News and photos Date: 28-04-2017

News and photos Date: 28-04-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photos Date: 28-04-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photos Date: 28-04-2017
ಲಿಂಕ್ : News and photos Date: 28-04-2017

ಓದಿ


News and photos Date: 28-04-2017








ನೂತನ ಪ್ರಾದೇಶಿಕ ಆಯುಕ್ತರಿಂದ ಕಾರ್ಯಭಾರ ಸ್ವೀಕಾರ
ಕಲಬುರಗಿ,ಏ.28.(ಕ.ವಾ.)-ಕಲಬುರಗಿ ವಿಭಾಗದ  ಪ್ರಾದೇಶಿಕ ಆಯುಕ್ತರ ಹುದ್ದೆಯ ಕಾರ್ಯಭಾರವನ್ನು ನೂತನ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಶುಕ್ರವಾರ ವಹಿಸಿಕೊಂಡರು. ದೆಹಲಿ ನಿವಾಸಿಗಳಾದ ಇವರು ಇಂಜಿನಿಯರಿಂಗ್ ಪದವಿ ಓದಿದ್ದು, 1997ರ ಬ್ಯಾಚಿನ ಕರ್ನಾಟಕ ಕೇಡರ್ ಐ.ಎ.ಎಸ್. ಅಧಿಕಾರಿಯಾಗಿದ್ದಾರೆ.
ಈ ಹಿಂದೆ ಹರ್ಷ ಗುಪ್ತಾ ಅವರು ಚಾಮರಾಜನಗರ, ಚಿಕ್ಕಮಂಗಳೂರು, ಮೈಸೂರು ಮತ್ತು ಬೀದರ ಜಿಲ್ಲೆಗಳ ಜಿಲ್ಲಾಧಿಕಾರಿಗಳಾಗಿ ಹಾಗೂ ಪಶುಸಂಗೋಪನೆ, ಕೆ.ಎಂ.ಎಫ್. ಮತ್ತು ಕೆ.ಯು.ಐ.ಡಿ.ಎಫ್.ಸಿ. ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಗೆ ಸರ್ಕಾರ ನೇಮಿಸಿದೆ. ಇದರೊಂದಿಗೆ ಹರ್ಷ ಗುಪ್ತಾ ಅವರು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಮೊದಲಿದ್ದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದೆ.

ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿದ್ದು ಖುಷಿ ತಂದಿದೆ
ಕಲಬುರಗಿ,ಏ.28.(ಕ.ವಾ.)-ಕಲಬುರಗಿ ವಿಭಾಗದ  ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವುದು ನನಗೆ ಖುಷಿ ತಂದಿದೆ ಎಂದು ವರ್ಗಾವಣೆಗೊಂಡ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು.
ಅವರು ಶುಕ್ರವಾರ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಸಹಿತ ಮಂಡಳಿಯ ಅತ್ಯುತ್ತಮ ಮತ್ತು ದಕ್ಷ ಅಧಿಕಾರಿಗಳ ಸಹಾಯದಿಂದ ಹೆಚ್ಚಿನ ಕೆಲಸ ನಿರ್ವಹಿಸಲು ಸಹಾಯಕವಾಗಿದೆ. ಈ ಹಿಂದೆ 2008ರಿಂದ 2013ರವರೆಗೆ ಮಂಡಳಿಯ ವ್ಯಾಪ್ತಿಯ ಏಳು ಜಿಲ್ಲೆಗಳ ಅಭಿವೃದ್ಧಿಗೆ 300 ಕೋಟಿ ರೂ. ಖರ್ಚು ಮಾಡಲಾಗಿದೆ. 2013-14ರಿಂದ 2016-17ರವರೆಗೆ ಮಂಡಳಿ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿಗಾಗಿ 2700 ಕೋಟಿ ರೂ.ಗಳು ನಿಗದಿಯಾಗಿದ್ದು, 1830 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ 1565 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 2013 ರಿಂದ ಹೆಚ್ಚಿನ ಪ್ರಮಾಣದಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಹಾಗೂ ಸಲಹೆಗಾರರಿಗೆ ಅಭಿನಂದನೆ ವ್ಯಕ್ತಪಡಿಸಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಮುನ್ನಡೆಸಲು ದಕ್ಷ ಅಧಿಕಾರಿಯಾದ ಹರ್ಷ ಗುಪ್ತಾ ಆಗಮಿಸಿದ್ದು, ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನೂತನ ಕಾರ್ಯದರ್ಶಿ ಹರ್ಷ ಗುಪ್ತಾ ಮಾತನಾಡಿ, ಈ ಭಾಗದಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದರೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸಾರ್ವಜನಿಕರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾಗಿದೆ. ಹಿಂದುಳಿದ ಭಾಗಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು. ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಎಲ್ಲ ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಉತ್ತಮ ಕೆಲಸಗಳು ನಡೆದಿವೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು, ಶೀಘ್ರ ಗತಿಯಲ್ಲಿ ಕೈಗೊಳ್ಳಲಾಗಿದೆ. ಕಲಬುರಗಿ ಜಿಲ್ಲೆಗೆ ಹಂಚಿಕೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ನೂತನ ಪ್ರಾದೇಶಿಕ ಆಯುಕ್ತರು ಮಾರ್ಗದರ್ಶನ ನೀಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ  ಜಹೀರಾ ನಸೀಮ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಂಟಿ ನಿರ್ದೇಶಕ ಬಸವರಾಜ, ಉಪ ಕಾರ್ಯದರ್ಶಿ ಗಂಗುಬಾಯಿ ಮಾನಕರ್, ಮಂಡಳಿಯ ಸದಸ್ಯರು, ಸಲಹೆಗಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ವರ್ಗಾವಣೆಯಾದ ಹಾಗೂ ಅಧಿಕಾರ ಸ್ವೀಕರಿಸಿದ ಪ್ರಾದೇಶಿಕ ಆಯುಕ್ತರನ್ನು ಸನ್ಮಾನಿಸಿದರು.
ಸಿಇಟಿ ಪರೀಕ್ಷೆ 8352 ಅಭ್ಯರ್ಥಿಗಳು: ತೀವ್ರ ಕಟ್ಟೆಚ್ಚರಕ್ಕೆ ಸೂಚನೆ
ಕಲಬುರಗಿ,ಏ.28.(ಕ.ವಾ.)-ಕಲಬುರಗಿ ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ಮೇ 2 ಮತ್ತು 3ರಂದು ನಡೆಯುವ ವಿವಿಧ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ(ಸಿಇಟಿ) ಪರೀಕ್ಷೆಯನ್ನು ತೀವ್ರ ಕಟ್ಟೆಚ್ಚರ ಮತ್ತು ಜವಾಬ್ದಾರಿಯಿಂದ ನಡೆಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಲಿಯಾಸ್ ಅಹ್ಮದ್ ಇಸಾಮದಿ ಹೇಳಿದರು.
ಅವರು ಶುಕ್ರವಾರ ಕಲಬುರಗಿಯಲ್ಲಿ ಸಿಇಟಿ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಿಇಟಿ ಪರೀಕ್ಷೆಗೆ ಒಟ್ಟು 8352 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಈ ಪರೀಕ್ಷೆಯು ಬೆಳಗಿನ 10.30 ರಿಂದ 11.50ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ನಡೆಯಲಿದೆ. ಈ ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಮಾರ್ಗಾಧಿಕಾರಿ ಹಾಗೂ ವೀಕ್ಷಕರನ್ನು (ರೂಟ್ ಆಫೀಸರ್ಸ್ ಕಮ್ ಆಬ್ಜರ್ವರ್) ನೇಮಿಸಲಾಗಿದೆ. ಮಾರ್ಗಾಧಿಕಾರಿಗಳು ನಿಗದಿತ ಸಮಯದಲ್ಲಿ ಖಜಾನೆಗಳಲ್ಲಿ ಹಾಜರಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕು. ಆದರೆ ಪ್ರಶ್ನೆ ಪತ್ರಿಕೆ ಬಂಡಲ್‍ಗಳನ್ನು ಪಡೆಯುವ ಮುನ್ನ ಬಂಡಲ್ ಭದ್ರಪಡಿಸಿರುವುದನ್ನು (ಸೀಲ್) ಖಚಿತಪಡಿಸಿಕೊಳ್ಳಬೇಕು. ಮಾರ್ಗಾಧಿಕಾರಿ ಕಮ್ ವೀಕ್ಷಕರು ತಮ್ಮ ವಾಹನದಲ್ಲಿ ಪೊಲೀಸ್ ಅಧಿಕಾರಿಗಳನ್ನು ಕರೆದುಕೊಂಡು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಪೂರ್ಣಗೊಳ್ಳುವವರೆಗೆ ಕೇಂದ್ರದಲ್ಲಿಯೇ ಇದ್ದು, ಮಾನಿಟರ್ ಮಾಡಬೇಕೆಂದು ಸೂಚಿಸಿದರು.
