ಶೀರ್ಷಿಕೆ : NEWS AND PHOTO DATE: 26--07--2017
ಲಿಂಕ್ : NEWS AND PHOTO DATE: 26--07--2017
NEWS AND PHOTO DATE: 26--07--2017
ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ವಿಶೇಷ ಗಮನ ನೀಡಲು ಸೂಚನೆ
***************************************************************
ಕಲಬುರಗಿ,ಜು.26.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯತ್ತ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಅವರಿಗೆ ವಿಶೇಷ ಪೌಷ್ಟಿಕ ಆಹಾರ ಮತ್ತು ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ ಸೂಚಿಸಿದರು.
ಅವರು ಬುಧವಾರ ಕಲಬುರಗಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಮತ್ತು ಯಾವುದೇ ರೀತಿಯ ಔಷಧಿಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳನ್ನು ನಿರ್ವಹಣೆಯನ್ನು ಸರಿಯಾಗಿ ಮಾಡಿ, ಜನಸ್ನೇಹಿಯಾಗುವಂತೆ ನೋಡಿಕೊಳ್ಳಬೇಕು. ಶಿಶು ಮರಣ ಮತ್ತು ಬಾಣಂತಿಯರ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖಗೊಳಿಸುವುದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕೇಂದ್ರ ಕಟ್ಟಡಗಳಿಲ್ಲದ ಕಡೆ ಲಭ್ಯವಿರುವ ಸಮುದಾಯ ಭವನಗಳಲ್ಲಿಯೂ ಅಂಗನವಾಡಿ ಕೇಂದ್ರಗಳನ್ನು ನಡೆಸುವ ಬಗ್ಗೆ ಚಿಂತನೆ ಮಾಡಬೇಕು. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆಯಾಗುವಂತೆ ನೋಡಿಕೊಳ್ಳಬೇಕೆಂದರು.
ಸ್ವಚ್ಛ ಭಾರತ ಅಭಿಯಾನ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ, ಬಹುಗ್ರಾಮ ಕುಡಿಯುವ ನೀರು, ಗಂಗಾ ಕಲ್ಯಾಣ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲಿಸಿ ಡಾ. ಅಂಬೇಡ್ಕರ ಅಭಿವೃದ್ಧಿ ನಿಗಮದ 2015-16 ಸಾಲಿನ ವಿದ್ಯುದ್ದೀಕರಣಕ್ಕಾಗಿ ಬಾಕಿ ಉಳಿದ ಗಂಗಾ ಕಲ್ಯಾಣ ಯೋಜನೆಗಳಿಗೆ ಕೂಡಲೇ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಆರೋಗ್ಯ, ಶಿಕ್ಷಣ ಕ್ಷೇತ್ರವನ್ನು ಬಲವರ್ಧಿಸಲು ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕೆಂದರು.
ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಆಕೃತಿ ಸಾಗರ, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
********************************************
ಕಲಬುರಗಿ,ಜು.26.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಕರ್ನಾಟಕ ಎಕ್ಸ್‍ಪ್ರೆಸ್ ರೈಲಿನ ಮೂಲಕ ಜುಲೈ 27ರಂದು ಬೆಳಿಗ್ಗೆ 05.39 ಗಂಟೆಗೆ ಕಲಬುರಗಿಗೆ ಆಗಮಿಸುವರು. ಬೆಳಿಗ್ಗೆ 11 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ನಂತರ ಕಲಬುರಗಿ ಹಾಗೂ ಸೇಡಂಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜುಲೈ 28ರಂದು ಕಲಬುರಗಿ ಹಾಗೂ ಸೇಡಂಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಜುಲೈ 29ರಂದು ಬೆಳಿಗ್ಗೆ 10 ಗಂಟೆಗೆ ಹೆಚ್.ಕೆ.ಆರ್.ಡಿ.