಿದಂತೆ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ತೋಟಗಾರಿಕೆ, ರೇಷ್ಮೆ ಮತ್ತು ಪಶು ಸಂಗೋಪನೆಗೆ ವಿಪುಲ ಅವಕಾಶಗಳಿವೆ. ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸೂಕ್ತ ಫಲಾನುಭವಿಗಳನ್ನು ಗುರುತಿಸಿ ಅವರಲ್ಲಿ ಜಾಗೃತಿ ಮೂಡಿಸಿ ನೂತನ ಕೃಷಿ ತಂತ್ರಜ್ಞಾನ ಅಳವಡಿಸುವ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು. ರೈತರು ಆರ್ಥಿಕವಾಗಿ ಸಬಲರಾಗಲು ರೇಷ್ಮೆ ಮತ್ತು ಹೈನುಗಾರಿಕೆ ಉಪಕಾರಿಯಾಗಿವೆ. ರೇಷ್ಮೆ ಕೃಷಿಯಿಂದ ರೈತ ಪ್ರತಿ ಎಕರೆಗೆ ಸುಮಾರು 2 ಲಕ್ಷ ರೂ.ಗಳ ಆದಾಯ ಸಂಪಾದಿಸಬಹುದಾಗಿದೆ. ಪಶುಭಾಗ್ಯ ಯೋಜನೆಗೂ ಸಹಿತ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಪಶುಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಕಾಲದಲ್ಲಿ ಬ್ಯಾಂಕಿನಿಂದ ಸಾಲ ದೊರೆಯುವ ಹಾಗೆ ಅಧಿಕಾರಿಗಳು ಜಾಗೃತಿ ವಹಿಸಬೇಕೆಂದು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಹೆಚ್ಚಿಗೆ ವಾಸವಾಗಿರುವ ಗ್ರಾಮಗಳು, ಪ್ರದೇಶಗಳಲ್ಲಿ ರಸ್ತೆ, ಚರಂಡಿಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲೆಯ ಸೇಡಂ, ಚಿಂಚೋಳಿ, ಜೇವರ್ಗಿ, ಅಫಜಲಪುರ ಮತ್ತು ವಾಡಿ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷ 26.49 ಕೋಟಿ ರೂ.ಗಳ ವಿಶೇಷ ಅನುದಾನ ದೊರಕಿಸಲಾಗಿದೆ. ಈ ಪೈಕಿ 15.49 ಕೋಟಿ ರೂ. ವಿಶೇಷ ಘಟಕ ಯೋಜನೆ ಹಾಗೂ 11 ಕೋಟಿ ರೂ. ಗಿರಿಜನ ಉಪಯೋಜನೆ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಗುರುತಿಸಿ ಪ್ರಾರಂಭಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಆರೋಗ್ಯ ಕೇಂದ್ರಗಳ ಆವರಣದಲ್ಲಿ ಸ್ಥಳಾಂತರಿಸಿದ್ದಲ್ಲಿ ಮಕ್ಕಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುವುದು. ಈ ನಿಟ್ಟಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 112 ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಪೈಕಿ ಸುಮಾರು 32 ಅಂಗನವಾಡಿ ಕೇಂದ್ರಗಳನ್ನು ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ಕಟ್ಟಡ ದುರಸ್ತಿಗೊಳಿಸಿ ಸ್ಥಳಾಂತರಿಸಬಹುದಾಗಿದೆ. ಇನ್ನೂಳಿದ 80 ಅಂಗನವಾಡಿ ಕೇಂದ್ರಗಳನ್ನು ಹೆಚ್.ಕೆ.ಆರ್.ಡಿ.ಬಿ. ಅನುದಾನದಿಂದ ನಿರ್ಮಿಸಿ ಕೊಡಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಹಾಗೂ ಹೆಚ್.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸೆಪ್ಟೆಂಬರ್ 14ರಂದು ವಿಭಾಗಮಟ್ಟದ ದಸರಾ ಕ್ರೀಡಾ ಕೂಟದ ಉದ್ಘಾಟನೆ