ಮಾರ್ಗಾಧಿಕಾರಿಗಳು ಕೂಡಲೇ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ಭೇಟಿಯಾಗಿ ಪರೀಕ್ಷಾ ಸಿದ್ಧತೆಯ ಬಗ್ಗೆ ಪರಿಶೀಲಿಸಿ ಆಸನ, ಕುಡಿಯುವ ನೀರಿನ, ಸಾಕಷ್ಟು ಬೆಳಕಿನ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಹಾಗೂ ಸುಗಮ ಪರೀಕ್ಷಾ ಸಿದ್ಧತೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರತ್ಯೇಕ ಮಹಿಳಾ ಮತ್ತು ಪುರುಷ ಪೊಲೀಸರನ್ನು ನೇಮಕ ಮಾಡಲಾಗುವುದೆಂದರು. ಪರೀಕ್ಷೆಗೆ ಹಾಜರಾಗುವ ಮಹಿಳಾ ಪರೀಕ್ಷಾರ್ಥಿಗಳ ತಪಾಸಣೆಯನ್ನು ಕಡ್ಡಾಯವಾಗಿ ಮಹಿಳಾ ಪೊಲೀಸರೇ ಮಾಡುವಂತೆ ಎಚ್ಚರಿಕೆ ವಹಿಸಬೇಕು ಎಂದರು.
ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಲಾಗ್ ಪುಸ್ತಕ, ಮಾರ್ಕರ್, ಪಠ್ಯ ಪುಸ್ತಕ, ನಕಲು ಚೀಟಿಗಳನ್ನು ತರಕೂಡದು. ರೂಮ್ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಮಾರ್ಗಾಧಿಕಾರಿಗಳು ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ತೀವ್ರ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕೆಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಂ. ಸಾಳೂಂಕೆ ಹಾಗೂ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಅಬಕಾರಿ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಪರೀಕ್ಷೆ: ತೀವ್ರ ಕಟ್ಟೆಚ್ಚರಕ್ಕೆ ಸೂಚನೆ
ಕಲಬುರಗಿ,ಏ.28.(ಕ.ವಾ.)-ಕಲಬುರಗಿ ಜಿಲ್ಲೆಯ 15 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 30ರಂದು ಬೆಳಗಿನ 10 ರಿಂದ 11.30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ನಡೆಯುವ ಅಬಕಾರಿ ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳ ಪರೀಕ್ಷೆಯನ್ನು ತೀವ್ರ ಕಟ್ಟೆಚ್ಚರ ಮತ್ತು ಜವಾಬ್ದಾರಿಯಿಂದ ನಡೆಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಲಿಯಾಸ್ ಅಹ್ಮದ್ ಇಸಾಮದಿ ಹೇಳಿದರು.