ಬಿ. ಕಾಮಗಾರಿಗೆ ಸಂಬಂಧಿಸಿದಂತೆ ಕಲಬುರಗಿ ವಾರ್ತಾ ಭವನದಲ್ಲಿ ಸಚಿವರು ಹಾಗೂ ಹೆಚ್.ಕೆ.ಆರ್.ಡಿ.ಬಿ. ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸುವರು. ನಂತರ ಹೆಚ್.ಕೆ.ಆರ್.ಡಿ.ಬಿ.ಯಿಂದ ವಾರ್ತಾ ಇಲಾಖೆಗೆ ನೀಡಲಾದ ನೂತನ ಬಸ್ಸಿಗೆ ಹಸಿರು ನಿಶಾನೆ ತೋರಿಸುವರಲ್ಲದೇ ಇದೇ ವಾಹನದಲ್ಲಿ ಪತ್ರಕರ್ತರೊಂದಿಗೆ ಮಂಡಳಿಯ ಕಾಮಗಾರಿಗಳಿಗೆ ಭೇಟಿ ನೀಡುವರು. ಕಲಬುರಗಿ ಹಾಗೂ ಸೇಡಂಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜುಲೈ 30ರಂದು ಕಲಬುರಗಿ ಹಾಗೂ ಸೇಡಂಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಜುಲೈ 31ರಂದು ಸೇಡಂ ಕೊತ್ತಲಬಸವೇಶ್ವರ ಯಾತ್ರಿ ನಿವಾಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಲಬುರಗಿ ಹಾಗೂ ಸೇಡಂಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಆಗಸ್ಟ್ 1ರಂದು ಕಲಬುರಗಿ ಹಾಗೂ ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು ಮತ್ತು ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು. ಅಂದು ರಾತ್ರಿ ರೈಲು ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುವರು.
ಹೊಲಿಗೆ ಯಂತ್ರಕ್ಕಾಗಿ ಅರ್ಜಿ ಆಹ್ವಾನ
*********************************
ಕಲಬುರಗಿ,ಜು.26.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ 2016-17ನೇ ಸಾಲಿನ ಬಿ.ಆರ್.ಜಿ.ಎಫ್. ಯೋಜನೆಯಡಿ ಹೊಲಿಗೆ ಯಂತ್ರಗಳನ್ನು ವಿತರಣೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಫಲಾನುಭವಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರಬೇಕಲ್ಲದೇ ಬಿ.ಪಿ.ಎಲ್. ಕಾರ್ಡನ್ನು ಹೊಂದಿರಬೇಕು. ನಲ್ಮ್ ಯೋಜನೆಯಲ್ಲಿ ತರಬೇತಿ ಪಡೆದು ಸರ್ಟಿಫಿಕೇಟ್ ಪಡೆದಿರಬೇಕು. ಜಾತಿ ಮತ್ತು ಆದಾಯ ಪ್ರಮಾಣಪತ್ರ ಲಗತ್ತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ ಮತ್ತು ಇತರೆ ಜಾತಿಯವರಿಗೆ ಸರ್ಕಾರದ ನಿಗದಿಪಡಿಸಿದ ಒಟ್ಟು ಗುರಿಗೆ ಮೀಸಲಾತಿ ನೀಡಲಾಗುವುದು.
ಅರ್ಹ ಫಲಾನುಭವಿಗಳು ಅರ್ಜಿಯೊಂದಿಗೆ ಮೇಲ್ಕಂಡ ಎಲ್ಲ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಆಗಸ್ಟ್ 1 ರಿಂದ 10ರವರೆಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಲಗತ್ತಿಸಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಆಗಸ್ಟ್ 5ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು
**************************************************
ಕಲಬುರಗಿ,ಜು.26.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿ 2017ರ ಆಗಸ್ಟ್ 5ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆಗಳನ್ನು ನಡೆಸಲಾಗುವುದು ಎಂದು ಹೆÀಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ. ತಾಲೂಕುವಾರು ನಡೆಯುವ ಜನಸ್ಪಂದನಗಳ ಹೋಬಳಿ, ಗ್ರಾಮ ಮತ್ತು ಸಭೆ ಸ್ಥಳಗಳ ವಿವರ ಇಂತಿದೆ.