ಕಲಬುರಗಿ,ಸೆ.12.(ಕ.ವಾ.)-ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಇವುಗಳ ಸಂಯುಕ್ತಾಶ್ರಯದಲ್ಲಿ 2017-18ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 14ರಂದು ಬೆಳಗಿನ 10 ಗಂಟೆಗೆ ಏರ್ಪಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಸಮಾರಂಭವನ್ನು ಉದ್ಘಾಟಿಸುವರು. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆಯಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ. ಖಮರುಲ್ ಇಸ್ಲಾಂ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕ ಕುಮಾರ, ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ. ಪ್ರತಾಪಸಿಂಗ ತಿವಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮೈಸೂರು ದಸರಾ: ಪ್ರಕಾಶಕರು/ಮಾರಾಟಗಾರರಿಂದ ಅರ್ಜಿ ಆಹ್ವಾನ
ಕಲಬುರಗಿ,ಸೆ.12.(ಕ.ವಾ.)-ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ-2017ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 21ರಿಂದ 29ರವರೆಗೆ ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017ನ್ನು ಮೈಸೂರಿನಲ್ಲಿ ಏರ್ಪಡಿಸಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು/ಮಾರಾಟಗಾರರು ಭಾಗವಹಿಸಬಹುದಾಗಿದೆ. ಮಳಿಗೆಯೊಂದಕ್ಕೆ 2000ರೂ. ಭದ್ರತಾ ಠೇವಣಿ ಡಿ.ಡಿ.ಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿನಲ್ಲಿ ಡಿ.ಡಿ. ಯನ್ನು ಸಲ್ಲಿಸಬೇಕು. ಈ ಪುಸ್ತಕ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರಕಾಶಕರು/ ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಕಚೇರಿ ಅಥವಾ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಅಥವಾ ಪ್ರಾಧಿಕಾರ ವೆಬ್‍ಸೈಟ್ http://ift.tt/1tU4YjE ರಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಡಿ.ಡಿ.ಯನ್ನು ಲಗತ್ತಿಸಿ ಸೆಪ್ಟೆಂಬರ್ 18ರ ಸಂಜೆ 5 ಗಂಟೆಯೊಳಗಾಗಿ ಅಂಚೆ ಮೂಲಕ ಅಥವಾ ಇ-ಮೇಲ್ kannadappradhikara@gmail.com ಮೂಲಕ ಸಲ್ಲಿಸಲು ಕೋರಿದೆ. ನಿರ್ಮಿಸಲಾಗುವ 50 ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ-560002, ದೂರವಾಣಿ ಸಂಖ್ಯೆ 080-22484516/22107704ನ್ನು ಸಂಪರ್ಕಿಸಲು ಕೋರಿದೆ.
ಸೆಪ್ಟೆಂಬರ್ 16ರಂದು ಹೊಳಕುಂದಾ ಗ್ರಾಮದಲ್ಲಿ ಜನಸ್ಪಂದನ ಸಭೆ
ಕಲಬುರಗಿ,ಸೆ.12.(ಕ.ವಾ.)-ಕಲಬುರಗಿ ತಾಲೂಕಿನ ಮಹಾಗಾಂವ ಹೋಬಳಿ ವ್ಯಾಪ್ತಿಯ ಹೊಳಕುಂದಾ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಗ್ರೇಡ್-2 ತಹಶೀಲ್ದಾರ್ ಜಗನ್ನಾಥ ಎಮ್. ಪೂಜಾರಿ ತಿಳಿಸಿದ್ದಾರೆ. ಹೊಳಕುಂದಾ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ ಆಚರಣೆಗೆ ನಿರ್ಧಾರ
ಕಲಬುರಗಿ,ಸೆ.12.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆಯು ಸರ್ವಾನುಮತದಿಂದ ನಿರ್ಧರಿಸಿತು.
ಸೆಪ್ಟೆಂಬರ್ 17ರಂದು ಮಧ್ಯಾಹ್ನ 1 ಗಂಟೆಗೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗುವ ವಿಶ್ವಕರ್ಮ ಜಯಂತಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಲು ಶಿಷ್ಠಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ತಾಲೂಕಾ ಮಟ್ಟದಲ್ಲಿಯೂ ವಿಜೃಂಭಣೆಯಿಂದ ಆಚರಿಸುವಂತೆ ಎಲ್ಲಾ ತಹಶೀಲ್ದಾರರಿಗೆ ಸೂಚಿಸಲು ತೀರ್ಮಾನಿಸಲಾಯಿತು.
