ಶೀರ್ಷಿಕೆ : News and photos Date: 12--06--2017
ಲಿಂಕ್ : News and photos Date: 12--06--2017
News and photos Date: 12--06--2017
ಬಾಲಕಾರ್ಮಿಕತೆ ನಿರ್ಮೂಲನೆಗೆ ಸಂಕಲ್ಪ ಮತ್ತು ಬದ್ಧತೆ ಅಗತ್ಯ
*************************************************************
ಕಲಬುರಗಿ,ಜೂ.12.(ಕ.ವಾ.)-ಬಾಲಕಾರ್ಮಿಕ ಪದ್ಧತಿಯನ್ನು ಬೇರು ಸಹಿತ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪಾಲಕರು ತಮ್ಮ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸುವ ಸಂಕಲ್ಪ ಹಾಗೂ ಬದ್ಧತೆ ತೋರುವ ಮನಸ್ಸು ಮಾಡಿದಾಗ ಯಶಸ್ಸು ಗಳಿಸಲು ಸಾಧ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವ್ಹಿ. ಪಾಟೀಲ ತಿಳಿಸಿದರು.
ಅವರು ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂಲನಾ ಹಾಗೂ ಪುನರ್ವಸತಿ ಸಂಘ ಮತ್ತು ಮಕ್ಕಳ ಸಹಾಯವಾಣಿ-1098 ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಎಲ್ಲ ಇಲಾಖೆಗಳ ಅಧಿಕಾರಿಗಳು ಕೈಗೊಂಡು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರೊಂದಿಗೆ ಅವರ ಜೀವನ ಉಜ್ವಲಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಬಾಲಕಾರ್ಮಿಕತೆಗೆ ಬಡತನ ಮತ್ತು ಅನಕ್ಷರತೆ ಮೂಲ ಕಾರಣವಾಗಿದೆ. ಇದೊಂದು ಅನಿಷ್ಟ ಪದ್ಧತಿಯಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿರುವ ಎಲ್ಲ ಬಾಲ ಕಾರ್ಮಿಕರನ್ನು ಗುರುತಿಸಿ ಶಾಲೆಗಳಲ್ಲಿ ಶಿಕ್ಷಣ ನೀಡಿ ಮುಖ್ಯ ವಾಹಿನಿಗೆ ಕರೆತರಬೇಕು. ಬಾಲಕಿಯರ ರಕ್ಷಣೆ ಮಾಡುವುದು ಇಂದಿನ ತುರ್ತು ಅಗತ್ಯತೆಯಾಗಿದ್ದು, ಇದಕ್ಕಾಗಿ ಅವರಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಬೇಕೆಂದರು.
ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಸಾಮಾಜಿಕ ಪಿಡುಗಾಗಿರುವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಪ್ರತಿ ಗ್ರಾಮ ಮತ್ತು ತಾಂಡಾಗಳಲ್ಲಿ ಸಂವೇದನಾಶೀಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಿಶೋರಿಯರಿಗೆ ನ್ಯಾಯ ಕಲ್ಪಿಸುವ ಕಾರ್ಯ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೆಚ್ಚು ಶ್ರಮ ಪಡುವುದರೊಂದಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಮಾತನಾಡಿ, ಬಾಲಕಾರ್ಮಿಕತೆ ಒಂದು ಜ್ವಲಂತ ಸಮಸ್ಯೆಯಾಗಿದೆ. ಎಲ್ಲ ಮಕ್ಕಳಿಗೆ ಬಾಲ್ಯತನ ಅತೀ ಮುಖ್ಯ. ಮೃದು ಸ್ವಭಾವದ ಮಕ್ಕಳ ಬಾಲ್ಯತನ ಕಳೆದು ಹೋಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಬಾಲಕಾರ್ಮಿಕರ ರಕ್ಷಣೆಗೆ ಪಣ ತೊಡಗಬೇಕೆಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ ಮಾತನಾಡಿ, ಕಲಬುರಗಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯವನ್ನಾಗಿಸುವ ನಿಟ್ಟಿನಲ್ಲಿ ಎಲ್ಲ ಸಂಘ ಸಂಸ್ಥೆಗಳು, ಸಮಾಜ ಕಾರ್ಯಕರ್ತರು ಶ್ರಮಿಸಬೇಕು. ಮಕ್ಕಳಲ್ಲಿರುವ ಅಗಾಧ ಶಕ್ತಿಯನ್ನು ಯಾವುದೇ ಕಾರಣಕ್ಕೂ ಮೊಳಕೆಯಲ್ಲೇ ಚಿವುಟುವ ಕಾರ್ಯ ಮಾಡಾಬಾರದೆಂದರು.
ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂಲನೆ ಹಾಗೂ ಪುನರ್ವಸತಿ ಸಂಘದ ಅಧ್ಯಕ್ಷ ಉಜ್ವಲ್‍ಕುಮಾರ ಘೋಷ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ. ಚಂದ್ರಕಾಂತ, ಕಾರ್ಖಾನೆ ಮತ್ತು ಬಾಯ್ಲರ್‍ಗಳ ಇಲಾಖೆಯ ಉಪನಿರ್ದೇಶಕ ಪಾರ್ಥಸಾರಥಿ, ದಾಲಮಿಲ್ ಅಸೋಸಿಯೇಶನ್ ಅಧ್ಯಕ್ಷ ಚಿದಂಬರರಾವ್ ಪಾಟೀಲ ಮರಗುತ್ತಿ, ಇಟ್ಟಿಗೆ ಭಟ್ಟಿ ಉದ್ದಿಮೆಗಳ ಸಂಘದ ಅಧ್ಯಕ್ಷ ಶಿವಾನಂದ ಪದ್ಮಾಜಿ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಭು ಯಳಸಂಗಿ, ಕಟ್ಟಡ ಕಾರ್ಮಿಕ ಕೇಂದ್ರ ವಲಯದ ಜಿಲ್ಲಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಜಿಲ್ಲಾ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯ ಸುರೇಶ ಬಡಿಗೇರ್ ಪಾಲ್ಗೊಂಡಿದ್ದರು.
ಕಲಬುರಗಿ ಚೈಲ್ಡ್‍ಲೈನ್ ನೋಡಲ್ ಕೇಂದ್ರದ ನಿರ್ದೇಶಕ ಡಾ. ಲಿಂಗರಾಜ್ ಕೋಣಿನ್ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆ ಕುರಿತು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವಿಠ್ಠಲ ಚಿಕಣಿ-ಬಾಲಕಾರ್ಮಿಕತೆಯ ದುಷ್ಪರಿಣಾಮಗಳು ಮತ್ತು ಬಾಲಕಾರ್ಮಿಕರ ಪುನರ್ವಸತಿ ವ್ಯವಸ್ಥೆ ಕುರಿತು ಹಾಗೂ ಡಾನ್ ಬಾಸ್ಕೋ ನಿರ್ದೇಶಕ ಫಾದರ್ ಸಜ್ಜಿತ್ ಜಾರ್ಜ್ ಮಕ್ಕಳ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಶಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವ್ಹಿ. ಪಾಟೀಲ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬಾಲಕಾರ್ಮಿಕ ಮಕ್ಕಳ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಸರ್ಕಾರಿ ಬಾಲಕ/ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಂದ ಏರ್ಪಡಿಸಿದ ಜಾಥಾ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊನೆಗೊಂಡಿತು.
ಬೆಣ್ಣೆತೋರಾ ಪ್ರವಾಹ ಮುನ್ನೆಚ್ಚರಿಕೆ
*********************************
ಕಲಬುರಗಿ,ಜೂ.12.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಬೆಣ್ಣೆತೋರಾ ನೀರಾವರಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿದೆ. ಜಲಾಶಯದ ಒಳ ಹರಿವು ಹೆಚ್ಚಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುವ ಹೆಚ್ಚುವರಿ ನೀರನ್ನು ಆಣೆಕಟ್ಟೆಯ ಕೋಡಿ ಬಾಗಿಲುಗಳ ಮೂಲಕ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಮುನ್ಸೂಚನೆ ನೀಡದೆ ನದಿಯ ಪಾತಳಿಗೆ ಹರಿ ಬಿಡಲಾಗುವುದು.
