ಶೀರ್ಷಿಕೆ : news and photo Date: 27--05--2017
ಲಿಂಕ್ : news and photo Date: 27--05--2017
news and photo Date: 27--05--2017
ರೆಡ್ಕ್ರಾಸ್ ಸಂಸ್ಥೆಯ ಸದಸ್ಯತ್ವ ಹೆಚ್ಚಳ ಅಗತ್ಯ
*********************************************
ಕಲಬುರಗಿ,ಮೇ.17.(ಕ.ವಾ.)-ಮಾನವೀಯತೆಯಿಂದ ಸ್ವಯಂ ಸೇವೆ ಮಾಡುತ್ತಿರುವ ರೆಡ್ಕ್ರಾಸ್ ಸಂಸ್ಥೆಯ ಸದಸ್ಯತ್ವ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಬೇಕು ಹಾಗೂ ಸಂಸ್ಥೆಯಿಂದ ಪರಿಣಾಮಕಾರಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಶಿಷ್ಟಾಚಾರ ತಹಸೀಲ್ದಾರ ಪ್ರಕಾಶ ಚಿಂಚೋಳಿಕರ ಹೇಳಿದರು.
ಅವರು ಬುಧವಾರ ಕಲಬುರಗಿ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಿಶ್ವ ರೆಡ್ಕ್ರಾಸ್ ದಿನಾಚರಣೆ-2017ನ್ನು ಉದ್ಘಾಟಿಸಿ ಮಾತನಾಡಿದರು.
ರೆಡ್ಕ್ರಾಸ್ ಸಂಸ್ಥೆಗೆ ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಅನುದಾನ ಹಾಗೂ ಸಂಸ್ಥೆಯ ಕಟ್ಟಡಕ್ಕೆ ಸೂಕ್ತ ನಿವೇಶನ ಒದಗಿಸಲು ಸೂಕ್ತ ಕ್ರಮ ಜರುಗಿಸಲಾಗುವುದೆಂದರು.
ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಾರುತಿರಾವ ಡಿ. ಮಾಲೆ ಮಾತನಾಡಿ, ರೆಡ್ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಮಹತ್ತರ ಜವಾಬ್ದಾರಿ ಪಾಲಿಟಿಸಿಯನ್ಸ್ ಮತ್ತು ಅಕಾಡೆಮಿಶಿಯನ್ಸ್ಗಳ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನಿತರ ಪರವಾಗಿ ಮಾತನಾಡಿದ ಡಾ|| ಎಸ್.ಎಸ್. ಗುಬ್ಬಿ ಜಿನ್ ಹೆನ್ರಿ ಡ್ಯೂನಾಂಟ್ ಸಂಸ್ಥಾಪಿಸಿದ ರೆಡ್ಕ್ರಾಸ್ ಸಂಸ್ಥೆಯ ಪ್ರಮುಖ ಧ್ಯೇಯ ಮಾನವೀಯತೆ ಇದೆ. ಸಂಸ್ಥೆಯ ಪರಿಣಾಮಕಾರಿ ಸೇವೆಗಳು ಬಡವರಿಗೆ ತಲುಪುವಂತಾಗಲು ಸ್ಥಿತಿವಂತರು ಸಹಾಯಹಸ್ತ ಚಾಚಬೇಕೆಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಉಪಸಭಾಪತಿ ಅರುಣಕುಮಾರ ಲೋಯಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕೋಶಾಧ್ಯಕ್ಷೆ ಎಂ. ಭಾಗ್ಯಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಸ್ವಾಗತಿಸಿದರು. ವಿಜಯಕುಮಾರ ತೇಗಲತಿಪ್ಪಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಡಾ|| ಎಸ್.ಎಸ್.ಗುಬ್ಬಿ, ಜಗನ್ನಾಥ ಶೇರಿಕಾರ, ನಂದಾದೇವಿ ಮುಂಗೋಡಿ, ನವರೋಜ ಇರಾನಿ, ಭೀಮರೆಡ್ಡಿ ಎಂ., ಶರಣಬಸಪ್ಪ ಅತನೂರ ಮತ್ತು ಜಸವೀರ ಸಿಂಗ್ ಅವರನ್ನು ಸನ್ಮಾನಿಸಲಾಯಿತು.