ದಿನಾಚರಣೆಯ ಅಂಗವಾಗಿ ಅಂದು ಬೆಳಗಿನ 10 ಗಂಟೆಯಿಂದ ಕಲಬುರಗಿ ನಗರದ ಸಂತ್ರಾಸವಾಡಿ ಕಾಳಿಕಾ ಮಂದಿರದಿಂದ ಸರಾಫ ಬಜಾರ, ಕಪಡಾ ಬಜಾರ, ಚೌಕ್ ಪೊಲೀಸ್ ಸ್ಟೇಶನ್, ಸುಪರ ಮಾರ್ಕೇಟ್, ಜಗತ್ ವೃತ್ತದಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ವಿಶ್ವಕರ್ಮ ಭಾವಚಿತ್ರದ ಮತ್ತು ವಿವಿಧ ಕಲಾ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗುವುದು.
ದಿನಾಚರಣೆಯ ಅಂಗವಾಗಿ ಕಲಬುರಗಿಯ ವಿಶ್ವಕರ್ಮ ಮಹಾಸಭಾಧ್ಯಕ್ಷ ಅಶೋಕ ಪೋದ್ದಾರ ಹರಸೂರ ಅವರಿಂದ ಉಪನ್ಯಾಸ ಏರ್ಪಡಿಸಲು ಸಭೆ ನಿರ್ಣಯ ಕೈಗೊಂಡಿತು. ರಂಗಮಂದಿರದಲ್ಲಿ ನಡೆಯುವ ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಸಮರ್ಪಕ ವಿದ್ಯುತ್ ಪೂರೈಕೆ, ಸ್ವಚ್ಛತೆ, ಮೆರವಣಿಗೆ ಉದ್ದಕ್ಕು ಸೂಕ್ತ ಪೊಲೀಸ್ ಭದ್ರತೆ ಹಾಗೂ ಕಾಳಿಕಾ ದೇವಸ್ಥಾನದ ಪಕ್ಕದಲ್ಲಿರುವ ಮಾಂಸದ ಅಂಗಡಿಯನ್ನು ಜಯಂತ್ಯೋತ್ಸವ ದಿನದಂದು ಬಂದ್ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಆಮಂತ್ರಣ ಪತ್ರಿಕೆಗಳನ್ನು ಮುಂಚಿತವಾಗಿ ಜಿಲ್ಲೆಯ ಸಚಿವರು ಹಾಗೂ ಶಾಸಕರು, ಜನಪ್ರತಿನಿಧಿಗಳು ಮತ್ತು ಸಮಾಜದ ಮುಖಂಡರಿಗೆ ಸೂಕ್ತ ಸಮಯದಲ್ಲಿ ತಲುಪಿಸುವಂತೆ ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಯಾದಗಿರಿ ವಿಶ್ವ ಕರ್ಮ ಏಕದಂಡಗಿ ಮಠದ ಸುರೇಂದ್ರ ಮಹಾಸ್ವಾಮಿಗಳು, ವಿಶ್ವಕರ್ಮ ಪೂಜಾ ಮಹೋತ್ಸವ ಸಮನ್ವಯ ಸಮಿತಿ ಕಲಬುರಗಿ ಜಿಲ್ಲಾಧ್ಯಕ್ಷ ಮೋಹನ ಎಸ್.ಪಂಡಿತ್ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೆ.ಡಿ.ಪಿ.ಸಭೆ ಮುಂದೂಡಿಕೆ
ಕಲಬುರಗಿ,ಸೆ.12.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಇದೇ ಸೆಪ್ಟೆಂಬರ್ 13ರಂದು ನಡೆಸಲು ಉದ್ದೇಶಿಸಲಾದ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಸೆಪ್ಟೆಂಬರ್ 21 ರಂದು ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಮುಂದೂಡಿದ ಸದರಿ ಸಭೆಯು ಸೆಪ್ಟೆಂಬರ್ 21ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜರುಗಲಿದ್ದು, ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಸದರಿ ಸಭೆಗೆ ಖುದ್ದಾಗಿ ಹಾಜರಾಗುವಂತೆ ಅವರು ಸೂಚಿಸಿದ್ದಾರೆ.
ಪಡಿತರದಾರರಿಗೆ ಆಹಾರ ಧಾನ್ಯ ಬಿಡುಗಡೆ
ಕಲಬುರಗಿ,ಸೆ.12.(ಕ.ವಾ.)-ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕಲಬುರಗಿ ಜಿಲ್ಲೆಯಲ್ಲಿ 2017ರ ಸೆಪ್ಟೆಂಬರ್ ಮಾಹೆಗೆ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಆಹಾರ ಧಾನ್ಯ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದ್ದಾರೆ.