ಈ ಹಿನ್ನೆಲೆಯಲ್ಲಿ ಯೋಜನೆಯ ಕೆಳಭಾಗದಲ್ಲಿರುವ ನದಿಯ ಎರಡೂ ದಂಡೆಗಳಲ್ಲಿರುವ ಗ್ರಾಮಗಳ ರೈತರು, ಸಾರ್ವಜನಿಕರು, ರೈತ ಮಹಿಳೆಯರು ಹಾಗೂ ದನಕರುಗಳನ್ನು ಮೇಯಿಸುವವರು ನದಿಯಲ್ಲಿ ಇಳಿಯುವುದಾಗಲಿ, ಬಟ್ಟೆ ತೊಳೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು. ನದಿಯ ಎರಡೂ ದಂಡೆಗಳಲ್ಲಿರುವ ಜನರು ಮತ್ತು ರೈತರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಸುರಕ್ಷಿತ ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಬೆಣ್ಣೆತೋರಾ ಆಣೆಕಟ್ಟು ಯೋಜನೆಯ ಹೆಬ್ಬಾಳ ವಿಭಾಗ-4ರ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರೇಮಸಿಂಗ ಅಧಿಸೂಚನೆ ಹೊರಡಿಸಿದ್ದಾರೆ.
ಅಲ್ಪಸಂಖ್ಯಾತರಿಂದ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ
************************************************************
ಕಲಬುರಗಿ,ಜೂ.12.(ಕ.ವಾ.)-ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2017-18ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖ, ಬೌದ್ಧ, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ವರ್ಗಕ್ಕೆ ಸೇರಿದ ಮತೀಯ ಅಲ್ಪಸಂಖ್ಯಾತರ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಶ್ರಮಶಕ್ತಿ ಸಾಲದ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಮೈಕ್ರೋ ಲೋನ್ (ಸಣ್ಣ ಸಾಲದ ಯೋಜನೆ), ಪಶುಸಂಗೋಪನೆ ಯೋಜನೆ, ಟ್ಯಾಕ್ಸಿ ಖರೀದಿಸಲು ಸಹಾಯಧನ ಯೋಜನೆ, ಕೊಲ್ಲಿ ರಾಷ್ಟ್ರಗಳಿಂದ ರಾಜ್ಯಕ್ಕೆ ಹಿಂತಿರುಗಿ ಬರುವ ಅಲ್ಪಸಂಖ್ಯಾತರ ಸಮುದಾಯದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹಾಗೂ ಆರ್ಥಿಕವಾಗಿ ಉತ್ತಮಪಡಿಸಲು ಸಾಲಸೌಲಭ್ಯ ಹಾಗೂ ಕೃಷಿ ಭೂಮಿ ಖರೀದಿ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳ ವಯೋಮಿತಿ 18 ರಿಂದ 55 ವರ್ಷ ಮೀರಿರಬಾರದು.
ಅಭ್ಯರ್ಥಿಗಳು ತಮ್ಮ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶಗಳಲ್ಲಿ 81,000 ರೂ. ಹಾಗೂ ನಗರ ಪ್ರದೇಶಗಳಲ್ಲಿ 1,03,000 ರೂ. ಒಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರವನ್ನು ಆಯಾ ತಾಲೂಕಿನ ತಹಶಿಲ್ದಾರರಿಂದ ಪಡೆದು ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಇಲಾಖೆಯ ಞmಜಛಿ.ಞಚಿಡಿಚಿಟಿಚಿಣಚಿಞಚಿ.gov.iಟಿ ವೆಬ್‍ಸೈಟಿನಲ್ಲಿ (ಅರಿವು ಯೋಜನೆ ಹೊರತುಪಡಿಸಿ) ಜುಲೈ 30ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಾಸಸ್ಥಳದ ಕುರಿತು ಪಡಿತರ ಚೀಟಿ, ಆಧಾರ ಕಾರ್ಡ್/ಗುರುತಿನ ಚೀಟಿ, ಮತದಾರರ ಪಟ್ಟಿಯ ನಕಲು ಪ್ರತಿ ನೀಡಬೇಕು. ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ ಕಾರ್ಡ್ ಹೊಂದಾಣಿಕೆ (ಲಿಂಕ್) ಮಾಡಿರಬೇಕು. ಕಡ್ಡಾಯವಾಗಿ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಪ್ರತಿಯನ್ನು ಎಲ್ಲ ದಾಖಲಾತಿಗಳೊಂದಿಗೆ ನೀಡಬೇಕು.
ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಎಸ್.ಆರ್. ರೆಸಿಡೆನ್ಸಿ, ಪ್ಲಾಟ್ ನಂ. 1881, ಮೊದಲನೇ ಮಹಡಿ, ಡಾ|| ಎಲ್.ಎಸ್. ರಾಠಿ ಆಸ್ಪತ್ರೆ ಎದುರುಗಡೆ, ಹಳೆ ಜೇವರ್ಗಿ ರಸ್ತೆ ಕಲಬುರಗಿ-585102 ಕಚೇರಿಗೆ ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ಮೇಲ್ಕಂಡ ಜಿಲ್ಲಾ ಕಚೇರಿ ಮತ್ತು ದೂ.ಸಂ.08472-232425ನ್ನು ಸಂಪರ್ಕಿಸಲು ಕೋರಿದೆ.
ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಜೂ.12.(ಕ.ವಾ.)-ಕಲಬುರಗಿ ತಾಲೂಕಿನ ಅವರಾದ(ಬಿ) ಕಿತ್ತೂರು ರಾಣಿ ಚೆನ್ನಮ್ಮ ಆಂಗ್ಲ ಮಾಧ್ಯಮದ ವಸತಿ ಶಾಲೆಯಲ್ಲಿ 2017-18ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕನ್ನಡ, ಇಂಗ್ಲೀಷ ಹಾಗೂ ವಿಜ್ಞಾನ ವಿಷಯಗಳ ತಲಾ ಓರ್ವ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಬಿ.ಎ., ಬಿ.ಎಸ್.ಸಿ. ಮತ್ತು ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಪ್ರತಿ ಮಾಹೆ 6000 ರೂ. ಗೌರವಧನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಜೂನ್ 19ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿದ್ಯಾರ್ಹತೆ ಮತ್ತು ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9743458245ನ್ನು ಸಂಪರ್ಕಿಸಬೇಕೆಂದು ಅವರಾದ(ಬಿ) ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ
*****************************************************************
ಕಲಬುರಗಿ,ಜೂ.12.(ಕ.ವಾ.)-ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2017-18ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಆಳಂದ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ಹಾಗೂ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 44500 ರೂ.ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ಮೂಲಕ ಜಮಾ ಮಾಡಲಾಗುವುದು.
ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕುಗಳಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಬ್ಯಾಂಕಿನ ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆ ಮತ್ತು ಖಾತೆ ಸಂಖ್ಯೆ ಇರುವ, ಪಾಸ್ ಪುಸ್ತಕದ ಮೊದಲ ಪುಟದ ಸ್ಪಷ್ಟ ಜಿರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿಯ ಜಾತಿ ಆದಾಯ ಪ್ರಮಾಣಪತ್ರದ ಜಿರಾಕ್ಸ್ ಪ್ರತಿಗಳನ್ನು ಶಾಲೆಗೆ ಪ್ರವೇಶ ಹೊಂದುವ ಸಮಯದಲ್ಲಿಯೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡತಕ್ಕದ್ದು.
ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ನಮೂನೆಯಲ್ಲಿ ಸದರಿ ವಿವರಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಂದ ಪಡೆದ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ್ ಜಿರಾಕ್ಸ್ಸ್ ಪ್ರತಿ ದಾಖಲಾತಿಗಳೊಂದಿಗೆ 2017ರ ಜೂನ್ 30ರೊಳಗೆ ಆಳಂದ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಕಲಬುರಗಿ ತಾಲೂಕಿನಲ್ಲಿ ಮುಂಗಾರಿನ 82296 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ
***************************************************************************
ಕಲಬುರಗಿ,ಜೂ.12.(ಕ.ವಾ.)-ಕಲಬುರಗಿ ತಾಲೂಕಿನಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಒಟ್ಟು 82296 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.