ಅವರು ಶುಕ್ರವಾರ ಕಲಬುರಗಿಯಲ್ಲಿ ಅಬಕಾರಿ ಸಬ್ ಇನ್ಸ್‍ಪೆಕ್ಟರ್ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಪರೀಕ್ಷೆಗೆ ಒಟ್ಟು 8280 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಈ ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳಿಗೆ 5 ಜನ ಮಾರ್ಗಾಧಿಕಾರಿ ಹಾಗೂ 5 ಜನ ವೀಕ್ಷಕರನ್ನು (ರೂಟ್ ಆಫೀಸರ್ಸ್ ಕಮ್ ಆಬ್ಜರ್ವರ್) ನೇಮಿಸಲಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಹಾಗೂ ಮತ್ತಿತರ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷೆಗೆ ಬರುವಾಗ ಮೂಲ ಅಥವಾ ಜಿರಾಕ್ಸ್ ಪ್ರತಿಯ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್ ಅಥವಾ ಸರ್ಕಾರಿ ನೌಕರರ ಗುರುತಿನ ಚೀಟಿಯನ್ನು ತರಬೇಕು. ಅಭ್ಯರ್ಥಿಗಳು ಗುರುತಿನ ಚೀಟಿಯನ್ನು ತರದಿದ್ದಲ್ಲಿ ಪರೀಕ್ಷೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ. ಪರೀಕ್ಷಾ ಕೇಂದ್ರಗಳ ಚಿತ್ರೀಕರಣ ಮಾಡಲು ವಿಡಿಯೋಗ್ರಾಫರ್‍ನ್ನು ನೇಮಿಸಲಾಗುವುದು. ಮಾರ್ಗಾಧಿಕಾರಿ ಹಾಗೂ  ಜನ ವೀಕ್ಷಕರು (ರೂಟ್ ಆಫೀಸರ್ಸ್ ಕಮ್ ಆಬ್ಜರ್ವರ್) ಪರೀಕ್ಷೆಯ ನಡೆಯುವ ಒಂದು ದಿನ ಮೊದಲು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯುತ್, ಕುಡಿಯುವ ನೀರು ಹಾಗೂ ಬೆಂಚ್‍ಗಳು ಸೇರಿದಂತೆ ಮತ್ತಿತರ ವ್ಯವಸ್ಥೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕೆಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಂ. ಸಾಳೂಂಕೆ ಹಾಗೂ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಏಪ್ರಿಲ್ 29ರಂದು ಜಗತ್‍ವೃತ್ತದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ  
ಕಲಬುರಗಿ,ಏ.28.(ಕ.ವಾ)-ಕಲಬುರಗಿ ಮಹಾನಗರ ಪಾಲಿಕೆಯ 2016-17ನೇ ಸಾಲಿನ ಹೆಚ್.ಕೆ.ಆರ್.ಡಿ.ಬಿ. ಮ್ಯಾಕ್ರೋ ಯೋಜನೆ ಅಡಿಯಲ್ಲಿ ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಸವೇಶ್ವರ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಏಪ್ರಿಲ್ 29ರಂದು ಬೆಳಗಿನ 11.30 ಗಂಟೆಗೆ ಜಗತ್ ವೃತ್ತದಲ್ಲಿ ನೆರವೇರಿಸುವರು.
ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
  ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅಫಜಲಪುರ ಶಾಸಕ  ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ,  ವಿಧಾನಸಭಾ ಶಾಸಕರುಗಳಾದ ಡಾ. ಖಮರುಲ್ ಇಸ್ಲಾಂ, ಜಿ.ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ. ಬಿ. ಶಾಣಪ್ಪ,  ಬಿ.ಜಿ.  ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಜಗರ್ ಚುಲಬುಲ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ,  ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಮಹಾನಗರ ಪಾಲಿಕೆ ಉಪ ಮಹಾಪೌರ ಪುತಲಿಬೇಗಂ, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ರಾಜೇಂದ್ರ ಕಪನೂರ, ವಿರೋಧ ಪಕ್ಷದ ನಾಯಕ ವಿಶಾಲ ಎಸ್. ಧರ್ಗಿ ಮತ್ತು ಮಹಾನಗರ ಪಾಲಿಕೆ ಸದಸ್ಯೆ ಜಗದೇವಿ ಸೊಮಾ ಅತಿಥಿಗಳಾಗಿ ಆಗಮಿಸುವರು.
2016-17ನೇ ಸಾಲಿನ ಹೆಚ್.ಕೆ.ಆರ್.ಡಿ.ಬಿ. ಮ್ಯಾಕ್ರೋ ಅನುದಾನದಡಿ ಜಗತ್ ವೃತ್ತದಲ್ಲಿರುವ 50 ಲಕ್ಷ ರೂ. ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಅಭಿವೃದ್ಧಿ ಕಾಮಗಾರಿ ಹಾಗೂ 50 ಲಕ್ಷ ರೂ. ವೆಚ್ಚದ ಬಸವೇಶ್ವರ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವರು.
