ಶೀರ್ಷಿಕೆ : ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ
ಲಿಂಕ್ : ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ
ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ
ಕೊಪ್ಪಳ ಜೂ. 16 (ಕರ್ನಾಟಕ ವಾರ್ತೆ): ಮಳೆಗಾಲ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಲೇರಿಯಾ ವಿರೋಧಿ ಮಾಸಾಚರಣೆ ನಿಮಿತ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗ ಪ್ರಕರಣಗಳು ಸಾಮಾನ್ಯವಾಗಿ ಕುಷ್ಟಗಿ ತಾಲೂಕಿನಲ್ಲಿ ಅತಿ ಹೆಚ್ಚು ವರದಿಯಾಗುತ್ತವೆ. ಇದಕ್ಕೆ ಕುಷ್ಟಗಿ ತಾಲೂಕಿನಲ್ಲಿನ ಕಲ್ಲು ಗಣಿಗಾರಿಕೆಯ ಕ್ವಾರಿಗಳು ಪ್ರಮುಖ ಕಾರಣವಾಗಿವೆ. ಕ್ವಾರಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಾಟ್ಟು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಆ ಕ್ವಾರಿಗಳ ಸಮೀಪವಿರುವ ಹಳ್ಳಿಗಳ ಜನರು ಸೊಳ್ಳೆಗಳಿಂದ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಎಲ್ಲಾ ಕ್ವಾರಿಗಳಲ್ಲಿ ಸೊಳ್ಳೆಗಳ ಹಾಗೂ ಲಾರ್ವಾಗಳ ನಾಶಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳಿಂದ/ಬೇರೆ ಜಿಲ್ಲೆಗಳಿಂದ ಕ್ವಾರಿಗಳಿಗೆ ಕೆಲಸಕ್ಕೆ ಬರುವ ವಲಸೆ ಕಾರ್ಮಿಕರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಿ ರೋಗಗಳ ನಿಯಂತ್ರಣದಲ್ಲಿ ಕ್ವಾರಿ ಮಾಲೀಕರುಗಳು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ಕ್ವಾರಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸೊಳ್ಳೆ ಪರದೆಗಳನ್ನು ಒದಗಿಸುವಂತಾಗಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವುದು. ಕೆಲಸ ನಿರ್ವಹಿಸದೇ ಸ್ಥಗಿತಗೊಂಡಿರುವ ಹಾಗೂ ಅನಧಿಕೃತ ಕ್ವಾರಿಗನ್ನು ಮುಚ್ಚಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ನೀರಿನ ನಳ, ಬೋರ್ವೆಲ್ & ಬಾವಿಗಳ ಸುತ್ತಮುತ್ತ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ, ಗ್ರಾಮಗಳಲ್ಲಿ ಗುಂಡಿಗಳನ್ನು, ತಗ್ಗುಗಳನ್ನು ಹಾಗೂ ನಿರುಪಯುಕ್ತ ಬಾವಿಗಳನ್ನು ಮುಚ್ಚಿಸಬೇಕು. ಇದರಿಂದ ನೀರು ಸಂಗ್ರಹವಾಗದಂತೆ ತಡೆಗಟ್ಟಬಹುದಾಗಿದೆ. ನಗರ/ಪಟ್ಟಣ ಪ್ರದೇಶಗಳ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸುವ ಸಲುವಾಗಿ ಈಗಿರುವ ನಾಗರೀಕ ಬೈ-ಲಾ (Civic Bye Law) ಮತ್ತು ಕಟ್ಟಡ ಬೈ-ಲಾಗಳನ್ನು