ಶೀರ್ಷಿಕೆ : NEWS AND PHOTO DATE: 03--06--2017
ಲಿಂಕ್ : NEWS AND PHOTO DATE: 03--06--2017
NEWS AND PHOTO DATE: 03--06--2017
ವಿದ್ಯಾರ್ಥಿಗಳಿಗೆ ಬಸ್‍ಪಾಸ್ ವಿತರಣಾ ವ್ಯವಸ್ಥೆ
*******************************************
ಕಲಬುರಗಿ,ಜೂನ್.03.(ಕ.ವಾ.)-ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-2ರಿಂದ 2017-18ನೇ ಸಾಲಿನ ಶೈಕ್ಷಣಿಕ ಅವಧಿಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್‍ಪಾಸ್‍ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ಕೊಟ್ರಪ್ಪ ತಿಳಿಸಿದ್ದಾರೆ.
ಸಂಸ್ಥೆಯಿಂದ ಬಸ್‍ಪಾಸ್ ಕೋರಿಕೆ ಅರ್ಜಿಗಳನ್ನು ಶಾಲಾ/ಕಾಲೇಜುಗಳಿಗೆ ನೀಡಲಾಗುವುದು. ಬಸ್‍ಪಾಸ್‍ಗಳನ್ನು ಶಾಲಾ ಕಾಲೇಜಿನ ಆಡಳಿತ ವರ್ಗ ತಮ್ಮ ವಿದ್ಯಾರ್ಥಿಗಳಿಗೆ ವಿತರಿಸಿ ಭರ್ತಿ ಮಾಡಿ ಅರ್ಜಿಗಳನ್ನು ದರದೊಂದಿಗೆ ಸಂಗ್ರಹಿಸಿ ಸಂಸ್ಥೆಯ ಬಸ್‍ಪಾಸ್ ವಿತರಣಾ ಕೌಂಟರಿಗೆ ನೀಡಬೇಕು. ಈ ರೀತಿ ಸ್ವೀಕರಿಸಿದ ಅರ್ಜಿಗಳ ಬಗ್ಗೆ ದಾಖಲಾತಿ ರಜಿಸ್ಟ್ರರಿನಲ್ಲಿ ಮಾಹಿತಿ ದಾಖಲಿಸಿ ಬಸ್‍ಪಾಸ್ ತಯಾರಿಸಿ ಶಾಲಾ ಕಾಲೇಜುಗಳಿಗೆ ನೀಡಲಾಗುವುದು. ಬಸ್‍ಪಾಸ್ ಪಡೆಯಲು ಪಾಸ್ ದರ, ಸಂಸ್ಕರಣಾ ಶುಲ್ಕ ಮತ್ತು ಅಪಘಾತ ಪರಿಹಾರ ನಿಧಿ ಸೇರಿ ಒಟ್ಟು ನಿಗದಿಪಡಿಸಿದ ದರ ಇಂತಿದೆ.
ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ಬಸ್‍ಪಾಸ್ ಉಚಿತವಾಗಿದ್ದು, ಕೇವಲ ಸಂಸ್ಕರಣಾ ಶುಲ್ಕ ಮತ್ತು ಅಪಫಾತ ಪರಿಹಾರ ನಿಧಿ ದರ 130 ರೂ.ಗಳನ್ನು ಮಾತ್ರ ಪಾವತಿಸಿ ಬಸ್‍ಪಾಸ್ ಪಡೆಯಬೇಕು. ಅದೇ ರೀತಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ಒಟ್ಟು ಬಸ್‍ಪಾಸ್ ದರ 730 ರೂ. ಮತ್ತು ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ 530ರೂ., ಕಾಲೇಜು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1030 ರೂ., ವೃತ್ತಿಪರ ಕೋರ್ಸಗಳಾದ ವೈದ್ಯಕೀಯ, ಇಂಜಿನಿಯರಿಂಗ್, ಇತರೆ ವಿದ್ಯಾರ್ಥಿಗಳಿಗೆ 1530 ರೂ. ಸಂಜೆ ಕಾಲೇಜು, ಪಿ.ಹೆಚ್.ಡಿ. ವಿದ್ಯಾರ್ಥಿಗಳಿಗೆ 1330ರೂ. ಹಾಗೂ ಐ.ಟಿ.ಐ. ವಿದ್ಯಾರ್ಥಿಗಳಿಗೆ 12 ತಿಂಗಳಿಗೆ 1290 ರೂ.