ಬಸವ ಜಯಂತಿ: ಮದ್ಯ ಮಾರಾಟಕ್ಕೆ ನಿಷೇಧ
ಕಲಬುರಗಿ,ಏ.28.(ಕ.ವಾ.)-ಬಸವ ಜಯಂತಿಯನ್ನು ಏಪ್ರಿಲ್ 29ರಂದು ಶನಿವಾರ ಆಚರಿಸುತ್ತಿರುವ ಪ್ರಯುಕ್ತ ಜಿಲ್ಲಾ ದಂಡಾಧಿಕಾರಿ ಉಜ್ವಲ್‍ಕುಮಾರ ಘೋಷ್ ಅವರು ಕಲಬುರಗಿ ಜಿಲ್ಲೆಯಾದ್ಯಂತ  ಏಪ್ರಿಲ್ 28ರ ಮಧ್ಯರಾತ್ರಿಯಿಂದ  ಏಪ್ರಿಲ್ 30ರ ಬೆಳಗಿನ 6 ಗಂಟೆಯವರೆಗೆ ಎಲ್ಲ ತರಹದ ಮದ್ಯ, ಸರಾಯಿ, ಸೇಂದಿ, ಸ್ವದೇಶಿ ಹಾಗೂ ವಿದೇಶಿ ಮದ್ಯ ಹಾಗೂ ಎಲ್ಲ ತರಹದ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಿದ್ದಾರೆ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಜಯಂತಿ ಆಚರಣೆ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಈ ಆದೇಶ ಹೊರಡಿಸಿದ್ದಾರೆ.
ಮೇ 4ರಂದು ಮಾಜಿ ಸೈನಿಕರ ಕುಂದುಕೊರತೆ ಆಲಿಕೆ 
ಕಲಬುರಗಿ,ಏ.28.(ಕ.ವಾ.)-ಜಿಓಸಿ ತೆಲಂಗಾಣ ಮತ್ತು ಆಂಧ್ರ ಸಬ್ ಏರಿಯಾದವರು 2017ರ ಮೇ 4ರಂದು ಬೆಳಗಿನ 8 ಗಂಟೆಗೆ ಕಲಬುರಗಿ ಎಂ.ಎಸ್.ಕೆ. ಮಿಲ್ ಕಣ್ಣಿ ಮಾರ್ಕೆಟ್ ಬಳಿ ಇರುವ ಇ.ಸಿ.ಎಸ್.ಹೆಚ್. ಪಾಲಿಕ್ಲಿನಿಕ್‍ಗೆ ಭೇಟಿ ನೀಡಿ ಮಾಜಿ ಸೈನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.
ಕಲಬುರಗಿ, ಬೀದರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಮಾಜಿ ಸೈನಿಕರು/ ಮಾಜಿ ಸೈನಿಕರ ಅವಲಂಬಿತರು ಕುಂದುಕೊರತೆಗಳೇನಾದರೂ ಇದ್ದಲ್ಲಿ ಇ.ಎಸ್.ಎಸ್.ಹೆಚ್. ಪಾಲಿಕ್ಲಿನಿಕ್ಕಿಗೆ ಖುದ್ದಾಗಿ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಇ.ಎಸ್.ಎಸ್.ಹೆಚ್. ಪಾಲಿಕ್ಲಿನಿಕ್ ದೂರವಾಣಿ ಸಂಖ್ಯೆ 08472-266677ನ್ನು ಸಂಪರ್ಕಿಸಬೇಕೆಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
2 ದಿನದೊಳಗೆ ಆಸ್ತಿ ತೆರಿಗೆ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆಯಿರಿ
ಕಲಬುರಗಿ,ಏ.28.(ಕ.ವಾ.)-ಕಲಬುರಗಿ ನಗರ ವ್ಯಾಪ್ತಿಯಲ್ಲಿ ಬರುವ ವಿವಿಧ ಆಸ್ತಿಗಳ ಮಾಲೀಕರು 2017-18ನೇ ಸಾಲಿನ ಆಸ್ತಿ ತೆರಿಗೆ ಮೇಲೆ 5ರಷ್ಟು ರಿಯಾಯಿತಿ ಸೌಲಭ್ಯ ಪಡೆಯಲು ಏಪ್ರಿಲ್ 29 ಮತ್ತು 30ರಂದು ಕೇವಲ ಎರಡು ದಿನಗಳ ಕಾಲ ಮಾತ್ರ ಬಾಕಿ ಉಳಿದಿದೆ. ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಮಾಲೀಕರು ಆಸ್ತಿ ತೆರಿಗೆ ಪಾವತಿಸಿ ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಕೋರಿದ್ದಾರೆ.