ಕಟ್ಟುನಿಟ್ಟಾಗಿ ಅನುಸ್ಟಾನಗೊಳಿಸಬೇಕು. ಅನುಪಯುಕ್ತ ಮತ್ತು ಘನತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮಾಡಬೇಕು. ಸೂಕ್ತ ಒಳಚರಂಡಿ ವ್ಯವಸ್ಥೆ, ನಗರದ ಸ್ವಚ್ಚತೆ ಕಾಪಾಡುವುದು. ನಗರಗಳಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವ ಕಾರ್ಯವನ್ನು ನಗರಸಭೆ, ಪುರಸಭೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜೈವಿಕ ನಿಯಂತ್ರಣ :
********** ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವಲ್ಲಿ ಜೈವಿಕ ವಿಧಾನದಲ್ಲಿ ಉಪಯೋಗಿಸುವ ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬೂಸಿಯ ಮೀನುಗಳನ್ನು ಮೀನುಗಾರಿಕೆ ಇಲಾಖೆಯವರು, ಬೆಳೆಸಿ ಜಿಲ್ಲೆಯಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳುವುದು ಸೂಕ್ತವಾಗಿದೆ. ಸೊಳ್ಳೆ ನಿಯಂತ್ರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಅಗತ್ಯಬಿದ್ದಾಗ ಮೀನುಗಳನ್ನು ಸೂಕ್ತ ಸಮಯದಲ್ಲಿ ಉಚಿತವಾಗಿ ಒದಗಿಸುವಂತಾಗಬೇಕು. ಈ ಮೀನುಗಳು ಸೊಳ್ಳೆಗಳ ಲಾರ್ವವನ್ನು ತಿನ್ನುವುದರಿಂದ, ಸೊಳ್ಳೆಗಳ ಸಂತತಿ ಹರಡುವುದನ್ನು ಈ ಮೂಲಕ ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.
ಮಕ್ಕಳಲ್ಲಿ ಜಾಗೃತಿ ಮೂಡಿಸಿ :
************ ಸೊಳ್ಳೆಗಳಿಂದ ಹರಡುವ ರೋಗಗಳು, ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಶಾಲೆ ಮತ್ತು ಮನೆಗಳ ಸುತ್ತ ಸ್ವಚ್ಚತೆ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಶಾಲಾ ಮಕ್ಕಳಲ್ಲಿ ಶಿಕ್ಷಕರು ಜಾಗೃತಿ ಮೂಡಿಸುವಂತಾಗಬೇಕು. ಈ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಆರೋಗ್ಯ ಶಿಕ್ಷಣ ನೀಡುವ ಕಾರ್ಯವನ್ನು ಶಿಕ್ಷಣ ಇಲಾಖೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ವಿರುಪಾಕ್ಷರೆಡ್ಡಿ ಮಾದಿನೂರ ರವರು ದೇಶದಾದ್ಯಂತ 2030 ರೊಳಗಾಗಿ ಮಲೇರಿಯಾ ರೋಗವನ್ನು ಸಂಪೂರ್ಣ ನಿವಾರಣೆಗೊಳಿಸಲು ಗುರಿ ನಿಗದಿಪಡಿಸಿ ರಾಷ್ಟ್ರೀಯ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಲಾಗಿದೆ. ಅದರಂತೆ ಕರ್ನಾಟಕ ಸರಕಾರವು ಕೂಡ ರಾಜ್ಯದಲ್ಲಿ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಿದ್ದು, ಅದರನ್ವಯ ರಾಜ್ಯದಲ್ಲಿ 2025 ರ ವೇಳೆಗೆ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ನಿಗದಿಪಡಿಸಿದೆ ಎಂದರು.