ಬಸ್‍ಪಾಸ್ ವಿತರಣಾ ಕೇಂದ್ರಗಳ ವಿವರ ಇಂತಿದೆ. ಕಲಬುರಗಿಯ ಕೇಂದ್ರ ಬಸ್ ನಿಲ್ದಾಣ, ಸುಪರ ಮಾರ್ಕೆಟ್ ಉಪನಗರ ಸಾರಿಗೆ ಬಸ್ ನಿಲ್ದಾಣ, ಶಹಾಬಜಾರ ನಾಕಾ ಬಸ್ ನಿಲ್ದಾಣ, ಗಂಜ್ ಬಸ್ ನಿಲ್ದಾಣ, ಆಳಂದ ಬಸ್ ನಿಲ್ದಾಣ, ಮಾದನ ಹಿಪ್ಪರಗಾ ಬಸ್ ನಿಲ್ದಾಣ, ಕಡಗಂಚಿ ಬಸ್ ನಿಲ್ದಾಣ, ಜೇವರ್ಗಿ ಬಸ್ ನಿಲ್ದಾಣ, ಯಡ್ರಾಮಿ ಬಸ್ ನಿಲ್ದಾಣ, ಅಫಜಲಪುರ ಬಸ್ ನಿಲ್ದಾಣ ಹಾಗೂ ದೇವಲ ಗಾಣಗಾಪುರ ಬಸ್ ನಿಲ್ದಾಣ.
ಜೂನ್ 6ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
*****************************************************
ಕಲಬುರಗಿ,ಜೂನ್.03.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ವಾರ ಮತ್ತು ದಿನಾಂಕಗಳಂದು ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ತಿಳಿಸಿದ್ದಾರೆ. ತಾಲೂಕು ಆಸ್ಪತ್ರೆÉಗಳಲ್ಲಿ ಜರುಗುವ ಶಿಬಿರದ ದಿನಾಂಕ, ವಾರ ಹಾಗೂ ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ.
ಮೊದಲನೇ ಮಂಗಳವಾರ: ಜೂನ್ 6ರಂದು ಆಳಂದÀ ತಾಲೂಕು ಆಸ್ಪತ್ರೆ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವೃದ್ಯ ಡಾ|| ಚಂದ್ರಶೇಖರ ಹೂಡೇದ್. ಎರಡನೇ ಶುಕ್ರವಾರ: ಜೂನ್ 9ರಂದು ಅಫಜಲಪುರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ|| ವಿಜಯೇಂದ್ರ. ಎರಡನೇ ಮಂಗಳವಾರ: ಜೂನ್ 13ರಂದು ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ|| ವಿಜಯೇಂದ್ರ. ಮೂರನೇ ಶುಕ್ರವಾರ: ಜೂನ್ 16ರಂದು ಜೇವರ್ಗಿ ತಾಲೂಕು ಆಸ್ಪತ್ರೆ-ಕೆ.ಬಿ.ಎನ್. ಆಸ್ಪತ್ರೆಯ ಮನೋವೃದ್ಯ ಡಾ|| ಅಮೋಲ್ ಪತಂಗೆ. ಮೂರನೇ ಮಂಗಳವಾರ: ಜೂನ್ 20ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ-ಇ.ಎಸ್.ಐ.ಸಿ. ಆಸ್ಪತ್ರೆಯ ಮನೋವೃದ್ಯ ಡಾ|| ಇರಫಾನ್. ನಾಲ್ಕನೇ ಮಂಗಳವಾರ: ಜೂನ್ 27ರಂದು ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೃದ್ಯ ಡಾ. ಅಜಯ ಢಗೆ ಭೇಟಿ ನೀಡುವರು.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಹಳ ಮಂಕಾಗಿರುವ, ಯಾರ ಜೊತೆಗೂ ಸೇರದಿರುವ, ಬೇರೆಯವರಿಗೆ ಕಾಣಿಸದ ದೃಶ್ಯ ತಮಗೆ ಕಾಣಿಸುತ್ತದೆ ಹಾಗೂ ಕೇಳಿಸದ ಧ್ವನಿ ತನಗೆ ಕೇಳಿಸುತ್ತದೆ ಎನ್ನುವ, ಎಲ್ಲರ ಬಗ್ಗೆ ಸಂಶಯ ಪಡುವ, ಆತ್ಮಹತ್ಯೆ ಬಗ್ಗೆ ಆಲೋಚಿಸುವ, ಮೂರ್ಛೆರೋಗ, ಬುದ್ಧಿಮಾಂದ್ಯರು ಮುಂತಾದ ಮಾನಸಿಕ ತೊಂದರೆ ಅಥವಾ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಆಳಂದ: ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಜೂನ್.03.