    ಆಸ್ತಿ ತೆರಿಗೆ ಪಾವತಿಸಲು ಎರಡು ದಿನಗಳ ರಜಾ ದಿನಗಳಂದು ಸಹ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಮಹಾನಗರ ಪಾಲಿಕೆಯ ವಲಯ ಕಚೇರಿ-3ರ ಆವರಣ ಹಾಗೂ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರದ ಹೌಸಿಂಗ್ ಬೋರ್ಡ್ ಕಾಂಪ್ಲೆಕ್ಸ್‍ನಲ್ಲಿರುವ ಗುಲಬರ್ಗಾ ಒನ್ ಶಾಖೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸದರಿ ರಿಯಾಯಿತಿ ಸೌಲಭ್ಯದ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಮೇ 2ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
ಕಲಬುರಗಿ,ಏ.28.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ವಾರ ಮತ್ತು ದಿನಾಂಕಗಳಂದು ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ತಾಲೂಕು ಆಸ್ಪತ್ರೆÉ ಜರುಗುವ ಶಿಬಿರದ ದಿನಾಂಕ, ವಾರ ಹಾಗೂ ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ.
ಮೊದಲನೇ ಮಂಗಳವಾರ: ಮೇ 2ರಂದು ಆಳಂದÀ ತಾಲೂಕು ಆಸ್ಪತ್ರೆ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ|| ಚಂದ್ರಶೇಖರ ಹೂಡೇದ್. ಎರಡನೇ ಮಂಗಳವಾರ: ಮೇ 9ರಂದು ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ. ವಿಜಯೇಂದ್ರ. ಎರಡನೇ ಶುಕ್ರವಾರ: ಮೇ 12ರಂದು ಅಫಜಲಪುರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ. ವಿಜಯೇಂದ್ರ. ಮೂರನೇ ಮಂಗಳವಾರ: ಮೇ 16ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ-ಇ.ಎಸ್.ಐ.ಸಿ. ಆಸ್ಪತ್ರೆಯ ಮನೋವೃದ್ಯ ಡಾ|| ಇರಫಾನ್. ಮೂರನೇ ಶುಕ್ರವಾರ: ಮೇ 19ರಂದು ಜೇವರ್ಗಿ ತಾಲೂಕು ಆಸ್ಪತ್ರೆ-ಕೆ.ಬಿ.ಎನ್. ಆಸ್ಪತ್ರೆಯ ಮನೋವೃದ್ಯ ಡಾ|| ಅಮೋಲ್ ಪತಂಗೆ. ನಾಲ್ಕನೇ ಮಂಗಳವಾರ: ಮೇ 23ರಂದು ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೃದ್ಯ ಡಾ. ಅಜಯ ಢಗೆ ಭೇಟಿ ನೀಡುವರು.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಹಳ ಮಂಕಾಗಿರುವ, ಯಾರ ಜೊತೆಗೂ ಸೇರದಿರುವ, ಬೇರೆಯವರಿಗೆ ಕಾಣಿಸದ ದೃಶ್ಯ ತಮಗೆ ಕಾಣಿಸುತ್ತದೆ ಹಾಗೂ ಕೇಳಿಸದ ಧ್ವನಿ ತನಗೆ ಕೇಳಿಸುತ್ತದೆ ಎನ್ನುವ, ಎಲ್ಲರ ಬಗ್ಗೆ ಸಂಶಯ ಪಡುವ, ಆತ್ಮಹತ್ಯೆ ಬಗ್ಗೆ ಆಲೋಚಿಸುವ,  ಮೂರ್ಛೆರೋಗ, ಬುದ್ಧಿಮಾಂದ್ಯರು ಮುಂತಾದ ಮಾನಸಿಕ ತೊಂದರೆ ಅಥವಾ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 30ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಏ.28.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್ ವ್ಯಾಪ್ತಿಯ ಅನ್ನಪೂರ್ಣ ಕ್ರಾಸಿನಿಂದ ಜಿಲ್ಲಾ ವೈದ್ಯಕೀಯ ಆಸ್ಪತ್ರೆವರೆಗಿನ ರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಏಪ್ರಿಲ್ 30ರಂದು ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಸಮಯ ಮತ್ತು ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್: ಪಿ.