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
*********************************
ಕಲಬುರಗಿ,ಮೇ.17.(ಕ.ವಾ.)-ನಾಲ್ಕು ವರ್ಷದ ಮಗುವಿನ ಕೊಲೆ ಮಾಡಿದ ಆರೋಪ ಹೊಂದಿದ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ಅಂಕುಶ ಭೀಮಶ್ಯಾಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 1.75 ಲಕ್ಷ ರೂ. ದಂಡ ಮತ್ತು ಏಳುವರೆ ವರ್ಷದ ಕಠಿಣ ಶಿಕ್ಷೆ ವಿಧಿಸಿ ನಾಲ್ಕನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಂ. ಚನ್ನಪ್ಪನವರು ಆದೇಶ ಹೊರಡಿಸಿದ್ದಾರೆ.
ಆರೋಪಿಯು 2011ರ ಸೆಪ್ಟೆಂಬರ್ 15ರಂದು ಸಂಜೆ 4.30 ಗಂಟೆಗೆ ಬಡದಾಳ ಗ್ರಾಮದ ಶಿವಶರಣ ಈರಪ್ಪ ರುದ್ದೇವಾಡಿ ಅವರ ನಾಲ್ಕು ವರ್ಷದ ಮಗ ವೀರೇಶನನ್ನು ಅಪಹರಿಸಿ ಬಚ್ಚಿಟ್ಟು ಹಣದ ಬೇಡಿಕೆ ಇಟ್ಟಿರುತ್ತಾನೆ. ಈ ಸಂದರ್ಭದಲ್ಲಿ ಮಗು ಅಳುತ್ತಿರುವುದರಿಂದ ಮಗುವನ್ನು ಹಾಗೆಯೇ ಬಿಟ್ಟರೆ ತನ್ನ ತಂದೆ ತಾಯಿಗೆ ವಿಷಯ ತಿಳಿಸಬಹುದೆಂದು ತಿಳಿದು ಆರೋಪಿಯು ಅಂಕುಶನನ್ನು ಹೊಲದ ಬಂದಾರಿನಲ್ಲಿ ಚಾಕುವಿನಿಂದ ಕೊಲೆ ಮಾಡಿ ಶವ ಮುಚ್ಚಿ ಹಾಕಲು ಬಂದಾರಾ ಹುಲ್ಲಿನ ಪೊದೆಯಲ್ಲಿ ಎಸೆದಿರುತ್ತಾನೆ.
ಪ್ರಕರಣದ ವಿಚಾರಣೆ ನಡೆಸಿದ ನಾಲ್ಕನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸಾಕ್ಷ್ಯಾಧಾರಗಳಿಂದ ಆರೋಪಿ ಅಂಕುಶ 4 ಮಗುವಿನ ಕೊಲೆ ಅಪರಾಧ ಮಾಡಿರುವುದು ಸಾಬೀತಾಗಿದ್ದರಿಂದ ಆರೋಪಿಗೆ ಐಪಿಸಿ ಕಲಂ 302ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ, ಐಪಿಸಿ ಕಲಂ 367ರ ಅಪರಾಧಕ್ಕೆ 5 ವರ್ಷ ಕಠಿಣ ಶಿಕ್ಷೆ ಮತ್ತು 50000 ರೂ. ದಂಡ ಹಾಗೂ ಐಪಿಸಿ ಕಲಂ 201ರ ಅಪರಾಧಕ್ಕೆ ಎರಡುವರೆ ವರ್ಷಗಳ ಕಠಿಣ ಶಿಕ್ಷೆ ಮತ್ತು 25000 ರೂ. ದಂಡ ವಿಧಿಸಿ ಆದೇಶ ಮಾಡಿದ್ದಾರೆ. ಸರ್ಕಾರಿ ಅಭಿಯೋಜಕ ಬಲಭೀಮ ಮದನಸೂರೆ ಸರ್ಕಾರದ ಪರವಾಗಿ ವಾದ ಮಂಡಿಸಿದರು.
ಮೇ 20ರಿಂದ ಚಿತ್ತಾಪುರದಲ್ಲಿ ಮಕ್ಕಳ ಬೇಸಿಗೆ ಶಿಬಿರ
*************************************************
ಕಲಬುರಗಿ,ಮೇ.17.(ಕ.ವಾ.)-ಚಿತ್ತಾಪುರ ಅಡತ ಬಜಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2016-17ನೇ ಸಾಲಿನ ತಾಲೂಕು ಮಟ್ಟದ 10 ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ಮೇ 20ರಂದು ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಲಬುರಗಿ, ತಾಲೂಕು ಬಾಲಭವನ ಸೂಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಬಂಜಾರ ಯುವಕ ಸಂಘ ಚೌಕಿ ತಾಂಡಾ ಚಿತ್ತಾಪುರ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಈ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಕರಕುಶಲ, ಸಾಮೂಹಿಕ ನೃತ್ಯ, ಜಾನಪದ ಗೀತೆ, ಯೋಗ, ಕರಾಟೆ ಮುಂತಾದವುಗಳನ್ನು ಕಲಿಸಲಾಗುತ್ತದೆ. 09 ರಿಂದ 16 ವರ್ಷದೊಳಗಿನ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ತಮ್ಮ ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 08474-236393 ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಪಿ.ಆರ್. ಪಾಂಡು ಮೊಬೈಲ್ ಸಂಖ್ಯೆ 9632413176ನ್ನು ಸಂಪರ್ಕಿಸಲು ಕೋರಿದೆ.
ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
*****************************************
ಕಲಬುರಗಿ,ಮೇ.17.(ಕ.ವಾ.)-ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ 2017ರ ಮೇ 7ರಂದು ಪತ್ತೆಯಾದ ಅಂದಾಜು ಮೂರು ದಿನದ ಗಂಡು ಮಗುವನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ಸೇರ್ಪಡೆ ಮಾಡಲಾಗಿತ್ತು. ಅದರಂತೆ ಕಲಬುರಗಿ ಡಾನ್ಬಾಸ್ಕೋ ಸಂಸ್ಥೆಯವರು ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಸದರಿ ಮಗುವನ್ನು 2017ರ ಮೇ 16ರಂದು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ.
ಬಿಳಿ ಬಣ್ಣ ಹೊಂದಿರುವ ಈ ಗಂಡು ಶಿಶುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶು ಗೃಹದ ಅಧೀಕ್ಷಕ ಶ್ರೀಕಾಂತ ಮೆಂಗಜಿ ತಿಳಿಸಿದ್ದಾರೆ.
ಮೇಲ್ಕಂಡ ಗಂಡು ಶಿಶುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 60 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಗಂಡು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂ.08472-265588ನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ಮೇ 18ರಂದು ಶಾದಿಪುರ ಗ್ರಾಮದಲ್ಲಿ ರೋಜಗಾರ ದಿವಸ ಆಚರಣೆ
***************************************************************
ಕಲಬುರಗಿ,ಮೇ.17.(ಕ.ವಾ.)-ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಪಂಚಾಯಿತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಾಗೃತಿ ಮತ್ತು ರೋಜಗಾರ ದಿವಸ ಸಮಾವೇಶವನ್ನು ಮೇ 18ರಂದು ಬೆಳಗಿನ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಚಿಂಚೋಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 5000 ಕೂಲಿ ಕಾರ್ಮಿಕರು ಭಾಗವಹಿಸಲಿರುವ ಈ ಸಮಾವೇಶಕ್ಕೆ ಕಲಬುರಗಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರು ಚಾಲನೆ ನೀಡುವರು. ಜಿಲ್ಲಾಧಿಕಾರಿ ಉಜ್ವಲ್ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಚಲನಚಿತ್ರ ನಟ ಚೇತನ, ನ್ಯಾಯವಾದಿ ಆನಂತನಾಯಕ, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಕೆ. ನೀಲಾ ಹಾಗೂ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.
ಮೇ 23ರಿಂದ ರಾಜ್ಯಮಟ್ಟದ ಯುವ ಸಮ್ಮೇಳನ ಕಾರ್ಯಾಗಾರ
***********************************************************
ಕಲಬುರಗಿ,ಮೇ.17.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2015-16ನೇ ಸಾಲಿನ ರಾಜ್ಯಮಟ್ಟದ ಯುವ ಸಮ್ಮೇಳನ ಮತ್ತು ಕಾರ್ಯಾಗಾರವನ್ನು 2017ರ ಮೇ 23ರಿಂದ 25ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಮಾಳಗೆ ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿಯಾದ ಕಲಬುರಗಿ ಜಿಲ್ಲೆಯ ವಿವಿಧ ಯುವಕ/ಯುವತಿ ಮಂಡಳಿಗಳ 18ರಿಂದ 35ವರ್ಷದೊಳಗಿನ ಯುವಕ/ಯುವತಿಯರು ಹಾಗೂ ಸದಸ್ಯರು ಮಾತ್ರ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿದೆ. ಜಿಲ್ಲೆಯ ಅರ್ಹ ಯುವಕ/ಯುವತಿಯರು ಮೇ 23ರಂದು ಬೆಳಗಿನ 10 ಗಂಟೆಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕುಕ್ಕೆ ಸುಬ್ರಹ್ಮಣ್ಯ ಸಭಾಭವನದಲ್ಲಿ ವರದಿ ಮಾಡಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಮೆಟ್ರಿಕ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