ಕಲಬುರಗಿ-ಅವರಾದ(ಬಿ) ಹೋಬಳಿಯ ಹರಸೂರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಆಳಂದ-ಖಜೂರಿ ಹೋಬಳಿಯ ಹೋದಲೂರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಅಫಜಲಪುರ-ಅಫಜಲಪುರ ಹೋಬಳಿಯ ದೇ. ಕಲ್ಲೂರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಜೇವರ್ಗಿ-ಆಂದೋಲಾ ಹೋಬಳಿಯ ರಾಮಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸೇಡಂ-ಮುಧೋಳ ಹೋಬಳಿಯ ಚಂದಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿತ್ತಾಪುರ-ಶಹಾಬಾದ ಹೋಬಳಿಯ ಮಾಲಗತ್ತಿ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿಂಚೋಳಿ-ಚಿಂಚೋಳಿ ಹೋಬಳಿಯ ಪಟಹಳ್ಳಿ ಸರ್ಕಾರಿ ಶಾಲಾ ಆವರಣ. \
ಆಗಸ್ಟ್ 5ರಂದು ತೆಂಗಿನಕಾಯಿ ಹರಾಜು
**********************************
ಕಲಬುರಗಿ,ಜು.26.(ಕ.ವಾ.)-ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ತಾನದ ಜಾತ್ರೆಯ ತೆಂಗಿನಕಾಯಿ ಮಾರಾಟ ಕುರಿತು ಹರಾಜನ್ನು ಆಗಸ್ಟ್ 05 ರಂದು ಮಧ್ಯಾಹ್ನ 12 ಗಂಟೆಗೆ ಶಹಾಪುರ ತಹಸೀಲ್ದಾರರ ಕಾರ್ಯಾಲಯದಲ್ಲಿ ನಿಗದಿಪಡಿಸಲಾಗಿದೆ ಎಂದು ಶಹಾಪುರ ತಹಸೀಲ್ದಾರರು ಹಾಗೂ ದೇವಸ್ಥಾನದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹರಾಜಿನಲ್ಲಿ 25000 ರೂ. ಠೇವಣಿ ಇಟ್ಟು ಹರಾಜಿನಲ್ಲಿ ಭಾಗವಹಿಸಬೇಕು. ಹರಾಜಾದ ನಂತರ ಮೂರು ದಿನಗಳಲ್ಲಿ ಹರಾಜಿನ ಪೂರ್ಣ ಹಣವನ್ನು ಪಾವತಿಸಬೇಕು. ಹಣ ಪಾವತಿಸಲು ತಪ್ಪಿದ್ದಲ್ಲಿ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಪುನ: ಹರಾಜು ನಡೆಸಲಾಗುವುದೆಂದು ಅವರು ತಿಳಿಸಿದ್ದಾರೆ.
ಐಟಿಐ ಖಾಲಿ ಉಳಿದ ಸ್ಥಾನಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*****************************************************
ಕಲಬುರಗಿ,ಜು.26.(ಕ.ವಾ.)-ಕಲಬುರಗಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಖಾಲಿ ಉಳಿದ ಸ್ಥಾನಗಳ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಎಸ್.ಎನ್. ಪಾಂಚಾಳ ತಿಳಿಸಿದ್ದಾರೆ.