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆಳಂದ ತಾಲೂಕಿನ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ/ನಂತರ ಬಾಲಕ ಬಾಲಕಿಯರ ವಸತಿ ನಿಲಯಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ನಂತರ ವಸತಿ ನಿಲಯ ಪ್ರವೇಶಕ್ಕಾಗಿ ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಬಿ.ಎ., ಬಿ.ಕಾಂ. ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಸತಿ ನಿಲಯದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಫಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಸ್ಥಾನ ಮತ್ತು ಉಳಿದ ಶೇ. 25ರಷ್ಟು ಪ.ಜಾ. ಮತ್ತು ಪ.ಪಂ. ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.
ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಆಳಂದ ಅಹ್ಮದ್ ಮಂಜಿಲ್ ರಜ್ವಿ ರೋಡ, ಚುಲಬುಲ್ ಕಾಂಪ್ಲೆಕ್ಸ್‍ನಲ್ಲಿರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಹಾಗೂ ಮೊಬೈಲ್ ಸಂಖ್ಯೆ 9620794285 ಅಥವಾ ಆಯಾ ವಸತಿ ನಿಲಯದ ನಿಲಯ ಪಾಲಕರಿಂದ ಪಡೆದು ಭರ್ತಿ ಮಾಡಿ ಜೂನ್ 18ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಳಂದ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ವಸತಿ ನಿಲಯಗಳ ವಿವರ ಇಂತಿದೆ. ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯ ಹಡಲಗಿ, ಬಾಲಕಿಯರ ನಂತರ ವಸತಿ ನಿಲಯ ಆಳಂದ ವಾರ್ಡ ನಂ.12. ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ಆಳಂದ ವಾರ್ಡ ನಂ.12 (ಹಳೆಯದು). ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ಆಳಂದ ವಾರ್ಡ ನಂ.12 (ಹೊಸ).
ಜೂನ್ 5ರಂದು ಸ್ಥಾಯಿ ಸಮಿತಿಗಳ ಚುನಾವಣೆ
*********************************************
ಕಲಬುರಗಿ,ಜೂನ್.03.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸುವ ಸಾಮಾನ್ಯ ಸಭೆಯನ್ನು 2017ರ ಜೂನ್ 5ರಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್)ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣೆಯ ಅಧ್ಯಕ್ಷಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ತೆರಿಗೆ ಹಣಕಾಸು ಮತ್ತು ಮೇಲ್ಮನವಿಗಳ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಈಗಾಗಲೇ ಚುನಾವಣೆ ನಡೆಸಲಾಗಿದೆ. ಉಳಿದ ಎರಡು ಸ್ಥಾಯಿ ಸಮಿತಿಗಳಾದ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದೂಡಲಾಗಿತ್ತು. ಈ ಎರಡೂ ಸಮಿತಿಗಳಿಗೆ ಚುನಾವಣೆ ನಡೆಸುವುದು ಅವಶ್ಯವಾಗಿದ್ದರಿಂದ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸುವ ಸಾಮಾನ್ಯ ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ನಿಗದಿತ ಸಮಯಕ್ಕೆ ಹಾಜರಿರಬೇಕೆಂದು ಪ್ರಾದೇಶಿಕ ಆಯುಕ್ತರು ಕೋರಿದ್ದಾರೆ.
ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ
***********************************************************
ಕಲಬುರಗಿ,ಜೂನ್.03.(ಕ.ವಾ.)-ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕೆಂದು ತಹಶೀಲ್ದಾರ ದಯಾನಂದ ಪಾಟೀಲ ತಿಳಿಸಿದರು.
ಅವರು ಶುಕ್ರವಾರ ಚಿಂಚೋಳಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಸರ್ವ ಸದಸ್ಯರ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀನ್ ಹೆನ್ರಿ ಡ್ಯೂನಾಂಟ್, ಮದರ್ ತೆರೆಸಾ, ದಶರಥ ಮಾಂಝಿ, ಸಾಲುಮರದ ತಿಮ್ಮಕ್ಕ ಮುಂತಾದವರು ತಮ್ಮ ಸಾಮಾಜಿಕ ಸೇವೆಯಿಂದಲೇ ಅಪಾರ ಖ್ಯಾತಿ ಗಳಿಸಿದ್ದಾರೆ. ಚಿಂಚೋಳಿ ತಾಲೂಕಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರ ಸಂಖ್ಯೆಯನ್ನು ಕನಿಷ್ಠ 500ಕ್ಕೆ ಹೆಚ್ಚಿಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜನಾರ್ಧನÀರೆಡ್ಡಿ ಮಾಲಿಪಾಟೀಲ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಲು ಪ್ರೋತ್ಸಾಹಿಸುವುದಾಗಿ ತಿಳಿಸಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಶಾಬಾದಿ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಘಟಕ ಈಗ ಆಸ್ತಿತ್ವಕ್ಕೆ ಬಂದಿರುವುದಕ್ಕೆ ತುಂಬಾ ಸಂತಸವಾಗಿದೆ. ಕಲಬುರಗಿ ಜಿಲ್ಲಾ ಘಟಕಕ್ಕೆ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ ಅವರು ತಮ್ಮ ಒಂದು ತಿಂಗಳ ಸಂಬಳವನ್ನು ನೀಡಿದ್ದಾರೆ. ಸರ್ಕಾರದಿಂದ ಆಯೋಜಿಸಲಾಗುವ ಸಮಾರಂಭಗಳನ್ನು ಹೂಹಾರ ಮುಕ್ತವಾಗಿ ನಡೆಸಿ ಹೂಹಾರಗಳಿಗಾಗಿ ವೆಚ್ಚವಾಗುವ ಹಣವನ್ನು ರೆಡ್ ಕ್ರಾಸ್ ಸಂಸ್ಥೆಗೆ ನೀಡುತ್ತಿರುವ ಕಲಬುರಗಿ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಮಾದರಿಯಾಗಿದೆ. ಇದನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ತಾಲೂಕು ಘಟಕದ ಸಭಾಪತಿಯಾಗಿ ಜಗನ್ನಾಥ ಶೇರಿಕಾರ, ಉಪಸಭಾಪತಿಯಾಗಿ ನಂದಕುಮಾರ ನಾಯನೂರು, ಕಾರ್ಯದರ್ಶಿಯಾಗಿ ರೇವಣಸಿದ್ದಯ್ಯ ನರನಾಳ್, ಖಜಾಂಚಿಯಾಗಿ ನಾಗೇಶ ಭದ್ರಶೆಟ್ಟಿ, ಸದಸ್ಯರುಗಳನ್ನಾಗಿ ಜಯಪ್ಪ ಚಾಪಲ್, ಶ್ರೀಶೈಲ್ ನಾಗಾವಿ, ನಿಜಲಿಂಗ ಪಾಟೀಲ, ಬಾಲಾಜಿ ಪಾಟೀಲ, ಶಿವಕುಮಾರ ಪಲ್ಲೇದ್, ದೇವಾನಂದ ಸಾವಳಗಿ ಅವರನ್ನು ಆಯ್ಕೆ ಮಾಡಲಾಯಿತು.