**************************************************************
ಕಲಬುರಗಿ,ಮೇ.17.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಕಲಬುರಗಿ ತಾಲೂಕಿನಲ್ಲಿ ನಡೆಸಲಾಗುತ್ತಿರುವ ಕೆಳಕಂಡ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ/ಬಾಲಕಿಯರ ವಸತಿ ನಿಲಯ ಮತ್ತು ಆಶ್ರಮ ಶಾಲೆಗಳಲ್ಲಿ 2017-18ನೇ ಸಾಲಿನಲ್ಲಿ ಖಾಲಿಯಿರುವ ಸ್ಥಾನಗಳ ಪ್ರವೇಶಕ್ಕಾಗಿ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಾಗೂ ವಸತಿ ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುತ್ತದೆ. ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ರಾತ್ರಿ ವಾಸ್ತವ್ಯ ಮಾಡುವವರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುವುದು. ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಆಯಾ ವಸತಿ ನಿಲಯ/ವಸತಿ ಶಾಲೆಗಳ ಮೇಲ್ವಿಚಾರಕರಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಮೇ 20 ರಿಂದ ಜೂನ್ 10ರವರೆಗೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು 2017ರ ಜೂನ್ 10 ರೊಳಗಾಗಿ ಸಂಬಂಧಿಸಿದ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂತ್ರಾಸವಾಡಿ (ಝಟ್ಪಟ್ ಬೀಬಿ ದರ್ಗಾ ಹಿಂದುಗಡೆ) ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ವಿವರ ಇಂತಿವೆ: ಬಾಲಕರ ಮೆಟ್ರಿಕ್ ಪೂರ್ವ ಸರ್ಕಾರಿ ವಸತಿ ನಿಲಯ ಎಚ್.ಎಸ್. ಕಲಬುರಗಿ, ಎಮ್.ಎಸ್. ಕಲಬುರಗಿ, ಫರಹತಾಬಾದ್, ಹೊನ್ನಕಿರಣಗಿ, ಶ್ರೀನಿವಾಸ ಸರಡಗಿ, ಅವರಾದ(ಬಿ), ಮಹಾಗಾಂವ, ಕಮಲಾಪುರ, ಮರಗುತ್ತಿ, ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ (ಪರಿಶಿಷ್ಟ ಪಂಗಡ) ಕಲಬುರಗಿ, ಸರ್ಕಾರಿ ಆಶ್ರಮ ಶಾಲೆ ಸಂತ್ರಾಸವಾಡಿ ಕಲಬುರಗಿ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ವಿದ್ಯಾನಗರ ಕಲಬುರಗಿ.
ಜೂನ್ 3ರಿಂದ ವಸತಿ ಶಾಲೆಗಳ ಪ್ರವೇಶ ಕೌನ್ಸೆಲಿಂಗ್
***************************************************
ಕಲಬುರಗಿ,ಮೇ.17.(ಕ.ವಾ.)-ಕಲಬುರಗಿ ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ 2017-18ನೇ ಶೈಕ್ಷಣಿಕ ಸಾಲಿನ 6ನೇ ತರಗತಿಯ ಪ್ರವೇಶಕ್ಕಾಗಿ ನಡೆಸಲಾದ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಆಯ್ಕೆಯಾದ ಅಭ್ಯರ್ಥಿಗಳಿಗೆ 2017ರ ಜೂನ್ 3 ರಿಂದ 07ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ ಕಲಬುರಗಿ ನಗರದ ಸಿದ್ದಿ ಭಾಷಾ ದರ್ಗಾ ಹಿಂದುಗಡೆಯಿರುವ ಜಗತ್ ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಕಲಬುರಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್. ರಾಜಪ್ಪ ತಿಳಿಸಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಈಗಾಗಲೇ ಕೌನ್ಸೆಲಿಂಗ್ಗೆ ಹಾಜರಾಗಲು ಸೂಚನಾ ಪತ್ರ ಅಂಚೆ ಮೂಲಕ ರವಾನಿಸಲಾಗಿದೆ. ಆಯ್ಕೆಯಾದ ಪ್ರವರ್ಗವಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಖುದ್ದಾಗಿ ಪಾಲಕರೊಂದಿಗೆ ನಿಗದಿತ ದಿನಾಂಕದಂದು ಎಲ್ಲ ಮೂಲ ದಾಖಲಾತಿಗಳೊಂದಿಗೆ ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಕೌನ್ಸೆಲಿಂಗ್ ಸ್ಥಳದಲ್ಲಿ ಹಾಜರಿರಬೇಕು. ನಿಗದಿತ ಸಮಯಕ್ಕೆ ಹಾಜರಾತಿ ಪತ್ರ ತಲುಪದೇ ಇದ್ದಲ್ಲಿ ನಿಗದಿತ ದಿನಾಂಕದಂದು ತಮ್ಮ ಹಾಲ್ ಟಿಕೇಟ್ ಮತ್ತು ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಾವು ಪಡೆದ ಅಂಕಗಳನ್ನು ತಿತಿತಿ.ಞಡಿeis.ಞಚಿಡಿ.ಟಿiಛಿ.iಟಿ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಮೊದಲನೇ ಆಯ್ಕೆ ಪಟ್ಟಿಯ ಪ್ರವರ್ಗವಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಿವರ ಇಂತಿದೆ. ಎಸ್.ಸಿ.: ವಿದ್ಯಾರ್ಥಿ-29 ಮತ್ತು ವಿದ್ಯಾರ್ಥಿನಿಯರು-17. ಎಸ್.ಟಿ.: ವಿದ್ಯಾರ್ಥಿ-07 ಮತ್ತು ವಿದ್ಯಾರ್ಥಿನಿಯರು-03. ಪ್ರವರ್ಗ-1.: ವಿದ್ಯಾರ್ಥಿ-52 ಮತ್ತು ವಿದ್ಯಾರ್ಥಿನಿಯರು-49. ಪ್ರವರ್ಗ-2ಎ.: ವಿದ್ಯಾರ್ಥಿ-51 ಮತ್ತು ವಿದ್ಯಾರ್ಥಿನಿಯರು-45. ಪ್ರವರ್ಗ 2ಬಿ: ವಿದ್ಯಾರ್ಥಿ 48 ಮತ್ತು ವಿದ್ಯಾರ್ಥಿನಿಯರು-39. ಪ್ರವರ್ಗ 3ಎ.: ವಿದ್ಯಾರ್ಥಿ-41 ಮತ್ತು ವಿದ್ಯಾರ್ಥಿನಿಯರು-39. ಪ್ರವರ್ಗ 3ಬಿ.: ವಿದ್ಯಾರ್ಥಿ-58 ಮತ್ತು ವಿದ್ಯಾರ್ಥಿನಿಯರು-55.
ಹೆಚ್ಚುವರಿ ಪಟ್ಟಿಯಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರವರ್ಗವಾರು ಸ್ಥಾನಗಳು ಲಭ್ಯವಿದ್ದಲ್ಲಿ ಮಾತ್ರ ಆದ್ಯತಾನುಸಾರ ಕೌನ್ಸಲಿಂಗ್ಗಾಗಿ ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9538988452, 9741182727, 9448650647, 9986688865 ಮತ್ತು 8123270150ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಮೇ 18ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಮೇ.17.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಗಣೇಶನಗರ ಫೀಡರ್ ಮೇಲೆ ವ್ಯಾಪ್ತಿಯ ರಸ್ತೆ ಅಗಲೀಕರಣ ಕಾರ್ಯ ಹಾಗೂ ಕಂಬಗಳನ್ನು ಸ್ಥಳಾಂತರ ಕೈಗೊಳ್ಳುವ ಪ್ರಯುಕ್ತ ಹಾಗೂ 11 ಕೆ.ವಿ. ಮಹಾವೀರ ನಗರ ಫೀಡರ್ ವ್ಯಾಪ್ತಿಯ ಮೋಹನ ಲಾಡ್ಜ್ದಿಂದ ಅಂಡರ್ ಬ್ರಿಡ್ಜ್ವರೆಗೆ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಮೇ 18 ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ ಗಣೇಶ ನಗರ: ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂ.ಬಿ.ನಗರ, ಬಾಕರ್ ಪಂಕ್ಷನ್ ಹಾಲ್, ಆದರ್ಶ ನಗರ ಮತ್ತು ಬಂದೇನವಾಜ್ ಕಾಲೋನಿ, ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಮನಸೂಬ್ದಾರ ಲೇಔಟ್, ಆದರ್ಶ ನಗರ ನ್ಯೂ ಜಿ.ಡಿ.ಎ. ಮೇಹತಾ ಲೇಔಟ್ ಮತ್ತು ವೀರೆಂದ್ರ ಪಾಟೀಲ್ ಬಡವಾಣೆ.
ಹೀಗಾಗಿ ಲೇಖನಗಳು news and photo Date: 27--05--2017
ಎಲ್ಲಾ ಲೇಖನಗಳು ಆಗಿದೆ news and photo Date: 27--05--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 27--05--2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-27-05-2017.html
0 Response to "news and photo Date: 27--05--2017"
ಕಾಮೆಂಟ್ ಪೋಸ್ಟ್ ಮಾಡಿ