ಆನ್-ಲೈನ್ ಮೂಲಕ ಆಗಸ್ಟ್-2017 ನೇ ಸಾಲಿನಲ್ಲಿ ಪ್ರವೇಶ ಮಾಡಿ ಉಳಿದಿರುವ ಸ್ಥಾನಗಳಿಗೆ ಮೆರಿಟ್ ಆಧಾರದ ಮೇಲೆ ಗ್ರೇಡೇಶನ್ (ಉಡಿಚಿಜಚಿಣioಟಿ) ಮಾಡಿ ಮುಂದುವರೆದ ಸುತ್ತಿನಲ್ಲಿ ಪ್ರವೇಶಗಳನ್ನು ಮಾಡಿಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸುವವರು ಈಗಾಗಲೇ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿಸಿ ಸ್ಥಾನ ಹಂಚಿಕೆಯಾಗದವರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಸ್ಥಾನ ವಿತರಣೆಯಾಗಿ ಪ್ರವೇಶ ಮಾಡಿಕೊಳ್ಳದವರು ಆಯಾ “ಐಟಿಐ”ಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶ ಬಯಿಸಿದರೆ ಮತ್ತು ಅರ್ಹತಾ ಆಧಾರದ ಮೇಲೆ ಪ್ರವೇಶಕ್ಕಾಗಿ ಜುಲೈ 31ರವರೆಗೆ ಆಯಾ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಆಯಾ ಸಂಸ್ಥೆಗಳಿಗೆ ಭೇಟಿ ನೀಡಿ ಪಡೆಯಬಹುದಾಗಿದೆ ಮತ್ತು ಕಚೇರಿ ದೂರವಾಣಿ ಸಂಖ್ಯೆ 08472-278611 ನ್ನು ಸಂಪರ್ಕಿಸಲು ಕೋರಲಾಗಿದೆ.
ಕಾನೂನು ಕಾಲೇಜಿನ ಪ್ರವೇಶಕ್ಕಾಗಿ ಆಗಸ್ಟ್ 8 ಕೊನೆಯ ದಿನ
*****************************************************
ಕಲಬುರಗಿ,ಜು.26.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಐದು ವರ್ಷದ ಬಿ.ಎ., ಎಲ್.ಎಲ್.ಬಿ. ಕಾನೂನು ಪದವಿಗಳ ಪ್ರವೇಶಕ್ಕಾಗಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಪ್ರವೇಶಾತಿಗೆ ಆಗಸ್ಟ್ 8 ಕೊನೆಯ ದಿನವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಬಿ.ಎ. ಎಲ್.ಎಲ್.ಬಿ. ಕೋರ್ಸಿನ ಅವಧಿ 5 ವರ್ಷದಾಗಿದ್ದು, ಇದರಲ್ಲಿ ಮೊದಲ ಎರಡು ವರ್ಷ ಕಲಾ ವಿಷಯಗಳಿಗೆ ಸೀಮಿತವಾಗಿದ್ದು, ಕೊನೆಯ 3 ವರ್ಷಗಳು ಕಾನೂನು ವಿಷಯಗಳನ್ನೊಳಗೊಂಡಿದೆ. ದ್ವಿತೀಯ ವರ್ಷದ ಪಿ.ಯು.ಸಿ. ಅಥವಾ ತತ್ಸಮಾನದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಒಟ್ಟು ಶೇ. 45ರಷ್ಟು ಅಂಕ ಪಡೆದಿರಬೇಕು (ಇತರೆ ಹಿಂದುಳಿದ ವರ್ಗದವರು ಶೇ. 42 ಮತ್ತು ಪ.ಜಾ., ಪ.ಪಂ. ಶೇ. 40 ರಷ್ಟು ಅಂಕ ಪಡೆದಿರಬೇಕು). ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಯೋಮಿತಿ ಗರಿಷ್ಠ 20 ವರ್ಷ. (1997ರ ಮೇ 15ರಂದು ಅಥವಾ ನಂತರ ಜನಿಸಿರಬೇಕು) ಹಾಗೂ ಪ.ಜಾ./ ಪ.ಪಂ. ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 22 ವರ್ಷ (1995 ರ ಮೇ 15ರಂದು ಅಥವಾ ನಂತರ ಜನಿಸಿರಬೇಕು) ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಕಾಲೇಜು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿದ್ದು, ಉತ್ತಮ ಸಾರಿಗೆ ವ್ಯವಸ್ತೆಯೊಂದಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ಹಾಗೂ ಪಿಹೆಚ್.ಡಿ ವ್ಯಾಸಂಗ ಪಡೆದಿರುವ ಅನುಭವಿ ನುರಿತ ಉಪನ್ಯಾಸಕರಿದ್ದು, ಸುಸಜ್ಜಿತವಾದ ಗ್ರಂಥಾಲಯ ವ್ಯವಸ್ಥೆ ಇರುತ್ತದೆ. ಸರ್ಕಾರದಿಂದ ನೀಡಲಾಗುವ ಪ.ಜಾ./ಪ.ಪಂ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಇತರೆ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ರಾಜೀವ ಗಾಂಧಿ ಸಾಲದ ಸೌಲಭ್ಯ ನೀಡಲಾಗುತ್ತದೆ. ಪ.ಜಾ./ಪ.ಪಂ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಲ್ಯಾಪ್‍ಟಾಪ್ ಸೌಲಭ್ಯ ನೀಡಲಾಗುವುದಲ್ಲದೇ ವ್ಯಕ್ತಿತ್ವ ಬೆಳವಣಿಗೆಗೆ ಸರ್ಕಾರದಿಂದ ನಿರೂಪಿಸಲಾದ ಟೆಲಿ-ಎಜ್ಯುಕೇಷನ್ ಅಡಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಯ ಸೌಲಭ್ಯ ಇರುತ್ತದೆ.