ಚಿಂಚೋಳಿಯಲ್ಲಿ ಶುಕ್ರವಾರ ನಡೆದ ರೆಡ್ ಕ್ರಾಸ್ ಸಂಸ್ಥೆಯ ಸರ್ವ ಸದಸ್ಯರ ಪ್ರಥಮ ಸಭೆಯಲ್ಲಿ ತಹಶೀಲ್ದಾರ್ ದಯಾನಂದ ಪಾಟೀಲ ಅವರು ದಾಖಲೆ ಪತ್ರಗಳನ್ನು ಹಸ್ತಾಂತರಿಸುವ ಮೂಲಕ ನೂತನ ಪದಾಧಿಕಾರಿಗಳಿಗೆ ಅಧಿಕಾರ ವಹಿಸಿಕೊಟ್ಟರು. ನಾಗೇಶ ಭದ್ರಶೆಟ್ಟಿ ಸ್ವಾಗತಿಸಿದರು. ನಂದಕುಮಾರ ನಾಯನೂರು ನಿರೂಪಿಸಿದರು. ಶಿವಪ್ರಸಾದ ವಂದಿಸಿದರು.
ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
********************************************************
ಕಲಬುರಗಿ,ಜೂನ್.03.(ಕ.ವಾ.)-ಸರ್ಕಾರದ ವಿವಿಧ ಇಲಾಖೆಗಳ ಗ್ರೂಪ್ “ಸಿ” ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯು 2017ರ ಜೂನ್ 4ರಂದು ಬೆಳಗಿನ 10 ರಿಂದ 11.30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ನಗರದ ಒಟ್ಟು 53 ಪರೀಕ್ಷಾ ಉಪ ಕೇಂದ್ರಗಳಲ್ಲಿ ನಡೆಯಲಿದೆ.
ಈ ಪರೀಕ್ಷೆಗಳಲ್ಲಿ ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶÀ ವ್ಯಾಪ್ತಿಯಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಶಾಂತಿ ಭಂಗವನ್ನುಂಟು ಮಾಡುವ ಮೆರವಣಿಗೆ/ಧರಣಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಆಸ್ಪದ ಇರುವುದಿಲ್ಲ ಹಾಗೂ ಜಿರಾಕ್ಸ್/ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಕಲಬುರಗಿ ತಹಸೀಲ್ದಾರ್ ಅಶೋಕ ಹಿರೋಳ್ಳೆ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಸೂಚಿಸಿದ್ದಾರೆ.
ಶಾಲಾ ಕಾಲೇಜು ಕೆಲಸದ ಅವಧಿ ವಿಸ್ತರಣೆಗೆ ಮನವಿ
***************************************************
ಕಲಬುರಗಿ,ಜೂ.03.(ಕ.ವಾ.)-ಕಲಬುರಗಿ ನಗರದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಗರಿಷ್ಠ ಮಟ್ಟದಲ್ಲಿ ಏರುತ್ತಿದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಉರಿ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದು, ಸನ್‍ಸ್ಟೊಕ್ ತಗಲುವ ಸಾಧ್ಯತೆಗಳು ಇವೆ. ಮಹಾನಗರ ಪಾಲಿಕೆಯ ಮೇಯರ್ ಶರಣಕುಮಾರ ಮೋದಿ ನಗರದ ಕೆಲ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ಶಾಲಾ ಕಾಲೇಜಿನ ಪ್ರಾಧಿಕಾರದವರು ಮತ್ತು ವಿದ್ಯಾರ್ಥಿಗಳ ಪಾಲಕರು ತಮಗೆ ಮನವಿ ಸಲ್ಲಿಸಿ, ಶಾಲಾ ಕಾಲೇಜುಗಳ ಕೆಲಸದ ಅವಧಿಯನ್ನು ಒಂದು ವಾರದ ಮಟ್ಟಿಗೆ ಮುಂದೂಡಬೇಕೆಂದು ವಿನಂತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೇಯರ್ ಶರಣುಕುಮಾರ ಮೋದಿ ಕಲಬುರಗಿ ನಗರದಲ್ಲಿರುವ ಎಲ್ಲ ಶಾಲಾ ಕಾಲೇಜುಗಳ ಕೆಲಸದ ಅವಧಿಯನ್ನು ಒಂದು ವಾರ ಮುಂದೂಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪೂರ್ವಭಾವಿ ಸಿದ್ಧತೆಗೆ ಮನವಿ