ಜಿಲ್ಲಾ ವಿ.ಬಿ.ಡಿ ಸಲಹೆಗಾರ ರಮೇಶ್. ಕೆ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ 2005 ರಲ್ಲಿ ಹೆಚ್ಚು 6634 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು 2016 ರಲ್ಲಿ 382 ಪ್ರಕರಣಗಳು ವರದಿಯಾಗಿವೆ. 2016 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿರುವ 382 ಪ್ರಕರಣಗಳಲ್ಲಿ 271 ಪ್ರಕರಣಗಳು ಕುಷ್ಟಗಿ ತಾಲೂಕಿನಿಂದ, 49 ಪ್ರಕರಣಗಳು ಯಲಬುರ್ಗಾ, 46 ಪ್ರಕರಣಗಳು ಗಂಗಾವತಿ ಹಾಗೂ 16 ಪ್ರಕರಣಗಳು ಕೊಪ್ಪಳ ತಾಲೂಕಿನಲ್ಲಿ ವರದಿಯಾಗಿವೆ. ಕುಷ್ಟಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳ ವರದಿಯಾಗಲು ಹೂಲಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಹೆಚ್ಚಿನ ಗ್ರಾನೈಟ್ ಕ್ವಾರಿಗಳು ಹಾಗೂ ವಲಸೆ ಕಾರ್ಮಿಕರೇ ಕಾರಣ. ಜಿಲ್ಲೆಯಲ್ಲಿ 2005 ರಿಂದ 2016 ರವರೆಗೆ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಅದರಲ್ಲಿ ಜಿಲ್ಲಾಡಳಿತದ ಸಹಕಾರ ಹಾಗೂ ಆರೋಗ್ಯ ಇಲಾಖೆಯ ಪರಿಶ್ರಮ ಕಾರಣವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಕೊಪ್ಪಳ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಶೀಘ್ರ ರೋಗಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆ ತತ್ವದ ಆಧಾರದ ಮೇಲೆ 24 ತಾಸುಗಳೊಳಗೆ ರೋಗಪತ್ತೆ ಮಾಡಿ ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ಉಪಕೇಂದ್ರ ಮತ್ತು ಹಳ್ಳಿಗಳಲ್ಲಿ ಪುರುಷ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತರಿಂದ ಹಾಗೂ ಆಶಾಗಳಿಂದ ಮಲೇರಿಯಾ ಸರ್ವೇಕ್ಷಣೆ ನಡೆಸಲಾಗುತ್ತಿದೆ. ಆಶಾಗಳಿಗೆ ಶೀಘ್ರರೋಗ ಪತ್ತೆ ಸಾಧನಗಳನ್ನು ನೀಡಲಾಗಿದೆ. ಮಲೇರಿಯಾ ಸಮಸ್ಯಾತ್ಮಕ ಹಳ್ಳಿಗಳಲ್ಲಿ ವರ್ಷಕ್ಕೆರಡು ಬಾರಿ ಒಳಾಂಗಣ ಕೀಟನಾಶಕ ಸಿಂಪರಣೆಯನ್ನು ಮಾಡಲಾಗುತ್ತಿದೆ. ಹಾಗೂ ಆಯ್ದ ಸಮಸ್ಯಾತ್ಮಕ ಹಳ್ಳಿಗಳಿಗೆ ಧೀರ್ಘಬಾಳಿಕೆಯ ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ನೀಡಲಾಗುತ್ತಿದೆ ಮತ್ತು ಮಲೇರಿಯಾ ಸಮಸ್ಯಾತ್ಮಕ ಗ್ರಾಮಪಂಚಾಯತ್ಗಳಲ್ಲಿ ಜನಜಾಗೃತಿ ಸಭೆಗಳನ್ನು ಏರ್ಪಡಿಸಿ ಜನಪ್ರತಿನಿಧಿಗಳಿಗೆ ಹಾಗೂ ಜನಸಮುದಾಯಕ್ಕೆ ಅರಿವು ಮೂಡಿಸಲಾಗುತ್ತಿದೆ. ಆಯ್ದ ಸಮಸ್ಯಾತ್ಮಕ ಪ್ರದೇಶಗಳ ಶಾಲಾ ಕಾಲೇಜುಗಳಲ್ಲಿ ಮಲೇರಿಯಾ ಹರಡುವಿಕೆ ಹಾಗೂ ತಡೆಗಟ್ಟುವಿಕೆಯ ಬಗ್ಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ದೆ, ಕ್ವಿಜ್ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ರಾಮಾಂಜನೇಯ, ಡಾ. ಆನಂದ ಗೋಟೂರು, ಡಾ. ಗೌರಿಶಂಕರ, ಸಹಾಯಕ ಎಂಟೋಮಾಜಿಸ್ಟ್ ಎಲ್. ಹಿರೇಗೌಡರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/06/blog-post_93.html
0 Response to "ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