ಪ್ರವೇಶ ಮೀಸಲಾತಿಯು ಸರ್ಕಾರದ ಆದೇಶದಂತೆ ನೀಡಲಾಗುತ್ತದೆ. ಪ್ರವೇಶಕ್ಕೆ ಕೆಲವೇ ಸೀಟುಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಡಾ. ಶಿವಾನಂದ ಹೆಚ್. ಲೇಂಗಟಿ ಮೊಬೈಲ್ ಸಂ. 9449122506, ಡಾ: ರೇಖಾ ಚವ್ಹಾಣ ಮೊಬೈಲ್ ಸಂಖ್ಯೆ 9448231891, ಡಾ: ಶೈಲಜಾ: 9886223349 ಹಾಗೂ ವಾಣಿ ಮರಡಿ: 9035695232ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಜುಲೈ 27ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
*************************************************
ಕಲಬುರಗಿ,ಜು.26.(ಕ.ವಾ.)-ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಹಾರಾ ಸೇವಾ ಸಂಸ್ಥೆ, ರೆಹನುಮಾ ಕಾನೂನು ಕೇಂದ್ರ ಹಾಗೂ ಸೈಯ್ಯದ್ ಅಕ್ಬರ್ ಹುಸೇನಿ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಮತ್ತು ರ್ಯಾಂಗಿಗ್‍ನಿಂದಾಗುವ ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜುಲೈ 27ರಂದು ಗುರುವಾರ ಬೆಳಗಿನ 11 ಗಂಟೆಗೆ ಕಲಬುರಗಿ ಸಂತ್ರಾಸವಾಡಿಯ ಸೈಯ್ಯದ್ ಅಕ್ಬರ್ ಹುಸೇನಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸೈಯ್ಯದ್ ಅಕ್ಬರ್ ಹುಸೇನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿರಾಜುದ್ದೀನ್ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಸಹರಾ ಸೇವಾ ಸಂಸ್ಥೆ ನಿರ್ದೇಶಕ ಮಸ್ತಾನ್ ಬಿರಾದಾರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಭರತೇಶ ಶೀಲವಂತರ ಅವರು ದೇಶ ಕಟ್ಟುವಲ್ಲಿ ಯುವಕರ ಪಾತ್ರ ಹಾಗೂ ನ್ಯಾಯವಾದಿ ಎನ್.ಎನ್. ಜಾಹಗೀರದಾರ್ ಅವರು ರ್ಯಾಗಿಂಗದಿಂದಾಗುವ ದುಷ್ಪರಿಣಾಮಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡುವರು.
ಹೀಗಾಗಿ ಲೇಖನಗಳು NEWS AND PHOTO DATE: 26--07--2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 26--07--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 26--07--2017 ಲಿಂಕ್ ವಿಳಾಸ https://dekalungi.blogspot.com/2017/07/news-and-photo-date-26-07-2017.html
0 Response to "NEWS AND PHOTO DATE: 26--07--2017"
ಕಾಮೆಂಟ್ ಪೋಸ್ಟ್ ಮಾಡಿ