*****************************************************************
ಕಲಬುರಗಿ,ಜೂನ್.03.(ಕ.ವಾ.)-ಸೇಡಂ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2017-18ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ತಾಲೂಕಿನ ಎಲ್ಲಾ ಪ್ರಾಥಮಿಕ/ ಹಿರಿಯ ಪ್ರಾಥಮಿಕ/ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳ ಪೋಷಕರು ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೇಡಂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ಸೇಡಂ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ 2017-18ನೇ ಸಾಲಿನ ಮೆಟ್ರಿಕ ಪೂರ್ವ ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ಮೂಲಕ ನೀಡಲಾಗುತ್ತಿರುವ ಪ್ರಯುಕ್ತ ಹಿಂದುಳಿದ ವರ್ಗಗಳ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ 1 ರೂ. ಲಕ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 44500 ರೂ.ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ಮೂಲಕ ಜಮಾ ಮಾಡಲಾಗುವುದು.
ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕುಗಳಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಬ್ಯಾಂಕಿನ ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆ ಮತ್ತು ಖಾತೆ ಸಂಖ್ಯೆ ಇರುವ, ಪಾಸ್ ಪುಸ್ತಕದ ಮೊದಲ ಪುಟದ ಸ್ಪಷ್ಟ ಜಿರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿಯ ಜಾತಿ ಆದಾಯ ಪ್ರಮಾಣಪತ್ರದ ಜಿರಾಕ್ಸ್ ಪ್ರತಿಗಳನ್ನು ಶಾಲೆಗೆ ಪ್ರವೇಶ ಹೊಂದುವ ಸಮಯದಲ್ಲಿಯೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡತಕ್ಕದ್ದು. ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಹೊಸ/ನವೀಕರಣ ನಮೂನೆಯಲ್ಲಿ ಸದರಿ ವಿವರಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಂದ ಪಡೆದ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ್ ಜಿರಾಕ್ಸ್ಸ್ ಪ್ರತಿ ಹಾಗೂ ತಮ್ಮ ಹೆಸರಿನ/ಶಾಲೆಯ ಹೆಸರಿನಲ್ಲಿ ತೆಗೆದ ಇ-ಮೇಲ್ ವಿಳಾಸದ ದಾಖಲಾತಿಗಳೊಂದಿಗೆ ಜೂನ್ 30ರೊಳಗೆ ಸೇಡಂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಆದ್ದರಿಂದ ಎಲ್ಲಾ ಪೋಷಕರು ಮೇಲ್ಕಂಡ ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಂಡು, ದಾಖಲಾತಿಯ ಸಮಯದಲ್ಲಿ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡುವಂತೆ ತಿಳಿಸಲಾಗಿದೆ. ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರೂ ಸಹ ಅರ್ಹ ವಿದ್ಯಾರ್ಥಿಗಳ ಪೋಷಕರಿಗೆ ಈ ಸಂಬಂಧ ತಿಳುವಳಿಕೆ ನೀಡುವ ಕ್ರಮ ಕೈಗೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸೇಡಂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ಎಂ. ನಾರಾಯಣಕರ ಮೊಬೈಲ್ ಸಂಖ್ಯೆ 9535834576,9741143820ಗಳನ್ನು ಸಂಪರ್ಕಿಸಲು ಕೋರಿದೆ.
ಜೇವರ್ಗಿ: ಹಾಸ್ಟೆಲ್ ಪ್ರವೇಶಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ
**********************************************************
ಕಲಬುರಗಿ,ಜೂನ್.03.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಜೇವರ್ಗಿ ತಾಲೂಕಿನಲ್ಲಿ ನಡೆಸಲಾಗುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ಹಾಸ್ಟೆಲ್‍ಗಳಲ್ಲಿ ಹೊಸದಾಗಿ ಪ್ರವೇಶ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಇಲಾಖೆಯ ತಿತಿತಿ.sತಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟಿನಲ್ಲಿ ಅರ್ಜಿ ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ಅರ್ಜಿ ಪಡೆದು ಆಯ್ಕೆ ಪ್ರಕ್ರಿಯೆ ಜರುಗಿಸಲು ಆದೇಶ ನೀಡಿದ್ದರಿಂದ ದಿನಾಂಕ: 25-05-2017ರಂದು ನೀಡಿದ ಪತ್ರಿಕಾ ಪ್ರಕಟಣೆಯನ್ನು ಹಿಂಪಡೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜೇವರ್ಗಿ ಮಿನಿ ವಿಧಾನಸೌಧದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯವನ್ನು ಹಾಗೂ ದೂರವಾಣಿ ಸಂಖ್ಯೆ 08442-236661ನ್ನು ಸಂಪರ್ಕಿಸಲು ಕೋರಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅಧಿಕಾರ ಸ್ವೀಕಾರ
********************************************************
ಕಲಬುರಗಿ,ಜೂ.03.(ಕ.ವಾ.)-ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹುದ್ದೆ ಕಾರ್ಯಾಭಾರವನ್ನು ಇಲಿಯಾಸ್ ಅಹ್ಮದ್ ಇಸಾಮದಿ ಅವರು ಜೂನ್ 2ರಂದು ವಹಿಸಿಕೊಂಡಿರುತ್ತಾರೆ.
ಅವರ ವೈಯಕ್ತಿಕ ಗಮನಕ್ಕೆ ತರಬಯಸುವ ಎಲ್ಲ ಪತ್ರಗಳು, ಅರೆ ಸರ್ಕಾರಿ ಪತ್ರಗಳು, ಗೌಪ್ಯ ಪತ್ರಗಳು ಮತ್ತು ಮುಖ್ಯವಾದ ಪತ್ರಗಳನ್ನು ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಸ್ಟೇಶನ್ ರೋಡ, ಕಲಬುರಗಿ ಕಚೇರಿಗೆ ಕಳುಹಿಸಲು ಹಾಗೂ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08472-278672 ಹಾಗೂ ಮೊಬೈಲ್ ಸಂಖ್ಯೆ 9342430467ನ್ನು ಸಂಪರ್ಕಿಸಲು ಕೋರಿದೆ.