ಪಡಿತರ ಚೀಟಿವಾರು ನಿಗದಿಪಡಿಸಿದ ಆಹಾರಧಾನ್ಯ ಪ್ರಮಾಣದ ವಿವರ ಇಂತಿದೆ. ಆದ್ಯತಾ ಪಡಿತರ ಚೀಟಿ ಕಾರ್ಡಿನ ಪ್ರತಿ ಸದಸ್ಯರಿಗೆ 7 ಕೆ.ಜಿ. ಮತ್ತು ಅಂತ್ಯೋದಯ ಪ್ರತಿ ಕಾರ್ಡಿಗೆ 35ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಇದಲ್ಲದೇ ಅಂತ್ಯೋದಯ ಮತ್ತು ಆದ್ಯತಾ ಪ್ರತಿ ಕಾರ್ಡಿಗೆ ಕೆ.ಜಿ.ಗೆ 38ರೂ. ದರದಂತೆ 1 ಕೆ.ಜಿ. ತೊಗರಿ ಬೆಳೆಯನ್ನು ವಿತರಿಸಲಾಗುವುದು. ನ್ಯಾಯ ಬೆಲೆ ಅಂಗಡಿಯಲ್ಲಿ ಪ್ರತಿದಿನ ಬೆಳಗಿನ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಾಯಂಕಾಲ 4 ರಿಂದ ರಾತ್ರಿ 8 ಗಂಟೆಯವರೆಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದ್ದು, ಮಂಗಳವಾರ ನ್ಯಾಯ ಬೆಲೆ ಅಂಗಡಿಗಳಿಗೆ ವಾರದ ರಜೆ ಇರುತ್ತದೆ.
ಪ್ರತಿ ಚೀಟಿದಾರರು ಮೇಲಿನ ಹಂಚಿಕೆಯಂತೆ ಬಿಲ್ಲಿನಲ್ಲಿ ಪಡಿತರ ಪದಾರ್ಥಗಳ ದರ ಹಾಗೂ ಪ್ರಮಾಣ ಸರಿಯಾಗಿದೆಯೇ ಎಂದು ಖಾತ್ರಿ ಪಡಿಸಿಕೊಂಡು ಬಿಲ್ಲನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಹಂಚಿಕೆ ಚೆಕಲಿಸ್ಟಿನಲ್ಲಿ ಕಡ್ಡಾಯವಾಗಿ ಸಹಿ/ಹೆಬ್ಬಟ್ಟಿನ ಗುರುತು ನೀಡುವುದು ಹಾಗೂ ನಿಗದಿತ ಪ್ರಮಾಣದಂತೆ ಹಂಚಿಕೆ ವಿತರಣೆ ಮಾಡದೇ ನಿರಾಕರಿಸಿದ್ದಲ್ಲಿ ಈ ಕುರಿತು ಬಿಲ್ಲಿನ ಪ್ರತಿಯೊಂದಿಗೆ ಸೇವಾ ಕೇಂದ್ರಗಳಾದ ಗುಲಬರ್ಗಾ ಒನ್, ಜನಸ್ನೇಹಿ ಕೇಂದ್ರ ಗ್ರಾಮ ಪಂಚಾಯಿತಿ, ಖಾಸಗಿ ಫ್ರಾಂಚೈಸಿ ಹಾಗೂ ಕಂಪ್ಯೂಟರ ವ್ಯವಸ್ಥೆ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ, ತಾಲೂಕಿನ ತಹಸೀಲ್ದಾರರ ಕಚೆÉೀರಿಯಲ್ಲಿ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ಆಧಾರ ಸಂಖ್ಯೆಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯಿಂದ *161# ನ್ನು ಡಯಲ್ ಮಾಡಿ ಹಾಗೂ ಉಚಿತ ಸಹಾಯವಾಣಿ 1967ಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು News and Photo Date: 12--09--2017
ಎಲ್ಲಾ ಲೇಖನಗಳು ಆಗಿದೆ News and Photo Date: 12--09--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 12--09--2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-12-09-2017.html
0 Response to "News and Photo Date: 12--09--2017"
ಕಾಮೆಂಟ್ ಪೋಸ್ಟ್ ಮಾಡಿ