ಎಲ್.ಡಿ. ಬ್ಯಾಂಕ್, ಗೊಲ್ಲರಗಲ್ಲಿ, ಜಗತ್, ಜಗತ್ ಅಪ್ಪರ್ ಮತ್ತು ಲೋವರ್ ಲೆನ್, ಮಹಾನಗರ ಪಾಲಿಕೆಯ ಆಯುಕ್ತರ ವಸತಿ ಗೃಹ, ತಿರಂದಾಜ್ ಟಾಕೀಸ್ ಎದುರುಗಡೆ ಮೈಲಾರಲಿಂಗ ದೇವಸ್ಥಾನ, ಆದಿತ್ಯ ಹೋಟೆಲ್, ಎಸ್.ಪಿ. ಕಚೇರಿ ಪ್ರದೇಶ, ಏಷಿಯನ್ ಮಾಲ್, ಆಮಂತ್ರಣ ಹೋಟೆಲ್, ಕಕ್ಕೇರಿ ಕಾಂಪ್ಲೆಕ್ಸ್, ಪಶು ವೈದ್ಯಕೀಯ ಆಸ್ಪತ್ರೆ ಟ್ರೈನಿಂಗ್ ಸೆಂಟರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಮೇ 2ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಏ.28.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಸಿದ್ದೇಶ್ವರ ಕಾಲೋನಿ ಫೀಡರ್ ವ್ಯಾಪ್ತಿಯ ರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಮೇ 2ರಂದು ಬೆಳಗಿನ 8 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಸಮಯ ಮತ್ತು ಬಡಾವಣೆಗಳ ವಿವರ ಇಂತಿದೆ.
11 ಕೆ.ವಿಸಿದ್ದೇಶ್ವರ: ಸಂತ್ರಾಸವಾಡಿ ಜಿ.ಡಿ.ಎ., ಎಂ.ಜಿ. ರೋಡ್, ದರ್ಶನಾಪುರ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಉಚಿತ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ತರಬೇತಿ ಶಿಬಿರ 
ಕಲಬುರಗಿ,ಏ.28.(ಕ.ವಾ)-ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರವು ಮೂರು ದಿನಗಳ ಉಚಿತ “ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ” ತರಬೇತಿ ಶಿಬಿರವನ್ನು ಬಾಗಲಕೋಟೆಯಲ್ಲಿ 2017ರ ಮೇ ತಿಂಗಳಿನಲ್ಲಿ ಏರ್ಪಡಿಸಲಿದೆ. ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ  ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು.
ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಮುಂತಾದವರು ತಮ್ಮ ಹಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಮೇ 12ರೊಳಗಾಗಿ ನೋಂದಾಯಿಸಲು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103 ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9482630790ನ್ನು ಸಂಪರ್ಕಿಸುವಂತೆ ಕೋರಲಾಗಿದೆ.



ಹೀಗಾಗಿ ಲೇಖನಗಳು News and photos Date: 28-04-2017

ಎಲ್ಲಾ ಲೇಖನಗಳು ಆಗಿದೆ News and photos Date: 28-04-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photos Date: 28-04-2017 ಲಿಂಕ್ ವಿಳಾಸ https://dekalungi.blogspot.com/2017/04/news-and-photos-date-28-04-2017.html

Subscribe to receive free email updates:

0 Response to "News and photos Date: 28-04-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