ವಿಶ್ವ ಪರಿಸರ ದಿನಾಚರಣೆಯಂದು ಸಸಿ ನೆಡುವ ಕಾರ್ಯಕ್ರಮ
********************************************************
ಕಲಬುರಗಿ,ಜೂ.03.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಅರಣ್ಯ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಜೂನ್ 5ರಂದು ಬೆಳಗಿನ 10.15 ಗಂಟೆಗೆ ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವಿ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಕಲಬುರಗಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಿಬ್ಬಂದಿಗಾಗಿ ಟೆಂಡರ್ ಅರ್ಜಿ ಆಹ್ವಾನ
ಕಲಬುರಗಿ,ಜೂ.03.(ಕ.ವಾ.)-ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ಸಲಹೆ ನೀಡಲು ಬಾಹ್ಯ ಮೂಲ ಸಂಸ್ಥೆಗಳಿಂದ ಸಿಬ್ಬಂದಿ ಪಡೆಯಲು ಮ್ಯಾನ್ ಪವರ್ ಏಜೆನ್ಸಿಯವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿದೆ. ಅರ್ಜಿ ನಮೂನೆಯನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರ್ಯಾಲಯದಲ್ಲಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಯೋಗೇಂದ್ರ ದೇಸಾಯಿ ಅವರಿಗೆ ಆತ್ಮೀಯ ಬೀಳ್ಕೊಡುಗೆ
*****************************************************
ಕಲಬುರಗಿ,ಜೂ.03.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ 30 ವರ್ಷಗಳ ಕಾರ್ಯನಿರ್ವಹಿಸಿ ಸೇವಾ ನಿವೃತ್ತಿ ಹೊಂದಿರುವ ಬೆರಳಚ್ಚುಗಾರರಾದ ಯೋಗೇಂದ್ರ ವಿ. ದೇಸಾಯಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಏರ್ಪಡಿಸಿದ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮಾತನಾಡಿ, ನಿವೃತ್ತಿ ಹೊಂದಿದ ಯೋಗೇಂದ್ರ ವಿ. ದೇಸಾಯಿ ಅವರು ಎಲ್ಲರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುವುದರೊಂದಿಗೆ ಕರ್ತವ್ಯದಲ್ಲಿ ಯಾವುದೇ ತಾರತಮ್ಯ ತೊರದೇ ಇಲಾಖೆಯ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ನಿಷ್ಠಾವಂತ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ಬಳಿಕ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವುದರೊಂದಿಗೆ ನಿವೃತ್ತ ಜೀವನ ನೆಮ್ಮದಿ ಮತ್ತು ಸುಖಕರವಾಗಲಿ ಎಂದು ಹಾರೈಸಿದರು.
ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಜಿ.ಬಂಡೆಪ್ಪ, ಜೆ.ಎಸ್. ಕ್ಷೀರಸಾಗರ, ಹಾಲಿ ಸಹಾಯಕ ನಿರ್ದೇಶಕರುಗಳಾದ ಆರ್.ಜಿ. ನಾಡಗೇರ್, ಅಮೃತ ಜಿ. ಅಷ್ಟಗಿ, ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತರಬೇತುದಾರರು, ಸಿಬ್ಬಂದಿಗಳು, ಮಾರ್ಕರುಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಜೂನ್ 5ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
************************************************
ಕಲಬುರಗಿ,ಜೂ.03.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ರಾಮಮಂದಿರ ಹಾಗೂ 11ಕೆ.ವಿ. ಹೌಸಿಂಗ್ ಬೋರ್ಡ್ ಫೀಡರುಗಳ ವ್ಯಾಪ್ತಿಯ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಜೂನ್ 5ರಂದು ಬೆಳಗಿನ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11ಕೆ.ವಿ.ರಾಮಮಂದಿರ: ಸಿ.ಬಿ.ಐ.ಕಾಲೋನಿ, ಸದಾಶಿವನಗರ, ನವಜೀವನ ಸೊಸೈಟಿ, ಕಲ್ಮಣಕರ್ ಲೇಔಟ್, ರಾಮಮಂದಿರ, ಕರುಣೇಶ್ವರ ನಗರ, ನವಣಿ ಲೇಔಟ್, ಸಂಗಮೇಶ್ವರ ಲೇಔಟ್, ದೇವಾನಗರ, ಓಜಾ ಕಾಲೋನಿ, ವಿವೇಕಾನಂದ ಕಾಲೋನಿ, ಲಕ್ಷ್ಮೀನಾರಾಯಣ ಲೇಔಟ್, ಶಿವಶಕ್ತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಹೀಗಾಗಿ ಲೇಖನಗಳು NEWS AND PHOTO DATE: 03--06--2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 03--06--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 03--06--2017 ಲಿಂಕ್ ವಿಳಾಸ https://dekalungi.blogspot.com/2017/06/news-and-photo-date-03-06-2017.html
0 Response to "NEWS AND PHOTO DATE: 03--06--2017"
ಕಾಮೆಂಟ್ ಪೋಸ್ಟ್ ಮಾಡಿ