ಪ್ರಮುಖ ಬೆಳೆವಾರು ಬಿತ್ತನೆ ಮಾಡುವ ಬೆಳೆಗಳ ಕ್ಷೇತ್ರದ ವಿವರ ಇಂತಿದೆ. ಹೈ.ಜೋಳ-90 ಹೆಕ್ಟೇರ್, ಮೆಕ್ಕೆಜೋಳ-900 ಹೆಕ್ಟೇರ್, ಸಜ್ಜೆ-1125 ಹೆಕ್ಟೇರ್, ತೊಗರಿ-60400 ಹೆಕ್ಟೇರ್, ಉದ್ದು-3000ಹೆಕ್ಟೇರ್, ಹೆಸರು-3200 ಹೆಕ್ಟೇರ್, ಸೂರ್ಯಕಾಂತಿ-3025 ಹೆಕ್ಟೇರ್. ಎಳ್ಳು-700 ಹೆಕ್ಟೇರ್. ಸೋಯಾಬಿನ್-2150 ಹೆಕ್ಟೇರ್, ಹತ್ತಿ-4725 ಹೆಕ್ಟೇರ್. ಕಬ್ಬು-2686 ಹೆಕ್ಟೇರ್. ಇತರೆ ಬೆಳೆಗಳು 295 ಹೆಕ್ಟೇರ್.
ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹೋಬಳಿವಾರು ಬಿದ್ದ ಮಳೆಯ ವಿವರ ಇಂತಿದೆ. ಕಮಲಾಪುರ-90ಮಿ.ಮೀ., ಮಹಾಗಾಂವ-243.6ಮಿ.ಮೀ., ಅವರಾದ(ಬಿ) 57.8ಮಿ.ಮೀ., ಪಟ್ಟಣ- 170.8ಮಿ.ಮೀ., ಕಲಬುರಗಿ-97.8ಮಿ.ಮೀ., ಫರಹತಾಬಾದ-91.0ಮಿ.ಮೀ. ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಚುರುಕಾಗಿರುತ್ತವೆ.
ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲು ಬಿತ್ತನೆ ಬೀಜಗಳಾದ ತೊಗರಿ, ಹೆಸರು, ಉದ್ದು, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತು ಸೋಯಾಬಿನ ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ರೈತರು ಇದರ ಸದುಪಯೋಗವನ್ನು ಪಡೆಯಲು ಕೋರಲಾಗಿದೆ.
ಬಿತ್ತನೆ ಬೀಜಗಳ ಬೀಜೋಪಚಾರ ಔಷಧಿಗಳಾದ ಟ್ರೈಕೊಡರ್ಮಾ, ರೈಜೋಬಿಯಂ, ಪಿಎಸ್‍ಬಿ ಇವು ಸಹ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಮುಂಗಾರು ಹಂಗಾಮಿಗಾಗಿ ಬೇಕಾಗುವ ರಸಗೊಬ್ಬರವು ಎಲ್ಲ ಹೋಬಳಿಯ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ರೈತರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಪಡೆಯಲು ಕೋರಿದೆ.
ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
*******************************************
ಕಲಬುರಗಿ,ಜೂ.12.(ಕ.ವಾ.)-ಚಿತ್ತಾಪುರ ತಾಲೂಕಿನ ಕೊಂಚೂರು ಏಕಲವ್ಯ ಮಾದರಿ ವಸತಿ ಶಾಲೆ, ಚಿತ್ತಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ನಾಲವಾರ ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 2017-18ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕನ್ನಡ-01, ಹಿಂದಿ-01, ಇಂಗ್ಲೀಷ್-03, ಗಣಿತ-02, ವಿಜ್ಞಾನ-01, ಸಮಾಜ ವಿಜ್ಞಾನ-01 ವಿಷಯಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಬಿ.ಎ.,ಬಿ.ಎಡ್. ಮತ್ತು ಬಿ.ಎಸ್.ಸಿ. ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಪ್ರತಿ ಮಾಹೆ 6000 ರೂ. ಗೌರವಧನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 20ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೊಂಚೂರು ಏಕಲವ್ಯ ಮಾದರಿ ವಸತಿ ಶಾಲೆಯನ್ನು ಹಾಗೂ ಮೊಬೈಲ್ ಸಂಖ್ಯೆ: 9620528262, 9880848047, 9686950061ಗಳನ್ನು ಸಂಪರ್ಕಿಸಬೇಕೆಂದು ಕೊಂಚೂರು (ಎಸ್.ಟಿ.) ಮಾದರಿ ವಸತಿ ಶಾಲೆ ವಸತಿ ಶಾಲೆಯ ಪ್ರಾಚಾರ್ಯ ಬಸವರಾಜ ಆವಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲ್ಸಿಯಂ ಕ್ಲೋರೈಡ್ ದ್ರಾವಣದಿಂದ ಬೀಜೋಪಚಾರ ಮಾಡಲು ರೈತರಿಗೆ ಸಲಹೆ
*****************************************************************************
• ತೊಗರಿ: ಬಿತ್ತನೆಗೆ ಮುಂಚೆ ಪ್ರತಿ ಕಿ.ಗ್ರಾಂ ಬೀಜಗಳನಲ್ನು ಶೇ 2ರ ಕಾಲ್ಸೀಯಂ ಕ್ಲೋರೈಡ್ ದ್ರಾವಣದಲ್ಲಿ (20ಗ್ರಾಂ/ಲೀ) ಒಂದು ಗಂಟೆ ಕಾಲ ನೆನೆಸಿ ನೆರಳಿನಲ್ಲಿ 7-8 ಗಂಟೆ ಒಣಗಿಸಿ ಬಿತ್ತನೆ ಮಾಡಬೇಕು. ಇದರಿಂದ ಬೀಜಗಳು ಏಕಕಾಲಕ್ಕೆ ಮೊಳಕೆಯೊಡೆದು ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ ಮತ್ತು ಸಸಿಗಳಿಗೆ ಬರ ನಿರೋಧಕ ಶಕ್ತಿ ಬರುತ್ತದೆ ಅಲ್ಲದೆ ಸಸಿಗಳು ಹುರುಪಿನಿಂದ ಕೊಡಿದ್ದು ಉತ್ತಮ ಬೆಳವಣೆಗೆ ಹೊಂದುತ್ತವೆ.
• ಹೆಸರು: ಬೆಳೆ ಬರ ನೀರೋಧಕ ಗುಣ ಹೆಚ್ಚಿಸಲು ಶೇ 2ರ ಕಾಲ್ಸೀಯಂ ಕ್ಲೋರೈಡ್ ದ್ರಾವಣದಲ್ಲಿ ಅರ್ಧ ಗಂಟೆ ನೆನೆಸಿ ನಂತರ 7-8 ಗಂಟೆ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು
• ಉದ್ದು: ಬಿತ್ತನೆಗೆ ಮುಂಚೆ ಪ್ರತಿ ಕಿ.ಗ್ರಾಂ ಬೀಜಗಳನ್ನು ಶೇ 2ರ ಕಾಲ್ಸೀಯಂ ಕ್ಲೋರೈಡ್ ದ್ರಾವಣದ ತಿಳಿ ನೀರಿನಲ್ಲಿ (ಪ್ರತಿ ಕಿ.ಗ್ರಾಂ ಬೀಜಕ್ಕೆ 20 ಗ್ರಾಮ 1ಲೀ) ಅರ್ಧ ಗಂಟೆ ಕಾಲ ನೆನೆಸಿ 7-8 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಬೇಕು. ಇದ್ದರಿಂದ ಬರ ನೀರೋಧಕ ಶಕ್ತಿ ದೊರೆತು ಸಸಿಗಳು ಹುರುಪಿನಿಂದ (ಏಕಕಾಲಕ್ಕೆ ಮೊಳಕೆಯೊಡೆದು) ಬೆಳೆದು ಉತ್ತಮ ಇಳುವರಿ ಕೊಡುತ್ತದೆ.
ಜೈವಿಕ ಗೊಬ್ಬರಗಳಿಂದ ಬೀಜೋಪಚಾರ
• ರೈಜೋಬಿಯಂ: ರೈಜೋಬಿಯಂ ಎಂಬ ಅಣುಜೀವಿ ಗೊಬ್ಬರದಿಂದ (40 ಗ್ರಾಂ/ ಕೆ.ಜಿ ಬೀಜಕ್ಕೆ) ಬೀಜೋಪಚಾರ ಮಾಡಿ ಬಿತ್ತಬೇಕು. ಇದರಿಂದ ಬೆಳೆಯ ಬೇರುಗಳಲ್ಲಿ ಸಾರಜನಕ ತುಂಬಿದ ಗಂಟುಗಳ ಸಂಖ್ಯೆ ಹೆಚ್ಚಾಗುತ್ತವೆ. ಇದರಿಂದ ಬೆಳೆಯ ಬೇರುಗಳಲ್ಲಿ ಸಾರಜನಕ ಗೊಬ್ಬರದ ಉಳಿತಾಯವಾಗುತ್ತದೆ.
ಉಪಯೋಗ: ದ್ವಿದಳ ಬೆಳೆಗಳು (ತೊಗರೆ, ಹೆಸರು , ಉದ್ದು )
• ಪಿ.ಎಸ್.ಬಿ: ರಂಜಕ ಕರಗಿಸುವ ಅಣುಜೀವಿ ಗೊಬ್ಬರದಿಂದ (40 ಗ್ರಾಂ/ ಕೆ.ಜಿ ಬೀಜಕ್ಕೆ) ಬೀಜೋಪಚಾರ ಮಾಡಿ ಬಿತ್ತಿದರೆ ಬೆಳೆಗಳಿಗೆ ಸಿಗದೇ ಇರುವ ಭೂಮಿಯಲ್ಲಿರುವ ರಂಜಕವು ಬೆಳೆಗಳಿಗೆ ಸಿಗುವಂತೆ ಮಾಡುತ್ತದೆ.
ಉಪಯೋಗ: ಎಲ್ಲಾ ಬೆಳೆಗಳಿಗೆ
ಕೃಷಿಯಲ್ಲಿ ಜೈವಿಕ ರೋಗನಾಶಕವಾಗಿ ಟ್ರೈಕೊಡರ್ಮಾ ಬಳಕೆ
ಟ್ರೈಕೋಡರ್ಮಾ (4 ಗ್ರಾಂ / ಪ್ರತಿ ಕೆ,ಜಿ ಬೀಜಕ್ಕೆ) ಬಳಕೆಯಿಂದಾಗಿ ಅತ್ಯಂತ ಅಪಾಯಕಾರಿ ರೋಗಗಳನ್ನುಂಟು ಮಾಡುವ ಮಣ್ಣಿನಿಂದ ಹರಡುವ ಸ್ಕ್ಲಿರೋಷಿಯಂ, ರೈಜೋಕ್ಟೋನಿಯಾ, ಪಿಥಿಯಂ, ಫ್ಯೆಟೋಪ್ತೋರಾ, ಪ್ಯುಜೇರಿಯಂ, ಮ್ಯಾಕ್ರೋಪೋಮಿನಾ ಮುಂತಾದ ಬೇರು ಕೊಳೆ ರೋಗ ಬುಡ/ಸೊರಗು ರೋಗಗಳನ್ನುಂಟು ಮಾಡುವ ಶಿಲೀಂದ್ರಗಳನ್ನು ನಿರ್ವಹಣೆ ಮಾಡಬಹುದು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೋಕಾಶಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು News and photos Date: 12--06--2017
ಎಲ್ಲಾ ಲೇಖನಗಳು ಆಗಿದೆ News and photos Date: 12--06--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photos Date: 12--06--2017 ಲಿಂಕ್ ವಿಳಾಸ https://dekalungi.blogspot.com/2017/06/news-and-photos-date-12-06-2017.html
0 Response to "News and photos Date: 12--06--2017"
ಕಾಮೆಂಟ್ ಪೋಸ್ಟ್ ಮಾಡಿ